ಬೆಳಗಾವಿ: ವಚನಾನಂದ ಸ್ವಾಮೀಜಿ, ನಿರಾಣಿ ವಿರುದ್ಧ ಯತ್ನಾಳ ವಾಗ್ದಾಳಿ
ಹರಿಹರ ಪಂಚಮಸಾಲಿ ಪೀಠದ ಅಧ್ಯಯನ ಮುಗಿದಿದೆ. ಅದರ ಹಿಂದಿರುವ ಸಚಿವನದ್ದು ಕಥೆ ಮುಗಿದಿದ್ದೆ ಎಂದು ವಚನಾನಂದ ಸ್ವಾಮೀಜಿ ಹಾಗೂ ಸಚಿವ ಮುರುಗೇಶ ನಿರಾಣಿ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ ಬಸನಗೌಡ ಪಾಟೀಲ ಯತ್ನಾಳ
ಬೆಳಗಾವಿ(ಜ.06): ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಹರಿಹರ ಪಂಚಮಸಾಲಿ ಪೀಠಕ್ಕಾದರೂ ಕರೆದುಕೊಂಡು ಹೋಗಲಿ ಎಲ್ಲಿಯಾದರೂ ಸುಡಗಾಡಕ್ಕಾದರೂ ಕರೆದುಕೊಂಡು ಹೋಗಲಿ. ನಮಗೇನಾಗುವುದಿದೆ ಅಲ್ಲಿ ಹೋದರೆ ಏನು ಕ್ರಾಂತಿಯಾಗುತ್ತಾ. ಅದು ಪೇಮೆಂಟ್ ಮಠ ಎಂದು ಬಿಜೆಪಿ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ವಾಗ್ದಾಳಿ ನಡೆಸಿದರು.
ನಗರದಲ್ಲಿ ನಿನ್ನೆ(ಗುರುವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹರಿಹರ ಪಂಚಮಸಾಲಿ ಪೀಠದ ಅಧ್ಯಯನ ಮುಗಿದಿದೆ. ಅದರ ಹಿಂದಿರುವ ಸಚಿವನದ್ದು ಕಥೆ ಮುಗಿದಿದ್ದೆ ಎಂದು ವಚನಾನಂದ ಸ್ವಾಮೀಜಿ ಹಾಗೂ ಸಚಿವ ಮುರುಗೇಶ ನಿರಾಣಿ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
ಯಾರು ಕಾಲು ಹಿಡಿಯುವ ಮಗ ನಾನಲ್ಲ : ಯತ್ನಾಳ್ ಗುಡುಗು
2023ರ ವಿಧಾನಸಭೆಯ ಚುನಾವಣೆಯಲ್ಲಿ ವಿಜಯಪುರದಿಂದ ಬಿಜೆಪಿಯಿಂದಲೇ ಸ್ಪರ್ಧೆ ಮಾಡುತ್ತೇನೆ. ನಾನು ಬಿಜೆಪಿ ಉಳಿಯಬೇಕು ಹಾಗೂ ಪಕ್ಷದ ಭವಿಷ್ಯದ ದೃಷ್ಟಿಯಿಂದ ಮಾತನಾಡುತ್ತಿದ್ದೇನೆ. ಪಂಚಮಸಾಲಿ ಸಮಾಜಕ್ಕೆ ಮೋಸ ಮಾಡಿದರೆ ಪಕ್ಷಕ್ಕೆ ಉಳಿಗಾಲ ಇಲ್ಲ ಎಂದು ಇಲ್ಲಿಯವರೆಗೆ ಬೊಮ್ಮಾಯಿ ಅವರಿಗೆ ಕೋಣೆಯಲ್ಲಿ ಹೇಳುತ್ತಿದ್ದೆ. ಈಗ ಬಹಿರಂಗವಾಗಿಯೇ ಹೇಳುತ್ತೇನೆ ಎಂದು ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.