ಗದಗ(ಮಾ.11): ಮುಖ್ಯಮಂತ್ರಿ ಯಡಿಯೂರಪ್ಪ ಮಂಡಿಸಿರುವ ಬಜೆಟ್‌ ಜನಪರವಾಗಿದ್ದು, ಯಾವುದೇ ತೆರಿಗೆ ಹೆಚ್ಚಳ ಮಾಡದೇ ಕೋವಿಡ್‌ ನಂತರವೂ ಆರ್ಥಿಕ ಸುಭದ್ರತೆಯನ್ನು ಕಾಯ್ದುಕೊಳ್ಳಲು ಸಹಕಾರಿಯಾಗಿದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಮೋಹನ ಮಾಳಶೆಟ್ಟಿ ಹೇಳಿದ್ದಾರೆ. 

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಅಧಿಕಾರ ವಹಿಸಿಕೊಳ್ಳುವ ಸಂದರ್ಭದಲ್ಲಿ ಬರದ ಛಾಯೆ ಇತ್ತು. ಆನಂತರ ಅತಿವೃಷ್ಟಿಉಂಟಾಗಿ ಜನರು ಸಾಕಷ್ಟು ಸಮಸ್ಯೆ ಎದುರಿಸಿದರು. ಅದಾದ ಮೇಲೆ ವಿಶ್ವವನ್ನೇ ಬೆಚ್ಚಿ ಬೀಳಿಸಿರುವ ಕೋವಿಡ್‌ನಿಂದಾಗಿ ಸಾಕಷ್ಟುಸಮಸ್ಯೆ ಉಂಟಾಗಿತ್ತು. ಇಷ್ಟೆಲ್ಲ ಸಮಸ್ಯೆಗಳ ಮಧ್ಯೆಯೂ ಉತ್ತಮವಾದ ಜನಪರವಾದ ಬಜೆಟ್‌ ಮಂಡಿಸಿದ್ದಾರೆ ಎಂದರು.

ಕೃಷಿ ಹಾಗೂ ಮಹಿಳೆಯರಿಗೆ ಆದ್ಯತೆ ನೀಡಲಾಗಿದೆ. ಸಾವಯವ ಕೃಷಿಗೆ  500 ಕೋಟಿ, ದೊಡ್ಡ ರೈತರಿಗೆ ಆತ್ಮನಿರ್ಭರ ಯೋಜನೆಯಡಿ ಗೋದಾಮು ನಿರ್ಮಾಣಕ್ಕೆ, ಅಡಿಕೆ ಬೆಳೆಗೆ ಹಳದಿ ರೋಗ ತಡೆಗೆ ವಿಶೇಷ ಯೋಜನೆ, ಗೋವು ರಕ್ಷಣೆ ಜಿಲ್ಲೆಗೊಂದು ಗೋಶಾಲೆಗೆ ಪ್ರಾರಂಭ, ದೇಸಿ ತಳಿಗಳ ರಕ್ಷಣೆ, ನೀರಾವರಿ ಯೋಜನೆಗೆ . 21 ಸಾವಿರ ಕೋಟಿ ಮೀಸಲು, ಅಲ್ಪ ಸಂಖ್ಯಾತರಿಗೆ . 1500 ಮೀಸಲಿಡಲಾಗಿದೆ. ವಿವಿಧ ವಸತಿ ಯೋಜನೆಗಳಿಗೆ . 10 ಸಾವಿರ ಕೋಟಿ ಅನುದಾನ ಮೀಸಲು ಹೀಗೆ ಸರ್ಕಾರದ ಯೋಜನೆಗಳ ಕುರಿತು ವಿವರವಾಗಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಾಧವ ಗಣಾಚಾರಿ, ಅರವಿಂದ ಹುಲ್ಲೂರ, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಶ್ರೀಕಾಂತ ಖಟವಟೆ, ರಾಜ್ಯ ಕಾರ್ಯಕಾರಿಣಿ ಮಂಡಳಿ ಸದಸ್ಯ ರಾಜು ಕುರುಡಗಿ, ಭೀಮಸಿಂಗ್‌ ರಾಠೋಡ, ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಎಂ.ಎಸ್‌. ಕರಿಗೌಡ್ರ, ಸಿದ್ದು ಪಲ್ಲೇದ ಹಾಜರಿದ್ದರು.

ಸದನದಲ್ಲಿ ಒಂದು ದೇಶ ಒಂದು ಚುನಾವಣೆ ಚರ್ಚೆ ಆಗಬೇಕಿತ್ತು: ರಾಮುಲು

ರಾಜ್ಯ ಬಜೆಟ್‌ ಸಮರ್ಥಿಸಿಕೊಳ್ಳಲು ಬಂದು, ಅಸಹಾಯಕತೆ ವ್ಯಕ್ತಪಡಿಸಿದ ಜಿಲ್ಲಾ ಬಿಜೆಪಿ

ಮುಖ್ಯಮಂತ್ರಿ ಯಡಿಯೂರಪ್ಪ ಮಂಡಿಸಿದ ಬಜೆಟ್‌ ಕುರಿತು ಸಮರ್ಥಿಸಿಕೊಳ್ಳಲು ರಾಜ್ಯ ಬಿಜೆಪಿ ಕರೆಯ ಮೇರೆಗೆ ಜಿಲ್ಲಾ ಬಿಜೆಪಿ ಸುದ್ದಿಗೋಷ್ಠಿ ಆಯೋಜಿಸಿತ್ತು. ಗೋಷ್ಠಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಸಾಲು ಸಾಲು ಪ್ರಶ್ನೆಗಳಿಗೆ ನಾಯಕರು ಕಂಗಾಲಾದರು. ಗದಗ ಜಿಲ್ಲೆಗೆ ಬಜೆಟ್‌ನಲ್ಲಿ ಒಂದೇ ಒಂದು ಯೋಜನೆ ನೀಡದ ನಿಮ್ಮ ಸರ್ಕಾರದ ಬಜೆಟನ್ನು ಹೇಗೆ ಸಮರ್ಥಿಸಿಕೊಳ್ಳುತ್ತೀರಿ? ರಾಜಸ್ವದ ಕೊರತೆ ಇದ್ದರೆ, ಅಕ್ಕಪಕ್ಕದ ಕೊಪ್ಪಳ, ಧಾರವಾಡ, ಹಾವೇರಿ ಜಿಲ್ಲೆಗೆ ಯಾಕೆ ಹೆಚ್ಚಿನ ಅನುದಾನ, ಹೊಸ ಯೋಜನೆಗಳು ಸಿಕ್ಕಿವೆ? ಬೆಂಗಳೂರು ನಗರಕ್ಕೆ ಘೋಷಣೆ ಮಾಡಿರುವ ಯೋಜನೆಗಳ ಬಗ್ಗೆ ನೀವಿಲ್ಲಿ ಸುದ್ದಿಗೋಷ್ಠಿ ಮಾಡಿದರೆ ಗದಗ ಜಿಲ್ಲೆಯ ಜನತೆಗೇನು ಲಾಭ? ಕೇಂದ್ರ, ರಾಜ್ಯ, ಜಿಪಂ, ತಾಪಂ, ಗ್ರಾಪಂಗಳಲ್ಲಿ ನಮ್ಮದೇ ಸರ್ಕಾರ ಬರುವಂತೆ ಮಾಡಿ ಆ ಮೇಲೆ ಅಭಿವೃದ್ಧಿ ಕೇಳಿ ಎನ್ನುವ ನಿಮ್ಮ ಘೋಷ ವಾಕ್ಯ ಏನಾಯ್ತು?... ಹೀಗೆ ಪ್ರಶ್ನೆಗಳ ಸುರಿಮಳೆ ಎದುರಾಯಿತು. 

ಜಿಲ್ಲಾ ಬಿಜೆಪಿ ಅಧ್ಯಕ್ಷ ಮೋಹನ ಮಾಳಶೆಟ್ಟಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಂಗಮೇಶ ದುಂದೂರ, ದ್ರಾಕ್ಷಾರಸ ಮಂಡಳಿ ಅಧ್ಯಕ್ಷ ಕಾಂತಿಲಾಲ ಬನ್ಸಾಲಿ ಸೇರಿದಂತೆ ಯಾವೊಬ್ಬ ನಾಯಕರಿಂದಲೂ ಸಮರ್ಪಕವಾದ ಉತ್ತರ ಬರಲಿಲ್ಲ. ಬದಲಾಗಿ ಇನ್ನೂ ಕಾಲವಕಾಶವಿದೆ. ಪೂರಕ ಬಜೆಟ್‌ನಲ್ಲಿ ಜಿಲ್ಲೆಯ ಯೋಜನೆಗಳನ್ನು ಸೇರಿಸುತ್ತೇವೆ ಎನ್ನುವ ಹಾರಿಕೆ ಉತ್ತರ ನೀಡಲು ಮುಂದಾದರು. ಈ ವೇಳೆಯಲ್ಲಿ ಜಿಲ್ಲೆಗೆ ಮೈಲುಗಲ್ಲಾಗುವಂತಹ ಯಾವುದೇ ಯೋಜನೆಗಳನ್ನು ಗದಗ ಜಿಲ್ಲೆಗೆ ನೀಡಿದ ನಿಮ್ಮ ಸರ್ಕಾರದ ನಡೆಯನ್ನು ನೀವು ಹೇಗೆ ಸಮರ್ಥಿಸಿಕೊಳ್ಳುತ್ತೀರಿ? ಎಂದಾಗ, ಹೌದು, ನಮಗೂ ಸ್ವಲ್ಪ ಬೇಸರವಿದೆ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು, ಹಿರಿಯರೊಂದಿಗೆ ಚರ್ಚಿಸುತ್ತೇವೆ ಎಂದರು. ಪರೋಕ್ಷವಾಗಿ ಜಿಲ್ಲೆಗೆ ಬಜೆಟ್‌ನಲ್ಲಿ ಅನ್ಯಾಯವಾಗಿರುವುದನ್ನು ಒಪ್ಪಿಕೊಂಡ ಜಿಲ್ಲಾ ಬಿಜೆಪಿ ಪದಾಧಿಕಾರಿಗಳು ಬಜೆಟ್‌ ಸಮರ್ಥಿಸಿಕೊಳ್ಳಲು ಬಂದು, ಅಸಹಾಯಕತೆ ವ್ಯಕ್ತಪಡಿಸಿ ಹೋಗಿದ್ದು ವಿಶೇಷವಾಗಿತ್ತು.

ಬಿಜೆಪಿ ಅಲ್ಪ ಸಂಖ್ಯಾತರ ವಿರೋಧಿ ಎಂದು ವಿರೋಧ ಪಕ್ಷದವರು ಅಪಪ್ರಚಾರ ಮಾಡುತ್ತಾರೆ. ಆದರೆ ಮುಖ್ಯಮಂತ್ರಿ ಯಡಿಯೂರಪ್ಪ ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಈ ಬಾರಿಯ ಬಜೆಟ್‌ನಲ್ಲಿ 1,500 ಕೋಟಿ ಮೀಸಲಿಟ್ಟಿದ್ದಾರೆ ಎಂದು ಗದಗ ಜಿಲ್ಲಾ ಬಿಜೆಪಿ ಅಧ್ಯಕ್ಷ  ಮೋಹನ ಮಾಳಶೆಟ್ಟಿ ತಿಳಿಸಿದ್ದಾರೆ.