ಬೆಂಗಳೂರು [ಡಿ.28]: ಇಂದಿರಾ ಕ್ಯಾಂಟೀನ್‌ಗೆ ಒಬ್ಬ ವ್ಯಕ್ತಿಯ ಹೆಸರಿಡುವ ಬದಲು ರಾಜ್ಯದ ವಿವಿಧ ಜಿಲ್ಲೆಗಳ ಸ್ವಾತಂತ್ರ್ಯ ಹೋರಾಟಗಾರರು, ಮಹನೀಯರು, ಪುಣ್ಯ ಪುರುಷರ ಹೆಸರುಗಳನ್ನು ಇಡುವುದು ಸೂಕ್ತ ಎಂದು ಬಿಜೆಪಿ ಶಾಸಕರಾದ ರಾಜುಗೌಡ ಹಾಗೂ ಸತೀಶ್‌ ರೆಡ್ಡಿ ಹೇಳಿದ್ದಾರೆ.

ಶುಕ್ರವಾರ ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ರಾಜುಗೌಡ, ಮಹರ್ಷಿ ವಾಲ್ಮೀಕಿ ಹೆಸರಿಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದೇನೆ. ಬೆಳಗಾವಿ ಜಿಲ್ಲೆಯಲ್ಲಿ ಸಂಗೋಳ್ಳಿ ರಾಯಣ್ಣ ಅವರ ಹೆಸರು, ನಮ್ಮ ಭಾಗದಲ್ಲಿ ಮಹರ್ಷಿ ವಾಲ್ಮೀಕಿ ಹೆಸರು, ಬೆಂಗಳೂರಿನಲ್ಲಿ ಕೆಂಪೇಗೌಡ ಹಾಗೂ ಇನ್ನಿತರ ಜಿಲ್ಲೆಗಳಲ್ಲಿ ಇರುವ ಮಹನೀಯರು, ಸ್ವಾತಂತ್ರ್ಯ ಹೋರಾಟ ಮುಂತಾದವರು ಹೆಸರನ್ನು ಇಡುವುದರಿಂದ ಜನರು ಅವರ ಹೆಸರನ್ನು ನೆನಪಿಸಿಕೊಂಡು ಆಹಾರ ಸೇವಿಸಿದಂತಾಗುತ್ತದೆ ಎಂದರು.

ಹೆಚ್ಚಿನ ಜಿಲ್ಲಾ ಸದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಸಚಿವರಾದ ಸಿ.ಟಿ. ರವಿ ಅವರು ಕ್ಯಾಂಟೀನ್‌ಗೆ ‘ಅನ್ನಪೂರ್ಣ’ ಎಂದೂ, ಸುರೇಶಕುಮಾರ್‌ ಅವರು ‘ಅನ್ನ ಕುಟೀರ’ ಎಂದು ಹೆಸರಿಡುವಂತೆ ಸಲಹೆ ನೀಡಿದ್ದಾರೆ, ತಾವು ಮಹರ್ಷಿ ವಾಲ್ಮೀಕಿ ಹೆಸರಿಡುವಂತೆ ಸರ್ಕಾರಕ್ಕೆ ಪತ್ರ ಬರೆದಿದ್ದೇನೆ ಎಂದರು. ಶಾಸಕ ಸತೀಶ್‌ ರೆಡ್ಡಿ ಮಾತನಾಡಿ, ಯಾರನ್ನೋ ಖುಷಿ ಪಡಿಸಲು ಒಬ್ಬ ವ್ಯಕ್ತಿಯ ಹೆಸರಿಡುವ ಬದಲು, ಆಯಾ ಭಾಗದ ಮಹನೀಯರ ಹೆಸರಿಡುವುದು ಸೂಕ್ತ ಎಂದರು.