ತುಮಕೂರು (ನ.13):  ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಬಳಿಕ ನಡೆದ ಮೊದಲ ಚುನಾವಣೆಯಲ್ಲೇ ಬಿಜೆಪಿ ಜಯಬೇರಿ ಬಾರಿಸಿದ್ದು ಪಂಚ ಪಾಂಡವರ ಟೀಮ್‌ನಲ್ಲಿ ಒಬ್ಬರಾಗಿದ್ದ ಸುರೇಶಗೌಡ ಜಯದ ನಗೆ ಬೀರಿದ್ದಾರೆ.

ಶಿರಾ ಕ್ಷೇತ್ರಕ್ಕೆ ಉಪಚುನಾವಣೆ ಘೋಷಣೆಯಾದಾಗ ದೊಡ್ಡ ಸವಾಲಿತ್ತು. ಈವರೆಗೆ ನಡೆದಿರುವ ಎಲ್ಲಾ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆದ್ದ ಇತಿಹಾಸವಿರಲಿಲ್ಲ. ಅಷ್ಟೆಏಕೆ ಎರಡನೇ ಸ್ಥಾನಕ್ಕೂ ಏರಿರಲಿಲ್ಲ. ಇಂತಹ ವೇಳೆ 3 ವಾರಗಳ ಕಾಲ ಒಂದು ರೀತಿಯ ಅಗ್ನಿ ಪರೀಕ್ಷೆಯೇ ಇತ್ತು. ಈಗ ನಮ್ಮ ಅಭ್ಯರ್ಥಿ ಗೆಲ್ಲುವುದರೊಂದಿಗೆ ಅಗ್ನಿ ಪರೀಕ್ಷೆಯಲ್ಲಿ ಜಯ ಸಾಧಿಸಿದ್ದೇವೆ ಎಂಬ ತೃಪ್ತಿ ನಮಗಿದೆ ಎಂದು ಸುರೇಶಗೌಡ ಹೇಳಿದ್ದಾರೆ.

ಶಿರಾ ಕಸಬಾ, ಗೌಡಗೆರೆ ಹೋಬಳಿ, ಕಳ್ಳಂಬೆಳ್ಳ, ಹುಲಿಕುಂಟೆ ಹೀಗೆ ಎಲ್ಲಾ ಹೋಬಳಿಯ ಎಲ್ಲಾ ಗ್ರಾಮಗಳಿಗೂ ಹೋಗಿ ಯುವಕರನ್ನು ಮನವೊಲಿಸಿ ಪಕ್ಷದ ಸಾಧನೆ, ಮೋದಿ, ಯಡಿಯೂರಪ್ಪನವರ ಬಗ್ಗೆ ಹೇಳಿ ಮನವರಿಕೆ ಮಾಡಿಕೊಟ್ಟಿದ್ದೆವು. ಮೂರು ವಾರದಲ್ಲೇ ಇಡೀ ಕ್ಷೇತ್ರದ ಚಿತ್ರಣವೇ ಬದಲಾಗಿ ಹೋಯಿತು.

'ಸೌಮ್ಯಾ ರೆಡ್ಡಿ ಡಿಕೆಶಿಯೇ ಸಿಎಂ ಅಂತಿದ್ದಾರೆ-ಕುಸುಮಾ ಸೋಲಿಸಿದ್ದೆ ಸಿದ್ದರಾಮಯ್ಯ' .

2018 ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಪಕ್ಷ ಪಡೆದಿದ್ದು 16 ಸಾವಿರ ಮತಗಳು. ಆದರೆ ಈ ಬಾರಿ 76 ಸಾವಿರಕ್ಕೂ ಹೆಚ್ಚು ಮತಗಳನ್ನು ಪಡೆದಿದ್ದೇವೆ. ಅಂದರೆ 60 ಸಾವಿರ ಹೆಚ್ಚುವರಿ ಮತಗಳು ಪಡೆದು ಜಯ ಸಾಧಿಸಿದ್ದು ದೊಡ್ಡ ಸಾಧನೆ ಎಂದರು.

ಪಕ್ಷದ ಪ್ರತಿಯೊಬ್ಬರು ಚುನಾವಣೆಯಲ್ಲಿ ಸಾಥ್‌ ನೀಡಿದ್ದಾರೆ. ಇಡೀ ಕ್ಷೇತ್ರದಲ್ಲಿ ವ್ಯವಸ್ಥಿತವಾಗಿ ಪ್ರಚಾರ ಮಾಡಿದ್ದರ ಪರಿಣಾಮ ಇಷ್ಟುದೊಡ್ಡ ಅಂತರದಿಂದ ಗೆಲ್ಲಲು ಸಾಧ್ಯವಾಯಿತು ಎಂದರು.

ಅಧ್ಯಕ್ಷನಾದ ಮೇಲೆ ನಡೆದ ಮೊದಲ ಚುನಾವಣೆ ಇದಾಗಿತ್ತು. ಅಲ್ಲದೇ ಶಿರಾದ ಇತಿಹಾಸದಲ್ಲಿ ಯಾವತ್ತೂ ಕೂಡ ಬಿಜೆಪಿ ಗೆದ್ದಿಲ್ಲ. ಹೀಗಾಗಿ ಈ ಚುನಾವಣೆಯನ್ನು ಸವಾಲಾಗಿ ತೆಗೆದುಕೊಂಡಿದ್ದರ ಪರಿಣಾಮ ಜಯ ಸಾಧ್ಯವಾಯಿತು ಎಂದರು. ತಾವು ಕೂಡ ಮೂರು ವಾರಗಳ ಕಾಲ ಶಿರಾದ ಹಳ್ಳಿಯಲ್ಲೇ ವಾಸ್ತವ್ಯ ಹೂಡಿ ಪ್ರತಿ ದಿನ ಬೆಳಿಗ್ಗೆ 6 ಗಂಟೆಗೆ ಆರಂಭವಾಗಿ ರಾತ್ರಿ 9 ರವರೆಗೆ ಪ್ರಚಾರದಲ್ಲಿ ತೊಡಗಿಕೊಂಡಿದ್ದೆ ಎಂದು ಸುರೇಶಗೌಡ ತಿಳಿಸಿದ್ದಾರೆ.