ಜೆಡಿಎಸ್-ಬಿಜೆಪಿಯ ಹವಾ ಜೋರು : ನಡುವೆ ಕ್ಷೇತ್ರದಲ್ಲಿ ಕಾಣದ ‘ಕೈ’
ಬಿಜೆಪಿ ಜೆಡಿಎಸ್ ಬಿರುಸಿನ ಪ್ರಚಾರ ಕೈಗೊಂಡಿದ್ದು, ಕಾಂಗ್ರೆಸ್ ಮಾತ್ರ ಕಾಣದ ಕೈ ನಂತಾಗಿದೆ. ಚುನಾವಣಾ ಕಣ ಸಾಕಷ್ಟು ರಂಗೇರಿದೆ.
ವರದಿ : ಎಂ.ಅಫ್ರೋಜ್ ಖಾನ್
ರಾಮನಗರ (ಅ.07): ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್ ಗೆ ನಡೆಯಲಿರುವ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಬಿರುಸಿನ ಪ್ರಚಾರ ನಡೆಸಿದ್ದರೆ, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಈವರೆಗೂ ಕ್ಷೇತ್ರದಲ್ಲಿ ಕಾಣಿಸಿಕೊಂಡಿಯೇ ಇಲ್ಲ.
ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ಹ್ಯಾಟ್ರಿಕ್ ಗೆಲುವು ಸಾಧಿಸಿರುವ ಪುಟ್ಟಣ್ಣ ಬಿಜೆಪಿ ಅಭ್ಯರ್ಥಿ. ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಎ.ಪಿ.ರಂಗನಾಥ ಜೆಡಿಎಸ್, ಪ್ರವೀಣ್ ಪೀಟರ್ ಕಾಂಗ್ರೆಸ್ ಹಾಗೂ ಚಂದ್ರಶೇಖರ್ ವಿ.ಸ್ಥಾವರ ಮಠ ಜೆಡಿಯು ಅಭ್ಯರ್ಥಿಗಳಾಗಿ ಕಣಕ್ಕಿಳಿಯುತ್ತಿದ್ದಾರೆ.
ಬಿಜೆಪಿ, ಜೆಡಿಎಸ್ ಪ್ರಚಾರ ಜೋರು
ಬಿಜೆಪಿ ಹಾಗೂ ಜೆಡಿಎಸ್ ಅಭ್ಯರ್ಥಿಗಳು ಕ್ಷೇತ್ರಾದ್ಯಂತ ಸಂಚರಿಸಿ ಮತದಾರರನ್ನು ಸೆಳೆಯುತ್ತಿದ್ದಾರೆ. ಕಾಂಗ್ರೆಸ್‌ನಿಂದ ಬಿ ಫಾರಂ ಪಡೆದಿರುವ ಪ್ರವೀಣ್ ಪೀಟರ್ ಈವರೆಗೂ ಕ್ಷೇತ್ರದಲ್ಲಿ ಕಾಣಿಸಿಕೊಂಡಿಲ್ಲ. ಇನ್ನು ಜೆಡಿಯು ಅಭ್ಯರ್ಥಿ ಚಂದ್ರಶೇಖರ್ ಸುಳಿವೇ ಇಲ್ಲ.
ಬಿಜೆಪಿ ನಾಯಕರ ಆಸ್ತಿ ವಿರುದ್ಧ ‘ಕೈ’ ಹೋರಾಟ ...
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಹಾಗೂ ರಾಮನಗರ ಜಿಲ್ಲೆಗಳ ವ್ಯಾಪ್ತಿಯಲ್ಲಿ 36 ವಿಧಾನಸಭಾ ಕ್ಷೇತ್ರಗಳಿವೆ. ಈ ಪೈಕಿ ಉಪಚುನಾವಣೆ ನಡೆಯುತ್ತಿರುವ ರಾಜರಾಜೇಶ್ವರಿ ಕ್ಷೇತ್ರ ಹೊರತು ಪಡಿಸಿ 14 ಬಿಜೆಪಿ, 14 ಕಾಂಗ್ರೆಸ್ , 6 ಜೆಡಿಎಸ್ ಹಾಗೂ 1 ಪಕ್ಷೇತರ ಶಾಸಕರು ಇದ್ದಾರೆ.
ಪಕ್ಷಕ್ಕಿಂತ ವ್ಯಕ್ತಿ ನಿಷ್ಠೆ ಹೆಚ್ಚು:
ಸಾಮಾನ್ಯವಾಗಿ ಶಿಕ್ಷಕರ ಕ್ಷೇತ್ರದ ಚುನಾವಣೆಗಳಲ್ಲಿ ಪಕ್ಷ ನಿಷ್ಠೆಗಿಂತ ವ್ಯಕ್ತಿ ನಿಷ್ಠೆ ಹೆಚ್ಚು ಕೆಲಸ ಮಾಡುತ್ತದೆ. ಆದರೆ, ಈ ಬಾರಿಯ ಚುನಾವಣೆಯನ್ನು ಬಿಜೆಪಿ ಮತ್ತು ಜೆಡಿಎಸ್ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದು, ಕಾಂಗ್ರೆಸ್ ಅಭ್ಯರ್ಥಿಯೂ ಸಕ್ರಿಯರಾದರೆ ಚುನಾವಣಾ ಕಣ ರಂಗೇರಲಿದೆ
2002ರಲ್ಲಿ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ವಿಧಾನಪರಿಷತ್‌ಗೆ ಸ್ಪರ್ಧಿಸಿ ಗೆಲುವು ಸಾಧಿಸಿದ ಪುಟ್ಟಣ್ಣ ಅವರು, ಮೂರು ಬಾರಿ ನಿರಂತರವಾಗಿ ಗೆಲ್ಲುವ ಮೂಲಕ ಈ ಕ್ಷೇತ್ರದಲ್ಲಿ ತಮ್ಮ ಪ್ರಾಬಲ್ಯ ಉಳಿಸಿ ಕೊಂಡಿದ್ದಾರೆ. ಪಕ್ಷ, ಜಾತಿ, ಧರ್ಮದ ಹಂಗಿಲ್ಲದೆ ಮಾಡಿರುವ ನಿಸ್ವಾರ್ಥ ಸೇವೆ ಜತೆಗೆ ಪಕ್ಷದ ವರ್ಚಸ್ಸು ತಮ್ಮ ಗೆಲುವಿಗೆ ಸಹಕಾರಿಯಾಗಲಿದೆ ಎಂದು ಪುಟ್ಟಣ್ಣ ನಂಬಿಕೊಂಡಿದ್ದಾರೆ.
ಪುಟ್ಟಣ್ಣಗೆ ಬ್ರೇಕ್ ಹಾಕಲು ಯತ್ನ
ಪಕ್ಷಾಂತರದ ಕಳಂಕ ಹೊತ್ತಿರುವ ಬಿಜೆಪಿಯ ಪುಟ್ಟಣ್ಣನವರ ಗೆಲುವಿನ ನಾಗಾಲೋಟಕ್ಕೆ ಬ್ರೇಕ್ ಹಾಕಲು ಜೆಡಿಎಸ್ನ ರಂಗನಾಥ್ ಹವಣಿಸುತ್ತಿದ್ದಾರೆ. ಪುಟ್ಟಣ್ಣ ಜೆಡಿಎಸ್ನಿಂದ ಗೆಲುವು ಸಾಧಿಸುತ್ತಾ ಬಂದಿದ್ದರು. ಹೀಗಾಗಿ ತಮ್ಮ ಗೆಲವು ಸುಲಭವೆಂದು ಭಾವಿಸಿರುವ ರಂಗನಾಥ್ ರವರು ಮಾಜಿ ಪ್ರಧಾನಿ ದೇವೇಗೌಡ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ತಮ್ಮ ಅಧಿಕಾರದಲ್ಲಿ ಶಿಕ್ಷಕರ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನೇ ಪ್ರಧಾನವಾಗಿ ಮುಂದಿಟ್ಟುಕೊಂಡು ಮತಯಾಚನೆ ಮಾಡುತ್ತಿದ್ದಾರೆ.
ಚುನಾವಣಾ ಕದನ: ಕಾಂಗ್ರೆಸ್ ಅಭ್ಯರ್ಥಿ ನಾಮಪತ್ರ ಸಲ್ಲಿಕೆ ...
ಇನ್ನು ಕಾಂಗ್ರೆಸ್ ಅಭ್ಯರ್ಥಿ ಪ್ರವೀಣ್ ಪೀಟರ್ ಅವರಿಗೆ ಕಾಂಗ್ರೆಸ್ ಪಕ್ಷದ ನಾಮಬಲವೇ ಶ್ರೀರಕ್ಷೆಯಾಗಿದೆ. ಪುಟ್ಟಣ್ಣನವರ ವೈಫಲ್ಯ ಹಾಗೂ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳನ್ನು ಮನವರಿಕೆ ಮಾಡಿಕೊಡಲಿದ್ದು, ಪ್ರಜ್ಞಾವಂತ ಶಿಕ್ಷಕರು ತಮ್ಮನ್ನು ಬೆಂಬಲಿಸುವುದರಲ್ಲಿ ಅನುಮಾನವಿಲ್ಲ ಎಂಬ ಹುಮ್ಮಸ್ಸಿನಲ್ಲಿದ್ದಾರೆ.
ನಾಳೆ ಪುಟ್ಟಣ್ಣ ನಾಮಪತ್ರ ಸಲ್ಲಿಕೆ
ಜೆಡಿಎಸ್ ಅಭ್ಯರ್ಥಿ ಎ.ಪಿ.ರಂಗನಾಥ್ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಪ್ರವೀಣ್ ಪೀಟರ್ ನಾಮಪತ್ರ ಸಲ್ಲಿಸಿದ್ದು, ಬಿಜೆಪಿ ಅಭ್ಯರ್ಥಿ ಪುಟ್ಟಣ್ಣ ಅ.8ರಂದು ಉಮೇದುವಾರಿಕೆ ಸಲ್ಲಿಸಲಿದ್ದಾರೆ.
ಬೆಂಗಳೂರು ವಿಶ್ವವಿದ್ಯಾನಿಲಯದ ಸೆನೆಟ್ ಮತ್ತು ಸಿಂಡಿಕೇಟ್ ಸದಸ್ಯರಾಗಿದ್ದ ಪುಟ್ಟಣ್ಣ ಕಾಂಗ್ರೆಸ್ ಮುಖಂಡರಾಗಿ ಗುರುತಿಸಿ ಕೊಂಡಿದ್ದರು. ಡಿ.ಕೆ.ಶಿವಕುಮಾರ್ ಜತೆಗಿನ ವಿರಸದ ಹಿನ್ನೆಲೆಯಲ್ಲಿ 2001ರಲ್ಲಿ ಕಾಂಗ್ರೆಸ್ ತೊರೆದು ಜೆಡಿಎಸ್‌ಗೆ ಸೇರ್ಪಡೆಗೊಂಡರು.
2002 ರಿಂದ ಮೂರು ಬಾರಿ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ ಪುಟ್ಟಣ್ಣ , ಮಾಜಿ ಸಿಎಂ ಕುಮಾರಸ್ವಾಮಿ ಅವರ ಒಡನಾಡಿ ಎನಿಸಿಕೊಂಡಿದ್ದರು. 2017ರಲ್ಲಿ ಜೆಡಿಎಸ್ ಶಾಸಕರು ರೆಬಲ್ ಆದಾಗಿನಿಂದ ಕುಮಾರಸ್ವಾಮಿ ಆಪ್ತವಲಯದಿಂದ ದೂರ ಸರಿಯುತ್ತಾ ಕೊನೆಗೆ ಪಕ್ಷದಿಂದ ಹೊರ ಹಾಕಲ್ಪಟ್ಟರು. ಇದೀಗ ಬಿಜೆಪಿ ಅಭ್ಯರ್ಥಿಯಾಗಿ ಪುಟ್ಟಣ್ಣ ಅದೃಷ್ಟಪರೀಕ್ಷೆಗೆ ಮುಂದಾಗಿದ್ದಾರೆ.