ಕೈ ಕೋಟೆಗೆ ನುಗ್ಗಲು ಬಿಜೆಪಿ, ಜೆಡಿಎಸ್‌ ಹೋರಾಟ

16ನೇ ವಿಧಾನಸಭೆ ಪ್ರವೇಶಕ್ಕೆ ಬಂಗಾರಪೇಟೆ ಮೀಸಲು ಕ್ಷೇತ್ರದಿಂದ ಮೂರು ಪಕ್ಷಗಳ ಅಭ್ಯರ್ಥಿಗಳು ತುದಿಗಾಲಲ್ಲಿ ನಿಂತು ಭರ್ಜರಿ ಪ್ರಚಾರದಲ್ಲಿ ತೊಡಗಿರುವುದರಿಂದ ಚುನಾವಣೆ ಅಖಾಡ ರಂಗೇರಿದೆ.

BJP JDS struggle to enter Congress Area snr

 ಬಂಗಾರಪೇಟೆ :  16ನೇ ವಿಧಾನಸಭೆ ಪ್ರವೇಶಕ್ಕೆ ಬಂಗಾರಪೇಟೆ ಮೀಸಲು ಕ್ಷೇತ್ರದಿಂದ ಮೂರು ಪಕ್ಷಗಳ ಅಭ್ಯರ್ಥಿಗಳು ತುದಿಗಾಲಲ್ಲಿ ನಿಂತು ಭರ್ಜರಿ ಪ್ರಚಾರದಲ್ಲಿ ತೊಡಗಿರುವುದರಿಂದ ಚುನಾವಣೆ ಅಖಾಡ ರಂಗೇರಿದೆ.

ಸದ್ಯ ಕಾಂಗ್ರೆಸ್‌ ಕೋಟೆಯಾಗಿರುವ ಕ್ಷೇತ್ರದಲ್ಲಿ ಕಾಂಗ್ರೆಸ್‌ ಕೋಟೆಯನ್ನು ಒಡೆದು ಒಳ ನುಗ್ಗಲು ಬಿಜೆಪಿ ಮತ್ತು ಜೆಡಿಎಸ್‌ ಅಭ್ಯರ್ಥಿಗಳು ಸಜ್ಜಾಗಿದ್ದಾರೆ. ಮೂರು ಪಕ್ಷಗಳ ಅಭ್ಯರ್ಥಿಗಳು ಈ ಚುನಾವಣೆಯನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿ ಬಿರುಸಿನ ಪ್ರಚಾರದಲ್ಲಿ ತೊಡಗಿರುವುದರಿಂದ ಮೇಲ್ನೋಟಕ್ಕೆ ಸಮಬಲದ ಹೋರಾಟವಿರುವಂತೆ ಕಾಣುತ್ತಿದೆ.

ಮುಂಜಾನೆಯೇ ಅಭ್ಯರ್ಥಿಗಳು ಮತದಾರರ ಮನೆ ಬಾಗಿಲಿಗೆ ಪ್ರತ್ಯಕ್ಷವಾಗಿ ಮತಯಾಚನೆ ಮಾಡುತ್ತಿದ್ದಾರೆ. ಕಾಂಗ್ರೆಸ್‌ ಅಭ್ಯರ್ಥಿ ಶಾಸಕ ಎಸ್‌.ಎನ್‌.ನಾರಾಯಣಸ್ವಾಮಿ ಬಿಜೆಪಿ ಸರ್ಕಾರದ 40 ಪರ್ಸೆಂಟ್‌ ಕಮಿಷನ್‌ ವಿಷಯವನ್ನು ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ವಿಷಯಗಳನ್ನು ಪ್ರಚಾರದ ಅಸ್ತ್ರವಾಗಿ ಬಳಸಿಕೊಂಡು ಮತದಾರರ ಮನ ಗೆಲ್ಲಲು ಮುಂದಾಗಿದ್ದಾರೆ.

ಡಬಲ್‌ ಎಂಜಿನ್‌ ಸಾಧನೆಯ ಪ್ರಚಾರ

ಬಿಜೆಪಿಯಿಂದ ಅಭ್ಯರ್ಥಿಯಾಗಿರುವ ಮಾಜಿ ಶಾಸಕ ಎಂ.ನಾರಾಯಣಸ್ವಾಮಿ ಡಬಲ್‌ ಎಂಜಿನ್‌ ಸರ್ಕಾರದ ಸಾಧನೆ ಹಾಗೂ ಶಾಸಕರ ಭ್ರಷ್ಟಾಚಾರದ ವಿಷಯವನ್ನೇ ಪ್ರಮುಖ ಅಸ್ತ್ರ ಹಾಗೂ ಈ ಚುನಾವಣೆ ನನ್ನ ಕೊನೆ ಚುನಾವಣೆಯಾಗಿದೆ ಎಂದು ಪ್ರಚಾರಕ್ಕೆ ಹೆಚ್ಚಿನ ಒತ್ತು ನೀಡಿ ಮತದಾರರ ಮುಂದೆ ಹೋಗಿದ್ದಾರೆ. ಜೆಡಿಎಸ್‌ ಅಭ್ಯರ್ಥಿ ಎಂ.ಮಲ್ಲೇಶಬಾಬು ಕ್ಷೇತ್ರದಲ್ಲಿನ ರಾಜಕೀಯ ಬದಲಾವಣೆಗಾಗಿ ಹಾಗೂ ರೈತರ ಬದುಕು ಹಸನಾಗಲು ಮತ್ತು ಪಂಚರತ್ನ ಯೋಜನೆ ಜಾರಿಗಾಗಿ ಜೆಡಿಎಸ್‌ ಬೆಂಬಲಿಸಿ ಎಂದು ಮನವಿ ಮಾಡುತ್ತಾ ಮತ ಯಾಚಿಸುತ್ತಿದ್ದಾರೆ. ಶಾಸಕ ಎಸ್‌.ಎನ್‌.ನಾರಾಯಣಸ್ವಾಮಿ ಹ್ಯಾಟ್ರಿಕ್‌ ಗೆಲುವು ಸಾಧಿಸಲು ಶತಯತ್ನದಲ್ಲಿ ತೊಡಗಿದ್ದಾರೆ.

ತಲೆಕೆಡಿಸಿಕೊಳ್ಳದ ಗ್ರಾಮೀಣರು

ಆದರೆ ಗ್ರಾಮೀಣ ಜನತೆ ಚುನಾವಣೆ ಬಗ್ಗೆ ಅಷ್ಟಾಗಿ ಆಸಕ್ತಿ ಕಾಣುತ್ತಿಲ್ಲ. ಚುನಾವಣೆ ಸಮಯದಲ್ಲಿ ಮಾತ್ರ ಬೆಳಗ್ಗೆ 6ಗಂಟೆಗೆಲ್ಲಾ ದರ್ಶನ ಕೊಡುವ ಅಭ್ಯರ್ಥಿಗಳು ಗೆದ್ದ ನಂತರ ನಾವು ಅವರ ಮನೆ ಬಾಗಿಲಿಗೆ ಹೋದರೂ ಸ್ಪಂದಿಸುತ್ತಿಲ್ಲ. ಗ್ರಾಮಗಳಲ್ಲಿ ಹತ್ತಾರು ಮೂಲಭೂತ ಸಮಸ್ಯೆಗಳಿವೆ ಅದರ ಬಗ್ಗೆ ಗಮನ ಕೊಡದೆ ಮತಕ್ಕಾಗಿ ಮಾತ್ರ ಬರುತ್ತಾರೆ ಎಂದು ಯಾರೂ ಅಷ್ಟಾಗಿ ತಲೆ ಕೊಡಿಸಿಕೊಳ್ಳದೆ ತಮ್ಮ ಪಾಡಿಕೆ ತಾವು ತಮ್ಮ ಕೆಲಸದಲ್ಲಿ ತೊಡಗಿದ್ದಾರೆ.

ಇನ್ನು ಗಡಿ ಭಾಗದ ಗ್ರಾಮಗಳಾದ ದೋಣಿಮಡಗು,ತೊಪ್ಪನಹಳ್ಳಿ,ಬೂದಿಕೋಟೆ,ಬಲಮಂದೆ ಗ್ರಾಪಂಃಗಳಲ್ಲಿ ಹಲವು ದಶಕಗಳಿಂದ ಕಾಡಾನೆಗಳ ಹಾವಳಿ ಇದೆ,ಹತ್ತಾರು ರೈತರನ್ನು ಆನೆ ತುಳಿದು ಸಾಯಿಸಿದೆ.ಈ ಪ್ರದೇಶದಲ್ಲಿ ಆನೆಗಳು ಬಾರದಂತೆ ಶಾಶ್ವತ ಪರಿಹಾರ ಕಲ್ಪಿಸಿಕೊಡಿ ಎಂದು ಹೋರಾಟ ಮಾಡಿದರೂ ಜನಪ್ರತಿನಿಧಿಗಳು ಸ್ಪಂದಿಸಿಲ್ಲ,ಈಗ ಯಾವ ಮುಖ ಹೊತ್ತು ಮತ ಕೇಳುವರು ಎಂದು ಅಭ್ಯರ್ಥಿಗಳನ್ನು ಪ್ರಶ್ನಿಸಲು ಮುಂದಾಗಿದ್ದಾರೆ.

JDSನಿಂದ ಕಾಂಗ್ರೆಸ್‌ಗೆ ಬೆಂಬಲ

 ನಂಜನಗೂಡು :  ನಂಜನಗೂಡು ಮೀಸಲು ವಿಧಾನಸಭಾ ಕ್ಷೇತ್ರಕ್ಕೆ ಜೆಡಿಎಸ್‌ ಪಕ್ಷದಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸದ ಹಿನ್ನೆಲೆಯಲ್ಲಿ ಜೆಡಿಎಸ್‌ ಪಕ್ಷದ ಕಾರ್ಯಕರ್ತರು ಕಾಂಗ್ರೆಸ್‌ ಅಭ್ಯರ್ಥಿ ದರ್ಶನ್‌ ಧ್ರುವನಾರಾಯಣ ಪರ ಬೆಂಬಲ ಘೋಷಿಸಿದರು.

ಜೆಡಿಎಸ್‌ ಜಿಲ್ಲಾಧ್ಯಕ್ಷ ನರಸಿಂಹಸ್ವಾಮಿ ಮಾತನಾಡಿ, ಧ್ರುವನಾರಾಯಣ್‌ ಅವರು ಸಜ್ಜನ ರಾಜಕಾರಣಿ, ಅವರು ಯಾರೊಂದಿಗೂ ದ್ವೇಷ ಕಟ್ಟಿಕೊಳ್ಳದೆ ಪಕ್ಷಾತೀತವಾಗಿ, ಜಾತ್ಯತೀತವಾಗಿ ಎಲ್ಲರೊಡನೆ ಒಡನಾಟ ಹೊಂದಿದ್ದರು. ಸದಾಕಾಲ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದರು. ಅವರ ಹಠಾತ್‌ ನಿಧನ ಮತ್ತು ಅವರ ಪತ್ನಿ ವೀಣಾ ಅವರ ನಿಧನದಿಂದ ಜೆಡಿಎಸ್‌ ವರಿಷ್ಠರಾದ ಎಚ್‌.ಡಿ. ದೇವೇಗೌಡ, ಎಚ್‌.ಡಿ. ಕುಮಾರಸ್ವಾಮಿ ಅಭ್ಯರ್ಥಿ ಹಾಕದೆ ಕಾಂಗ್ರೆಸ್‌ ಪಕ್ಷವನ್ನು ಬೆಂಬಲಿಸುವಂತೆ ಸೂಚಿಸಿರುವ ಹಿನ್ನೆಲೆಯಲ್ಲಿ ಜೆಡಿಎಸ್‌ ಕಾರ್ಯಕರ್ತರು ದರ್ಶನ್‌ ಧ್ರುವನಾರಾಯಣ ಗೆಲುವಿಗೆ ಶ್ರಮಿಸಬೇಕು ಎಂದರು.

ಅಭ್ಯರ್ಥಿ ದರ್ಶನ್‌ ಧ್ರುವನಾರಾಯಣ್‌ ಮಾತನಾಡಿ, 2019ರ ಲೋಕಸಭೆ ಚುನಾವಣೆಯ ವೇಳೆಯೂ ಜೆಡಿಎಸ್‌ ಪಕ್ಷ ನನ್ನ ತಂದೆಗೆ ಸಹಕಾರ ನೀಡಿತ್ತು. ಕ್ಷೇತ್ರದಲ್ಲಿ 2018ರ ಉಪ ಚುನಾವಣೆಯಲ್ಲಿಯೂ ಅಭ್ಯರ್ಥಿ ನಿಯೋಜಿಸದೆ ಸಹಕಾರ ನೀಡಿತ್ತು. ಈ ಬಾರಿ ನನ್ನ ತಂದೆ ತಾಯಿಯನ್ನು ಕಳೆದುಕೊಂಡಿರುವ ನನಗೆ ಸಾಂತ್ವನ ಹೇಳಲು ಅಭ್ಯರ್ಥಿ ಹಾಕದೆ ಬೆಂಬಲ ನೀಡಿರುವುದಕ್ಕೆ ಮೊದಲು ಜೆಡಿಎಸ್‌ ವರಿಷ್ಠರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ನೀವೆಲ್ಲರೂ ಯಾವುದೇ ಭಿನ್ನಾಭಿಪ್ರಾಯವಿದ್ದರೂ ಮರೆದು ಒಟ್ಟಾಗಿ ದುಡಿದು ಕಾಂಗ್ರೆಸ್‌ ಪಕ್ಷದ ಗೆಲುವಿಗೆ ಸಹಕರಿಸಿ ನಾನು ಚುನಾವಣೆಯಲ್ಲಿ ಆರಿಸಿ ಬಂದಲ್ಲಿ ಜೆಡಿಎಸ್‌ ಕಾರ್ಯಕರ್ತರನ್ನೂ ಸಹ ಗೌರವಯುತವಾಗಿ ನಡೆಸಿಕೊಳ್ಳುತ್ತೇನೆ ಎಂದರು.

ಉಸ್ತುವಾರಿ ಶ್ರೀಕಂಠು ಮಾತನಾಡಿ, ಕ್ಷೇತ್ರದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಪ್ರತಿ ಇಲಾಖೆಯಲ್ಲಿಯೂ ಲಂಚ ಕೊಡದೆ ಕೆಲಸ ಆಗುತ್ತಿಲ್ಲ. ನಗರಸಭೆ, ಗ್ರಾಪಂನಲ್ಲಿ ಖಾತೆ ಬದಲಾವಣೆಗೆ 254 ರಿಂದ 30 ಸಾವಿರ ಲಂಚ ಕೊಡಬೇಕಾದ ಅನಿವಾರ್ಯತೆ ಇದೆ. ಈ ಅವ್ಯವಸ್ಥೆ ಹೋಗಲಾಡಿಸಲು ಸಜ್ಜನ ರಾಜಕಾರಣಿಯನ್ನು ಆರಿಸಬೇಕು. ಜೆಡಿಎಸ್‌ ಕಾರ್ಯಕರ್ತರು ಒಟ್ಟಾಗಿ ದುಡಿದು ದರ್ಶನ್‌ ಗೆಲುವಿಗೆ ಶ್ರಮಿಸಬೇಕು ಎಂದರು.

Latest Videos
Follow Us:
Download App:
  • android
  • ios