ಶಾಸಕರು, ಹಿಂದೂ ಮುಖಂಡರ ವಿರುದ್ಧ ಕೇಸ್ ವಾಪಸ್ ಪಡೆಯದಿದ್ದರೆ ಬೀದಿಗಿಳಿದು ಹೋರಾಟ: ಕಟೀಲ್ ಎಚ್ಚರಿಕೆ
ನಮ್ಮ ಶಾಸಕರು, ಪಾಲಿಕೆ ಸದಸ್ಯರು ಹಾಗೂ ಹಿಂದು ಮುಖಂಡರ ವಿರುದ್ಧ ಕೇಸು ದಾಖಲಿಸಿರುವುದನ್ನು ವಾಪಸ್ ಪಡೆಯಿರಿ ಎಂದು ನಾವು ಕಾಂಗ್ರೆಸ್ ಎದುರು ಭಿಕ್ಷೆ ಬೇಡುವುದಿಲ್ಲ. ಅದನ್ನು ಸಾರ್ವಜನಿಕವಾಗಿ ಹೋರಾಟ ನಡೆಸುವ ಮೂಲಕ ಎದುರಿಸುತ್ತೇವೆ ಎಂದ ದ.ಕ. ಸಂಸದ ನಳಿನ್ ಕುಮಾರ್ ಕಟೀಲ್
ಮಂಗಳೂರು(ಫೆ.16): ಮಂಗಳೂರಿನ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಹಿಂದು ನಿಂದನೆ ವಿವಾದಕ್ಕೆ ಸಂಬಂಧಿಸಿ ಇಬ್ಬರು ಶಾಸಕರು, ಪಾಲಿಕೆ ಸದಸ್ಯರು ಹಾಗೂ ಹಿಂದು ಸಂಘಟನೆ ಮುಖಂಡರ ವಿರುದ್ಧ ಕೇಸು ದಾಖಲಿಸಿರುವುದನ್ನು ಬೇಷರತ್ ಆಗಿ ವಾಪಸ್ ಪಡೆಯಬೇಕು. ಶಿಕ್ಷಣ ಇಲಾಖೆ ಅಧಿಕಾರಿಯ ವರ್ಗಾವಣೆ ರದ್ದುಪಡಿಸಬೇಕು. ಇಲ್ಲದಿದ್ದರೆ ಬೀದಿಗಿಳಿದು ಹೋರಾಟ ನಡೆಸುವುದಾಗಿ ದ.ಕ. ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ. ಮಂಗಳೂರಿನ ಬಂಟ್ಸ್‌ಹಾಸ್ಟೆಲ್‌ನಲ್ಲಿ ಗುರುವಾರ ದ.ಕ. ಲೋಕಸಭಾ ಚುನಾವಣಾ ಕಚೇರಿ ಉದ್ಘಾಟಿಸಿದ ಬಳಿಕ ಅವರು ಸುದ್ದಿಗಾರರಲ್ಲಿ ಮಾತನಾಡಿದರು.
ನಮ್ಮ ಶಾಸಕರು, ಪಾಲಿಕೆ ಸದಸ್ಯರು ಹಾಗೂ ಹಿಂದು ಮುಖಂಡರ ವಿರುದ್ಧ ಕೇಸು ದಾಖಲಿಸಿರುವುದನ್ನು ವಾಪಸ್ ಪಡೆಯಿರಿ ಎಂದು ನಾವು ಕಾಂಗ್ರೆಸ್ ಎದುರು ಭಿಕ್ಷೆ ಬೇಡುವುದಿಲ್ಲ. ಅದನ್ನು ಸಾರ್ವಜನಿಕವಾಗಿ ಹೋರಾಟ ನಡೆಸುವ ಮೂಲಕ ಎದುರಿಸುತ್ತೇವೆ ಎಂದರು.
ಮಂಗಳೂರು ಶಾಲೆ ಶಿಕ್ಷಕಿ ಪ್ರಭಾರನ್ನು ಬಂಧಿಸಿ, ಪೊಲೀಸರನ್ನು ಅಮಾನತು ಮಾಡಿ: ವಿಪಕ್ಷ ನಾಯಕ ಆರ್.ಅಶೋಕ ಆಗ್ರಹ
ಈ ಹಿಂದೆ ಬಾವುಟಗುಡ್ಡೆಯಲ್ಲಿ ಮೂಲ್ಕಿ ಸುಂದರರಾಮ್ ಶೆಟ್ಟಿ ರಸ್ತೆಗೆ ಹೆಸರಿಡುವ ವಿಚಾರದಲ್ಲಿ ಕಾಂಗ್ರೆಸ್‌ನವರು ಅಲೋಶಿಯಸ್ ಶಾಲಾ ವಿದ್ಯಾರ್ಥಿಗಳನ್ನು ಕೂರಿಸಿ ಪ್ರತಿಭಟನೆ ನಡೆಸಿದ್ದರು. ಆಗ ಶಾಸಕರು ಪ್ರತಿಭಟನೆಯ ನೇತೃತ್ವ ವಹಿಸಿದ್ದರೂ ಯಾವ ಕೇಸು ದಾಖಲಾಗಿರಲಿಲ್ಲ. ಇದನ್ನು ನಾವು ಖಂಡಿಸುತ್ತೇವೆ ಎಂದರು.
ಜನಪ್ರತಿನಿಧಿಗಳ ವಿರುದ್ಧ ಕೇಸು ದಾಖಲಿಸುವ ಮೂಲಕ ಕಾಂಗ್ರೆಸ್ ಮತಬ್ಯಾಂಕ್‌ಗಾಗಿ ತುಷ್ಠೀಕರಣ ನೀತಿ ಅನುಸರಿಸುತ್ತಿದೆ. ರಾಮನ ವಿರುದ್ಧ ಮಾತನಾಡಿದವರ ಮೇಲೆ ಕ್ರಮ ಕೈಗೊಳ್ಳದೆ, ಮಕ್ಕಳಲ್ಲಿ ಕೋಮುಭಾವನೆ ಕೆರಳಿಸಿದ ವೃಥಾ ಆರೋಪ ಹೊರಿಸುತ್ತಿದೆ ಎಂದರು.
ದೈವಾರಾಧನೆಗೆ ಅಪಮಾನದ ವಿರುದ್ದ ಹೋರಾಟಕ್ಕೆ ಹಿಂದೂ ಸಂಘಟನೆಗಳು ಎಂಟ್ರಿ; ರಿಷಬ್ ಶೆಟ್ಟಿಗೂ ಎಚ್ಚರಿಕೆ!
ಮಂಗಳೂರಿನ ಖಾಸಗಿ ಶಾಲೆಯಲ್ಲಿ ನಡೆದಿರುವುದು ಬಿಜೆಪಿ ವರ್ಸಸ್ ಕಾಂಗ್ರೆಸ್ ಅಲ್ಲ, ಹಿಂದು-ಕ್ರೈಸ್ತ ನಡುವಿನ ಕೋಮು ಭಾವನೆಯ ಹೋರಾಟವೂ ಅಲ್ಲ. ಹಿಂದು ದೇವರ ನಿಂದನೆಗೆ ಶಿಕ್ಷಕಿ ವಿರುದ್ಧ ಪೋಷಕರು, ಹೆತ್ತವರು ನಡೆಸಿದ ಹೋರಾಟಕ್ಕೆ ಶಾಸಕರು ಬೆಂಗಾವಲಾಗಿ ಹೋಗಿದ್ದಾರೆ ಅಷ್ಟೆ. ರಾಮ ವಿರೋಧಿ ಶಿಕ್ಷಕಿಯ ಮೇಲೆ ಏನು ಕ್ರಮ ಕೈಗೊಂಡಿದ್ದೀರಿ ಎಂದು ಸಾರ್ವಜನಿಕರಿಗೆ ಸ್ಪಷ್ಟಪಡಿಸಬೇಕು ಎಂದು ಅವರು ಆಗ್ರಹಿಸಿದರು.
ಶಾಲೆಯಲ್ಲಿ ಬಿಜೆಪಿ ರಾಜಕೀಯಕ್ಕೆ ಮಕ್ಕಳನ್ನು ಬಳಸಿಲ್ಲ. ಅದು ಬಿಜೆಪಿ ಅಥವಾ ಹಿಂದು ಸಂಘಟನೆಗಳು ಕೈಗೆತ್ತಿಕೊಂಡ ಹೋರಾಟ ಅಲ್ಲ. ಪೋಷಕರು ಹಾಗೂ ಹೆತ್ತವರು ಹೋರಾಟ ನಡೆಸಿದ್ದು, ನಾನೂ ಇದ್ದರೆ ಅದರಲ್ಲಿ ಭಾಗವಹಿಸುತ್ತಿದ್ದೆ. ಶಾಸಕರು ಅಲ್ಲಿಂದಲೇ ಅಧಿಕಾರಿಗಳು, ಸರ್ಕಾರದ ಜತೆ ಮಾತನಾಡಿದ್ದಾರೆ. ರಾಮನ ಅವಹೇಳನ ಮಾಡುವುದನ್ನು ಎಷ್ಟು ಮಾತ್ರಕ್ಕೂ ಸಹಿಸಲು ಸಾಧ್ಯವಿಲ್ಲ. ಇದರ ವಿರುದ್ಧ ಕಾನೂನಾತ್ಮಕ ಹಾಗೂ ಬೀದಿಗಿಳಿದು ಹೋರಾಟ ನಡೆಸುವುದಾಗಿ ನಳಿನ್ ಕುಮಾರ್ ಹೇಳಿದರು.