ಉಮೇಶ ಕತ್ತಿ ನಿಧನದ ಹಿನ್ನೆಲೆ: ಶೋಕಾಚರಣೆ ನಡುವೆಯೂ ಅಂಗನವಾಡಿ ಕಟ್ಟಡ ಉದ್ಘಾಟಿಸಿದ ಬಿಜೆಪಿ ಶಾಸಕ..!
ಭೋಗಯ್ಯನಹುಂಡಿಯಲ್ಲಿ ಅಂಗನವಾಡಿ ಕಟ್ಟಡ ಉದ್ಘಾಟಿಸಿ, ನರೇಗಾದಡಿ ಸಿಸಿ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದ ಶಾಸಕ ನಿರಂಜನಕುಮಾರ್
ಗುಂಡ್ಲುಪೇಟೆ(ಸೆ.09): ಸಚಿವ ಉಮೇಶ ಕತ್ತಿ ನಿಧನದ ಹಿನ್ನೆಲೆ ಮೃತರ ಗೌರವಾರ್ಥ ರಾಜ್ಯ ಸರ್ಕಾರ ಮೂರು ದಿನ ಶೋಕಾಚರಣೆ ಘೋಷಣೆ ನಡುವೆ ಬಿಜೆಪಿ ಶಾಸಕ ಸಿ.ಎಸ್.ನಿರಂಜನಕುಮಾರ್ ತಾಲೂಕಿನ ಭೋಗಯ್ಯನಹುಂಡಿಯಲ್ಲಿ ಅಂಗನವಾಡಿ ಕಟ್ಟಡದ ಉದ್ಘಾಟನೆ, ನರೇಗಾದಡಿ ಸಿಸಿ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದ್ದಾರೆ. ಗ್ರಾಮದ ಅಂಗನವಾಡಿ ಕಟ್ಟಡ ಉದ್ಘಾಟನೆ ಹಾಗೂ ರಾಷ್ಟ್ರೀಯ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ 10 ಲಕ್ಷ ರು.ಅಂದಾಜು ವೆಚ್ಚದಲ್ಲಿ ಗ್ರಾಮದೊಳಗಿನ ಸಿಸಿ ರಸ್ತೆ ಕಾಮಗಾರಿಗೆ ಗುರುವಾರ ಚಾಲನೆ ನೀಡಿದರು.
ಶಾಸಕ ಸಿ.ಎಸ್.ನಿರಂಜನಕುಮಾರ್ ಸನ್ಮಾನ ಸ್ವೀಕರಿಸಿ ಮಾತನಾಡಿ, ನಾನು ಶಾಸಕನಾದಾಗ ಅನೇಕ ಸವಾಲುಗಳಿದ್ದವು. ಮೊದಲ ಬಾರಿ ಶಾಸಕ ನಿರೀಕ್ಷೆ ದೊಡ್ಡ ಪ್ರಮಾಣದಲ್ಲಿತ್ತು. ಹೆಚ್ಚಿನ ಅಭಿವೃದ್ಧಿ ಕೆಲಸವಾಗಬೇಕೆಂಬ ಬಯಕೆ ಇತ್ತು ಎಂದರು.
ದೇಶದಲ್ಲಿ ಶಾಂತಿ ನೆಲಸಲು ಭಾರತ್ ಜೋಡೋ ಯಾತ್ರೆ: ಸಿದ್ದರಾಮಯ್ಯ
ನಾನು ಶಾಸಕನಾದಾಗ ನಮ್ಮ ಸರ್ಕಾರ ಇರಲಿಲ್ಲ. ನಂತರ ಬಿಜೆಪಿ ಸರ್ಕಾರ ಬಂದಾಗ ನೆರೆ, ಕೋವಿಡ್ ಬಂದ ಕಾರಣ ಅನುದಾನ ಕೊಡಲಿಲ್ಲ. ಆದರೂ ಕ್ಷೇತ್ರದಲ್ಲಿ 700 ಕೋಟಿಗೂ ಹೆಚ್ಚು ಅನುದಾನದಲ್ಲಿ ಕೆಲಸಗಳಾಗಿವೆ ಎಂದರು.
ಗ್ರಾಮದ ಗುರುಮಲ್ಲೇಶ್ವರ ಭಿಕ್ಷದ ಮಠದ ನಂಜುಂಡಸ್ವಾಮಿ ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು.
ಸಮಾರಂಭದಲ್ಲಿ ಕೋಟೆಕೆರೆ ಗ್ರಾಪಂ ಅಧ್ಯಕ್ಷ ವಾಟಾಳ್ ಶಿವಾನಂದಸ್ವಾಮಿ, ಬಿಜೆಪಿ ಮಂಡಲ ಅಧ್ಯಕ್ಷ ಡಿ.ಪಿ.ಜಗದೀಶ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಎಚ್.ಎಂ.ಮಹೇಶ್, ಪಿಎಸಿಸಿ ಬ್ಯಾಂಕ್ ಅಧ್ಯಕ್ಷ ಎಲ್‌ಐಸಿ ಗುರು, ಎಪಿಎಂಸಿ ಅಧ್ಯಕ್ಷ ಕೆ.ಎಸ್.ಶಿವಪ್ರಕಾಶ್, ತಾಪಂ ಮಾಜಿ ಸದಸ್ಯ ಕೆ.ಪ್ರಭಾಕರ್, ಚಾಮುಲ್ ಮಾಜಿ ನಿರ್ದೇಶಕ ಕನ್ನೇಗಾಲಸ್ವಾಮಿ ಸೇರಿದಂತೆ ಗ್ರಾಮದ ಬಿಜೆಪಿ ಮುಖಂಡರು ಇದ್ದರು.
ಮುಂದೆ ಹಾಕ್ಬೇಕು ಅನ್ಕಂಡಿದ್ವೀ: ಶಾಸಕ ನಿರಂಜನ್
ಗುಂಡ್ಲುಪೇಟೆ: ಸಚಿವ ಉಮೇಶ ಕತ್ತಿ ನಿಧನದ ಹಿನ್ನೆಲೆ ಸಮಾರಂಭ ಮುಂಡೂಡಬೇಕು ಅನ್ಕಂಡಿದ್ವೀ ಎಲ್ಲಾ ಸಿದ್ಧತೆ ಆಗಿರೋದ್ರಿಂದ ನಡೆದಿದೆ ಎಂಬ ರೀತಿಯಲ್ಲಿ ಶಾಸಕ ಸಿ.ಎಸ್.ನಿರಂಜನಕುಮಾರ್ ಹೇಳಿಕೊಂಡಿದ್ದಾರೆ. ಸಭೆಯಲ್ಲಿ ಮಾತನಾಡುವಾಗ ಮೊನ್ನೆ ಸಚಿವ ಉಮೇಶ ಕತ್ತಿ ಅವರು ನಿಧನರಾಗಿದ್ದಾರೆ. ಸಭೆಯ ಆರಂಭದಲ್ಲಿ ಸಂತಾಪ ಸೂಚಿಸಿ, ನಾವು ಈ ಕಾರ್ಯಕ್ರಮ ಪ್ರಾರಂಭ ಮಾಡಿದ್ದೀವಿ. ಊರೋರೆಲ್ಲ ಎಲ್ಲಾ ಸಿದ್ಧತೆ ಮಾಡ್ಕೊಂಡಿರೋದ್ರಿಂದ ನಡೆಸಲಾಗಿದೆ ಎಂದಿದ್ದಾರೆ.
ಸರ್ಕಾರದ ಆದೇಶಕ್ಕೆ ಬೆಲೆ ಇಲ್ವಾ: ಗಣೇಶ್
ಗುಂಡ್ಲುಪೇಟೆ: ಹಿರಿಯ ಸಚಿವ ಉಮೇಶ್ ಕತ್ತಿ ನಿಧನದ ಗೌರವಾರ್ಥ ರಾಜ್ಯ ಸರ್ಕಾರ ಮೂರು ದಿನ ಶೋಕಾಚರಣೆ ನಡುವೆ ಶಾಸಕರು ಉದ್ಘಾಟನೆ, ಗುದ್ದಲಿ ಪೂಜೆ, ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿದ್ದು ನೋಡಿದರೆ ಸರ್ಕಾರ ಆದೇಶಕ್ಕೆ ಬೆಲೆ ಇಲ್ವಾ ಎಂದು ಕಾಂಗ್ರೆಸ್ ಮುಖಂಡ ಎಚ್.ಎಂ.ಗಣೇಶಪ್ರಸಾದ್ ಪ್ರಶ್ನಿಸಿದ್ದಾರೆ.
ಭೋಗಯ್ಯನಹುಂಡಿ ಗ್ರಾಮದಲ್ಲಿ ಶಾಸಕ ಸಿ.ಎಸ್.ನಿರಂಜನಕುಮಾರ್ ಹಾಗೂ ಬಿಜೆಪಿಗರು ಅಂಗನವಾಡಿ ಕಟ್ಟಡ ಉದ್ಘಾಟಿಸಿದ್ದಾರೆ. ಸಿಸಿ ರಸ್ತೆಗೆ ಗುದ್ದಲಿ ಪೂಜೆ ಮಾಡಿದ್ದಾರೆ. ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಮಾಡಿಸಿಕೊಂಡಿರುವ ಜೊತೆಗೆ ಮನರಂಜನೆ ಕಾರ್ಯಕ್ರಮ ನಡೆಸಿದ ಶಾಸಕರನ್ನು ಕ್ಷೇತ್ರದ ಜನರ ಪಡೆದಿದ್ದಕ್ಕೆ ನಾಚಿಕೆಯಾಗುತ್ತಿದೆ ಎಂದು ವ್ಯಂಗವಾಡಿದ್ದಾರೆ.
ಮಳೆ ಅವಾಂತರಕ್ಕೆ ಯಳಂದೂರು ತತ್ತರ: ಪೊಲೀಸ್ ಠಾಣೆ, ಶಾಲಾ-ಕಾಲೇಜು ಮುಳುಗಡೆ
ರಾಜ್ಯ ಸರ್ಕಾರ ಮೂರು ದಿನ ಶೋಕಾಚರಣೆ ಘೋಷಿಸಿದೆ. ಆದರೆ, ಬಿಜೆಪಿ ಶಾಸಕ, ಬಿಜೆಪಿಗರು ಗ್ರಾಮದಲ್ಲಿ ಸಮಾರಂಭ ನಡೆಸುವ ಮೂಲಕ ಸರ್ಕಾರದ ಆದೇಶಕ್ಕೆ ಬೆಲೆ ನೀಡಿಲ್ಲ. ಇದು ಶಾಸಕರಿಗೆ ಹಾಗೂ ಶಿಸ್ತಿನ ಪಕ್ಷ ಎಂದು ಹೇಳುವ ಬಿಜೆಪಿಗೆ ಶೋಭೆ ತರುತ್ತಾ ಎಂದು ಟೀಕಿಸಿದ್ದಾರೆ.
ಉದ್ದಟತನ:
ಸಚಿವರ ನಿಧನಕ್ಕೆ ಶೋಕಾಚರಣೆ ನಡುವೆ ಶಾಸಕರು ಹಾಗೂ ಬಿಜೆಪಿ ಮುಖಂಡರು ಗ್ರಾಮದಲ್ಲಿ ಸಭೆ, ಸಮಾರಂಭ ನಡೆಸಿದ್ದಾರೆ. ಅರ್ಕೆಸ್ಟ್ರಾ ನಡೆಸುವ ಮೂಲಕ ಉದ್ಧಟತನ ಮೆರೆದಿದ್ದಾರೆ ಎಂದು ಭೋಗಯ್ಯನಹುಂಡಿ ಗ್ರಾಮದ ಕಾಂಗ್ರೆಸ್ ಬೂತ್ ಕಮಿಟಿ ಅಧ್ಯಕ್ಷರಾಗಿ ಬಸವಣ್ಣ, ಕಾರ್ಯದರ್ಶಿ ಸದಾಶಿವಪ್ಪ ಗ್ರಾಮದ ಮುಖಂಡರಾದ ಕಟ್ಟೆಮನೆ ಮಹೇಶ್,ಕೆ.ಪಿ.ಪುಟ್ಟಣ್ಣ, ನಂದೀಶ್, ಅವಿನಾಶ್, ಬಿ.ಜಿ.ಮಹೇಶ್, ಚನ್ನಬಸವದೇವರು, ಕುಳ್ಳಪ್ಪ,ಹೊನ್ನಪ್ಪ, ಬಸವರಾಜ್, ಮಂಜುನಾಥ್ ಆರೋಪಿಸಿದ್ದಾರೆ.