'ಹಣಕ್ಕಾಗಿ ಶಾಸಕ ಸ್ಥಾನ ಮಾರಿಕೊಂಡ ಕುಟುಂಬ - ಕಾರ್ಯಕರ್ತರು ಬೇಸತ್ತು ಪಕ್ಷಾಂತರ'
ಜೆಡಿಎಸ್ ಕಾರ‍್ಯಕರ್ತರು ಮತ್ತು ಮತದಾರರು ಕೊಟ್ಟಂತಹ ಶಾಸಕ ಸ್ಥಾನವನ್ನು ಹಣಕ್ಕಾಗಿ ಮಾರಿಕೊಂಡ ಕುಟುಂಬದ ನಿಮಗೆ ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಅವರ ಬಗ್ಗೆ ಮಾತನಾಡುವ ಯಾವ ಯೋಗ್ಯತೆ, ನೈತಿಕತೆ ಇದೆ ಎಂದು ಜೆಡಿಎಸ್ ಮುಖಂಡ ಎಂ.ಸಿ.ಕರಿಯಪ್ಪಗೆ ಬಿಜೆಪಿ ಮುಖಂಡರು ತಿರುಗೇಟು ನೀಡಿದ್ದಾರೆ.
ಚನ್ನಪಟ್ಟಣ (ನ.16): ಜೆಡಿಎಸ್ ಕಾರ‍್ಯಕರ್ತರು ಮತ್ತು ಮತದಾರರು ಕೊಟ್ಟಂತಹ ಶಾಸಕ ಸ್ಥಾನವನ್ನು ಹಣಕ್ಕಾಗಿ ಮಾರಿಕೊಂಡ ಕುಟುಂಬದ ನಿಮಗೆ ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಅವರ ಬಗ್ಗೆ ಮಾತನಾಡುವ ಯಾವ ಯೋಗ್ಯತೆ, ನೈತಿಕತೆ ಇದೆ ಎಂದು ಜೆಡಿಎಸ್ ಮುಖಂಡ ಎಂ.ಸಿ.ಕರಿಯಪ್ಪಗೆ ಬಿಜೆಪಿ ಮುಖಂಡರು ತಿರುಗೇಟು ನೀಡಿದ್ದಾರೆ.
ಈ ಕುರಿತು ಜಂಟಿ ಪತ್ರಿಕಾ ಹೇಳಿಕೆ ನೀಡಿರುವ ಚನ್ನಪಟ್ಟಣ ಯೋಜನಾ ಪ್ರಾಧಿಕಾರ ಅಧ್ಯಕ್ಷ ಆರ್.ಎಂ.ಮಲುವೇಗೌಡ, ಬಿಜೆಪಿ (BJP) ಉಪಾಧ್ಯಕ್ಷರಾದ ಎಲೇಕೇರಿ ರವೀಶ್, ಶಿವಲಿಂಗಯ್ಯ(ಕುಳ್ಳಪ್ಪ), ಜಿಪಂ ಮಾಜಿ ಸದಸ್ಯ ಸದಾನಂದ, ಶಾಸಕತ್ವವನ್ನು (MLA) ಮಾರಿಕೊಂಡು ನಿಮ್ಮ ಮನೆಯವರು ನಿಗಮ, ಮಂಡಲಿ ಅಧ್ಯಕ್ಷಗಿರಿ ಪಡೆದು ಓಡಾಡಿದ್ದನ್ನು ತಾಲೂಕಿನ ಜನ ಇನ್ನು ಮರೆತಿಲ್ಲ. ತಮ್ಮದೇ ಸರ್ಕಾರದಲ್ಲಿ ವಿಧಾನ ಪರಿಷತ್ ಸದಸ್ಯರಾಗಿರುವ ಯೋಗೇಶ್ವರ್ ಬಗ್ಗೆ ಕುಹಕವಾಡುವ ನಿನಗೆ ನಿಮ್ಮ ಪಕ್ಷದಿಂದ ಎಂಎಲ್‌ಸಿ ಆಗುವುದು ಸಾಧ್ಯವಿದೆಯೇ ಎಂದು ಏಕವಚನದಲ್ಲೇ ಪ್ರಶ್ನಿಸಿದ್ದಾರೆ.
ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಬಗ್ಗೆ ಯೋಗೇಶ್ವರ್ ಟೀಕೆ ಮಾಡಿದ್ದಕ್ಕೆ ಅವರಿಗೆ ಬುದ್ಧಿ ಭ್ರಮಣೆಯಾಗಿದೆ ಎಂದು ಹೇಳಿದ್ದೀರಿ. ಆದರೆ ಜನರು ಕೊಟ್ಟಅಧಿಕಾರವನ್ನು ಹಣಕ್ಕೆ ಮಾರಾಟ ಮಾಡಿ ಅಧಿಕಾರವಿಲ್ಲದೆ ಚಡಪಡಿಸುತ್ತಿರುವ ನಿನಗೆ ನಿಜವಾಗಲು ಬುದ್ದಿ ಭ್ರಮಣೆಯಾಗಿದೆಯೇ ಹೊರತು ನಮ್ಮ ನಾಯಕರಿಗಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಿಮ್ಮ ಪಕ್ಷದ ನಡುವಳಿಕೆಯಿಂದ ಬೇಸತ್ತು ನಿಮ್ಮ ಕಾರ್ಯಕರ್ತರು ಪಕ್ಷಾಂತರ ಮಾಡುತ್ತಿದ್ದಾರೆ. ಆದ್ದರಿಂದ ಅನಿವಾರ್ಯವಾಗಿ ಎಚ್‌ಡಿಕೆ ನಿಮ್ಮನ್ನು ಮುನ್ನೆಲೆಗೆ ತಂದಿದ್ದಾರೆ. ಈ ಹಿಂದೆ ನಿಮಗೆ ಪಕ್ಷದಲ್ಲಿ ಯಾವ ಮರ್ಯಾದೆ ಇತ್ತು ಎಂಬುದು ಎಲ್ಲರಿಗೂ ಗೊತ್ತಿದೆ. ನಿಮ್ಮ ಗೊಡ್ಡು ಬೆದರಿಕೆಗೆ ಇಲ್ಲಿ ಹೆದರುವವರು ಯಾರು ಇಲ್ಲ ಎಂದು ಕಿಡಿಕಾರಿದ್ದಾರೆ.
ನಾಲ್ಕು ವರ್ಷದಿಂದ ಯೋಗೇಶ್ವರ್ ಕ್ಷೇತ್ರಕ್ಕೆ ಬರಲಿಲ್ಲವೆಂದು ಪ್ರಶ್ನಿಸುವ ನಿಮಗೆ, ಕಳೆದ ನಾಲ್ಕುವರೆ ವರ್ಷದಿಂದ ಯಾವುದೇ ರಾಷ್ಟ್ರೀಯ ಹಬ್ಬ, ಕೆಡಿಪಿ ಸಭೆ, ಬಗರ್‌ಹುಕುಂ ಸಭೆಗಳಲ್ಲಿ ಭಾಗಿಯಾಗದ ಕುಮಾರಸ್ವಾಮಿಯವರನ್ನು ಪ್ರಶ್ನಿಸುವ ಧ್ವನಿ ಇಲ್ಲವೇ. ಇದೀಗ ಚುನಾವಣೆ ಹತ್ತಿರವಾದಂತೆ ಕುಮಾರಸ್ವಾಮಿಗೆ ಕ್ಷೇತ್ರದ ಬಗ್ಗೆ ಕಾಳಜಿ ಬಂದಿದೆ. ಜನರಿಗೆ ಎಲ್ಲ ಅರಿವಿದ್ದು, ಮುಂದಿನ ಚುನಾವಣೆಯ ನಂತರ ಯಾರು ಮಾಜಿಯಾಗುತ್ತಾರೆ ಎಂಬದನ್ನು ತಾಲೂಕಿನ ಜನ ನಿರ್ಧರಿಸುತ್ತಾರೆ ಎಂದು ತಿಳಿಸಿದ್ದಾರೆ.
ಸುಮ್ಮನೆ ಯೋಗೇಶ್ವರ್ ವಿರುದ್ಧ ವ್ಯರ್ಥವಾಗಿ ಆರೋಪ ಮಾಡುವುದನ್ನು ಬಿಟ್ಟು ನಿಮ್ಮ ಪಕ್ಷದ ಸಂಘಟನೆಯ ಬಗ್ಗೆ ತಲೆ ಕೆಡಿಸಿಕೊಳ್ಳಿ. ಅದು ಬಿಟ್ಟು ಯೋಗೇಶ್ವರ್ ವಿರುದ್ಧ ಅಗೌರವದಿಂದ ಮಾತನಾಡುವುದು ಮುಂದುವರಿಸಿದರೆ ಮುಂದಿನ ದಿನಗಳಲ್ಲಿ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ನಾನು ಸಚಿವ ಸ್ಥಾನದ ಆಕಾಂಕ್ಷಿ
ಚನ್ನಪಟ್ಟಣ (ನ.08): ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ಕಾಲಾವಧಿ ಅಂತಿಮ ಹಂತದಲ್ಲಿದ್ದು, ಇನ್ನು ಆರು ತಿಂಗಳು ಮಾತ್ರ ಅಧಿಕಾರಾವಧಿ ಇದೆ. ಸ್ವಾಭಾವಿಕವಾಗಿ ನಾನು ಸಚಿವ ಸ್ಥಾನದ ಆಕಾಂಕ್ಷಿ. ಆದರೆ, ಸಚಿವ ಸ್ಥಾನ ನೀಡುವುದು ಬಿಡುವುದು ಬಿಜೆಪಿ ವರಿಷ್ಠರ ನಿರ್ಧಾರ ಎಂದು ವಿಧಾನಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ತಿಳಿಸಿದರು.
ನಗರದ ಕಾಶಿ ವಿಶ್ವನಾಥಸ್ವಾಮಿ ದೇವಸ್ಥಾನದಲ್ಲಿ (Temple) ಸೋಮವಾರ ನಡೆದ ಮಹಾರುದ್ರಯಾಗದಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಸೇರಿದಂತೆ ಕೆಲವರು ಸ್ವಾಭಾವಿಕವಾಗಿ ಸಚಿವ (Minister ) ಸ್ಥಾನದ ಆಕಾಂಕ್ಷಿಯಾಗಿದ್ದು, ಈ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಮನವಿ ಮಾಡಿದ್ದೆವು. ಆದರೆ, ಸಚಿವ ಸಂಪುಟದ ವಿಸ್ತರಣೆ ಯಾವ ಕಾರಣಕ್ಕೆ ತಡವಾಗಿದೆಯೋ ಗೊತ್ತಿಲ್ಲ. ಮುಂದಿನ ದಿನಗಳಲ್ಲಿ ವಿಸ್ತರಣೆ ಆಗಬಹುದು. ಆ ವಿಚಾರ ಮುಖ್ಯಮಂತ್ರಿ ಮತ್ತು ಪಕ್ಷದ ವರಿಷ್ಠರಿಗೆ ಬಿಟ್ಟವಿಚಾರ ಎಂದು ಮಾರ್ಮಿಕವಾಗಿ ನುಡಿದರು.
ಪಕ್ಷದ ಮುಖಂಡನಾಗಿ ನಾನು ನನ್ನ ಹಿತಿಮಿತಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ಪಕ್ಷ ಕೊಟ್ಟಿರುವ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿಭಾಯಿಸುತ್ತಿದ್ದೇನೆ. ಪಕ್ಷದ ವರಿಷ್ಠರು ನಾಯಕರು ಸೂಕ್ತ ಸಂದರ್ಭದಲ್ಲಿ ಸೂಕ್ತ ನಿರ್ಧಾರ ಮಾಡುತ್ತಾರೆಂಬ ಭರವಸೆ ಇದೆ. ಅಲ್ಲಿಯವರೆಗೆ ನಾನು ಪಕ್ಷ ವಹಿಸಿದ ಜವಬ್ದಾರಿಯನ್ನು ನಿಷ್ಠೆಯಿಂದ ನಿರ್ವಹಿಸುತ್ತೇನೆ ಎಂದು ತಿಳಿಸಿದರು.
ತಾತ್ಕಾಲಿಕ ಹುದ್ದೆಗಳು:
ಸಚಿವ ಸ್ಥಾನವಿರಬಹುದು. ಯಾವುದೇ ಹುದ್ದೆಗಳಿರಬಹುದು ಅವು ತಾತ್ಕಾಲಿಕ. ಅದರಿಂದ ನನ್ನ ಕಾರ್ಯವಿಧಾನ ಏನು ಬದಲಾವಣೆ ಆಗಲ್ಲ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಚನ್ನಪಟ್ಟಣದಲ್ಲಿಯೇ ಸ್ಪರ್ಧೆ ಮಾಡುತ್ತೇನೆ ಎಂದು ತಿಳಿಸಿದ್ದಾರೆ. ಹಾಗಾಗಿ ನಾನು ಹೆಚ್ಚು ಚನ್ನಪಟ್ಟಣ, ರಾಮನಗರ, ಮಂಡ್ಯ ಭಾಗದಲ್ಲಿ ಓಡಾಡುತ್ತಿದ್ದೇನೆ. ಪಕ್ಷ ಕಟ್ಟುವ ವಿಚಾರದಲ್ಲಿ ಪ್ರಾಮಾಣಿಕವಾಗಿ ನಾನು ಕೆಲಸ ಮಾಡುತ್ತಿದ್ದೇನೆ. ಅಧಿಕಾರ ಕೊಡೋದು ಬಿಡೋದು ಪಕ್ಷದ ವರಿಷ್ಠರಿಗೆ ಬಿಟ್ಟವಿಚಾರ. ಈಗ ಅದೆಲ್ಲವೂ ಗೌಣ, ಅದಕ್ಕೆಲ್ಲ ಪ್ರಾಮುಖ್ಯತೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ಕನಕಪುರದಲ್ಲಿ ನಾಯಕರಿಲ್ಲ:
ದುಂತೂರು ವಿಶ್ವನಾಥ್ ಜೆಡಿಎಸ್ ತೊರೆದ ನಂತರ ಕನಕಪುರದಲ್ಲಿ ಜೆಡಿಎಸ್‌ಗೆ ನಾಯಕರಿಲ್ಲ. ಕನಕಪುರದಲ್ಲಿ ಪಕ್ಷವನ್ನು ಮುನ್ನಡೆಸುವ ಮುಖಂಡರಿಲ್ಲದ ಕಾರಣ ಆ ಪಕ್ಷ ಅಲ್ಲಿ ಅಸ್ತಿತ್ವದಲ್ಲಿ ಇಲ್ಲ. ಕನಕಪುರ ಒಂದೇ ಅಲ್ಲ ಜಿಲ್ಲೆಯ ಇತರೆ ಮೂರು ಕ್ಷೇತ್ರಗಳಲ್ಲೂ ಜೆಡಿಎಸ್ ಅಸ್ತಿತ್ವ ಕಳೆದುಕೊಂಡಿದ್ದು, ಮುಂದಿನ ಚುನಾವಣೆಯಲ್ಲಿ ಜನರೇ ಆ ಪಕ್ಷಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಈ ಸಂದರ್ಭದಲ್ಲಿ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಮಲುವೇಗೌಡ, ಮುಖಂಡರಾದ ಕೂಡ್ಲೂರು ಮಹದೇವು, ನಾಗೇಶ್ ಇತರರಿದ್ದರು.