ನಾನೂ ಎಲ್ಲರ ಜತೆ ಅಡ್ಜಸ್ಟ್ ಆಗಿದ್ದರೆ ನೀವ್ಯಾರೂ ಸಿಎಂ ಆಗುತ್ತಿರಲಿಲ್ಲ, ಬಸನಗೌಡ ಯತ್ನಾಳ್!
ಸಿಎಂ ಬೊಮ್ಮಾಯಿ ಸೇರಿದಂತೆ ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧ ಕಿಡಿ ಕಾರಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ . ನಾನೂ ಎಲ್ಲರ ಜೋಡಿ ಅಡ್ಜಸ್ಟ್ ಆಗಿದ್ರೆ ನೀವು ಯಾರೂ ಸಿಎಂ ಇರ್ತಿರಲಿಲ್ಲ. ನಾನೇ ಸಿಎಂ ಇರ್ತಿದ್ದೆ ಎಂದು ಹೇಳಿದ್ದಾರೆ.
ವರದಿ: ಪವನ್ ಕುಮಾರ್ ಏಷ್ಯಾನೆಟ್ ಸುವರ್ಣ ನ್ಯೂಸ್
ಹಾವೇರಿ (ಆ.23): ಪಂಚಮಸಾಲಿ ಹೋರಾಟಗಾರರು ಹಾಗೂ ರಾಜ್ಯ ಸರ್ಕಾರದ ನಡುವಿನ ಮೀಸಲಾತಿ ಗುದ್ದಾಟ ತಾರಕಕ್ಕೇರಿದೆ. ಪಂಚಮಸಾಲಿ ಸಮುದಾಯಕ್ಕೆ 2A ಮೀಸಲಾತಿ ನೀಡುವಂತೆ ಆಗ್ರಹಿಸಿ ಇಂದು ಶಿಗ್ಗಾವಿಯಲ್ಲಿ ಹಮ್ಮಿಕೊಂಡಿದ್ದ ಹೋರಾಟಕ್ಕೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಆಗಮಿಸಿದ್ರು. ಜಯಮೃತ್ಯುಂಜಯ ಸ್ವಾಮೀಜಿ ಜೊತೆ ಶಿಗ್ಗಾವಿ ಚೆನ್ನಮ್ಮ ಸರ್ಕಲ್ ನಲ್ಲಿ ಬಹಿರಂಗ ಸಭೆ ನಡೆಸಿದ ಶಾಸಕ ಯತ್ನಾಳ, ಸಿಎಂ ಬೊಮ್ಮಾಯಿ ಸೇರಿದಂತೆ ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧ ಕಿಡಿ ಕಾರಿದರು. ಕಳೆದ ಎರಡು ತಿಂಗಳ ಹಿಂದೆ ನಮ್ಮನ್ನು ಕರೆದು ಗೌಡ್ರೇ ಮೂರು ತಿಂಗಳು ಟೈಂ ಕೊಡಿ, ಮೀಸಲಾತಿಯನ್ನು ಯಾವುದೇ ಪರಿಸ್ಥಿತಿಯಲ್ಲಿ ಕೊಡ್ತೀನಿ ಅಂತ ಸಿಎಂ ಹೇಳಿದ್ರು. ಆದರೆ ಕೊಡಲಿಲ್ಲ. ನನ್ನ ಜೀವನದಲ್ಲಿ ಮಂತ್ರಿ ಸ್ಥಾನದ ಆಸೆಗೆ ಬ್ಲ್ಯಾಕ್ ಮೇಲ್ ಮಾಡೋದು, ರಾಜಕೀಯ ಲಾಭ ತಗೊಬೇಕು ಅಂತ ರಾಜಕಾರಣ ಮಾಡಿಲ್ಲ. ನಾನೂ ಎಲ್ಲರ ಜೋಡಿ ಅಡ್ಜಸ್ಟ್ ಆಗಿದ್ರೆ ನೀವು ಯಾರೂ ಸಿಎಂ ಇರ್ತಿರಲಿಲ್ಲ. ನಾನೇ ಸಿಎಂ ಇರ್ತಿದ್ದೆ. ಅವತ್ತು ಬಸವರಾಜ ಬೊಮ್ಮಾಯಿ ಬಹಳ ವಿಶ್ವಾಸದಿಂದ ಮಾತು ಕೊಟ್ಟಿದ್ರು.ನಿನ್ನೆ ಮಾತು ಕೊಟ್ಟ ಗಡುವು ಮುಗಿದಿದೆ.
ಇದು ಕೇವಲ ಪಂಚಮಸಾಲಿ ಸಮಾಜಕ್ಕೆ 2 A ಮೀಸಲಾತಿ ಕೊಡಿ ಎಂದು ಹೋರಾಟ ಮಾಡ್ತಿಲ್ಲ. ಹಾಲುಮತ ಸಮಾಜ ಎಸ್ ಟಿ ಗೆ ಸೇರಿಸಬೇಕು ಎಂಬ ಬೇಡಿಕೆಯೂ ಇದೆ. ಈ ಹೋರಾಟ ಹಲವು ಸಮಾಜಗಳಿಗೆ ಲಾಭ ಆಗುತ್ತೆ. ಬರಿ ಒಂದು ಸಮಾಜಕ್ಕೆ ಮಾತ್ರ ಮೀಸಲಾತಿ ಲಾಭ ಆಗಲ್ಲ. ಹಾಲುಮತ, ವಾಲ್ಮೀಕಿ ಸಮಾಜಗಳಿದೆ. ದನಿ ಇಲ್ಲದ ಸಮಾಜಗಳಿಗೆ ಜಯಮೃತ್ಯುಂಜಯ ಸ್ವಾಮೀಜಿ ದ್ವನಿಯಾಗಿದ್ದಾರೆ. ಅದಕ್ಕೆ ನಾನು ಬೊಮ್ಮಾಯಿ ಸಾಹೇಬ್ರಿಗೆ ವಿನಮ್ರವಾಗಿ ವಿನಂತಿ ಮಾಡ್ತೀವಿ.
ಶಿಗ್ಗಾವಿಯಲ್ಲಿ ಯಾವ ರೀತಿ ಹೋರಾಟ ಮಾಡಬೇಕು ಅಂತ ಇಂದು ನಿರ್ಧಾರ ಮಾಡ್ತೀವಿ. ಮೊದಲು ಬೆಂಗಳೂರಿನಲ್ಲಿ ಹೇಗೆ 10 ಲಕ್ಷ ಜನ ಸೇರಿಸಿ ನಮ್ಮ ಶಕ್ತಿ ಪ್ರದರ್ಶನ ಮಾಡಿದ್ವಿ. ಅದೇ ರೀತಿ ಇನ್ನೆರಡು ತಿಂಗಳಲ್ಲಿ 25 ಲಕ್ಷ ಜನರನ್ನು ಕೂಡಿಸಿ ಅಲ್ಲಿಯೂ ಒಂದು ನಿರ್ಣಯ ಮಾಡ್ತೀವಿ ಎಂದು ಎಚ್ಚರಿಕೆ ನೀಡಿದರು.
ಪಂಚಮಸಾಲಿ ಸಮಾಜದ ಶಾಸಕರು, ಮಂತ್ರಿಗಳಿಗೆ ಮತ್ತೆ ಶಾಸಕ, ಸಚಿವ ಆಗಬೇಕು ಅಂತ ಆಸೆ ಇದ್ದರೆ ಹೋರಾಟಕ್ಕೆ ಬನ್ನಿ, ಇಲ್ಲದಿದ್ದರೆ ಮಾಜಿಗಳಾಗೇ ಉಳಿಯುತ್ತೀರಿ. ಪಂಚಮಸಾಲಿ ಸಮಾಜದಲ್ಲಿರೋರಿಗೆ ಮತ್ತೆ ಯಾರ್ಯಾರಿಗೆ ಭವಿಷ್ಯ ಬೇಕಾಗಿದೆ? ಮತ್ತೆ ಮಂತ್ರಿ ಆಗಬೇಕು ಅನ್ನೋರು ಯಾರಿದ್ದೀರಿ 25 ಲಕ್ಷ ಜನ ಸೇರಿಸಿ ಸಮಾವೇಶ ಮಾಡುವಾಗ ಬಂದರೆ ಶಾಸಕ ಆಗ್ತೀರಿ, ಸಚಿವ ಆಗ್ತೀರಿ. ಇಲ್ಲದಿದ್ದರೆ ಮಾಜಿ ಮಂತ್ರಿ , ಮಾಜಿ ಶಾಸಕ ಆಗೇ ಉಳಿಯುತ್ತೀರಿ ಎಂದು ಪಂಚಮಸಾಲಿ ಶಾಸಕರಿಗೆ ಎಚ್ಚರಿಕೆ ನೀಡಿದರು.
ಇದು ಹುಡುಕಾಟಿಕೆ ಅಲ್ಲ, ಎಷ್ಟೋ ಸಲ ನಾವು ಗೌರವ ಕೊಟ್ಟಿದ್ದೀವಿ.ನಮಗೆ ಆಮಿಷ ಹಚ್ಚಿ ಉಪ ಮುಖ್ಯಮಂತ್ರಿ ಸ್ಥಾನ ಕೊಡ್ತೀನಿ ಅದನ್ನು ಕೊಡ್ತೀನಿ ಅಂದರೆ ಯಾರಿಗೆ ಬೇಕು? ಇರೋದು ಇನ್ನು ಆರು ತಿಂಗಳು. ನಾನು ವಾಜಪೇಯಿಯವರ ಕೈಯಲ್ಲಿ ಸಚಿವನಾಗಿದ್ದೆ. ಎಷ್ಟು ಸಲ ಮಂತ್ರಿ ಆದರೂ ನಾನು ಸತ್ತಾಗ ಝಂಡಾ, ತುಪಾಕಿ ಹಾರಿಸ್ತಾರೆ.
ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಕೊಡೋಕೆ ಈಗ ಜಾಗ ಖಾಲಿ ಇಲ್ಲ: ಸಚಿವ ಸಿ.ಸಿ ಪಾಟೀಲ್
ಅದಕ್ಕೆ ನಾವು ಇಂಥ ಆಸೆಯಲ್ಲಿ ಬಿದ್ದಿಲ್ಲ. ನಮ್ಮ ಮೇಲೆ , ಗುರುಗಳ ಮೇಲೆ ಸಂಶಯ ಪಡಬೇಡಿ. ಗುರುಗಳನ್ನ ಬುಕ್ ಮಾಡಿದಾರೆ ಸಂಶಯ ಪಡಬೇಡಿ ಎಂದು ಪಂಚಮಸಾಲಿ ಸಮಾಜದವರಿಗೆ ಮಬವರಿಕೆ ಮಾಡಿದರು. ಇದು ಕೊನೆಯ ಹೋರಾಟ.ಕೊಡೋದಿದ್ರೆ ಕೊಡಿ, ಇಲ್ಲಾಂದ್ರೆ ಇಲ್ಲ. ಪದೇ ಪದೇ ಮೀಸಲಾತಿ ಕೊಡ್ತೀವಿ ಅಂತ ಆಸೆ ಹಚ್ಚಬೇಡಿ ಎಂದು ಸಿಎಂ ಬಸವರಾಜ ಬೊಮ್ಮಾಯಿಗೆ ಆಗ್ರಹಿಸಿದರು.