ಯಲಹಂಕ ಬಿಜೆಪಿ ಮುಖಂಡ ಸತೀಶ್ ಗೌಡ, ಹಾಲು ಉತ್ಪಾದಕರ ಸಂಘದ ನಿರ್ದೇಶಕ ಸ್ಥಾನದಿಂದ ಅನರ್ಹಗೊಂಡಿದ್ದಕ್ಕೆ ಕುಪಿತಗೊಂಡು, ಸಹಕಾರ ಸಂಘಗಳ ಸಹಾಯಕ ನಿಬಂಧಕ ಪ್ರಕಾಶ್ ರಾವ್ ಕಚೇರಿಗೆ ನುಗ್ಗಿ ಹಲ್ಲೆ ನಡೆಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಬಂಧಿತರಾದ ಸತೀಶ್, ನಂತರ ಠಾಣಾ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.

ಬೆಂಗಳೂರು (ಏ.26): ರಾಜ್ಯದಲ್ಲಿ ಸರ್ಕಾರಿ ಅಧಿಕಾರಿಗಳಿಗೆ ರಕ್ಷಣೆ ಇಲ್ಲವೇ? ಇತ್ತೀಚೆಗಷ್ಟೇ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಅವರ ವರ್ತನೆ ಚರ್ಚೆಯಲ್ಲಿದ್ದ ಬೆನ್ನಲ್ಲೇ, ಈಗ ಯಲಹಂಕ ಕ್ಷೇತ್ರದ ಬಿಜೆಪಿ ಮುಖಂಡ ಸತೀಶ್ ಗೌಡ (ಕಡತನಮಲೆ) ಅವರ ಅತಿರೇಕದ ವರ್ತನೆ ಮುನ್ನೆಲೆಗೆ ಬಂದಿದೆ. ಸರ್ಕಾರಿ ಕಚೇರಿಗೆ ನುಗ್ಗಿ ಅಧಿಕಾರಿಯ ಮೇಲೆ ಹಲ್ಲೆ ನಡೆಸಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಏನಿದು ಘಟನೆ?

ಯಲಹಂಕದ ಪ್ರಭಾವಿ ಬಿಜೆಪಿ ನಾಯಕ ಹಾಗೂ ಹಾಲು ಉತ್ಪಾದಕರ ಸಂಘದ ನಿರ್ದೇಶಕರಾಗಿದ್ದ ಸತೀಶ್ ಗೌಡ ಅವರನ್ನು ಇತ್ತೀಚೆಗೆ ಆ ಸ್ಥಾನದಿಂದ ಅನರ್ಹಗೊಳಿಸಲಾಗಿತ್ತು. ಈ ಆದೇಶದಿಂದ ಕುಪಿತಗೊಂಡ ಸತೀಶ್ ಗೌಡ, ಮಲ್ಲೇಶ್ವರಂನಲ್ಲಿರುವ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ. ಕಚೇರಿಯಲ್ಲಿದ್ದ ಸಿಬ್ಬಂದಿ ಹಾಗೂ ಅಧಿಕಾರಿಗಳ ಮೇಲೆ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಲ್ಲದೆ, ಭೀಬತ್ಸವಾಗಿ ನಿಂದಿಸಿದ್ದಾರೆ.

ಅಧಿಕಾರಿಯ ಮೇಲೆ ಭೀಕರ ಹಲ್ಲೆ:

ಸಹಾಯಕ ನಿಬಂಧಕ ಪ್ರಕಾಶ್ ರಾವ್ ಅವರ ಮೇಲೆ ಮುಗಿಬಿದ್ದ ಸತೀಶ್ ಕಡತನಮಲೆ, ಅವಾಚ್ಯ ಶಬ್ದಗಳಿಂದ (ಸೂ..ಮಗ, ಬೋ..ಮಗ ಎಂದು) ನಿಂದಿಸಿದ್ದಾರೆ. ಅಷ್ಟಕ್ಕೇ ನಿಲ್ಲದೆ, ಅಧಿಕಾರಿಯ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ. ಕಚೇರಿಯ ಸಿಬ್ಬಂದಿಯನ್ನು ಬೆದರಿಸಿ, ಅಲ್ಲಿನ ಪೀಠೋಪಕರಣಗಳಿಗೆ ಹಾನಿ ಮಾಡಲು ಯತ್ನಿಸಿದ್ದಾರೆ ಎನ್ನಲಾಗಿದೆ. ಈ ಹಲ್ಲೆಯ ದೃಶ್ಯಗಳು ಕಚೇರಿಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸತೀಶ್ ಅವರ ದರ್ಪಕ್ಕೆ ಸಾಕ್ಷಿಯಾಗಿವೆ.

ಪೊಲೀಸ್ ಕ್ರಮ ಮತ್ತು ಬಂಧನ:

ಈ ಘಟನೆಗೆ ಸಂಬಂಧಿಸಿದಂತೆ ಸಂತ್ರಸ್ತ ಅಧಿಕಾರಿ ಪ್ರಕಾಶ್ ರಾವ್ ಅವರು ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅಧಿಕಾರಿಯ ದೂರಿನ ಮೇರೆಗೆ ಸತೀಶ್ ಕಡತನಮಲೆ ವಿರುದ್ಧ ಐಪಿಸಿ ಸೆಕ್ಷನ್‌ಗಳಡಿ ಎಫ್‌ಐಆರ್ (FIR) ದಾಖಲಿಸಿದ ಪೊಲೀಸರು, ನಿನ್ನೆಯೇ ಅವರನ್ನು ವಶಕ್ಕೆ ಪಡೆದಿದ್ದರು.

ಠಾಣಾ ಜಾಮೀನಿನ ಮೇಲೆ ಬಿಡುಗಡೆ

ರಾತ್ರಿ ಇಡೀ ವಿಚಾರಣೆ ನಡೆಸಿದ ಪೊಲೀಸರು, ಸತೀಶ್ ಗೌಡ ಅವರಿಂದ ಸುದೀರ್ಘ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ‘ನನ್ನನ್ನು ಹಾಲು ಉತ್ಪಾದಕರ ಸಂಘದ ನಿರ್ದೇಶಕ ಸ್ಥಾನದಿಂದ ಅನ್ಯಾಯವಾಗಿ ಅನರ್ಹಗೊಳಿಸಿದ್ದಕ್ಕೆ ಸಿಟ್ಟಿನಿಂದ ಈ ರೀತಿ ಮಾಡಿದೆ’ ಎಂದು ಸತೀಶ್ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಸದ್ಯಕ್ಕೆ ಠಾಣಾ ಜಾಮೀನಿನ ಮೇಲೆ ಅವರನ್ನು ಬಿಡುಗಡೆ ಮಾಡಲಾಗಿದ್ದು, ಅವಶ್ಯಕತೆ ಬಿದ್ದರೆ ಮತ್ತೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ.

ಹೆಚ್ಚಿದ ಆಕ್ರೋಶ:

ಜನಪ್ರತಿನಿಧಿಗಳಾಗಬೇಕಾದವರೇ ಈ ರೀತಿ ಕಾನೂನು ಕೈಗೆತ್ತಿಕೊಳ್ಳುತ್ತಿರುವುದು ರಾಜ್ಯದಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವಿನ ಆರೋಪ-ಪ್ರತ್ಯಾರೋಪಗಳಿಗೆ ವೇದಿಕೆಯಾಗಿದೆ. ಸರ್ಕಾರಿ ಅಧಿಕಾರಿಗಳಿಗೆ ಕೆಲಸದ ಸ್ಥಳದಲ್ಲಿ ಭದ್ರತೆ ಇಲ್ಲದಂತಾಗಿದೆಯೇ ಎಂಬ ಪ್ರಶ್ನೆ ಎದ್ದಿದೆ. ರಾಜಕೀಯ ಬಲದಿಂದ ಅಧಿಕಾರಿಗಳ ಮೇಲೆ ಕೈ ಮಾಡುವ ಸಂಸ್ಕೃತಿಗೆ ಬ್ರೇಕ್ ಬೀಳಬೇಕಿದೆ ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.