ಕೇಂದ್ರ ಕೃಷಿ ಕಾಯ್ದೆ ಕಾಂಗ್ರೆಸ್‌ ಕೂಸು| ಪ್ರಧಾನಿ ನರೇಂದ್ರ ಮೋದಿ ಜಾರಿಗೆ ತಂದಿರುವ ಕೃಷಿ ಕಾಯ್ದೆಯಿಂದ ದೇಶದ 30 ರಾಜ್ಯಗಳ ರೈತರಿಗೆ ಆಗದಿರುವ ನಷ್ಟ, ಈ ರಾಜಸ್ಥಾನ, ಹರಿಯಾಣದವರಿಗೆ ಆಗಿದೆಯೇ?| ಪ್ರಧಾನಿ ಹೆಸರಿಗೆ ಕಪ್ಪು ಚುಕ್ಕೆ ತರಲು ಹೋರಾಟ ಮಾಡುತ್ತಿದ್ದಾರೆ: ಚನ್ನಬಸವನಗೌಡ|  

ಹೂವಿನಹಡಗಲಿ(ಮಾ.19): ಕೇಂದ್ರದ ಪ್ರಧಾನಿ ನರೇಂದ್ರ ಮೋದಿ ಜಾರಿಗೊಳಿಸಿದ ಕೃಷಿ ಕಾಯ್ದೆ, ಹಿಂದಿನ ಕಾಂಗ್ರೆಸ್‌ ಸರ್ಕಾರ ಕೂಸಾಗಿತ್ತು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಚನ್ನಬಸವನಗೌಡ ಹೇಳಿದ್ದಾರೆ. ತಾಲೂಕಿನ ಸೋವೇನಹಳ್ಳಿ ಗ್ರಾಮದ ಶಿವನಕಟ್ಟೇಶ್ವರ ದೇವಸ್ಥಾನದ ಆವರಣದಲ್ಲಿ ಆಯೋಜಿಸಿದ್ದ, ಕಿಸಾನ್‌ ಸಮ್ಮಾನ್‌ ಯೋಜನೆಯ ಫಲಾನುಭವಿಗಳ ಸಭೆಗೆ ಚಾಲನೆ ನೀಡಿ ಮಾತನಾಡಿದರು.

ಅಂದಿನ ಪ್ರಧಾನಿ ಡಾ. ಮನಮೋಹನ್‌ ಸಿಂಗ್‌ ನೇತೃತ್ವದ ಸರ್ಕಾರವೇ ಕೃಷಿ ಕಾಯ್ದೆ ಜಾರಿಗೆ ತರಲು ಹೊರಟಿತ್ತು. ಆದರೆ, ಅವರಿಗೆ ಸಾಧ್ಯವಾಗಿಲ್ಲ, ಪ್ರಧಾನಿ ನರೇಂದ್ರ ಮೋದಿಯವರು ರೈತರ ಲಾಭವನ್ನು ದ್ವಿಗುಣ ಮಾಡಬೇಕೆಂಬ ಉದ್ದೇಶದಿಂದ ಕಾಯ್ದೆ ಜಾರಿಗೆ ತರಲಾಗಿದೆ ಎಂದರು.

ದೇಶದಲ್ಲಿ 60 ವರ್ಷ ಅಳ್ವಿಕೆ ಮಾಡಿರುವ ಕಾಂಗ್ರೆಸ್‌ ಸರ್ಕಾರ ಹಿತ ಕಾಯುವ ಕೆಲಸ ಮಾಡಿಲ್ಲ, ಹಳೆ ಕಾಲದ ಕಾಯ್ದೆಗಳೇ ಉತ್ತಮವಾಗಿದ್ದರೇ? ಈವರೆಗೂ ರೈತ ಯಾಕೆ ಉದ್ದಾರ ಆಗಿಲ್ಲ? ಕೃಷಿ ಕಾಯ್ದೆ ಜಾರಿಗೆ ತರಲು ಹೊರಟಿದ್ದ ಕಾಂಗ್ರೆಸ್‌ ಈಗ ತಮ್ಮ ಅಸ್ಥಿತ್ವ ಉಳಿಸಿಕೊಳ್ಳಲು, ರೈತರೆಂದು ಮುಖವಾಡ ಹಾಕಿಕೊಂಡಿರುವ ಕಲಿಸ್ತಾನಿಗಳಿಂದ ಹೋರಾಟ ಮಾಡಿಸುತ್ತಿದೆ ಎಂದು ಆರೋಪಿಸಿದರು.

ಪ್ರಧಾನಿ ನರೇಂದ್ರ ಮೋದಿ ಸರ್ಕಾರದಲ್ಲಿ ಈ ವರೆಗೂ ಒಂದೂ ಅವ್ಯವಹಾರ ನಡೆದಿಲ್ಲ. ಕಳಂಕಿತ ಮಂತ್ರಿಗಳಿಲ್ಲ. ಇಷ್ಟೊಂದು ಸ್ವಚ್ಛ ಆಡಳಿತ ಮಾಡುತ್ತಿರುವ ಹಿನ್ನೆಲೆಯಲ್ಲಿ ವಿರೋಧ ಪಕ್ಷದವರಿಗೆ ಟೀಕೆ, ಆರೋಪಗಳನ್ನು ಮಾಡಲು ಯಾವುದೇ ವಿಷಯ ಇಲ್ಲದ ಕಾರಣ, ಹೋರಾಟ ಮಾಡಿ ದೇಶದ ರೈತರನ್ನು ಹಾದಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

ಹೊರ ರಾಜ್ಯದವರಿಂದ ಕೊರೋನಾ ಹೆಚ್ಚಳ: ಸಚಿವ ಆನಂದ್‌ ಸಿಂಗ್‌

ದೇಶದ ಕೆಂಪು ಕೋಟೆಯ ಮೇಲಿನ ರಾಷ್ಟ್ರ ಧ್ವಜದೊಂದಿದೆ ಇನ್ನೊಂದು ಧ್ವಜ ಹಾರಿಸುವವರು ರೈತರೇ?, ರೈತರಾದರೇ ಮೂರು ತಿಂಗಳ ಕಾಲ ಹೋರಾಟ ಮಾಡುತ್ತಿದ್ದರೇ? ಅವರ ಹೋರಾಟಕ್ಕೆ ದೇಶದ ಯಾವ ರೈತರು ಹಣ ನೀಡಿಲ್ಲ. ವಿದೇಶದಿಂದ ಹಣ ಬರುತ್ತಿದೆ ಎಂದು ಟೀಕಿಸಿದರು.

ರೈತ ಮೋರ್ಚಾ ಜಿಲ್ಲಾಧ್ಯಕ್ಷ ಐನಾಥರೆಡ್ಡಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಜಾರಿಗೆ ತಂದಿರುವ ಕೃಷಿ ಕಾಯ್ದೆಯಿಂದ ದೇಶದ 30 ರಾಜ್ಯಗಳ ರೈತರಿಗೆ ಆಗದಿರುವ ನಷ್ಟ, ಈ ರಾಜಸ್ಥಾನ, ಹರಿಯಾಣದವರಿಗೆ ಆಗಿದೆಯೇ? ಯಾವ ರಾಜ್ಯಗಳಲ್ಲಿ ಕೃಷಿ ಕಾಯ್ದೆ ಕುರಿತು ಉಗ್ರ ಹೋರಾಟಗಳು ನಡೆದಿಲ್ಲ. ಪ್ರಧಾನಿ ಹೆಸರಿಗೆ ಕಪ್ಪು ಚುಕ್ಕೆ ತರಲು ಹೋರಾಟ ಮಾಡುತ್ತಿದ್ದಾರೆಂದು ದೂರಿದರು.

ಕೃಷಿ ಕಾಯ್ದೆ ಜಾರಿ ಕುರಿತು ಕಾಂಗ್ರೆಸ್‌ ಸರ್ಕಾರದ ಅಂದಿನ ಕೃಷಿ ಸಚಿವರು ಬೇರೆ ಬೇರೆ ರಾಜ್ಯಗಳಿಗೆ ಪತ್ರ ಬರೆದಿರುವ ದಾಖಲೆಗಳು ಇವೆ. ನರೇಂದ್ರ ಮೋದಿ ಜಾರಿಗೆ ತಂದ ಕೃಷಿ ಕಾಯ್ದೆ ಕಾಂಗ್ರೆಸ್‌ ಸರ್ಕಾರದ ಕೃಷಿ ಕಾಯ್ದೆಗಿಂತ ಭಿನ್ನವಾಗಿದೆಯೇ? ಇಲ್ಲ ಸಲ್ಲದ ಹೇಳಿಕೆ ನೀಡಿ ಕೇಂದ್ರ ಸರ್ಕಾರದ ಮೇಲೆ ಗೂಬೆ ಹೊರಿಸುವ ಕೆಲಸ ಮಾಡುತ್ತಿದ್ದಾರೆ. ದೇಶದ ರೈತರ ಹಿತ ಕಾಪಾಡಬೇಕೆಂಬ ಉದ್ದೇಶದಿಂದ ಪ್ರತಿ ವರ್ಷ ಕೇಂದ್ರ 6 ಸಾವಿರ, ರಾಜ್ಯ 4 ಸಾವಿರ ಸೇರಿ ಒಟ್ಟು 10 ಸಾವಿರ ಹಣವನ್ನು ನೇರವಾಗಿ ರೈತರ ಬ್ಯಾಂಕ್‌ ಖಾತೆ ಜಮಾ ಮಾಡಲಾಗುತ್ತಿದೆ. ಇಂತಹ ಹತ್ತು ಹಲವು ರೈತ ಪರ ಯೋಜನೆಗಳನ್ನು ಜಾರಿಗೆ ತಂದಿರುವ ಬಿಜೆಪಿ ಸರ್ಕಾರದ ವಿರುದ್ಧ ಹೋರಾಟ ಮಾಡುತ್ತಿದ್ದಾರೆ ಎಂದು ಹೇಳಿದರು.

ರೈತ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಬಿ. ಬಸವರಾಜ, ಮುಖಂಡರಾದ ಜ್ಯೋತಿ ಮಹೇಂದ್ರ, ಎಚ್‌. ಪೂಜೆಪ್ಪ, ಬಿಜೆಪಿ ತಾಲೂಕು ಅಧ್ಯಕ್ಷ ಎಸ್‌. ಸಂಜೀವರೆಡ್ಡಿ, ಬಿಜೆಪಿ ವಕ್ತಾರ ಲಕ್ಷ್ಮಣ ನಾಯ್ಕ, ಜಿಪಂ ಸದಸ್ಯೆ ಎಸ್‌.ಎಂ. ಲಲಿತಾಬಾಯಿ ಸೇರಿದಂತೆ ಇತರರು ಕೇಂದ್ರ ಕೃಷಿ ಕಾಯ್ದೆಯ ಅನುಕೂಲಗಳನ್ನು ತಿಳಿಸಿದರು.

ಸಭೆಯಲ್ಲಿ ಸಂದೀಪ್‌ ಶಿವಮೊಗ್ಗ, ಎಸ್‌. ದೂದಾನಾಯ್ಕ, ತಾಲೂಕು ರೈತ ಮೋರ್ಚಾ ಅಧ್ಯಕ್ಷ ಶಿವನಗೌಡ, ಉಪಾಧ್ಯಕ್ಷ ದೊಡ್ಡ ಬಸವನಗೌಡ, ತಾಪಂ ಸದಸ್ಯರಾದ ಎನ್‌. ಬಸವರಾಜ, ಈಟಿ ಲಿಂಗರಾಜ, ಗುರು ಹಗರಿ, ಶಶಿಧರಗೌಡ ಸೇರಿದಂತೆ ಇತರರಿದ್ದರು.