ಶಿವಮೊಗ್ಗ [ಅ.07] :  ನೆರೆ ಸಂತ್ರಸ್ತರಿಗೆ ಪರಿಹಾರ ಕೊಡಿಸುವಲ್ಲಿ ರಾಜ್ಯದಿಂದ ಆಯ್ಕೆಯಾಗಿರುವ ಸಂಸತ್‌ ಸದಸ್ಯರು ವಿಫಲರಾಗಿದ್ದಾರೆ ಎಂದು ಆರೋಪಿಸಿ ಹಾಗೂ ರಾಜ್ಯ ಸರ್ಕಾರವನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿ ಬಹುಜನ ಸಮಾಜಪಾರ್ಟಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ಜಿಲ್ಲಾಡಳಿತದ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

ರಾಜ್ಯದಲ್ಲಿ ಕೆಲ ದಿನಗಳ ಹಿಂದೆ ಸುರಿದ ಭಾರೀ ಮಳೆ ಮತ್ತು ನೆರೆಯಿಂದಾಗಿ ಸುಮಾರು 22 ಜಿಲ್ಲೆಗಳ 103 ತಾಲೂಕುಗಳಲ್ಲಿ ಕಂಡು ಕೇಳರಿಯದ ಪ್ರವಾಹ ಉಂಟಾಗಿ ಜನರು ತತ್ತರಿಸಿಹೋಗಿದ್ದಾರೆ. ಜಲ ಪ್ರಳಯಕ್ಕೆ 87 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಸುಮಾರು 2.3 ಲಕ್ಷ ಮನೆ ಹಾನಿಯಾಗಿವೆ. 1.79 ಲಕ್ಷ ಮನೆಗಳು ಸಂಪೂರ್ಣ ನಾಶವಾಗಿವೆ. 7.82 ಲಕ್ಷ ಹೆಕ್ಟೇರ್‌ ಬೆಳೆ ನಾಶವಾಗಿದೆ. 5 ಸಾವಿರ ಹೆಕ್ಟೇರ್‌ ವ್ಯವಸಾಯದ ಭೂಮಿ ಕೊಚ್ಚಿಕೊಂಡು ಹೋಗಿದೆ ಎಂದರು.

ರಸ್ತೆ, ಸೇತುವೆ, ವಿದ್ಯುತ್‌ ಕಂಬ, ಟ್ರಾನ್ಸ್‌ಫಾರ್ಮರ್‌, ಆಸ್ಪತ್ರೆ, ಶಾಲೆಗಳು ನೆಲಸಮವಾಗಿವೆ. ಒಟ್ಟಾರೆ ಸರ್ಕಾರದ ಅಂದಾಜಿನ ಪ್ರಕಾರವೇ 38,451 ಕೋಟಿ ರು. ನಷ್ಟವಾಗಿದೆ. ಹೀಗಿದ್ದರೂ ಕೂಡ ಕೇಂದ್ರ ಸರ್ಕಾರದಿಂದ ಸಮರ್ಥವಾಗಿ ನೆರವು ತರಲು ರಾಜ್ಯದ ಸಂಸದರು ಅಸಮರ್ಥರಾಗಿದ್ದಾರೆ ಎಂದು ದೂರಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಸಂಸದರು ಸಂತ್ರಸ್ತರ ಕಷ್ಟಆಲಿಸಲಿಲ್ಲ, ಸಾಂತ್ವನವನ್ನು ಹೇಳಲಿಲ್ಲ. ಸಂಸದರಾದ ಪ್ರತಾಪ್‌ ಸಿಂಹ, ತೇಜಸ್ವಿ ಸೂರ್ಯ ಮುಂತಾದವರು ಸಂತ್ರಸ್ತರೊಂದಿಗೆ ನಿಕೃಷ್ಟವಾಗಿ ವರ್ತಿಸಿ ದರ್ಪ, ದಬ್ಬಾಳಿಕೆ ತೋರುತ್ತಿದ್ದಾರೆ. ಜನಸಾಮಾನ್ಯರ ಸಂಕಷ್ಟಇವರಿಗೆ ಅರ್ಥವಾಗಿಲ್ಲ. ಹೀಗಾಗಿ ಇವರು ಅಧಿಕಾರದಲ್ಲಿ ಉಳಿಯುವ ಯಾವ ನೈತಿಕತೆಯನ್ನು ಹೊಂದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜವಾಬ್ದಾರಿಯನ್ನು ನಿಭಾಯಿಸುವಲ್ಲಿ ವಿಫಲರಾಗಿರುವ ರಾಜ್ಯವನ್ನು ಪ್ರತಿನಿಧಿಸುತ್ತಿರುವ ಸಂಸದರು ಈ ಕೂಡಲೇ ತಮ್ಮ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಬೇಕು ಎಂದು ಒತ್ತಾಯಿಸಿದರು.

ಅತಿವೃಷ್ಟಿಯಿಂದ ಹಲವರು ಬೀದಿ ಪಾಲಾಗಿದ್ದಾರೆ. ಇದುವರೆಗೂ ಸಂತ್ರಸ್ತರ ಕಣ್ಣೀರು ಒರೆಸಲು ಸರ್ಕಾರ ಮುಂದಾಗಿಲ್ಲ. ಕೇಂದ್ರದಿಂದ ನೆರವು ಪಡೆಯಲು ಸಾಧ್ಯವಾಗಿಲ್ಲ. ಇದು ರಾಜ್ಯ ಸರ್ಕಾರದ ಬೇಜವಾಬ್ದಾರಿತನಕ್ಕೆ ಸಾಕ್ಷಿಯಾಗಿದೆ. ಜನರ ಸಂಕಷ್ಟನಿವಾರಿಸಲು ವಿಫಲವಾಗಿರುವ ರಾಜ್ಯ ಸರ್ಕಾರವನ್ನು ವಜಾಗೊಳಿಸಬೇಕೆಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಬಿಎಸ್‌ಪಿ ಜಿಲ್ಲಾಧ್ಯಕ್ಷ ಎ.ಡಿ. ಶಿವಪ್ಪ, ರವಿ, ಸಂಗಪ್ಪ, ಶಿವಮೂರ್ತಿ, ಶಿವರುದ್ರಪ್ಪ, ಲೋಕೇಶ್‌, ರಘು, ಶಿವರಾಜ್‌, ಮಂಜುನಾಥ್‌ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.