ಹಾಸನ[ಡಿ.17]:  ರೇವಣ್ಣ ಅವರ ಅಧಿಕಾರದಲ್ಲಿ ಜಿಲ್ಲೆಯ ಸಮಗ್ರ ಅಭಿವೃದ್ಧಿ ಆಗಿಲ್ಲ. ಆಗಿದ್ದರೆ ಅದು ಕೇವಲ ಹೊಳೆನರಸೀಪುರ ಕ್ಷೇತ್ರ ಮಾತ್ರ ಎಂದು ಮಾಜಿ ಸಚಿವ ಎ.ಮಂಜು ಟೀಕಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೇವಣ್ಣ ತಮ್ಮ ಅನುಕೂಲದ ರಾಜಕಾರಿಣಿ. ಅವರ ಕುಟುಂಬದ ಶ್ರೇಯಸ್ಸಿಗೆ ಹಾಗೂ ಅವರ ಆಸ್ತಿ-ಪಾಸ್ತಿ ಸಂರಕ್ಷಣೆ ಮಾಡಿಕೊಳ್ಳುವ ನಿಟ್ಟಿನಲ್ಲಿ ರಾಜಕೀಯ ಮಾಡಿದರು. ಸಾರ್ವಜನಿಕರ ಹಿತಾಸಕ್ತಿಗೆ ಶ್ರಮಿಸಿಲ್ಲ ಎಂದು ಹೇಳಿದರು.

ಜಿಲ್ಲೆಯಲ್ಲಿ ಅವರ ಆಡಳಿತದಲ್ಲಿ ಯಾವುದೇ ಹೊಸ ಕಾಮಗಾರಿಗಳಾಗಿಲ್ಲ. ಅವರು ಕೇವಲ ಹೇಳಿಕೆ ನೀಡಿರುವುದು ಮಾತ್ರ. ರೈಲ್ವೆ ಮೇಲ್ಸೇತುವೆ ಮಂಜೂರಾಗಿರುವುದು ನಾನು ಸಚಿವನಾಗಿದ್ದಾಗ ಎಂದು ಹೇಳಿದರು.

ಉಪ ಚುನಾವಣೆ ವೇಳೆ ಚನ್ನರಾಯಪಟ್ಟಣ ತಾಲಕಿನ ನಿಂಬೇಹಳ್ಳಿಯಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ 6 ಜನರ ಮೇಲೆ ಎಫ್‌ಐಆರ್‌ ಆಗಿರುವವರ ಪೈಕಿ 4 ಜನರನ್ನು ಬಂಧಿಸಲಾಗಿದೆ. ಇನ್ನುಳಿದ ಇಬ್ಬರನ್ನೂ ಕೂಡಲೇ ಬಂಧಿಸಿ. ಅವರ ಮೇಲೂ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗೆ ಮನವಿ ಮಾಡಲಾಗಿದೆ ಎಂದರು.

ಈ ಗಲಭೆಯಲ್ಲಿ ರೇವಣ್ಣ ಕುಟುಂಬದವರ ಕೈವಾಡ ಇರುವ ಬಗ್ಗೆ ದಾಖಲೆಗಳಿದ್ದು, ತನಿಖೆಯ ನಂತರ ಎಲ್ಲವೂ ತಿಳಿಯಲಿದೆ. ಇದೀಗ ಪ್ರಕರಣ ದಾಖಲಾಗಿರುವ ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿದರು.

ಜೆಡಿಎಸ್ ಮುಖಂಡ ಎಚ್.ಡಿ.ರೇವಣ್ಣ ಬಂಪರ್ ಘೋಷಣೆ...

ಯುವಕರನ್ನು ತಮ್ಮ ರಾಜಕೀಯ ಲಾಭಗಳಿಗೆ ಬಳಸಿಕೊಳ್ಳುವ ಮೂಲಕ ಅಡ್ಡ ದಾರಿಗೆ ಎಳೆಯುವ ಪ್ರಯತ್ನಗಳಾಗುತ್ತಿರುವುದು ಶೋಚನೀಯ. ಇಂತಹ ಘಟನೆಗಳಿಗೆ ಕಾರಣರಾದವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದರು.

ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವಿನ ಬಗ್ಗೆ ಮಾತನಾಡಿದ ಅವರು, ಯಡಿಯೂರಪ್ಪ ಅವರ ನೇತೃತ್ವದಲ್ಲಿ ಸ್ಥಿರ ಸರ್ಕಾರ ಇರಬೇಕೆಂದು ಬಯಸಿದ ಜನರು ಮತ ನೀಡಿದ್ದು, ಹುಣಸೂರಿನಲ್ಲಿ ಜೆಡಿಎಸ್‌ ಒಳ ಒಪ್ಪಂದದಿಂದ ಕಾಂಗ್ರೆಸ್‌ ಪಕ್ಷಕ್ಕೆ ಜನರು ಮತ ನೀಡಿದ್ದರಿಂದ ಹುಣಸೂರು ಬಿಜೆಪಿ ಯ ಕೈ ತಪ್ಪಿದೆ. ಮುಂಬರುವ ದಿನಗಳಲ್ಲಿ ಹುಣಸೂರಿನಲ್ಲಿಯೂ ಬಿಜೆಪಿ ಗೆಲುವು ಸಾಧಿಸುವ ಮೂಲಕ ಯಡಿಯೂರಪ್ಪ ಅವರ ನೇತೃತ್ವದಲ್ಲಿ ರಾಜ್ಯದ ಸಮಗ್ರ ಅಭಿವೃದ್ಧಿ ಆಗಲಿದೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.

ಲೋಕಸಭಾ ಚುನಾವಣೆ ಸಂದರ್ಭದಲ್ಲಿ ರೇವಣ್ಣ ಅವರು 28 ನಿಮಿಷಗಳ ಕಾಲ ಬೂತ್‌ನಲ್ಲಿದ್ದು, ಮತ ಹಾಕಿಸುವ ಮೂಲಕ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ. ಅವರ ಮೇಲೆ ಎಫ್‌ಐಆರ್‌ ಮಾಡುವ ಕುರಿತು ಚುನಾವಣಾ ಆಯೋಗ ಸೂಚಿಸಿದ್ದು, ಈ ಬಗ್ಗೆ ಇದುವರೆಗೂ ಕ್ರಮ ಕೈಗೊಳ್ಳದೆ ಇರುವುದಕ್ಕೆ ಜಿಲ್ಲಾಧಿಕಾರಿಗಳಿಂದ ಕಾರಣ ತಿಳಿಯಲು ಜಿಲ್ಲಾಧಿಕಾರಿ ಕಚೇರಿಗೆ ಬಂದಿದ್ದೇನೆ ಎಂದು ಅವರು ತಿಳಿಸಿದರು.