ನಾಯಕತ್ವ ಬದಲಾದರೆ ಉತ್ತರ ಕರ್ನಾಟಕಕ್ಕೆ ಆದ್ಯತೆ ನೀಡಲಿ: ದುರ್ಯೋಧನ ಐಹೊಳೆ
* ಸಂಪುಟದಲ್ಲಿ ಬದಲಾವಣೆ ಮಾಡಿದರೆ ನನಗೂ ಮಂತ್ರಿ ಸ್ಥಾನ ಕೊಡಿ
* ಸಿಎಂ ಆಗಿ ಬಿಎಸ್‌ವೈ ಮುಂದುವರಿಯಲಿ ಎಂಬುದು ನಮ್ಮ ಅಭಿಪ್ರಾಯ
* ರಾಜ್ಯ ಅಭಿವೃದ್ಧಿ ಮಾಡಿ ಮುಂದೆ ಎಲೆಕ್ಷನ್‌ಗೆ ಹೋಗೋದು ಒಳ್ಳೆಯದು
ಬೆಳಗಾವಿ(ಜು.21): ನಾಯಕತ್ವ ಬದಲಾವಣೆ ಸುದ್ದಿ ಸತ್ಯಕ್ಕೆ ದೂರವಾದದ್ದು, ಒಂದು ವೇಳೆ ಹೈಕಮಾಂಡ್ ನಾಯಕತ್ವ ಬದಲಾವಣೆ ಮಾಡಿದ್ದಲ್ಲಿ, ಉತ್ತರ ಕರ್ನಾಟಕಕ್ಕೆ ಪ್ರಾತಿನಿಧ್ಯ ನೀಡಲಿ ಎಂದು ರಾಯಬಾಗ ಶಾಸಕ ಧುರ್ಯೋದನ ಐಹೊಳೆ ಹೇಳಿದ್ದಾರೆ.
ಸೋಮವಾರ ರಾತ್ರಿ ಬಿಜೆಪಿ ಸಭೆಯ ನಂತರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಬಿಜೆಪಿ ನಾಯಕತ್ವ ಬದಲಾವಣೆ ಸತ್ಯಕ್ಕೆ ದೂರವಾದದ್ದು. ಒಂದು ವೇಳೆ ಹೈಕಮಾಂಡ್ ಬದಲಾವಣೆ ಮಾಡಿದ್ದೇ ಆದಲ್ಲಿ, ಉತ್ತರ ಕರ್ನಾಟಕಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಶಾಸಕರಿಗೆ ಔತಣಕೂಟಕ್ಕೆ ಸೂಚನೆ ಕೊಟ್ಟಿದ್ದಾರಂತೆ ನಮಗೆ ಈ ಬಗ್ಗೆ ಪತ್ರವೇನೂ ಬಂದಿಲ್ಲ, ಆಹ್ವಾನವೂ ಬಂದಿಲ್ಲ. ಮಾಧ್ಯಮಗಳಲ್ಲಿ ಮಾತ್ರ ನೋಡಿದ್ದೇನೆ. ಯಡಿಯೂರಪ್ಪನವರೇ ಸಿಎಂ ಆಗಿ ಮುಂದುವರಿದರೆ ಒಳ್ಳೆಯದು. ಮುತ್ಸದ್ದಿ ರಾಜಕಾರಣಿ ಇದ್ದಾರೆ. ಇನ್ನೂ ಒಂದು ವರ್ಷ 9 ತಿಂಗಳು ಅವಧಿ ಇದೆ. ಹೀಗಾಗಿ ಬಿಎಸ್‌ವೈ ಅವರು ಸಿಎಂ ಆಗಿ ಇದ್ದರೆ ಒಳ್ಳೆಯದು ಎಂದರು.
'ಯಡಿಯೂರಪ್ಪರನ್ನ ಸಿಎಂ ಸ್ಥಾನದಿಂದ ಕೆಳಗಿಳಿಸಿದರೆ ಬಿಜೆಪಿಗೆ ಕಠಿಣ ಸ್ಥಿತಿ'
ಎರಡು ವರ್ಷ ಆಯ್ತು ನಮ್ಮ ಸರ್ಕಾರ ಬಂದು. ಕೊರೋನಾ, ಪ್ರವಾಹ ಹಿನ್ನೆಲೆ ಯಾವುದೂ ಕೆಲಸ ಆಗಿಲ್ಲ. ಹೆಚ್ಚಿನ ಅನುದಾನ ಕೊಟ್ರೆ ಕ್ಷೇತ್ರದ ಅಭಿವೃದ್ಧಿಗೆ ಅನುಕೂಲ ಆಗುತ್ತದೆ. ಯಡಿಯೂರಪ್ಪ ಸಿಎಂ ಆಗಿ ಇರಬೇಕೆಂಬುದು ನನ್ನ ಅಪೇಕ್ಷೆ. ಯತ್ನಾಳ್ ಒಂದು ವರ್ಷದಿಂದ ಹೇಳಿಕೆ ಕೊಡುತ್ತಿದ್ದಾರೆ. ನಾವು ನಂಬಲ್ಲ, ಹೈಕಮಾಂಡ್ ನಿರ್ಧಾರದ ಮೇಲೆ ಎಲ್ಲವೂ ಇದೆ. ಸಿಎಂ ದೆಹಲಿಗೆ ಹೋಗಿ ಬಂದ ಮೇಲೆ ಊಹಾಪೋಹ ನಡೆದಿವೆ. ಜು.26ರ ಶಾಸಕಾಂಗ ಪಕ್ಷದ ಸಭೆ ಆದ ಬಳಿಕ ಗೊತ್ತಾಗುತ್ತೆ. ಸಿಎಂ ಆಗಿ ಬಿಎಸ್‌ವೈ ಮುಂದುವರಿಯಲಿ ಎಂಬುದು ನಮ್ಮ ಅಭಿಪ್ರಾಯ. ರಾಜ್ಯ ಅಭಿವೃದ್ಧಿ ಮಾಡಿ ಮುಂದೆ ಎಲೆಕ್ಷನ್‌ಗೆ ಹೋಗೋದು ಒಳ್ಳೆಯದು ಎಂದರು.
ನಾನು ಮೂರು ಬಾರಿ ಶಾಸಕನಾಗಿ ಆಯ್ಕೆ ಆಗಿದ್ದೇನೆ. ಸಂಪುಟದಲ್ಲಿ ಬದಲಾವಣೆ ಮಾಡಿದರೆ ನನಗೂ ಮಂತ್ರಿ ಸ್ಥಾನ ಕೊಡಿ ಎಂದು ಕೇಳುತ್ತೇನೆ. ನಮಗೂ ಮಂತ್ರಿ ಆಗಬೇಕೆಂಬ ಅಪೇಕ್ಷೆ ಇದೆ. ಸಂಪುಟ ಪುನಾರಚನೆ ಮಾಡುವುದಾದರೆ ನಾನು ಮಂತ್ರಿ ಸ್ಥಾನಕ್ಕೆ ಒತ್ತಾಯಿಸುವೆ. ಇಲ್ಲವಾದಲ್ಲಿ ಅನಿವಾರ್ಯವಾಗಿ ನಮ್ಮ ಕ್ಷೇತ್ರದ ಅಭಿವೃದ್ಧಿಯಲ್ಲಿ ತೊಡಗುವೆ ಎಂದರು.