ಬೆಳಗಾವಿ(ಜ.16): ನಾನು ಅಸಮಾಧಾನಿತ ಶಾಸಕನಲ್ಲ, ನಾನು ನನ್ನ ಭಾವನೆಗಳನ್ನ ವ್ಯಕ್ತಪಡಿಸಿದ್ದೇನೆ. ಅಸಮಾಧಾನಿತ ಶಾಸಕರು ಯಾರೂ ನ‌ನ್ನನ್ನ ಸಂಪರ್ಕಿಸಿಲ್ಲ ಎಂದು ಬೆಳಗಾವಿ ದಕ್ಷಿಣ ಬಿಜೆಪಿ ಶಾಸಕ ಅಭಯ್ ಪಾಟೀಲ್ ಹೇಳಿದ್ದಾರೆ. 

ಇಂದು(ಶನಿವಾರ) ನಗರದಲ್ಲಿ ಏಷ್ಯಾನೆಟ್ ಸುವರ್ಣನ್ಯೂಸ್‌ ಜತೆ ಮಾತನಾಡಿದ ಅವರು, ಮೊದಲ ಬಾರಿಗೆ ನನ್ನ ಭಾವನೆಗಳನ್ನ ವ್ಯಕ್ತಪಡಿಸಿದ್ದೇನೆ. ನನಗೆ ತಿಳಿದಂತೆ 15 ರಿಂದ 20 ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಟ್ವೀಟ್‌, ಫೇಸ್‌ಬುಕ್‌ ಪೋಸ್ಟ್ ಮಾಡಿ ತನ್ನ ಅಸಮಾಧಾನವನ್ನ ಹೊರಹಾಕಿದ್ದಾರೆ. ಅಮಿತ್ ಶಾಗೆ ದೂರು ನೀಡುತ್ತಿಲ್ಲ ನಮ್ಮ ಭಾವನೆಗಳನ್ನ ಹೇಳಿಕೊಳ್ಳುತ್ತಿದ್ದೇವೆ ಎಂದು ತಿಳಿಸಿದ್ದಾರೆ. 

'ರಮೇಶ್‌ ಮುಸ್ಲಿಂ ಟೋಪಿ ಹಾಕಿದ್ದು, ಕರಿ ಟೋಪಿಯಲ್ಲ'

ನಾಳೆ ಕೋರ್ ಕಮಿಟಿ ಸಭೆಯಲ್ಲಿ ಯಾವ ವಿಷಯ ಚರ್ಚೆ ಆಗುತ್ತೆ ಎಂಬುದು ಗೊತ್ತಿಲ್ಲ. ನಾನು ಯಾವತ್ತೂ ಸಚಿವ ಸ್ಥಾನ ಆಕಾಂಕ್ಷಿ ಅಂತ ಹೇಳಿಲ್ಲ. ಬಹಳಷ್ಟು ಜನರಿಗೆ ಮೆರಿಟ್ ಕನ್ಸಿಡರ್ ಆಗಬೇಕು ಎಂಬ ಭಾವನೆ ಇದೆ ಎಂದಿದ್ದಾರೆ. 
ಅಭಯ್ ಪಾಟೀಲ್ ಕ್ಷೇತ್ರಕ್ಕೆ ಅನುದಾನ ಬರಲ್ಲ ಪಕ್ಕದ ಕಾಂಗ್ರೆಸ್‌ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಕ್ಷೇತ್ರಕ್ಕೆ ಅನುದಾನ ಬರುತ್ತೆ ಎಂಬ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು, ಕೆಲವೊಂದು ಇಲಾಖೆಗೆ ಅನುದಾನ ಕಡಿಮೆ ಬಂದಿದ್ದು ವರಿಷ್ಠರಿಗೆ ದಾಖಲೆಗಳನ್ನ ತೋರಿಸಿದ್ದೇನೆ. ಪಕ್ಕದ ಕ್ಷೇತ್ರಕ್ಕೆ ಹೆಚ್ಚು ಅನುದಾನ ಬಂದು ನನ್ನ ಕ್ಷೇತ್ರಕ್ಕೆ ಕಡಿಮೆ ಬಂದಿದ್ದು ತೋರಿಸಿದ್ದೇನೆ. ಪಕ್ಷದ ವರಿಷ್ಠರಿಗೆ ಅನುದಾನ ತಾರತಮ್ಯದ ದಾಖಲೆ ತೋರಿಸಿದ್ದೇನೆ. ಅವರು ಸರಿಪಡಿಸೋದಾಗಿ ಭರವಸೆ ನೀಡಿದ್ದಾರೆ. ನೋಡೋಣ 15 ದಿವಸದಲ್ಲಿ ಸರಿಪಡಿಸುತ್ತಾರಾ ಅಂತಾ? ಸರಿಪಡಿಸಬಹುದು ಎಂದು ಹೇಳಿದ್ದಾರೆ. 

ನನಗೆ ಸಿಡಿ ವಿಷಯ ಗೊತ್ತಿಲ್ಲ, ಬಹಳಷ್ಟು ಜನ ಸಿಡಿ‌ ಸಿಡಿ ಅಂತಿದ್ದಾರೆ‌. ಬ್ಲ್ಯಾಕ್‌ಮೇಲ್ ರಾಜಕಾರಣ ನಡೆಯುತ್ತಿದೆಯಾ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅಭಯ್ ಪಾಟೀಲ್‌ಗೆ ನನ್ನಿಂದ ಹೇಳಿಕೆ ನೀಡಿಸುವುದಕ್ಕಿಂತ ನೀವೇ ಅವಲೋಕನ ಮಾಡಿದ್ರೆ ಗೊತ್ತಾಗುತ್ತದೆ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.