ಚಿತ್ರದುರ್ಗ [ಫೆ.07]:  ರಾಜ್ಯ ಸಚಿವ ಸಂಪುಟವು ಬೆಳಗಾವಿ, ಬೆಂಗಳೂರು ಜಿಲ್ಲೆಗಳಿಗಷ್ಟೇ ಸೀಮಿತವಾಗಿದ್ದು, ಆ ಜಿಲ್ಲೆಗಳದ್ದೇ ಅರ್ಧ ಸಂಪುಟವಾಗಿದೆ ಎಂದು ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ ಬೇಸರ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ವಿಧಾನಸಭಾ ಉಪ ಚುನಾವಣೆಯಲ್ಲಿ ಗೆಲುವು ಪಡೆದ 10 ಮಂದಿ ಶಾಸಕರಿಗೆ ಮಂತ್ರಿಸ್ಥಾನ ನೀಡುವುದಾಗಿ ಪಕ್ಷದ ವರಿಷ್ಠರು ಮಾತು ಕೊಟ್ಟಿದ್ದರು. ಅದರಂತೆಯೇ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಾಗುತ್ತಿದೆ. ಇದರಿಂದ ಬಿಜೆಪಿ ಬಲಿಷ್ಠವಾಗಿ ಹೊರಹೊಮ್ಮಲು ಕಾರಣವಾಗಿದೆ. ಆದರೆ, ಮೂಲ ಬಿಜೆಪಿಯ ಮೂವರಿಗೆ ಮಾತ್ರ ಸಚಿವ ಸ್ಥಾನ ನೀಡಲಾಗುವುದು ಎಂದು ಹೇಳಲಾಗುತ್ತಿತ್ತು. ಆದರೆ, ಈಗ ಅದೂ ಕೈ ತಪ್ಪಿದೆ. ಪಕ್ಷದಲ್ಲಿ ಅನೇಕ ಹಿರಿಯ ಶಾಸಕರಿದ್ದೇವೆ. ಈ ಹಿಂದೆ ಸಮ್ಮಿಶ್ರ ಸರ್ಕಾರ, ಬಿ.ಎಸ್‌.ಯಡಿಯೂರಪ್ಪ, ಜಗದೀಶ ಶೆಟ್ಟರ್‌ ಅವರ ಸಚಿವ ಸಂಪುಟದಲ್ಲಿದ್ದ ಸಚಿವರೇ ಪುನಃ ಸಚಿವರಾಗುತ್ತಿದ್ದಾರೆ. ಅವರಲ್ಲಿ ಕೆಲವರ ಸಚಿವ ಸ್ಥಾನವನ್ನು ಹಿಂಪಡೆದು ಅವರನ್ನು ಪಕ್ಷ ಸಂಘಟನೆಗೆ ಬಳಸಿಕೊಳ್ಳಲಿ. ವಿಶೇಷವಾಗಿ ಚಿತ್ರದುರ್ಗ ಜಿಲ್ಲೆಗೆ 15 ವರ್ಷಗಳಿಂದ ಬಿಜೆಪಿಯ ಸ್ಥಳೀಯ ಮಂತ್ರಿ ಮತ್ತು ಉಸ್ತುವಾರಿ ಸಚಿವರಿಲ್ಲದಂತಾಗಿದೆ ಎಂದರು.

ಜಿಲ್ಲೆಯೂ ಹಿಂದುಳಿದ ಪ್ರದೇಶವಾಗಿರುವುದರಿಂದ ಶಾಸಕರಾಗಿ ಪ್ರತಿ ಬಾರಿ ಗೆಲ್ಲುವುದು ವಿಧಾನಸಭೆಗೆ ಹೋಗುವುದಕ್ಕೆ ಮಾತ್ರ ಸೀಮಿತ ಎಂಬಂತಾಗಿದೆ. ಜಿಲ್ಲೆಯ ಜನ ಪಕ್ಷಾತೀತವಾಗಿ ಎಲ್ಲ ಚುನಾವಣೆಗಳಲ್ಲೂ ಗೆಲುವು ನೀಡಿದ್ದಾರೆ. ಆದರೂ, ಜಿಲ್ಲೆಗೆ ಸಚಿವ ಸ್ಥಾನದ ಪ್ರಾತಿನಿಧ್ಯ ದೊರಯದಿರುವುದು ವಿಷಾದದ ಸಂಗತಿ ಎಂದು ಹೇಳಿದರು.

70ನೇ ವರ್ಷದೊಳಗೆ ಒಮ್ಮೆಯಾದ್ರೂ ಸಿಎಂ ಆಗ್ತೀನಿ: ಕತ್ತಿ...

ಹಿರಿಯರನ್ನು ಪರಿಗಣಿಸಬೇಕಿತ್ತು: ಮಧ್ಯ ಕರ್ನಾಟಕ, ಕರಾವಳಿ ಉತ್ತರ ಕರ್ನಾಟಕದ ಹಿರಿಯ ಶಾಸಕರಿದ್ದೇವೆ. ಅವರಿಗೆ ಯಾರಿಗೂ ಅವಕಾಶ ಕೊಡದೆ ಕೇವಲ ಬೆಳಗಾವಿ, ಬೆಂಗಳೂರು ಜಿಲ್ಲೆಗೆ ಪ್ರಾತಿನಿಧ್ಯ ಕಲ್ಪಿಸಲಾಗಿದೆ. ಹಿರಿಯ ಶಾಸಕರನ್ನು ಪರಿಗಣಿಸದಿರುವುದಕ್ಕೆ ಅಸಮಾಧಾನ ಇರುವುದು ಸಹಜ. ಜೊತೆಗೆ ಈ ಬಾರಿ ಹಿಂದುಳಿದ ವರ್ಗಗಳಿಗೆ ಅನ್ಯಾಯವಾಗಿದೆ ಎಂದರು.

ಹಿರಿಯ ಶಾಸಕರು ಮಾತನಾಡಿರುವ ಪ್ರಕಾರ, ಕಳೆದ ಮೂರು ಬಾರಿ ಸಚಿವರಾದವರನ್ನು ತೆಗೆದು, ಅವರ ಕೆಲಸದ ದಕ್ಷತೆ ನೋಡಿ, ನಾಲ್ಕೈದು ಹೊಸಬರಿಗೆ ಅವಕಾಶ ಕೊಡಬೇಕಿತ್ತು. ಮುಂದಿನ ದಿನಗಳಲ್ಲಿ ಸಮತೋಲನ ಕಾಪಾಡುವ ಭರವಸೆ ಇದೆ. ನಮ್ಮ ಅಹವಾಲನ್ನು ಹೈಕಮಾಂಡ್‌ಗೆ ಸಲ್ಲಿಸಿರುವುದು ನಿಜ. ಹಿರಿಯರಾಗಿ ಎಷ್ಟುಹೇಳಬೇಕೊ ಅಷ್ಟುಹೇಳಿಕೊಂಡಿದ್ದೇವೆ. ಮುಂದಿನದು ಹೈಕಮಾಂಡ್‌, ಬಿಎಸ್‌ವೈ ಅವರಿಗೆ ಬಿಟ್ಟದ್ದು, ಮೂಲ ಬಿಜೆಪಿಗರಾದ ಉಮೇಶ್‌ ಕತ್ತಿ, ಅರವಿಂದ ಲಿಂಬಾವಳಿ, ಅವರಿಗೆ ಸಚಿವ ಸ್ಥಾನ ನೀಡುವುದು ತಪ್ಪೇನಿಲ್ಲ. ಆದರೆ, ನಮ್ಮನ್ನು ಗಮನಕ್ಕೆ ತೆಗೆದುಕೊಳ್ಳದಿರುವ ಬಗ್ಗೆ ನೋವಿದೆ. ಮುಂದಿನ ಸಂಪುಟ ವಿಸ್ತರಣೆಯಲ್ಲಿ ಸಚಿವ ಸ್ಥಾನ ಸಿಗುವ ಭರವಸೆ ಇದೆ ಎಂದು ಹೇಳಿದರು.