ಮದ್ದೂರು [ಮಾ.11]:  ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮದ್ದೂರಿಗೆ ಆಗಮಿಸಿದ ಮಾಜಿ ಕೇಂದ್ರ ಸಚಿವ ಎಸ್‌.ಎಂ.ಕೃಷ್ಣ ಕಾಂಗ್ರೆಸ್‌ ಹಿರಿಯ ಮುಖಂಡರನ್ನು ಭೇಟಿಯಾಗಿ ಉಭಯ ಕುಶಲೋಪರಿ ವಿಚಾರಿಸಿದರು.

ಬೆಂಗಳೂರಿನಿಂದ ಸುಮಾರು 12.15ರ ಸುಮಾರಿಗೆ ತಾಲೂಕಿನ ನಿಡಘಟ್ಟಗ್ರಾಮಕ್ಕೆ ಆಗಮಿಸಿದ ಎಸ್‌.ಎಂ.ಕೃಷ್ಣ ಹಿರಿಯ ಕಾಂಗ್ರೆಸ್ಸಿಗ ದಿ.ಅಪ್ಪಾಜಿಗೌಡರ ಮೊಮ್ಮಗ, ಗ್ರಾಪಂ ಮಾಜಿ ಅಧ್ಯಕ್ಷ ಎನ್‌.ಎಂ.ಪ್ರಕಾಶ್‌ ನಿರ್ಮಿಸಿದ ನೂತನ ನಿವಾಸಕ್ಕೆ ಭೇಟಿ ನೀಡಿ ಉಪಹಾರ ಸೇವಿಸಿದರು. ಅಪ್ಪಾಜಿಗೌಡರು ತಮ್ಮ ನಡುವಿನ ಎರಡು ತಲೆಮಾರಿನ ಸ್ನೇಹವನ್ನು ಮೆಲುಕು ಹಾಕಿ ಸ್ಮರಿಸಿದರು.

ನಂತರ ಸೋಮನಹಳ್ಳಿ ಬಳಿಯ ಖಾಸಗಿ ಹೋಟೆಲ್‌ಗೆ ಭೇಟಿ ನೀಡಿ ಕೆಲಕಾಲ ವಿಶ್ರಾಂತಿ ಪಡೆದರು. ಈ ವೇಳೆ ಹಿರಿಯ ಕಾಂಗ್ರೆಸ್‌ ಮುಖಂಡರು ಅವರಿಗೆ ಮಾಲಾರ್ಪಣೆ ಮಾಡಿ ಅಭಿನಂದಿಸಿದರು. ಈ ವೇಳೆ ಕಾಂಗ್ರೆಸ್ಸಿಗರೊಂದಿಗೆ ರಾಜಕೀಯ ವಿದ್ಯಮಾನಗಳ ಕುರಿತು ಚರ್ಚೆ ನಡೆಸಿದರು.

ಇದೇ ವೇಳೆ ಸ್ಥಳದಲ್ಲಿದ್ದ ಸುದ್ದಿಗಾರರು ಮಧ್ಯಪ್ರದೇಶದ ಸರ್ಕಾರ ಉರುಳಿಸಲು ಬಿಜೆಪಿ ಸರ್ಕಾರ ನಡೆಸುತ್ತಿರುವ ಆಪರೇಷನ್‌ ಕಮಲ ಮತ್ತು ಮೈಷುಗರ್‌ ಕಾರ್ಖಾನೆಯನ್ನು ಖಾಸಗೀಕರಣ ಮಾಡಲು ಮುಂದಾಗಿರುವ ಸರ್ಕಾರದ ನಿರ್ಧಾರದ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದರು.

ಸುಳಿಯದ ಬಿಜೆಪಿ ನಾಯಕರು:

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಪುತ್ರ ಬಿ.ವೈ.ರಾಘವೇಂದ್ರ ಮದ್ದೂರಿನ ಪ್ರವಾಸಿಮಂದಿರಕ್ಕೆ ಆಗಮಿಸಿದ ವೇಳೆ ಪಕ್ಷದ ಜಿಲ್ಲಾ ಹಾಗೂ ತಾಲೂಕಿನ ಬಿಜೆಪಿ ನಾಯಕರು ಹಾಗೂ ನೂರಾರು ಕಾರ್ಯಕರ್ತರು ಅಭಿನಂದಿಸಿದರು. ತಮ್ಮ ಪಕ್ಷದ ಹಿರಿಯ ನಾಯಕ ಎಸ್‌.ಎಂ.ಕೃಷ್ಣ ಮದ್ದೂರು ಕ್ಷೇತ್ರಕ್ಕೆ ಭೇಟಿ ನೀಡಿದ್ದ ವೇಳೆ ಯಾವುದೇ ಬಿಜೆಪಿ ನಾಯಕರು ಅವರನ್ನು ಭೇಟಿ ಮಾಡಲು ಆಗಮಿಸಲಿಲ್ಲ. ಜಿಲ್ಲಾ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಕದಲೂರು ರಾಮಕೃಷ್ಣ, ತಾಪಂ ಮಾಜಿ ಅಧ್ಯಕ್ಷ ಸಿ.ನಾಗೇಗೌಡ, ಪುರಸಭೆ ಮಾಜಿ ಅಧ್ಯಕ್ಷ ವಿ.ಎಸ್‌.ನಾಗರಾಜು, ಡಿಸಿಸಿ ಬ್ಯಾಂಕ್‌ ನಿರ್ದೇಶಕ ದೊಡ್ಡಲಿಂಗೇಗೌಡ, ಮುಖಂಡರಾದ ಕೋಣಸಾಲೆ ಜಯರಾಂ, ವಿ.ಎಸ್‌.ನಾಗರಾಜು, ಡಾ.ಜೋಗೀಗೌಡ, ಎಂ.ಸಿ.ಚಂದ್ರಶೇಖರ್‌, ಚೊಟ್ಟನಹಳ್ಳಿ ಸೋಮಣ್ಣ ಸೇರಿದಂತೆ ಕೃಷ್ಣರವರ ಅಭಿಮಾನಿಗಳಿದ್ದರು.

ನಂತರ ಎಸ್‌.ಎಂ.ಕೃಷ್ಣ ತಾಲೂಕಿನ ಕೂಳಗೆರೆ ಗ್ರಾಮಕ್ಕೆ ಆಗಮಿಸಿ ಜೆಡಿಎಸ್‌ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಟಿ.ಶೇಖರ್‌ ಪುತ್ರನ ವಿವಾಹದ ಬೀಗರ ಔತಣಕೂಟದಲ್ಲಿ ಪಾಲ್ಗೊಂಡು ಬೆಂಗಳೂರಿಗೆ ತೆರಳಿದರು. ತಾಲೂಕಿನ ಸೋಮನಹಳ್ಳಿ ಬಳಿ ಎಸ್‌.ಎಂ.ಕೃಷ್ಣ ವಿಶ್ರಾಂತಿ ಪಡೆಯುತ್ತಿರುವ ಮಾಹಿತಿ ಪಡೆದ ಸೋಮನಹಳ್ಳಿ ಗ್ರಾಪಂ ಕಾರ್ಯದರ್ಶಿ ಜಯಶ್ರೀ ಹೋಟೆಲ್‌ ಗೆ ಆಗಮಿಸಿ ಕೃಷ್ಣರ ಕಾಲಿಗೆರಗಿ ನಮಸ್ಕರಿಸಿ ಆಶೀರ್ವಾದ ಪಡೆದರು.

ಕೆಲಕಾಲ ಕೃಷ್ಣ ಅವರ ಜೊತೆ ಮಾತುಕತೆ ನಡೆಸಿದ ಜಯಶ್ರೀ, ನಾನು ಹೈಸ್ಕೂಲ… ಓದುವಾಗಿನಿಂದೆಲೂ ನಿಮ್ಮ ಅಭಿಮಾನಿಯಾಗಿದ್ದೇನೆ. ನಿಮ್ಮ ನಾಯಕತ್ವ ಹಾಗೂ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಬೆಂಗಳೂರು, ಮಂಡ್ಯ ಜಿಲ್ಲೆಯಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮೆಚ್ಚುಗೆ ಸೂಚಿಸಿದರು.