ಬೆಂಗಳೂರು [ಸೆ.12]:  ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮೈತ್ರಿ ಸರ್ಕಾರದ ಅವಧಿಯಲ್ಲಿ ಎಲಿವೇಡೆಟ್‌ ಕಾರಿಡಾರ್‌ ಯೋಜನೆಯಲ್ಲಿ 9960 ಕೋಟಿ ರು. ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಮಾಜಿ ಲೋಕೋಪಯೋಗಿ ಸಚಿವ ಎಚ್‌.ಡಿ.ರೇವಣ್ಣ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳ ವಿರುದ್ಧ ಎಸಿಬಿ (ಭ್ರಷ್ಟಾಚಾರ ನಿಗ್ರಹ ದಳ) ಮತ್ತು ಬಿಎಂಟಿಎಫ್‌ಗೆ ದೂರು ಸಲ್ಲಿಸಲಾಗಿದೆ.

ರೇವಣ್ಣ ಅವರೊಂದಿಗೆ ಐಎಎಸ್‌ ಅಧಿಕಾರಿಗಳಾದ ರಜನೀಶ್‌ ಗೋಯಲ್‌, ಪಿ.ಸಿ.ಜಾಫರ್‌, ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿ ಕೃಷ್ಣಾರೆಡ್ಡಿ ಮತ್ತು ಕೆಆರ್‌ಡಿಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಬಿ.ಎಸ್‌.ಶಿವಕುಮಾರ್‌ ವಿರುದ್ಧವೂ ದೂರು ನೀಡಲಾಗಿದೆ.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಹಗರಣಕ್ಕೆ ಸಂಬಂಧಿಸಿದಂತೆ 288 ಪುಟಗಳ ದಾಖಲೆ ಬಿಡುಗಡೆ ಮಾತನಾಡಿದ ಬಿಜೆಪಿ ನಗರ ವಕ್ತಾರ ಎನ್‌.ಆರ್‌.ರಮೇಶ್‌, ಸಾವಿರಾರು ಕೋಟಿ ಅವ್ಯವಹಾರ ಇದ್ದಾಗಿದ್ದು, ಪ್ರಕರಣವನ್ನು ಸಿಐಡಿಗೆ ವಹಿಸಬೇಕು ಎಂದು ಆಗ್ರಹಿಸಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಬೆಂಗಳೂರು ಸುತ್ತ ಇರುವ ರಾಷ್ಟ್ರೀಯ ಹೆದ್ದಾರಿ ಹಾಗೂ ರಾಜ್ಯ ಹೆದ್ದಾರಿಗಳು ಹಾಗೂ ನಗರದ ಪ್ರಮುಖ ಜಂಕ್ಷನ್‌ಗಳಿಗೆ ಸಂಪರ್ಕ ಕಲ್ಪಿಸುವ ಉದ್ದೇಶದಿಂದ 87.87 ಕಿ.ಮೀ. ಎಲಿವೇಟೆಡ್‌ ಕಾರಿಡಾರ್‌ ಯೋಜನೆ ಕಾರ್ಯಗತಗೊಳಿಸಲು 17 ಸಾವಿರ ಕೋಟಿ ರು. ಅಂದಾಜು ವೆಚ್ಚ ನಿಗದಿ ಮಾಡಲಾಗಿತ್ತು. ಆದರೆ ಈ ಮೊತ್ತವನ್ನು ಏಕಾಏಕಿ 26,960 ರು. ಗಳಿಗೆ ಅಂದರೆ ಶೇ.59ರಷ್ಟುಏರಿಕೆ ಮಾಡಲಾಯಿತು. ಲೋಕೋಪಯೋಗಿ ಸಚಿವ ಎಚ್‌.ಡಿ.ರೇವಣ್ಣ ಅವರ ಸೂಚನೆ ಮೇರೆಗೆ ಅಂದಾಜು ಮೊತ್ತವನ್ನು ಹೆಚ್ಚಳ ಮಾಡಲಾಗಿದೆ. ಆರಂಭದಲ್ಲಿ ಭೂಸ್ವಾಧೀನ ಪ್ರಕ್ರಿಯೆ ಸೇರಿದಂತೆ ಪ್ರತಿ ಕಿ.ಮೀ.ಗೆ 193 ಕೋಟಿ ರು. ಇದ್ದದ್ದು ಏಕಾಏಕಿ 306 ಕೋಟಿ ರು.ಗೆ ಏರಿಕೆ ಮಾಡಲಾಗಿದೆ ಎಂದು ಆರೋಪಿಸಿದರು.

ರೇವಣ್ಣ ಅವರು ಹಾಸನ, ತುಮಕೂರು ಹಾಗೂ ಮಂಡ್ಯದ ಲೋಕಸಭಾ ಚುನಾವಣೆಗೆ ಬಳಕೆ ಮಾಡಿಕೊಳ್ಳಲು ತಾವು ಹೇಳಿದಂತೆ ಕೇಳುವ ಸಂಸ್ಥೆಗೆ ಈ ಯೋಜನೆಯ ಕಾಮಗಾರಿ ಗುತ್ತಿಗೆ ಸಿಗುವಂತೆ ನೋಡಿಕೊಂಡಿದ್ದಾರೆ. ಇದರಿಂದಾಗಿ ಏರಿಕೆ ಮಾಡಿದ ಮೊತ್ತವನ್ನು ತಮ್ಮ ಖಜಾನೆಗೆ ತುಂಬಿಸಿಕೊಂಡಿದ್ದಾರೆ. ಇದಕ್ಕೆ ಇಲಾಖೆಯ ಅಧಿಕಾರಿಗಳು ಸಹಕಾರ ನೀಡಿದ್ದಾರೆ. ಇದರಿಂದಾಗಿ ಯೋಜನೆಯ ಕಾಮಗಾರಿಯಿಂದಾಗಿ ಎಚ್‌.ಡಿ.ರೇವಣ್ಣ ಹಾಗೂ ಅಧಿಕಾರಿಗಳು ಸಾವಿರಾರು ಕೋಟಿ ಕಿಕ್‌ಬ್ಯಾಕ್‌ ಪಡೆದುಕೊಂಡಿದ್ದಾರೆ ಎಂದು ಆರೋಪ ಮಾಡಿದರು.