ಹೊಸ MSIL ಮಳಿಗೆ ತೆರೆಯಲು ಮುಂದಾದ ಸರ್ಕಾರ: ಮದ್ಯದಂಗಡಿಯೇ ಬೇಡವೆಂದ ಏಕೈಕ ಬಿಜೆಪಿ ಶಾಸಕ
ಸಾಲು ಸಾಲು ಅರ್ಜಿ ಸರ್ಕಾರದ ಮುಂದಿವೆ| ತಮ್ಮ ಕ್ಷೇತ್ರದದಲ್ಲಿ ಮದ್ಯದ ಅಂಗಡ ಬೇಡವೆಂದ ಏಕೈಕ ಶಾಸಕ ಹಾಲಪ್ಪ ಆಚಾರ್| ರಾಜ್ಯ ಸರ್ಕಾರಕ್ಕೆ ಪತ್ರ ಬರೆದ ಶಾಸಕ| ಕೊಪ್ಪಳ ಜಿಲ್ಲೆಯ ಯಲಬುರ್ಗಾ ಕ್ಷೇತ್ರದ ಬಿಜೆಪಿ ಶಾಸಕ|
ಕೊಪ್ಪಳ(ಸೆ.28): ರಾಜ್ಯಾದ್ಯಂತ ಎಂಎಸ್‌ಐಎಲ್ ಮಳಿಗೆಗಳನ್ನು ಇನ್ನಷ್ಟು ತೆರೆಯಲು ರಾಜ್ಯ ಸರ್ಕಾರ ಮುಂದಾಗಿರುವ ಬೆನ್ನಲ್ಲೇ ಸಾಲು ಸಾಲು ಅರ್ಜಿಗಳು ಸಲ್ಲಿಕೆಯಾಗಿವೆ. ಇನ್ನು ಶಾಸಕರು, ಸಂಸದರು ಸೇರಿದಂತೆ ಚುನಾಯಿತಿ ಪ್ರತಿನಿಧಿಗಳ ಶಿಫಾರಸು ಪತ್ರಗಳಿಗೂ ಲೆಕ್ಕವಿಲ್ಲ. ಆದರೆ, ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಶಾಸಕ ಹಾಲಪ್ಪ ಆಚಾರ್ ಅವರು ಮಾತ್ರ ನಮ್ಮ ಕ್ಷೇತ್ರದಲ್ಲಿ ಮದ್ಯದಂಗಡಿಗಳೇ ಬೇಡ ಎಂದು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
ಕಳೆದ ನಾಲ್ಕು ತಿಂಗಳ ಹಿಂದೆಯೇ ಅವರು ಸರ್ಕಾರಕ್ಕೆ ಬರೆದಿರುವ ಪತ್ರ ಈಗ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಪರ ವಿರೋಧದ ಚರ್ಚೆಯಾಗುತ್ತಿದೆ. ಶಾಸಕರಿದ್ದರೆ ಇಂಥವರು ಇರಬೇಕಪ್ಪ ಎನ್ನುವ ಶಹಬ್ಬಾಸ್‌ಗಿರಿಯೂ ವ್ಯಕ್ತವಾಗುತ್ತಿದೆ. ತಮ್ಮ ಬೆಂಬಲಿಗರಿಗೋ ಅಥವಾ ಸಂಬಂಧಿಕರಿಗೋ ಎಂಎಸ್‌ಐಎಲ್ ಅಂಗಡಿ ಪರವಾನಗಿ ಕೊಡಿಸಲು ಬಹುತೇಕ ಶಾಸಕರು ಶತಾಯ ಶ್ರಮಿಸುತ್ತಿರುವಾಗಲೇ ಯಲಬುರ್ಗಾ ಶಾಸಕ ಹಾಲಪ್ಪ ಆಚಾರ್ ಅವರು ಮಾತ್ರ ತಮ್ಮ ಕ್ಷೇತ್ರದಲ್ಲಿ ಎಂಎಸ್‌ಐಎಲ್‌ನ ಹೊಸ ಪರವಾನಗಿ ಕೊಡುವುದು ಬೇಡ ಎಂದಿದ್ದಾರೆ. ನಾನು ಯಾರಿಗೂ ಶಿಫಾರಸು ಪತ್ರವನ್ನು ನೀಡುವುದಿಲ್ಲ ಹಾಗೂ ನನ್ನ ಕ್ಷೇತ್ರದಲ್ಲಿ ಬೇಡವೇ ಬೇಡ ಎಂದು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
ಕೇಂದ್ರ ಸಚಿವರಾಗ್ತಾರಾ ಕರ್ನಾಟಕದ ಮತ್ತೊಬ್ಬ ಸಂಸದ..?
ಮದ್ಯದಂಗಡಿಗಳನ್ನೇ ಬಂದ್ ಮಾಡುವ ಅಗತ್ಯವಿದೆ. ಇಂಥದ್ದರಲ್ಲಿ ನಾವೇ ಹೊಸ ಮದ್ಯದಂಗಡಿ ತೆರೆಯುವುದಕ್ಕೆ ಶಿಫಾರಸು ಮಾಡಿದರೆ ಹೇಗೆ? ಇದಕ್ಕಾಗಿ ಬೇಡವೇ ಬೇಡ ಎಂದು ಸರ್ಕಾರಕ್ಕೆ ಪತ್ರ ಬರೆದಿದ್ದೇನೆ ಎಂದು ಯಲಬುರ್ಗಾ ಶಾಸಕ ಹಾಲಪ್ಪ ಆಚಾರ್ ಅವರು ತಿಳಿಸಿದ್ದಾರೆ.