ಕೊರೋನಾ ತಡೆಗೆ ಸರ್ಕಾರ ವಿಫಲ: ಕಾಂಗ್ರೆಸ್ MLC ಶ್ರೀನಿವಾಸ ಮಾನೆ
* ವೈದ್ಯಕೀಯ ಲಾಬಿ, ಕೃತಕ ಅಭಾವ ಸೃಷ್ಟಿ: ಮಾನೆ ಆರೋಪ
* ಸರ್ಕಾರಗಳಿಂದ ಮುನ್ನೆಚ್ಚರಿಕೆ ಕ್ರಮಗಳಿಲ್ಲದೆ ಬಲವಾಗಿ ಹಬ್ಬುತ್ತಿರುವ ಕೊರೋನಾ
* ಕಾಂಗ್ರೆಸ್‌ನಿಂದ ಸಹಾಯವಾಣಿ ಆರಂಭ
ಹಾನಗಲ್ಲ(ಮೇ.12): ಪ್ರಚಾರದಲ್ಲಿ ಹಾಗೂ ಮಾಹಿತಿ ಸಂಗ್ರಹಣೆಯಲ್ಲಿ ನಂಬರ್ ಒನ್ ಇರುವ ಕೇಂದ್ರ ಸರ್ಕಾರ, ಕೊರೋನಾ ತಡೆಗಟ್ಟುವ ವಿಷಯದಲ್ಲಿ ವಿಫಲವಾಗಿರುವುದು ಏಕೆ? ವೈದ್ಯಕೀಯ ಲಾಬಿ, ಕೃತಕ ಅಭಾವ ಸೃಷ್ಟಿಸಿ ಕೊರೋನಾ ಬಾಧಿತರಿಗೆ ಅಗತ್ಯ ವೈದ್ಯಕೀಯ ಸೌಲಭ್ಯ ಸಿಗದಂತೆ ಮಾಡುತ್ತಿರುವ ಶಂಕೆ ಇದೆ ಎಂದು ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಮಾನೆ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೊರೋನಾ ಎರಡನೇ ಅಲೆ ಗಂಭೀರ ಅನಾರೋಗ್ಯ ಪರಿಣಾಮ ಬೀರುತ್ತಿದ್ದರೂ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಮಾಹಿತಿ ಕೊರತೆ ಇದೆ ಎಂದೆನಿಸುತ್ತಿದೆ. ಸರ್ಕಾರಗಳಿಂದ ಮುನ್ನೆಚ್ಚರಿಕೆ ಕ್ರಮಗಳಿಲ್ಲದೆ ಕೊರೋನಾ ಬಲವಾಗಿ ಹಬ್ಬುತ್ತಿದೆ. ಲಸಿಕೆ ಲಭ್ಯತೆ ವಿಷಯದಲ್ಲಿಯೂ ಗೊಂದಲ ಮೂಡಿಸುತ್ತಿದೆ. ಬೆಡ್ ಬ್ಲಾಕಿಂಗ್‌ನಲ್ಲಿ ಕೇಂದ್ರ, ರಾಜ್ಯ ಸರ್ಕಾರಗಳ ಮುಖಂಡರೇ ಭಾಗಿಯಾಗಿದ್ದಾರೆ. ಜನರ ಬಗೆಗೆ ಕಾಳಜಿ ಇಲ್ಲದಿರುವುದೇ ಇದಕ್ಕೆಲ್ಲ ಕಾರಣ ಎಂದು ಬೇಸರ ವ್ಯಕ್ತಪಡಿಸಿದರು.
"
ಗ್ರಾಮೀಣ ಪ್ರದೇಶದಲ್ಲಿಯಂತೂ ಜನರು ಸರ್ಕಾರಿ ಆಸ್ಪತ್ರೆಗಳನ್ನೇ ಅವಲಂಬಿಸಿದ್ದಾರೆ. ಆದರೆ ಅಲ್ಲಿ ಸರಿಯಾದ ಸ್ಪಂದನೆ ಇಲ್ಲ. ಸೌಲಭ್ಯಗಳಂತೂ ಅನಾರೋಗ್ಯವಂತರಿಗೆ ಸಿಗುತ್ತಿಲ್ಲ. ವೈದ್ಯರಿಲ್ಲದ, ತಜ್ಞರಿಲ್ಲದ, ಆಕ್ಸಿಜನ್ ಹಾಗೂ ವೆಂಟಿಲೇಟರ್‌ಗಳಿಲ್ಲದೆ ಆಸ್ಪತ್ರೆಗಳಿದ್ದು ಫಲವೇನು ಎಂದು ಪ್ರಶ್ನಿಸಿದ ಅವರು, ಇಂಥ ಸಂದರ್ಭದಲ್ಲಿ ಅಜಾಗರೂಕತೆ ಸಲ್ಲದು. ಹಾನಗಲ್ಲ ಸರ್ಕಾರಿ ಆಸ್ಪತ್ರೆಯಲ್ಲಿ 5 ವೆಂಟಿಲೇಟರ್‌ಗಳಿವೆ. ಆದರೆ ಅವು ಸುಸ್ಥಿತಿಯಲ್ಲಿಲ್ಲ. ಇಂಥ ಬೇಜವಾಬ್ದಾರಿಗೆ ಕಾರಣರಾರು ಎಂಬ ಪ್ರಶ್ನೆಗಳಿಗೆ ಉತ್ತರ ಹುಡುಕಬೇಕಾಗಿದೆ. ಹಾನಗಲ್ಲ ತಾಲೂಕಿನ 13 ಸರ್ಕಾರಿ ವೈದ್ಯಕೀಯ ಕೇಂದ್ರಗಳಲ್ಲಿ 80 ಬೆಡ್‌ಗಳಿವೆ. ದಿನಕ್ಕೆ 50 ಜನ ಕೋವಿಡ್ ಬಾಧೆಗೆ ಒಳಗಾಗುತ್ತಿದ್ದಾರೆ ಎಂದರು.
ಕುಟುಂಬದವರ ಹಿಂದೇಟು: ಅಂಜುಮನ್ ಸಮಿತಿ ಸಹಕಾರದಲ್ಲಿ ಅಂತ್ಯಸಂಸ್ಕಾರ
ಸಹಾಯವಾಣಿ:
ಕಾಂಗ್ರೆಸ್‌ನಿಂದ ಸಹಾಯವಾಣಿ ಆರಂಭಿಸುತ್ತಿದ್ದು, ಅದರಲ್ಲಿ ಪಕ್ಷದ ಯುವಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಮೂಲಕ ಸೋಂಕಿತರಿಗೆ ಉಚಿತ ಔಷಧಿ, ಬೆಡ್ ಕೊರತೆ ನೀಗಿಸುವುದು, ಕೊರೋನಾ ಬಾಧಿತರಿಗೆ ಆತ್ಮಸ್ಥೈರ್ಯ ತುಂಬುವುದು, ವೆಂಟಿಲೇಟರ್ ಒದಗಿಸುವುದು ಸೇರಿದಂತೆ ಅಗತ್ಯ ಉಪಚಾರಕ್ಕೆ ಮುಂದಾಗುತ್ತೇವೆ ಎಂದ ಅವರು, ಖಾಸಗಿ ವೈದ್ಯರೂ ಕೊರೋನಾ ಹೊಡೆದೋಡಿಸುವ ಈ ಸಂದರ್ಭದಲ್ಲಿ ಪೂರ್ಣ ಪ್ರಮಾಣದ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ತಾಪಂ ಅಧ್ಯಕ್ಷ ಸಿದ್ದನಗೌಡ ಪಾಟೀಲ, ಪುರಸಭೆ ಅಧ್ಯಕ್ಷ ಖುರ್ಷಿದ್ ಹುಲ್ಲತ್ತಿ, ಉಪಾಧ್ಯಕ್ಷ ಮಹೇಶ ಪವಾಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪುಟ್ಟಪ್ಪ ನರೇಗಲ್, ಆರ್.ಎಸ್. ಪಾಟೀಲ ಈ ಸಂದರ್ಭದಲ್ಲಿ ಇದ್ದರು.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona