ಹಿರಿಯೂರು (ಅ.14):  ದೃಶ್ಯ ಮಾಧ್ಯಮವೊಂದರ ಮುಂದೆ ಕುಳಿತು ಹಿಂದೂ ಧರ್ಮ ಹಾಗೂ ಸಮಸ್ತ ಹಿಂದೂಗಳ ವಿರುಧ್ಧ ಅವಹೇಳನಕಾರಿಯಾಗಿ ಮಾತನಾಡಿರುವ ಸ್ವಯಂ ಘೋಷಿತ ಬುದ್ಧಿಜೀವಿ ಭಗವಾನ್‌ರನ್ನು ಬಂಧಿಸಿ, ಹೇಳಿಕೆ ಹಿಂದೆ ಯಾವ ಹಿಂದೂ ವಿರೋಧಿ ಕೈಗಳು ಕೆಲಸ ಮಾಡುತ್ತಿವೆ ಎಂದು ತನಿಖೆಗೆ ಒಳಪಡಿಸಲು ಪೊಲೀಸ್‌ ಇಲಾಖೆಗೆ ಸೂಚಿಸಬೇಕು ಎಂದು ಜಿಲ್ಲಾ ಬಿಜೆಪಿ ಮಾಧ್ಯಮ ಸಹ ಪ್ರಮುಖ್‌ ಕೇಶವಮೂರ್ತಿ ಆಗ್ರಹಿಸಿದ್ದಾರೆ.

ಈ ಬಗ್ಗೆ ಹೇಳಿಕೆ ನೀಡಿರುವ ಅವರು ಭಗವಾನ್‌ ಈ ಹಿಂದೆ ಶ್ರೀರಾಮ, ಸೀತಾಮಾತೆ, ಭಗವದ್ಗೀತೆ ಬಗ್ಗೆ ತುಚ್ಛವಾಗಿ ಮಾತನಾಡಿ ಹಿಂದೂಗಳ ಭಾವನೆಗಳಿಗೆ ನೋವುಂಟು ಮಾಡಿರುದಲ್ಲದೇ ಈಗ ಮತ್ತೊಮ್ಮೆ ಮಾಧ್ಯಮದ ಮುಂದೆ ಕುಳಿತು ಹಿಂದೂ ಧರ್ಮ, ಹಿಂದೂಗಳ ಬಗ್ಗೆ ನಾಲಿಗೆ ಹರಿಬಿಟ್ಟಿರುವುದರ ಹಿಂದೆ ಅನೇಕ ಧರ್ಮ, ದೇಶ ದ್ರೋಹಿಗಳ ಕಾಣದ ಕೈಗಳು ಕೆಲಸ ಮಾಡುತ್ತಿರುವ ಅನುಮಾನವಿದೆ ಎಂದಿದ್ದಾರೆ.

ಪ್ರೊ.ಕೆ.ಎಸ್.ಭಗವಾನ್ ವಿರುದ್ಧ ದೂರು ದಾಖಲು ...

ಅವಕಾಶ ಸಿಕ್ಕಾಗಲೆಲ್ಲ ಕೇವಲ ಹಿಂದೂ ದೇವರು, ಹಿಂದೂ ಧರ್ಮಗಳ ಬಗ್ಗೆ ಅವಮಾನಕಾರಿ ಹೇಳಿಕೆಗಳನ್ನು ಕೊಡುತ್ತಿರುವ ಹಿಂದೆ ಯಾವುದೋ ಷಡ್ಯಂತ್ರ ಆಗಿರಬಹುದು. ಆದ್ದರಿಂದ ಕೂಡಲೇ ಸರ್ಕಾರ ಈ ಕುರಿತು ಸಮಗ್ರ ತನಿಖೆ ನಡೆಸಲು ಹಾಗೂ ಪೊಲೀಸ್‌ ಇಲಾಖೆಗೆ ಸುಮೊಟೋ ಕೇಸು ದಾಖಲಿಸಲು ಸೂಚನೆ ನೀಡಬೇಕು ಹಾಗೂ ಭಗವಾನ್‌ಗೆ ನೀಡಿರುವ ಭದ್ರತೆ ಹಾಗೂ ಸರ್ಕಾರದ ಸವಲತ್ತು ವಾಪಸ್‌ ಪಡೆದು, ಬಂಧಿಸಿ ಎಲ್ಲಾ ರೀತಿಯ ತನಿಖೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.