Asianet Suvarna News Asianet Suvarna News

ಕೆ.ಆರ್ ಪೇಟೆ ಗೆಲ್ಲಿಸಿದ್ದ ಬಿಜೆಪಿ ಮಾಸ್ಟರ್ ಮೈಂಡ್ ಶಿರಾಗೂ ಎಂಟ್ರಿ!

ರಾಜ್ಯದಲ್ಲಿ ಚುನಾವಣಾ ಅಬ್ಬರ ಹೆಚ್ಚಾಗಿದ್ದು ಎಲ್ಲಾ ಪಕ್ಷಗಳಲ್ಲಿಯೂ ಕೂಡ ಬಿರುಸಿ ಚಟುವಟಿಕೆ ನಡೆಯುತ್ತಿದೆ. 

BJP Leader Vijayendra Enter To Shira Constituency snr
Author
Bengaluru, First Published Oct 16, 2020, 8:01 AM IST
  • Facebook
  • Twitter
  • Whatsapp

ತುಮಕೂರು (ಅ.16):  ಕಳೆದ ಬಾರಿ ಮಂಡ್ಯ ಜಿಲ್ಲೆಯ ಕೆ.ಆರ್‌.ಪೇಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿಗೆ ಅಪರೂಪದ ಗೆಲುವು ದೊರಕಲು ಕಾರಣರಾಗಿದ್ದ ರಾಜ್ಯ ಬಿಜೆಪಿ ಉಪಾಧ್ಯಕ್ಷರೂ ಆಗಿರುವ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ ಅವರು  ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಪ್ರಚಾರದಲ್ಲಿ ಧುಮುಕಲಿದ್ದಾರೆ.

ಕ್ಷೇತ್ರದ ಉಸ್ತವಾರಿಗಳ ತಂಡದ ಸದಸ್ಯರೂ ಆಗಿರುವ ವಿಜಯೇಂದ್ರ ಅವರ ಪ್ರವೇಶ ಸಹಜವಾಗಿಯೇ ಆಡಳಿತಾರೂಢ ಬಿಜೆಪಿ ಪಾಳೆಯದಲ್ಲಿ ಹೊಸ ಉತ್ಸಾಹ ಮೂಡಿಸಿದ್ದು, ಶಿರಾ ಕ್ಷೇತ್ರದಲ್ಲೂ ಮೊದಲ ಬಾರಿಗೆ ಪಕ್ಷಕ್ಕೆ ಗೆಲುವು ಸಿಗುವ ನಿರೀಕ್ಷೆಯಲ್ಲಿದ್ದಾರೆ.

ಚುನಾವಣೆ ಘೋಷಣೆಯಾಗುವ ಮೊದಲೇ ವಿಜಯೇಂದ್ರ ಅವರು ಶಿರಾಕ್ಕೆ ಒಂದು ಸುತ್ತು ಭೇಟಿ ನೀಡಿ ತಳಮಟ್ಟದ ಸಂಘಟನೆಗೆ ಚಾಲನೆ ನೀಡಿ ಬಂದಿದ್ದರು. ಅಲ್ಲದೆ, ಅನ್ಯ ಪಕ್ಷಗಳಲ್ಲಿನ ಕೆಲವು ಸ್ಥಳೀಯ ಮುಖಂಡರನ್ನು ಸೆಳೆಯುವಲ್ಲಿಯೂ ಅವರು ಯಶಸ್ವಿಯಾಗಿದ್ದರು. ನಂತರ ಕೊರೋನಾ ಸೋಂಕು ತಗುಲಿದ್ದರಿಂದ ಮನೆಯಲ್ಲೇ ವಿಶ್ರಾಂತಿಯಲ್ಲಿದ್ದರು. ಇದೀಗ ಕ್ವಾರಂಟೈನ್‌ ಅವಧಿ ಮುಗಿಸಿರುವ ಅವರು ಶುಕ್ರವಾರದಿಂದಲೇ ಪ್ರಚಾರದಲ್ಲಿ ಅಧಿಕೃತವಾಗಿ ಪಾಲ್ಗೊಳ್ಳಲಿದ್ದಾರೆ.

ಸಿಎಂ ಸವಾಲು ಸ್ವೀಕರಿಸಿದ ಮಾಜಿ ಸಿಎಂ: ರಾಜೀನಾಮೆ ನೀಡುತ್ತೇನೆಂದ ಸಿದ್ದರಾಮಯ್ಯ...!

ಹಿಂದೆ 2018ರಲ್ಲಿ ವಿಧಾನಸಭೆಯ ಸಾರ್ವತ್ರಿಕ ಚುನಾವಣೆಯಲ್ಲಿ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಸತತವಾಗಿ ಪ್ರಚಾರ ನಡೆಸುವ ಮೂಲಕ ತಮ್ಮದೇ ಆದ ಛಾಪು ಮೂಡಿಸಿದ್ದ ವಿಜಯೇಂದ್ರ ಅವರು ನಂತರ ಕಳೆದ ವರ್ಷ ಕೆ.ಆರ್‌.ಪೇಟೆ ವಿಧಾನಸಭಾ ಕ್ಷೇತ್ರದ ಉಸ್ತುವಾರಿ ಹೊತ್ತಿದ್ದರು. ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿ ಬಾವುಟ ಹಾರಿಸುವುದು ಸಾಧ್ಯವೇ ಇಲ್ಲ ಎಂಬ ವಾತಾವರಣ ಇರುವಾಗ ಕೆ.ಆರ್‌.ಪೇಟೆಯಲ್ಲಿ ಪಕ್ಷಕ್ಕೆ ಗೆಲುವು ತಂದು ಕೊಟ್ಟಿದ್ದ ವಿಜಯೇಂದ್ರ ಅವರ ಬಗ್ಗೆ ಅಪಾರ ಪ್ರಶಂಸೆ ವ್ಯಕ್ತವಾಗಿತ್ತು.

ಇದೀಗ ಶಿರಾದಲ್ಲೂ ಅಂಥದ್ದೇ ಪವಾಡ ನಡೆಯಬಹುದು ಎಂಬ ನಿರೀಕ್ಷೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಲ್ಲಿ ಮೂಡಿದೆ. ಈ ಕ್ಷೇತ್ರದಲ್ಲೂ ಬಿಜೆಪಿ ಯಾವತ್ತೂ ಗೆಲುವು ಸಾಧಿಸಿಲ್ಲ. ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳೇ ಪಾರುಪತ್ಯ ಮೆರೆದಿವೆ. ಹೀಗಾಗಿ, ಈ ಉಪಚುನಾವಣೆಯಲ್ಲಾದರೂ ಪಕ್ಷ ಗೆಲುವು ಸಾಧಿಸುವಂತಾಗಬೇಕು. ಇದಕ್ಕೆ ವಿಜಯೇಂದ್ರ ಅವರನ್ನು ಉಸ್ತುವಾರಿಗಳ ತಂಡದ ಸದಸ್ಯರನ್ನಾಗಿ ಮಾಡಿರುವುದು ಅನುಕೂಲವಾಗುತ್ತದೆ ಎಂಬ ಅಭಿಪ್ರಾಯವನ್ನು ಸ್ಥಳೀಯ ಮುಖಂಡರು ವ್ಯಕ್ತಪಡಿಸುತ್ತಿದ್ದಾರೆ.

ಈಗಾಗಲೇ ಪಕ್ಷದ ಅಭ್ಯರ್ಥಿಯಾಗಿ ಡಾ.ರಾಜೇಶ್‌ಗೌಡ ಅವರನ್ನು ಕಣ್ಕಕಿಳಿಸಲಾಗಿದೆ. ಅವರು ನಾಮಪತ್ರವನ್ನೂ ಸಲ್ಲಿಸಿದ್ದಾರೆ. ಶುಕ್ರವಾರ ನಾಮಪತ್ರ ಸಲ್ಲಿಕೆ ಅವಧಿ ಮುಗಿಯಲಿದ್ದು, ಶನಿವಾರದಿಂದ ಎಲ್ಲ ರಾಜಕೀಯ ಪಕ್ಷಗಳೂ ಭರ್ಜರಿ ಪ್ರಚಾರದಲ್ಲಿ ತೊಡಗಲಿವೆ. ವಿಜಯೇಂದ್ರ ಅವರು ಕೆಲದಿನಗಳ ಕಾಲ ಅಲ್ಲಿಯೇ ವಾಸ್ತವ್ಯ ಹೂಡಿ ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರಮಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

Follow Us:
Download App:
  • android
  • ios