ವಿಜಯಪುರ(ಮಾ.21): ಮಾಜಿ ಸಚಿವರೊಬ್ಬರ ರಾಸಲೀಲೆ ಸಿಡಿ ಪ್ರಕರಣ ಸ್ಫೋಟವಾಗುತ್ತಿದ್ದಂತೆ ರಾಜ್ಯಾದ್ಯಂತ ಅಲ್ಲೋಲ ಕಲ್ಲೋಲವೇ ಸೃಷ್ಠಿಯಾಗಿದೆ. ಇದೀಗ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಮತ್ತೊಂದು ಹೊಸ ಬಾಂಬ್‌ ಸಿಡಿಸಿದ್ದಾರೆ. ಈ ಮೂಲಕ ರಾಜ್ಯ ರಾಜಕೀಯದಲ್ಲಿ ತೀವ್ರ ಸಂಚಲನ ಸೃಷ್ಟಿಯಾಗಲಿದೆ ಎಂದೇ ಹೇಳಲಾಗುತ್ತಿದೆ.  

ಇಂದು(ಭಾನುವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಸನಗೌಡ ಪಾಟೀಲ್‌ ಯತ್ನಾಳ್‌,  ಇನ್ನು 400 ಸಿಡಿಗಳಿವೆ ಅಂತ ವಿಧಾನಸೌಧದ ಮೊಗಸಾಲೆಯಲ್ಲಿ ಮಾತನಾಡುತ್ತಿದ್ದಾರೆ. ಗ್ಯಾಂಗ್ ಕಟ್ಟಿಕೊಂಡು ಶಾಸಕರನ್ನ ಟಾರ್ಗೆಟ್ ಮಾಡುತ್ತಿದ್ದಾರೆ. ಮೊದಲು ಕೆಲಸ ಇದೆ ಅಂತಾ ಶಾಸಕರನ್ನ ಪರಿಚಯ ಮಾಡಿಕೊಳ್ಳುತ್ತಾರೆ. ಸಲುಗೆ ಬೆಳೆಸಿಕೊಂಡು ಸಿಡಿ ಮಾಡಿ, ಬ್ಲಾಕ್‌ಮೇಲ್ ಮಾಡುತ್ತಾರೆ ಎಂದು ಹೇಳಿದ್ದಾರೆ.

ಕರ್ನಾಟಕದಲ್ಲಿ ದೊಡ್ಡ ಸಿಡಿ ಗ್ಯಾಂಗ್ ಇದೆ. ರಾಜಕಾರಣಿಗಳು, ಅಧಿಕಾರಿಗಳು, ಸಿನಿಮಾ ಸ್ಟಾರ್‌ಗಳನ್ನ ಬ್ಲಾಕ್‌ಮೇಲ್‌  ಮಾಡುವ ಗ್ಯಾಂಗ್‌ಗಳು ಇವೆ. ಹುಬ್ಬಳ್ಳಿಯಲ್ಲೂ ಕೆಲವರಿಗೆ ಹೀಗೆ ಬ್ಲಾಕ್‌ಮೇಲ್ ಮಾಡಿದ್ದಾರೆ. ಸಿಡಿ ಬ್ಲಾಕ್‌ಮೇಲ್‌ ಮಾಡೋದು ಈಗ ಹೊರತರದ ಬಿಜಿನೆಸ್ ಆಗಿದೆ. ಹೀಗಾಗಿಯೇ ರಮೇಶ ಜಾರಕಿಹೊಳಿ ಕೇಸ್ ಸಿಬಿಐಗೆ ಕೊಡಬೇಕು. ಸಿಬಿಐಯಿಂದ ಮಾತ್ರ ತಾರ್ಕಿಕ ಅಂತ್ಯ ಸಾಧ್ಯ. ಎಸ್ಐಟಿ ಮೇಲೆ ವಿಶ್ವಾಸ ಇಲ್ಲ. ಎಸ್‌ಐಟಿ ಸಿಎಂ, ಗೃಹ ಸಚಿವರ ಅಧೀನದಲ್ಲಿದೆ. ಯಾರನ್ನ ಬೇಕು ಸಿಗಿಸ್ತಾರೆ, ಬಿಡಿಸುತ್ತಾರೆ ಎಂದು ತಿಳಿಸಿದ್ದಾರೆ.

ಸಿಎಂ ಬದಲಾವಣೆ ಶತಸಿದ್ಧ : ಬಿಜೆಪಿ ನಾಯಕ

ಡ್ರಗ್ಸ್ ಕೇಸ್ ಹೀಗೆ ಆಗಿದೆ, ಡ್ರಗ್ಸ್ ಕೇಸಲ್ಲಿ ಶಾಸಕರ ಮಕ್ಕಳು ಇದ್ರು, ಅವರ ಹೆಸರೇ ಬರಲೇ ಇಲ್ಲ. ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನ ಭೇಟಿ ಮಾಡಿಸಲೂ ಗ್ಯಾಂಗ್ ಇವೆ. ಅಮಿತ್ ಶಾ, ನಡ್ಡಾ ಭೇಟಿ ಮಾಡಿಸಲು 25 ಲಕ್ಷ ದಿಂದ ಒಂದು ಕೋಟಿ ರು. ವರೆಗೆ ಹಣ ಕೇಳ್ತಾರೆ ಎಂದು ಆರೋಪಿಸಿದ್ದಾರೆ. 

ಇಂತಹ ದೊಡ್ಡ ಜಾಲಗಳು ಕರ್ನಾಟಕದಲ್ಲಿದೆ. ಸಿಬಿಐ ಮೂಲಕ ತನಿಖೆಯಾಗಬೇಕು. ಸಂಭಾವಿತರ ವಿಡಿಯೋ ಮಾಡಿ ಬ್ಲಾಕ್‌ಮೇಲ್ ಮಾಡಿ ಹಣ ವಸೂಲಿ ಮಾಡುತ್ತಿದ್ದಾರೆ. ಎಸ್ಐಟಿ ಮೇಲೆ ನನಗೆ ವಿಶ್ವಾಸವಿಲ್ಲ. ಆದ್ದರಿಂದ ಪ್ರಕರಣದ ತನಿಖೆಯನ್ನ ಸಿಬಿಐಗೆ ನೀಡಿದರೆ ಸತ್ಯಾಂಶ ಹೊರಬೀಳಲಿದೆ ಎಂದು ಯತ್ನಾಳ್ ಹೇಳಿದ್ದಾರೆ.

ಲಂಚ, ಮಂಚ, ಪರಪಂಚ... 300 ಸೀಡಿಗಳ ಮಹಾರಹಸ್ಯವಿದು..!

ಉಪ ಚುನಾವಣೆಗೆ ನಮ್ಮ ಅವಶ್ಯಕತೆ ಇದ್ರೆ ಹೋಗುತ್ತೇನೆ. ಪಕ್ಷ ಸೂಚಿಸಿದರೆ ಉಪಚುನಾವಣಾ ಪ್ರಚಾರಕ್ಕೆ ಹೋಗುತ್ತೇನೆ. ಈಗ ಆನುವಂಶಿಕ ವಿಜಯೇಂದ್ರ ತಯಾರಾಗಿದ್ದಾರೆ. ಹೀಗಾಗಿ ಸಿಎಂ ಯಡ್ಡಿಯೂರಪ್ಪಗೆ ಯಾವ ನಾಯಕರ ಅವಶ್ಯಕತೆ ಇಲ್ಲ. ವಿಜಯೇಂದ್ರ ನೇತೃತ್ವದಲ್ಲಿ ನಾವು ಎಲ್ಲ ಚುನಾವಣೆಗಳನ್ನ ಗೆಲ್ತೇವೆ ಅಂತಾ ಸಿಎಂ ಹೇಳುತ್ತಿದ್ದಾರೆ. ಈ ಬಾರಿನೂ ಗೆಲ್ತೀರಾ ಅಂತ ನೋಡೋಣ ಎಂದು ಸಿಎಂಗೆ ಯತ್ನಾಳ್ ಸವಾಲ್ ಹಾಕಿದ್ದಾರೆ. 

ಒಬ್ಬ ವ್ಯಕ್ತಿ ಮೇಲೆ ಗೆಲುವು ಆಗಲ್ಲ. ಎಲ್ಲ ನಾಯಕರು ಶಿರಾದಲ್ಲಿ ಓಡಾಡಿದರು ಅಂತಾ ಗೆಲುವು ಆಗಿದೆ. ಬಿಜೆಪಿ ಕಾರ್ಯಕರ್ತರು ಹಾಗೂ ಪ್ರಧಾನಿ ಮೋದಿ ಅವರಿಂದ ಗೆಲವು ಸಾಧ್ಯವಾಗಿದೆ. ಕಾಂಗ್ರೆಸ್‌ನಲ್ಲಿ ಅಭ್ಯರ್ಥಿಗಳಿಲ್ಲ. ಇರುವವರು ಓಡಿ ಹೋಗಬಾರದು ಅಂತಾ ಕರೆದು ತಾಳಿ ಕಟ್ಟುತ್ತಿದ್ದಾರೆ. ಬಿಜೆಪಿಯಲ್ಲಿ ಆಕಾಂಕ್ಷಿಗಳು ಹೆಚ್ಚಿದ್ದಾರೆ ಎಂದು ಹೇಳಿದ್ದಾರೆ.