Asianet Suvarna News Asianet Suvarna News

ಸ್ವಾರ್ಥ ಬಿಟ್ಟು ಕೆಲಸ ಮಾಡಿದರೆ ಸಾರ್ಥಕ: ಬಾಲಚಂದ್ರ ಜಾರಕಿಹೊಳಿ

ಎಷ್ಟೇ ಅಭಿವೃದ್ಧಿಪರ ಕಾರ್ಯ ಮಾಡಿದರೂ ಟೀಕೆಗಳು ತಪ್ಪಿದ್ದಲ್ಲ. ಅವುಗಳಿಗೆ ನಾನು ಕಿವಿಗೊಡುವುದಿಲ್ಲ. ಹುಣಶ್ಯಾಳ ಪಿಜಿ ಗ್ರಾಮದಲ್ಲಿ ಪ್ರವಾಹದಿಂದ ಹಾನಿಗೊಳಗಾದ 300 ಮನೆಗಳನ್ನು ಮರುನಿರ್ಮಿಸಿ ಕೊಡಲಾಗಿದೆ. ಪ್ರತಿ ಮನೆಗೆ .5 ಲಕ್ಷ ಸಹಾಯಧನ ನೀಡಲಾಗಿದೆ: ಬಾಲಚಂದ್ರ ಜಾರಕಿಹೊಳಿ 

BJP MLA Balachandra Jarkiholi Talks Over KMF grg
Author
First Published Jan 4, 2023, 8:30 PM IST

ಮೂಡಲಗಿ(ಜ.04): ಮಠಾಧೀಶರು, ರಾಜಕಾರಣಿಗಳು ಹಾಗೂ ಅಧಿಕಾರಿಗಳು ಸ್ವಾರ್ಥ ಬಿಟ್ಟು ಕೆಲಸ ಮಾಡಿದರೆ ಸಾರ್ಥಕವಾಗಿ ಇಡೀ ಸಮಾಜ ಉದ್ಧಾರವಾಗುತ್ತದೆ. ನಿಸ್ವಾರ್ಥ ಮನೋಭಾವದಿಂದ ಕೆಲಸ ಮಾಡಿದರೆ ಮುಂದೊಂದು ದಿನ ದೇವರು ಯಾವುದಾದರೂ ರೂಪದಲ್ಲಿ ಬಂದು ಸಹಾಯ ಮಾಡುತ್ತಾನೆ. ಸ್ವಾರ್ಥವನ್ನು ಇಟ್ಟುಕೊಂಡು ಕೆಲಸ ಮಾಡಿದ್ದಾದರೆ ದೇವರು ಎಂದಿಗೂ ಮೆಚ್ಚುವುದಿಲ್ಲ ಎಂದು ಶಾಸಕ, ಕೆಎಂಎಫ್‌ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.

ತಾಲೂಕಿನ ಹುಣಶ್ಯಾಳ ಪಿಜಿ ಗ್ರಾಮದ ಸಿದ್ಧಲಿಂಗ ಕೈವಲ್ಯಾಶ್ರಮದಲ್ಲಿ ಜರುಗುತ್ತಿರುವ ಜಾತ್ರೆ, 24ನೇ ಸತ್ಸಂಗ, ತೊಟ್ಟಿಲೋತ್ಸವ ಹಾಗೂ ಪೂಜ್ಯರ ತುಲಾಭಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಿಸ್ವಾರ್ಥದಿಂದ ಕೆಲಸ ಮಾಡಿದರೆ ನಮಗೆ ಪುಣ್ಯ ಪ್ರಾಪ್ತಿಯಾಗುತ್ತದೆ. ದಿನನಿತ್ಯ ತಮ್ಮ ಗೃಹ ಕಚೇರಿ ಎನ್‌ಎಸ್‌ಎಫ್‌ಗೆ ದೂರು ದುಮ್ಮಾನ ಹೇಳಿಕೊಳ್ಳಲು ಬರುವ ಸಾರ್ವಜನಿಕರಿಗೆ ಕೈಲಾದ ಸಹಾಯವನ್ನು ಮಾಡುತ್ತೇನೆ. ಸಾಧ್ಯವಿದ್ದಷ್ಟು ಅವರ ಕಷ್ಟ-ಕಾರ್ಪಣ್ಯಗಳಿಗೆ ಸ್ಪಂದನೆ ಮಾಡುತ್ತೇನೆ. ದೇವರ ಅನುಗ್ರಹದಿಂದ ಜನಸೇವೆ ಮಾಡುವ ಅವಕಾಶ ನಮಗೆ ಲಭಿಸಿದೆ. ಮುಂದಿನ ದಿನಗಳಲ್ಲಿಯೂ ಜನಸೇವೆ ಮಾಡು ಅವಕಾಶವನ್ನು ದೇವರು ಕರುಣಿಸಲಿ ಎಂದರು.

MAHADAYI DISPUTE: 1 ವರ್ಷದಲ್ಲಿ ಮಹದಾಯಿ ಜಾರಿ: ಕಾರಜೋಳ ಶಪಥ

ಎಷ್ಟೇ ಅಭಿವೃದ್ಧಿಪರ ಕಾರ್ಯ ಮಾಡಿದರೂ ಟೀಕೆಗಳು ತಪ್ಪಿದ್ದಲ್ಲ. ಅವುಗಳಿಗೆ ನಾನು ಕಿವಿಗೊಡುವುದಿಲ್ಲ. ಹುಣಶ್ಯಾಳ ಪಿಜಿ ಗ್ರಾಮದಲ್ಲಿ ಪ್ರವಾಹದಿಂದ ಹಾನಿಗೊಳಗಾದ 300 ಮನೆಗಳನ್ನು ಮರುನಿರ್ಮಿಸಿ ಕೊಡಲಾಗಿದೆ. ಪ್ರತಿ ಮನೆಗೆ .5 ಲಕ್ಷ ಸಹಾಯಧನ ನೀಡಲಾಗಿದೆ. ಈಗಲೂ ಕೆಲವರು ಮನೆಗಾಗಿ ಬರುತ್ತಿರುತ್ತಾರೆ. ಮನೆಗಳನ್ನು ಮಂಜೂರು ಮಾಡಿಸುವುದು ನಾವೇ. ನಮ್ಮನ್ನು ಬಿಟ್ಟು ಸಂತ್ರಸ್ತರು ಯಾರ ಬಳಿಗೂ ಹೋಗಬಾರದು. ನಮಗೆ ಅನ್ನ ನೀಡುವ ರೈತ ಸುಖವಾಗಿರಬೇಕು. ರೈತ ಸುಖವಾಗಿದ್ದರೆ ನಾವೆಲ್ಲ ಶಾಂತಿಯಿಂದ ಇರುತ್ತೇವೆ. ಸಮಾಜದ ಉನ್ನತಿಯಲ್ಲಿ ಮಠಾಧೀಶರ ಪಾತ್ರ ಮಹತ್ವದ್ದಾಗಿದೆ ಎಂದರು.

ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಹುಕ್ಕೇರಿ ಚಂದ್ರಶೇಖರ ಶಿವಾಚಾರ್ಯ ಶ್ರೀಗಳು ಮಾತನಾಡಿ, ಬಾಲಚಂದ್ರ ಜಾರಕಿಹೊಳಿ ಅವರು ತಮ್ಮ ತಾಯಿ-ತಂದೆಯನ್ನೇ ನಿಜವಾದ ದೇವರು ಎಂದು ಪ್ರತಿನಿತ್ಯ ಪೂಜಿಸುತ್ತಾರೆ. ನೋಂದವರನ್ನು, ಕಷ್ಟದಲ್ಲಿ ಇದ್ದವರನ್ನು ಅಪ್ಪಿಕೊಳ್ಳುವ ಸ್ವಭಾವ ಇವರದ್ದಾಗಿದೆ. ಅವರು ಕೊಡುಗೈ ದಾನಿಯಾಗಿದ್ದಾರೆ. ಇಂದು ಕೆಎಂಎಫ್‌ ಜಾಗತಿಕ ಮಟ್ಟದಲ್ಲಿ ಗುರುತಿಸುವಲ್ಲಿ ಅಧ್ಯಕ್ಷರಾಗಿರುವ ಬಾಲಚಂದ್ರ ಅವರ ಪಾತ್ರ ಅನನ್ಯವಾಗಿದೆ. ಇವರ ಕಾರ್ಯವನ್ನು ಸ್ವತಃ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹಸಚಿವ ಅಮಿತ ಶಾ ಕೊಂಡಾಡಿದ್ದಾರೆ. ಯಾರ ವಿರೋಧವನ್ನೂ ಕಟ್ಟಿಕೊಳ್ಳದ ಬಾಲಚಂದ್ರ ಜಾರಕಿಹೊಳಿ ಅಜಾತಶತ್ರು ಎಂದು ಬಣ್ಣಿಸಿದರು.

ಸಿದ್ಧಲಿಂಗ ಕೈವಲ್ಯಾಶ್ರಮದ ನಿಜಗುಣ ದೇವರು ಮಾತನಾಡಿ, ಮಾಜಿ ಸಚಿವ ಶಿವಾನಂದ ಕೌಜಲಗಿ ಮತ್ತು ಜಾರಕಿಹೊಳಿ ಕುಟುಂಬಗಳು ನಮ್ಮ ಶ್ರೀಮಠದ ಎರಡು ಕಣ್ಣುಗಳಿದ್ದಂತೆ. 25 ವರ್ಷಗಳ ಹಿಂದೆ ಪ್ರವಚನ ಹೇಳಲು ಆಗಾಗ ಹುಣಶ್ಯಾಳ ಪಿಜಿಗೆ ಬರುತ್ತಿದ್ದ ನನಗೆ ಇಲ್ಲಿ ಮಠವನ್ನು ನೀಡಿ ಮಠಾಧಿಪತಿ ಆಗಲು ಈ ಎರಡು ಕುಟುಂಬಗಳು ಸಹಕಾರ ನೀಡಿವೆ. ಬಾಲಚಂದ್ರ ಜಾರಕಿಹೊಳಿ ಅವರು ಅರಭಾವಿ ಜನರ ದೇವರು ಎಂದೇ ಕಾರ್ಯಕ್ರಮವೊಂದರಲ್ಲಿ ಇಂಚಲದ ಶಿವಾನಂದ ಭಾರತಿ ಶ್ರೀಗಳು ಉಲ್ಲೇಖಿಸಿದ್ದಾರೆ. ಬಾಲಚಂದ್ರ ಅವರು ಸೇವಕರಂತೆ ಜನಸೇವೆ ಮಾಡುತ್ತಿದ್ದಾರೆ. ಕಳೆದ 5 ವರ್ಷದಲ್ಲಿ ಈ ಗ್ರಾಮದಲ್ಲಿ .8 ಕೋಟಿಗೂ ಅಧಿಕ ಮೊತ್ತದ ಅಭಿವೃದ್ಧಿಪರ ಕಾಮಗಾರಿಗಳನ್ನು ಕೈಗೊಂಡಿದ್ದಾರೆ ಎಂದು ನಿಜಗುಣ ದೇವರು ಹೇಳಿದರು.

ಜ.11ರಂದು ಬೆಳಗಾವಿಯಿಂದ ಕಾಂಗ್ರೆಸ್‌ ಬಸ್‌ಯಾತ್ರೆ: ಸತೀಶ್‌ ಜಾರಕಿಹೊಳಿ

ಇದೇ ಸಂದರ್ಭದಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಶ್ರೀಗಳು ಪುಷ್ಪಾರ್ಪಣೆ ಮಾಡಿ ಸತ್ಕರಿಸಿದರು. ನಿಜಗುಣ ದೇವರ ತುಲಾಭಾರವನ್ನು ಇದೇ ಸಂದರ್ಭದಲ್ಲಿ ಭಕ್ತರು ನಡೆಸಿಕೊಟ್ಟರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೀದರದ ಗಣೇಶಾನಂದ ಮಹಾರಾಜರು ವಹಿಸಿದ್ದರು.

ಈ ಸಂದರ್ಭದಲ್ಲಿ ಮಹಾದೇವಾನಂದ ಸರಸ್ವತಿ ಸ್ವಾಮಿಗಳು, ವೆಂಕಟೇಶ ಮಹಾರಾಜರು, ಶಿವಾನಂದ ಮಹಾಸ್ವಾಮಿಗಳು, ಪ್ರಭು ದೇವರು, ಕೃಪಾನಂದ ಸ್ವಾಮಿಗಳು, ಚಿದಾನಂದ ಸ್ವಾಮಿಗಳು, ಮಲ್ಲಿಕಾರ್ಜುನ ಸ್ವಾಮಿಗಳು, ಬಸವರಾಜ ಮಹಾರಾಜರು, ಸಿದ್ಧಾರೂಢ ಮಹಾಸ್ವಾಮಿಗಳು, ಬಸವರಾನಂದ ಮಹಾಸ್ವಾಮಿಗಳು, ಸದಾನಂದ ಮಹಾಸ್ವಾಮಿಗಳು, ಸಿದ್ಧಾನಂದ ಸ್ವಾಮಿಗಳು, ಭೀಮಾನಂದ ಸ್ವಾಮಿಗಳು, ನಿಂಗಯ್ಯಾ ಸ್ವಾಮಿಗಳು, ಬಸವರಾಜ ಶರಣರು, ಸಿದ್ಧೇಶ್ವರ ತಾಯಿ, ಅನುಸೂಯಾ ತಾಯಿ ಉಪಸ್ಥಿತರಿದ್ದರು.

Follow Us:
Download App:
  • android
  • ios