ಜೆಡಿಎಸ್ ನ್ನು ಅಧಿಕಾರದಿಂದ ದೂರ ಇಡಲು ಇದೀಗ ಕಾಂಗ್ರೆಸ್ ಜೊತೆ ಬಿಜೆಪಿ ಕೈ ಜೋಡಿಸಲು ಮುಂದಾಗಿದೆ ಎನ್ನಲಾಗಿದೆ
ವರದಿ : ಜಿ. ದೇವರಾಜುನಾಯ್ಡು
ಹನೂರು (ಅ.13): ಪಟ್ಟಣ ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಸರ್ಕಾರ ಮೀಸಲಾತಿ ಪ್ರಕಟಿಸುತ್ತಿದ್ದಂತೆ ಪಟ್ಟಣದಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳ ಸದಸ್ಯರು ಗದ್ದುಗೆ ಹಿಡಿಯಲು ಎಲ್ಲಿಲ್ಲದ ಕಸರತ್ತು ಪ್ರಾರಂಭಿಸಿದ್ದಾರೆ. ಹನೂರು ಪಟ್ಟಣ ಪಂಚಾಯಿತಿ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ (ಬಿ) ಗೆ ನಿಗದಿಯಾಗಿದ್ದು, ಮೂರು ಪಕ್ಷಗಳ ಮುಖಂಡರು ಮತ್ತು ಸದಸ್ಯರಲ್ಲಿ ಸಂಚಲನ ಉಂಟು ಮಾಡಿದೆ.
ಮೂರು ಪಕ್ಷಕ್ಕೂ ಯಾವುದೇ ರೀತಿಯ ಬಹುಮತ ಬಾರದೇ ಇರುವುದರಿಂದ ಇತರೆ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು ಆಡಳಿತ ನಡೆಸುವಂತಹ ಪರಿಸ್ಥಿತಿ ಬಂದೊದಗಿದ್ದು ಪಕ್ಷದ ಮುಖಂಡರಿಗೆ ಮತ್ತು ಸದಸ್ಯರಿಗೆ ತಲೆನೋವಾಗಿ ಪರಿಣಮಿಸಿದೆ. ಚುನಾವಣೆ ನಡೆದು 10 ತಿಂಗಳು ಕಳೆದಿದ್ದರೂ ಮೀಸಲಾತಿ ಆದೇಶ ಬಾರದ ಹಿನ್ನೆಲೆ, ಆಡಳಿತ ಮಂಡಳಿ ರಚನೆಯಾಗದೇ ಅಭಿವೃದ್ಧಿ ಕಾರ್ಯಗಳಿಗೆ ಸ್ವಲ್ಪ ಮಟ್ಟಿಗೆ ಹಿನ್ನಡೆಯಾಗಿತ್ತು.
ಯಾರಿಗೂ ಸ್ಪಷ್ಟಬಹುಮತ ಇಲ್ಲ:
ಪಟ್ಟಣ ಪಂಚಾಯ್ತಿಗೆ ಈ ಹಿಂದೆ ನಡೆದಿದ್ದ ಎರಡು ಚುನಾವಣೆಗಳಲ್ಲಿ ಕಾಂಗ್ರೆಸ್ ಸ್ಪಷ್ಟಬಹುಮತ ಪಡೆಯುವುರೊಂದಿಗೆ ಸ್ವಂತ ಬಲದ ಮೇಲೆ ಅಧಿಕಾರ ನಡೆಸಿದ್ದರು. ಈ ಬಾರಿ ಪಪಂ ವ್ಯಾಪ್ತಿಯ 13 ವಾರ್ಡ್‌ಗಳಿಗೆ ಕಳೆದ 2019ರ ಮೇ 29 ರಂದು ನಡೆದ ಮೂರನೇ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಬಂದಿದ್ದು, ಜೆಡಿಎಸ್ 6, ಕಾಂಗ್ರೆಸ್ 4, ಬಿಜೆಪಿ 3 ಸ್ಥಾನಗಳನ್ನು ಪಡೆದುಕೊಂಡಿದೆ. ಈ ಬಾರಿಯ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೂ, ಉಪಾಧ್ಯಕ್ಷ ಸ್ಥಾನ ಬಿಸಿಎಂ (ಬಿ) ಮೀಸಲಾಗಿದೆ. ಕಾಂಗ್ರೆಸ್‌ನಲ್ಲಿ ಮಹಿಳಾ ಪಕ್ಷದ ಸದಸ್ಯೆಯರು ಆಯ್ಕೆಯಾಗದೇ ಇರುವುದರಿಂದ ಅಧ್ಯಕ್ಷ ಸ್ಥಾನ ಜೆಡಿಎಸ್ ಅಥವಾ ಬಿಜೆಪಿ ಅಭ್ಯರ್ಥಿಗಳು ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.
ಸಿಎಂ ಸಂಧಾನದ ಬಳಿಕ ಶ್ರೀರಾಮುಲು- ಸುಧಾಕರ್ ಟಾಂಗ್; ಹೇಳಿಕೆ ಸಖತ್ ಪಂಚಿಂಗ್! .
ಅಧ್ಯಕ್ಷರ ರೇಸ್‌ನಲ್ಲಿ ಮಹಿಳಾ ಸದಸ್ಯರು:
ಜೆಡಿಎಸ್‌ನಿಂದ 1ನೇ ವಾರ್ಡಿನ ಮುಮುಜ್ತಾ ಬಾನು, 4ನೇ ವಾರ್ಡಿನ ಮಂಜುಳ, 7 ನೇ ವಾರ್ಡಿನ ಪವಿತ್ರ ಹಾಗೂ ಬಿಜೆಪಿಯಿಂದ 5ನೇ ವಾರ್ಡಿನ ರೂಪ ಹಾಗೂ 12 ನೇ ವಾರ್ಡಿನ ಚಂದ್ರಮ್ಮ ಆಯ್ಕೆಯಾಗಿದ್ದಾರೆ. ಸಾಮಾನ್ಯ ಮಹಿಳೆಗೆ ಈ ಬಾರಿ ಅವಕಾಶವಿರುವುದರಿಂದ ಪೈಪೋಟಿ ಜೋರಾಗಿಯೇ ಇದೆ. ಆದರೆ ಆಯಾಯ ಪಕ್ಷದ ವರಿಷ್ಠರು ಯಾವ ಪಕ್ಷದ ಜೊತೆ ಹೊಂದಾಣಿಕೆ ಮಾಡಿಕೊಂಡು ಅಂತರಿಕ ಒಪ್ಪಂದ ಮಾಡಿಕೊಳ್ಳುತ್ತಾರೋ ಅವರಿಗೆ ಅದೃಷ್ಟಒಲಿಯಲಿದೆ.
ಕಾಂಗ್ರೆಸ್, ಬಿಜೆಪಿ ಮೈತ್ರಿ ಸಾಧ್ಯತೆ
ಕಾಂಗ್ರೆಸ್ ಪಕ್ಷದಲ್ಲಿ ಮಹಿಳಾ ಅಭ್ಯರ್ಥಿಗಳು ಆಯ್ಕೆಯಾಗದ ಹಿನ್ನಲೆ ಜೆಡಿಎಸ್ ಪಕ್ಷವನ್ನು ಅಧಿಕಾರದಿಂದ ದೂರವಿಡಲು ಬಿಜೆಪಿಯ ಜೊತೆ ಕೈಜೋಡಿಸಿದರೆ ಬಿಜೆಪಿಯ 12ನೇ ವಾರ್ಡಿನ ಚಂದ್ರಮ್ಮ ಅಧ್ಯಕ್ಷರಾಗುವುದು ಬಹುತೇಕ ಖಚಿತ. ಉಪಾಧ್ಯಕ್ಷರಾಗಿ ಯಾವ ಅಭ್ಯರ್ಥಿ ಆಯ್ಕೆಯಾಗುವರು ಕಾದುನೋಡಬೇಕಿದೆ. ಕಳೆದ ಪಪಂ ಅಧಿಕಾರ ಅವಧಿಯಲ್ಲಿ ಹಿಂದುಳಿದ ವರ್ಗ (ಬಿ)ಗೆ ಮೀಸಲಾಗಿದ್ದರಿಂದ ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಿದ್ದ ಏಕೈಕ ಸದಸ್ಯೆ ಮಮತಾ ಅಧ್ಯಕ್ಷರಾಗಿದ್ದರು. ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೂ ಮೀಸಲಾಗಿದ್ದರೂ ಪರಿಶಿಷ್ಟಜಾತಿಯ ಬಸವರಾಜು ಆಯ್ಕೆಯಾಗಿದ್ದರು. ಈ ಬಾರಿಯೂ ಅಧ್ಯಕ್ಷ ಸ್ಥಾನವನ್ನು ಸಾಮಾನ್ಯ ಮಹಿಳೆಗೆ ಮಿಸಲಾತಿ ಆದೇಶ ಹೊರಡಿಸಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
