ನಂಜನಗೂಡು (ಅ.21):  ಲಡಾಯಿ ರಾಜಕಾರಣ ಮಾಡುವುದು ನನಗೆ ಗೊತ್ತಿಲ್ಲ ಅದು ನನ್ನ ಸಂಸ್ಕಾರವೂ ಅಲ್ಲ, ಸಂಸದ ಪ್ರತಾಪ್‌ಸಿಂಹ ಅವರು ದಲಿತ ಶಾಸಕನ ಮೇಲೆ ಹಗುರವಾಗಿ ಮಾತನಾಡಿ, ತನ್ನ ಕ್ಷೇತ್ರ ವ್ಯಾಪ್ತಿಗೆ ಒಳಪಡದ ನಂಜನಗೂಡು ಕ್ಷೇತ್ರದ ಬಗ್ಗೆ ಹಸ್ತಕ್ಷೇಪ ಮಾಡುವುದು ಸರಿಯಲ್ಲ ಎಂದು ಶಾಸಕ ಬಿ. ಹರ್ಷವರ್ಧನ್‌ ತಿರುಗೇಟು ನೀಡಿದರು.

ಸಂಸದ ಪ್ರತಾಪ್‌ ಸಿಂಹ ಅವರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅಭಿವೃದ್ದಿ ಪ್ರಗತಿ ಸಭೆ(ದಿಶಾ) ಸಭೆಯ ವೇಳೆ ನಂಜನಗೂಡು ತಾಪಂ ಇಓ ಅವರಿಗೆ ಪಂಚಾಯ್ತಿ ಕಟ್ಟಡ ಕೆಲಸಗಳು ಏಕೆ ನಡೆದಿಲ್ಲ ಎಂದು ಪ್ರಶ್ನಿಸಿದ್ದು, ಅವರು 17 ಕಡೆ ಪಂಚಾಯ್ತಿ ಕಟ್ಟಡ ಪೂರ್ಣಗೊಂಡಿದೆ. ಉಳಿದೆಡೆ ಜಾಗದ ಸಮಸ್ಯೆಯಿಂದ ಆಗಿಲ್ಲ ಎಂದು ಉತ್ತರಿಸಿದ್ದಾರೆ. ಈ ವೇಳೆ ನಂಜನಗೂಡಿನವರು ಲಡಾಯಿ ರಾಜಕಾರಣಕ್ಕೆ ಮುಂದು ಎಂದು ಗಲಾಟೆ ಮಾಡಿದ್ದಾರೆ. ಅಲ್ಲದೆ ಜುಬಿಲೆಂಟ್‌ ಕಾರ್ಖಾನೆಯ ಆಹಾರ ಕಿಟ್‌ ದುರುಪಯೋಗವಾಗಿದೆ ಎಂದು ಗಂಭೀರವಾದ ಆರೋಪ ಮಾಡಿ ಎಷ್ಟುಅನುದಾನ ಬಂದಿದೆ ಎಂಬುದರ ಬಗ್ಗೆ ಮಾಹಿತಿ ತೆಗೆದುಕೊಂಡಿದ್ದಾರೆ.

ಬಿಜೆಪಿ ಭರ್ಜರಿ ಆಪರೇಷನ್, ಘಟಾನುಘಟಿ ಮುಖಂಡರು ಕಾಂಗ್ರೆಸ್‌ಗೆ ರಾಜೀನಾಮೆ..!

ಪ್ರತಾಪ್‌ ಸಿಂಹ ಅವರು ಪ್ರಾರಂಭದಲ್ಲಿ ಜುಬಿಲೆಂಟ್‌ ಕಾರ್ಖಾನೆಯ ಪರವಾಗಿಯೇ ಮಾತನಾಡುತ್ತಿದ್ದರು. ನನ್ನ ಹೋರಾಟಕ್ಕೆ ಮಣಿದು 50 ಸಾವಿರ ಆಹಾರ ಕಿಟ್‌ ನೀಡಿದ್ದಾರೆ. ಅದರಲ್ಲಿ 5 ಸಾವಿರ ಆಹಾರ ಕಿಟ್‌ನ್ನು ಮೈಸೂರಿಗೆ ನೀಡಿದ್ದೇನೆ. ಅಲ್ಲದೆ ಪ್ರಾಮಾಣಿಕವಾಗಿ ಕ್ಷೇತ್ರಾದ್ಯಂತ ಕಾರ್ಯಕರ್ತರು ಆಹಾರ ಕಿಟ್‌ ವಿತರಿಸಿದ್ದಾರೆ. ಈ ಮೊದಲು ಮಾಜಿ ಸಂಸದ ಆರ್‌. ಧ್ರುವನಾರಾಯಣ್‌ ಕೂಡ ಪ್ರಶ್ನಿಸಿದ್ದರು. ಅವರಿಗೆ ಶ್ರೀಕಂಠೇಶ್ವರನ ಮೇಲೆ ಆಣೆ ಮಾಡಿ ಉತ್ತರ ನೀಡಿದ್ದೇನೆ.

ಯಾವ ವಿಚಾರದಲ್ಲಿ ಲಡಾಯಿ ರಾಜಕಾರಣ ಮಾಡಿದ್ದೇನೆ ಎಂಬುದನ್ನು ಸಾಬೀತು ಪಡಿಸಿ. ಒಂದು ವೇಳೆ ನೀವು ಈ ಗಂಭೀರವಾದ ಆರೋಪವನ್ನು ಸಾಬೀತು ಮಾಡಿದಲ್ಲಿ ನಾನು ರಾಜೀನಾಮೆ ನೀಡುತ್ತೇನೆ, ಇಲ್ಲವಾದರೆ ನೀವು ರಾಜೀನಾಮೆ ನೀಡುವಿರಾ? ಎಂದು ಕೇಳಲು ಬಯಸುತ್ತೇನೆ. ಹಾಗೆ ಕೇಳಿದ್ದಲ್ಲಿ ಒಂದೇ ಪಕ್ಷದಲ್ಲಿದ್ದುಕೊಂಡು ಕಿತ್ತಾಡಿಕೊಳ್ಳುತ್ತಾರೆಂದು ತಪ್ಪು ಸಂದೇಶ ರವಾನೆಯಾಗುತ್ತದೆ.

ನೀವು ಹಗುರವಾಗಿ ಮಾತನಾಡುವ ಮುನ್ನ ಇತಿಹಾಸ ತಿಳಿದು ಮಾತನಾಡಿ, ನಾನು ಸಂಸದ ವಿ. ಶ್ರೀನಿವಾಸಪ್ರಸಾದ್‌ ಅವರ ಅಳಿಯ, ಬಸವಲಿಂಗಪ್ಪನವರ ಮೊಮ್ಮಗ ನೀವು ನಿಮ್ಮ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಶಾಸಕರು ಎಷ್ಟುಅನುದಾನ ತಂದು ಅಭಿವೃದ್ದಿ ಮಾಡಿದ್ದಾರೆ, ಅಲ್ಲದೆ ಬೀದರ್‌, ಗುಲ್ಬರ್ಗ ಕ್ಷೇತ್ರದ ಬಗ್ಗೆಯೂ ಪರಿಶೀಲನೆ ನಡೆಸಿ ಚಾಮರಾಜನಗರ ಕ್ಷೇತ್ರದಲ್ಲಿ ವಿ. ಶ್ರೀನಿವಾಸಪ್ರಸಾದ್‌ ಅವರು ಪ್ರತಿನಿಧಿಸುತ್ತಿದ್ದಾರೆ. ಒಂದು ಮೀಸಲು ಕ್ಷೇತ್ರದಲ್ಲಿ ದಲಿತ ಶಾಸಕ ಆರಿಸಿ ಬರುವುದು ಕಷ್ಟ, ನಾನು ಲಡಾಯಿ ರಾಜಕಾರಣವನ್ನೇ ಮಾಡಿ ಗೆದ್ದಿದ್ದೇನೆ. ನಾವು ನಮ್ಮ ಮತದಾರರು, ಜಿಲ್ಲಾಧಿಕಾರಿಗೆ ಉತ್ತರ ಕೊಡಬೇಕೆ ಹೊರತು ನಿಮಗಲ್ಲ ನೀವು ಅನ್ಯ ಕ್ಷೇತ್ರದ ಮೇಲೆ ಹಸ್ತಕ್ಷೇಪ ಮಾಡುವುದು ಸರಿಯಲ್ಲ, ಒಂದು ವೇಳೆ ನೀವು ಇದಕ್ಕೆ ಪ್ರತಿಯುತ್ತರ ನೀಡುವುದಾದಲ್ಲಿ ಈ ಬಗ್ಗೆ ಸಂಸದ ವಿ. ಶ್ರೀನಿವಾಸಪ್ರಸಾದ್‌

ಅವರು ಉತ್ತರ ಕೊಡುತ್ತಾರೆ ನೀವು ತಡೆದುಕೊಳ್ಳು ಸಿದ್ದರಾಗಿರಿ ಎಂದು ಲೇವಡಿ ಮಾಡಿದರು.