ಬಿಜೆಪಿ ಅಭ್ಯರ್ಥಿಯಿಂದ ನಕಲಿ ಮತದಾರರ ನೋಂದಣಿ ಆರೋಪ
ಬಿಜೆಪಿ ಅಭ್ಯರ್ಥಿ ನಕಲಿ ಮತರಾರರ ನೋಂದಣಿ ಮಾಡುವ ಮೂಲಕ ವಾಮಮಾರ್ಗದಲ್ಲಿ ಗೆಲುವು ಪಡೆಯಲು ಯತ್ನಿಸುತ್ತಿದ್ದಾರೆ ಎಂದು ಆರೋಪ ಕೇಳಿದ್ದಾರೆ.
ರಾಮನಗರ (ಸೆ.30): ವಿಧಾನ ಪರಿಷತ್ನ ಬೆಂಗಳೂರು ಶಿಕ್ಷಕರ ಕ್ಷೇತ್ರ ಚುನಾವಣೆಯ ಮತದಾರರ ಪಟ್ಟಿಯಲ್ಲಿ ನಕಲಿ ಮತದಾರರನ್ನು ನೋಂದಣಿ ಮಾಡಿಸುವ ಮೂಲಕ ಬಿಜೆಪಿ ಅಭ್ಯರ್ಥಿ ಪುಟ್ಟಣ್ಣ ವಾಮಮಾರ್ಗದಲ್ಲಿ ಗೆಲುವು ಸಾಧಿಸುವ ಪ್ರಯತ್ನ ನಡೆಸಿದ್ದಾರೆ ಎಂದು ಜೆಡಿಎಸ್ ಅಭ್ಯರ್ಥಿ ಎ.ಪಿ.ರಂಗನಾಥ್ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂರು ಚುನಾವಣೆಗಳಲ್ಲಿ ಪುಟ್ಟಣ್ಣ ವಿಫಲತೆ ನಡುವೆಯೂ ಸಫಲತೆ ಕಂಡವರು. ಆದರೀಗ ನಕಲಿ ಮತದಾರರ ಹೊರಗೆ ಬಂದಿರುವ ಕಾರಣ ಪುಟ್ಟಣ್ಣರವರ ಪರಿಸ್ಥಿತಿ ಅರ್ಧ ವಾರ್ಷಿಕ ಪರೀಕ್ಷೆಯಲ್ಲಿ ಪಾಸಾದವರು, ಅಂತಿಮ ವರ್ಷದ ಪರೀಕ್ಷೆಯಲ್ಲಿ ಫೇಲಾದವರಂತಾಗಿದೆ ಎಂದು ವ್ಯಂಗ್ಯವಾಡಿದರು.
ಶಿಕ್ಷಕರ ಕ್ಷೇತ್ರ ಚುನಾವಣೆಯಲ್ಲಿ ಮತದಾರರ ನೋಂದಣಿಗೆ 26 ವರ್ಷ ಮೇಲ್ಪಟ್ಟಿರಬೇಕು. ಆದರೆ, 21 ವರ್ಷ ವಯಸ್ಸಿನವರು ನೋಂದಣಿ ಆಗಿದ್ದಾರೆ. ಖಾಸಗಿ ಶಿಕ್ಷಣ ಸಂಸ್ಥೆಗಳ ವಾಹನ ಚಾಲಕರು, ಕ್ಲೀನರ್ ಗಳು ಹಾಗೂ ಗಾರ್ಮೆಂಟ್ಸ್ ನೌಕರರು ಮತದಾರರ ಪಟ್ಟಿಯಲ್ಲಿದ್ದಾರೆ. ಇದೆಲ್ಲವೂ ಪುಟ್ಟಣ್ಣರವರ ಕೈಚಳಕದಿಂದ ಸಾಧ್ಯವಾಗಿದೆ. ಈಗ ಮತದಾರರ ಪಟ್ಟಿಯಲ್ಲಿ ನಾಲ್ಕು ಸಾವಿರಕ್ಕೂ ಹೆಚ್ಚು ನಕಲಿ ಮತದಾರರು ಹೊರಗೆ ಬಂದಿದ್ದಾರೆ. ನಕಲಿ ಶಿಕ್ಷಕರನ್ನು ಸೃಷ್ಟಿಸಿ ಅವರಿಂದ ಮತ ಹಾಕಿಸಿಕೊಂಡು ಪುಟ್ಟಣ್ಣ ಗೆಲ್ಲುತ್ತಿದ್ದರು. ಇದೀಗ ಈ ವಿಚಾರವನ್ನು ನ್ಯಾಯಾಲಯದ ಗಮನಕ್ಕೆ ತರಲಾಗಿದ್ದು, ವಿಚಾರಣೆ ನಡೆಯುತ್ತಿದೆ. ಹೀಗಾಗಿಯೇ ಬೆಂಗಳೂರು ಶಿಕ್ಷಕರ ಕ್ಷೇತ್ರದ ಚುನಾವಣೆ ವಿಳಂಬವಾಗುತ್ತಿದೆ ಎಂದರು.
RR ನಗರ ಉಪಕದನ: ಮುನಿರತ್ನ ವಿರುದ್ಧ ಅಚ್ಚರಿ ಅಭ್ಯರ್ಥಿ ನಿಲ್ಲಿಸಲು ಡಿಕೆಶಿ ಪ್ಲಾನ್ ...
ನಕಲಿ ಮತದಾರರು ಬೆಳಕಿಗೆ ಬಂದಿರುವುದು ಹಾಗೂ ಕ್ಷೇತ್ರ ವ್ಯಾಪ್ತಿಯ ಜಿಲ್ಲೆಗಳಲ್ಲಿ ಜೆಡಿಎಸ್ ಬಲಿಷ್ಠವಾಗಿರುವ ಕಾರಣ ಪ್ರತಿಸ್ಪರ್ಧಿಗೆ ಸೋಲಿನ ಭೀತಿ ಆವರಿಸಿದೆ. ಮೂರು ಅವಧಿಯ ಅಧಿಕಾರದಲ್ಲಿ ತವರು ಜಿಲ್ಲೆಗೆ ಅವರ ಕೊಡುಗೆ ಶೂನ್ಯ. ಕೋವಿಡ್ ನಂತಹ ಸಂಕಷ್ಟದಲ್ಲಿಯೂ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸಲಿಲ್ಲ. ಅಧಿಕಾರಿಗಳನ್ನು ಬೆದರಿಸಿ, ನಕಲಿ ಮತದಾರರನ್ನು ಸೃಷ್ಟಿಸಿಕೊಂಡು ವಾಮಮಾರ್ಗದಿಂದ ಗೆಲುವು ಸಾಧಿಸುತ್ತಿದ್ದರು. ಆಡಳಿತ ಯಂತ್ರವನ್ನು ದುರ್ಬಳಕೆ ಮಾಡಿಕೊಂಡು ಗೆಲುವು ಸಾಧಿಸಿ ಪಕ್ಷಾಂತರ ಮಾಡಿದ್ದೆ ಪುಟ್ಟಣ್ಣರವರ ದೊಡ್ಡ ಸಾಧನೆ ಎಂದು ಲೇವಡಿ ಮಾಡಿದರು.
ರಾಜ್ಯ ಉಪನ್ಯಾಸಕರ ಸಂಘದ ಮಾಜಿ ಉಪಾಧ್ಯಕ್ಷ ತಿಮ್ಮಯ್ಯ ಪುರ್ಲೆ ಮಾತನಾಡಿ, ರಂಗನಾಥ್ ಅವರು ವೃತ್ತಿಯಲ್ಲಿ ವಕೀಲರಾಗಿದ್ದರೂ ಶಿಕ್ಷಕ ಸಮುದಾಯದ ಬಗ್ಗೆ ಅಪಾರ ಕಾಳಜಿ ಇಟ್ಟುಕೊಂಡು ರಾಜ್ಯಾದಂತ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಶಕ್ತಿ ತುಂಬುವ ಕೆಲಸವನ್ನು ಶಿಕ್ಷಕರು ಮಾಡಬೇಕೆಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ರಾಜ್ಯ ವಕ್ತಾರ ಬಿ.ಉಮೇಶ್, ಜೆಡಿಎಸ್ ಕಾನೂನು ಘಟಕದ ಮುಖಂಡ ರಾಜಶೇಖರ್, ನಿವೃತ್ತ ಪ್ರಾಂಶುಪಾಲ ವನರಾಜು, ಮುಖಂಡ ಕರೀಗೌಡ ಇದ್ದರು.