ರಾಸಲೀಲೆ ಪ್ರಕರಣ: 'ಡಿಕೆಶಿಗೂ ಸಿಡಿ ಭಯ ಕಾಡುತ್ತಿದೆ'
ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ನಿಶ್ಚಿತ| ಮಸ್ಕಿ, ಬಸವಕಲ್ಯಾಣದಲ್ಲಿ ಪ್ರಚಾರ| ಬಿಜೆಪಿ ಗೆಲುವಿನ ಪತಾಕೆ ಹಾರಿಸುವುದರಲ್ಲಿ ಸಂಶಯವಿಲ್ಲ| ಬೆಳಗಾವಿಯಲ್ಲಿ ಬಿಜೆಪಿ ಅಭ್ಯರ್ಥಿಯೂ 4 ಲಕ್ಷಕ್ಕೂ ಅಧಿಕ ಮತದ ವಿಜಯ ದಾಖಲಿಸಿದ್ದಾರೆ: ರಾಜೂಗೌಡ|
ಸುರಪುರ(ಏ.01): ಬೆಳಗಾವಿ ಸಂಸತ್ ಕ್ಷೇತ್ರ ಸೇರಿ 2 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಬಿಜೆಪಿ ಅದ್ಧೂರಿ ವಿಜಯ ದಾಖಲಿಸಲಿದೆ ಎಂದು ಶಾಸಕ ರಾಜೂಗೌಡ ಹೇಳಿದ್ದಾರೆ.
ಇಲ್ಲಿನ ತಾಪಂ ಶಾಸಕರ ಕೊಠಡಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಸ್ಕಿ, ಬಸವಕಲ್ಯಾಣದಲ್ಲಿ ಪ್ರಚಾರ ಮಾಡಲಾಗುತ್ತಿದೆ. ಅಲ್ಲಿನ ಬೆಳವಣಿಗೆ ಗಮನಿಸಿದರೆ ಬಿಜೆಪಿ ಗೆಲುವಿನ ಪತಾಕೆ ಹಾರಿಸುವುದರಲ್ಲಿ ಸಂಶಯವಿಲ್ಲ. ಬೆಳಗಾವಿಯಲ್ಲಿ ಬಿಜೆಪಿ ಅಭ್ಯರ್ಥಿಯೂ 4 ಲಕ್ಷಕ್ಕೂ ಅಧಿಕ ಮತದ ವಿಜಯ ದಾಖಲಿಸಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.
ಕಾಂಗ್ರೆಸ್ಸಿನವರ ಯಾವುದೇ ಗಿಮಿಕ್ ನಡೆಯುವುದಿಲ್ಲ. ಎಲ್ಲ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಸೋಲು ಅನುಭವಿಸಲಿದೆ. ಮತದಾರರಿಗೆ ಅಭಿವೃದ್ಧಿ ಕಾರ್ಯ ಯಾರು ಮಾಡುತ್ತಿದ್ದಾರೆ ಎಂಬುದು ತಿಳಿದಿದೆ. ಬೆಳಗಾವಿ ಸಂಸದ ಕ್ಷೇತ್ರದಲ್ಲಿ ಮೋದಿಯವರು ಅಪಾರ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಇದು ಬಿಜೆಪಿ ಅಭ್ಯರ್ಥಿಗೆ ವರವಾಗಲಿದೆ ಎಂದರು.
ಡಿಕೆಶಿ ಬಗ್ಗೆ ಸ್ಫೋಟಕ ಹೇಳಿಕೆ: ಪಿಕ್ಚರ್ ಅಭಿ ಬಾಕಿ ಹೇ ಎಂದ ಸಿಡಿ ಲೇಡಿ ಸಹೋದರ..!
ಡಿಕೆಶಿಗೆ ಸೀಡಿ ಭಯ:
ಯಾರೊಬ್ಬರೂ ಸಹ ಡಿ.ಕೆ. ಶಿವಕುಮಾರ ಹೆಸರನ್ನು ಪ್ರಸ್ತಾಪಿಸಲ್ಲ. ಅವರೇ ಅಧಿವೇಶನದಲ್ಲಿ ತಮ್ಮ ಹೆಸರನ್ನು ವಿನಾಕಾರಣ ಪ್ರಸ್ತಾಪಿಸಿದ್ದಾರೆ. ಅವರಿಗೆ ಸೀಡಿ ಭಯ ಕಾಡುತ್ತಿದೆ. ಡಿಕೆಶಿಯವರೇ ಕುಟುಂಬದವರು ಪ್ರಸ್ತಾಪಿಸುವ ಮುನ್ನವೇ ನಮ್ಮ ಹೆಸರನ್ನು ಎಳೆದು ತರುತ್ತಿದ್ದಾರೆ ಎಂಬುದಾಗಿ ಎಲ್ಲ ಕಡೆಯೂ ಹೇಳಿಕೊಂಡು ಬರಲು ಆರಂಭಿಸಿದರು. ಇದರಿಂದ ಎಲ್ಲರ ದೃಷ್ಟಿ ಅವರತ್ತ ನೆಟ್ಟಿದೆ. ಅವರು ತಪ್ಪು ಮಾಡಿದ್ದಾರೆ ಎನ್ನುವ ಭಯ ಕಾಡುತ್ತಿದೆ. ಆದ್ದರಿಂದ ಅವರು ಹೇಳಿಕೊಳ್ಳುತ್ತಿದ್ದಾರೆ ಎಂದರು.
ದೂರವಾಣಿಯಲ್ಲಿ ಮಾತನಾಡಿದ್ದಾರೆ ಎಂಬ ಆರೋಪ ರಮೇಶ ಜಾರಕಿಹೊಳಿಯವರು ಎದುರಿಸುತ್ತಿದ್ದಾರೆ. ಆದರೆ ಯುವತಿಯ ಕುಟುಂಬದವರೇ ಈಗಿನ ಎಲ್ಲ ಸಮಸ್ಯೆಗಳಿಗೆ ಡಿಕೆಶಿಯವರೇ ನೇರ ಹೊಣೆ ಎಂಬುದಾಗಿ ಹೇಳಿದ್ದಾರೆ. ಇಬ್ಬರು ಸ್ನೇಹಿತರು ಸೇರಿ ರಮೇಶಣ್ಣವರನ್ನು ಸಿಲುಕಿಸಲು ಷಡ್ಯಂತ್ರ ನಡೆಸಿದ್ದಾರೆ ಎಂಬುದು ತಿಳಿಯುತ್ತಿದೆ. ಆರೋಪ ಪ್ರತ್ಯಾರೋಪ ನಡೆಯುತ್ತಿರುತ್ತದೆ. ಕರ್ನಾಟಕ ರಾಜಕೀಯದಲ್ಲಿ ಇದೊಂದು ಕಪ್ಪು ಚುಕ್ಕಿಯಾಗಿದೆ. ಚುನಾವಣೆ ಎಂದ ಮೇಲೆ ಅವರು ನಮ್ಮನ್ನು ಸೋಲಿಸೋದು ಅವರನ್ನು ನಾವು ಸೋಲಿಸೊದು ಸಾಮಾನ್ಯ. ಆದರೆ, ಇಲ್ಲಿ ಯಾರನ್ನು ಯಾರು ಬೀಳಿಸಿದ್ದಾರೆ ಎಂಬುದು ತನಿಖೆಯಿಂದಲೇ ಸತ್ಯಾಂಶ ಹೊರಬೀಳಲಿದೆ ಎಂದರು.
ಸೀಡಿ ವಿಷಯ ಜಗಜ್ಜಾಹೀರು ಆಗಿದೆ. ಇಬ್ಬರು ಸ್ನೇಹಿತರು ದುಷ್ಮನ್ ಆದರೆ ಏನಾಗುತ್ತದೆ ಎಂಬುದಕ್ಕೆ ರಮೇಶ ಜಾರಕಿಹೊಳಿಯವರ ಪ್ರಕರಣವೇ ನಿದರ್ಶನವಾಗಿದೆ. ರಮೇಶಣ್ಣನವರನ್ನು ಸಿಲುಕಿಸಲು ಯಾರಾರಯರು ಷಡ್ಯಂತ್ರ ಮಾಡಿದ್ದಾರೆ. ಯಾರಾರಯರು ಇದರ ಹಿಂದೆ ಇದ್ದಾರೆ ಎಂಬುದು ತನಿಖೆಯಿಂದಲೇ ಸತ್ಯ ತಿಳಿಯಲಿದೆ. ಕಾನೂನಾತ್ಮಕ ತನಿಖೆ ನಡೆದಿದ್ದು, ಇದಕ್ಕೆ ಚ್ಯುತಿ ಆಗದಂತೆ ಮಾತನಾಡಬೇಕಿದೆ. ಜನತೆಗೆ ಸೀಡಿ ಹಿಂದೆ ಯಾರಿದ್ದಾರೆ ಎಂಬುದು ತಿಳಿದಿದೆ ಎಂದರು.