ಮೈಸೂರು [ಸೆ.14]: ಈಗಾಗಲೇ ಕೆಲವರು ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅವರ ಬೆನ್ನಿಗೆ ಚೂರಿ ಹಾಕಿದ್ದಾರೆ. ಇನ್ನಷ್ಟುಮಂದಿ ಚೂರಿ ಹಾಕಲು ಕಾಯುತ್ತಿದ್ದಾರೆ ಎಂದು ಮಾಜಿ ಸಚಿವ ಸಾರಾ ಮಹೇಶ್‌ ತಿಳಿಸಿದ್ದಾರೆ. 

ಮೈಸೂರಿನಲ್ಲಿ  ಸುದ್ದಿಗಾರರೊಂದಿಗೆ ಮಾತನಾಡಿ ಅವರು, ಎಚ್‌.ಡಿ.ಕುಮಾರಸ್ವಾಮಿ ಅವರು 14 ತಿಂಗಳ ಕಾಲ ಮುಖ್ಯಮಂತ್ರಿ ಆಗಿದ್ದಾಗ ಎಷ್ಟುಕಷ್ಟ, ನೋವು ಅನುಭವಿಸಿದರು ಎಂಬುದು ಗೊತ್ತಿದೆ. ರಾತ್ರಿ 11 ಗಂಟೆವರೆಗೆ ಸಭೆ ನಡೆಸಿ, 11.30ರ ಮೇಲೆ ಯಾರು ಹೇಗೆ ಮುನಿಸಿಕೊಂಡಿದ್ದಾರೆ ಎಂದು ತಿಳಿದು ಸರಿಪಡಿಸುತ್ತಿದ್ದರು. ಅದನ್ನು ನಾನು ಗಮನಿಸಿದ್ದೇನೆ ಎಂದರು.

ಕಳೆದ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಕುಮಾರಸ್ವಾಮಿ ಅವರು ಸಿಎಂ ಅಲ್ಲ, ಹಿಂದಿನವರೇ ಸಿಎಂ ಎಂದು ಕೆಲವು ನಾಯಕರು ಹೇಳುತ್ತಿದ್ದರು. ಅಧಿಕಾರ ಇರಲಿ, ಇಲ್ಲದೆ ಇದ್ದರೂ ನಾನು ನಿಷ್ಠಾವಂತ ಕಾರ್ಯಕರ್ತನಾಗಿ ಇದ್ದೇನೆ. ಹಾಗಾಗಿ ಎಲ್ಲವನ್ನು ತಾಯಿ ಚಾಮುಂಡೇಶ್ವರಿ ದೇವಿ ನೋಡಿಕೊಳ್ಳುತ್ತಾಳೆ ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಮಾಜಿ ಸಚಿವ ಜಿ.ಟಿ.ದೇವೇಗೌಡರೊಂದಿಗೆ ಮತ್ತಷ್ಟುಶಾಸಕರು ಬಿಜೆಪಿಗೆ ಬಂದರೂ ಸ್ವೀಕರಿಸುತ್ತೇವೆ ಎಂಬ ಸಚಿವ ವಿ.ಸೋಮಣ್ಣ ಹೇಳಿಕೆಗೆ ತಿರುಗೇಟು ನೀಡಿದ ಮಹೇಶ್‌, ಬಿಜೆಪಿ ಹೈಕಮಾಂಡ್‌ ಈಗ ಗಟ್ಟಿಯಾಗಿದೆ. ಆದ್ದರಿಂದ ಬಿಜೆಪಿ ಶಾಸಕರು ಅಲುಗಾಡುತ್ತಿಲ್ಲ. ಅನರ್ಹ, ಅತೃಪ್ತ ಪ್ರೇತಾತ್ಮಗಳನ್ನು ಮೊದಲು ದಡ ಸೇರಿಸಿದ ಬಳಿಕ ಮತ್ತಷ್ಟುಶಾಸಕರನ್ನು ಬರಮಾಡಿಕೊಳ್ಳಲಿ. ನಮ್ಮಲ್ಲಿ, ಕಾಂಗ್ರೆಸ್‌ನಲ್ಲಿ ಯಾವ ಐಟಿ, ಇಡಿ ಇಲ್ಲ. ಬಿಜೆಪಿ ಬಳಿ ಇದೆ. ಅದಕ್ಕಾಗಿ ಅವರ ಶಾಸಕರು ಪಕ್ಷಬಿಟ್ಟು ಅಲುಗಾಡುತ್ತಿಲ್ಲ ಎಂದರು.