ತುಮ​ಕೂರು (ಫೆ.27):  ಭರ್ತಿ 11 ವರ್ಷ​ಗಳ ಬಳಿಕ ತುಮ​ಕೂರು ಮಹಾ​ನ​ಗರ ಪಾಲಿಕೆ ಬಿಜೆಪಿ ತೆಕ್ಕೆಗೆ ಬಂದಿದ್ದು ಮೇಯರ್‌ ಆಗಿ 32ನೇ ವಾರ್ಡ್‌ನ ಬಿಜೆಪಿ ಸದಸ್ಯ ಬಿ.ಜಿ. ಕೃಷ್ಣಪ್ಪ ಹಾಗೂ ಉಪ​ಮೇ​ಯರ್‌ ಆಗಿ ಜೆಡಿಎಸ್‌ನ 29ನೇ ವಾರ್ಡ್‌ನ ನಾಜಿಮಾಬಿ ಇಸ್ಮಾಯಿಲ್‌ ಅವಿ​ರೋ​ಧ​ವಾಗಿ ಆಯ್ಕೆ​ಯಾ​ಗಿ​ದ್ದಾರೆ.

ಮಹಾನಗರ ಪಾಲಿಕೆಯ ಮೇಯರ್‌ ಸ್ಥಾನ ಪರಿಶಿಷ್ಟಪಂಗಡಕ್ಕೆ ಹಾಗೂ ಉಪಮೇಯರ್‌ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು. ಈ ಹಿನ್ನೆಲೆಯಲ್ಲಿ ತುಮಕೂರು ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಕ್ಷಗಳಲ್ಲಿ ಪರಿಶಿಷ್ಟಪಂಗಡಕ್ಕೆ ಸೇರಿದ ಸದಸ್ಯರಾರ‍ಯರೂ ಇಲ್ಲದ ಕಾರಣ ಬಿಜೆಪಿಯ 32ನೇ ವಾರ್ಡ್‌ನ ಸದಸ್ಯ ಬಿ.ಜಿ. ಕೃಷ್ಣಪ್ಪ ಅವರು ಮೇಯರ್‌ ಆಗಿ ಅವಿರೋಧವಾಗಿ ಆಯ್ಕೆಯಾದರು.

ಇನ್ನು ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದ ಉಪಮೇಯರ್‌ ಸ್ಥಾನಕ್ಕೆ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳು ಮಾತುಕತೆ ಮೂಲಕ ಹೊಂದಾಣಿಕೆ ಮಾಡಿಕೊಂಡು ಜೆಡಿಎಸ್‌ನ 29ನೇ ವಾರ್ಡ್‌ನ ನಾಜಿಮಾಬಿ ಇಸ್ಮಾಯಿಲ್‌ ಅವರನ್ನು ಉಪಮೇಯರ್‌ ಆಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಪಾಲಿಕೆಯ ಮೇಯರ್‌ ಹಾಗೂ ಉಪಮೇಯರ್‌ ಅವಿರೋಧ ಆಯ್ಕೆಯನ್ನು ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತ ಆರ್‌.ಜಿ. ನವೀನ್‌ರಾಜ್‌ ಸಿಂಗ್‌ ಅವರು ಘೋಷಿಸಿದರು.

'2023ಕ್ಕೆ ಮತ್ತೊಮ್ಮೆ ಎಚ್ಡಿಕೆ ಮುಖ್ಯಮಂತ್ರಿ' ...

ಈ ಹಿಂದೆ ಪಾಲಿಕೆಯಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಒಪ್ಪಂದ ಮಾಡಿಕೊಂಡು ಅಧಿಕಾರ ಹಿಡಿದಿದ್ದವು. ಅದೇ ಮೈತ್ರಿ ಈಗಲು ಮುಂದುವರಿಸುವ ಉತ್ಸಾಹದಲ್ಲಿದ್ದ ಮುಖಂಡರಿಗೆ ಮೀಸಲಾತಿ ಹಂಚಿಕೆ ತಣ್ಣೀರೆರೆಚಿದ್ದರಿಂದ ಮೇಯರ್‌ ಸ್ಥಾನ ಕೈ ತಪ್ಪಿತು. ಎರಡೂ ಪಕ್ಷಗಳು ಮುಖಂಡರು ಮಾತುಕತೆ ಮೂಲಕ ಹೊಂದಾಣಿಕೆ ಮಾಡಿಕೊಂಡು ಉಪಮೇಯರ್‌ ಸ್ಥಾನವನ್ನು ಜೆಡಿಎಸ್‌ಗೆ ಬಿಟ್ಟು ಕೊಟ್ಟಿದ್ದಾರೆ.

ಕಳೆದ ಎರಡು ಬಾರಿ ಅಧಿಕಾರದಿಂದ ವಂಚಿತವಾಗಿದ್ದ ಬಿಜೆಪಿಗೆ ಈ ಬಾರಿ ಸುಲಭವಾಗಿ ಅಧಿಕಾರದ ಚುಕ್ಕಾಣಿ ಒಲಿದು ಬಂದಿದೆ. ಬಿಜೆಪಿಯ 12 ಜನ, 30ನೇ ವಾರ್ಡ್‌ನ ಪಕ್ಷೇತರ ಸದಸ್ಯ ವಿಷ್ಣುವರ್ಧನ್‌, ಮತ್ತೋರ್ವ ಪಕ್ಷೇತರ ಸದಸ್ಯ ಶಿವರಾಂ, ಶಾಸಕ ಜ್ಯೋತಿಗಣೇಶ್‌, ಸಂಸದ ಜಿ.ಎಸ್‌. ಬಸವರಾಜು ಅವರು ಸೇರಿ 16 ಮಂದಿ ಬಿಜೆಪಿ ಪರವಾಗಿ ಮತ ಹಾಕಬಹುದಾಗಿತ್ತು.

ಇನ್ನು ಜೆಡಿಎಸ್‌ನ 10 ಸದಸ್ಯರು ಹಾಗೂ ವಿಧಾನಪರಿಷತ್‌ ಸದಸ್ಯ ಕಾಂತರಾಜು ಅವರು ಸೇರಿ 11 ಮಂದಿ ಹಾಗೂ ಕಾಂಗ್ರೆಸ್‌ನ 10 ಮಂದಿ ಸದಸ್ಯರು ಮೇಯರ್‌ ಮತ್ತು ಉಪಮೇಯರ್‌ ಆಯ್ಕೆಗೆ ಮತ ಹಾಕಬಹುದಾಗಿತ್ತು. ಆದರೆ ಸರ್ಕಾರ ನಿಗದಿಪಡಿಸಿರುವ ಮೀಸಲಾತಿ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆ ಆಡಳಿತ ಬಿಜೆಪಿ ವಶವಾಗಿದ್ದು, ಉಪಮೇಯರ್‌ ಸ್ಥಾನ ಜೆಡಿಎಸ್‌ ಪಾಲಾಗಿದೆ. ಕಾಂಗ್ರೆಸ್‌ ಪಕ್ಷ ವಿರೋಧ ಪಕ್ಷದಲ್ಲಿ ಕೂರುವಂತಾಗಿದೆ.

ನೂತನ ಮೇಯರ್‌ ಬಿ.ಜಿ. ಕೃಷ್ಣಪ್ಪ ಹಾಗೂ ಉಪಮೇಯರ್‌ ನಾಜಿಮಾಬಿ ಅವರನ್ನು ಸಂಸದ ಜಿ.ಎಸ್‌. ಬಸವರಾಜ್‌, ಶಾಸಕ ಜಿ.ಬಿ.ಜ್ಯೋತಿ ಗಣೇಶ್‌ ಸೇರಿದಂತೆ ಬಿಜೆಪಿ ಮುಖಂಡರು ಅಭಿನಂದಿಸಿದರು.

ಹಾಗೆಯೇ ಉಪಮೇಯರ್‌ ನಾಜಿಮಾಬಿ ಅವರನ್ನು ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಮುಖಂಡರು ಅಭಿನಂದಿಸಿ ಸಂಭ್ರಮ ವ್ಯಕ್ತಪಡಿಸಿದರು.

ನೂತನ ಮೇಯರ್‌ ಮತ್ತು ಉಪಮೇಯರ್‌ರನ್ನು ಅಭಿನಂದಿಸಿ ಮಾತನಾಡಿದ ಶಾಸಕ ಜಿ.ಬಿ. ಜ್ಯೋತಿಗಣೇಶ್‌, 11 ವರ್ಷಗಳ ಬಳಿಕ ಬಿಜೆಪಿ ಪಕ್ಷಕ್ಕೆ ಮಹಾನಗರ ಪಾಲಿಕೆಯ ಅಧಿಕಾರ ಗದ್ದುಗೆ ದೊರೆತಿದೆ. ಉಪಮೇಯರ್‌ ಸ್ಥಾನಕ್ಕೆ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳು ಹೊಂದಾಣಿಕೆ ಮಾಡಿಕೊಂಡಿದ್ದರಿಂದ ಬಿಜೆಪಿಯಿಂದ ಅರ್ಜಿ ಹಾಕಲಿಲ್ಲ ಎಂದರು.

ಮಹಾನಗರ ಪಾಲಿಕೆಗೆ ಅವಿರೋಧವಾಗಿ ಆಯ್ಕೆಯಾಗಿರುವ ನೂತನ ಮೇಯರ್‌ ಬಿ.ಜಿ. ಕೃಷ್ಣಪ್ಪ ಹಾಗೂ ಉಪಮೇಯರ್‌ ನಾಜಿಮಾಬಿ ಅವರಿಗೆ ಜವಾಬ್ದಾರಿ ಹೆಚ್ಚಿದ್ದು, ನಗರದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಬೇಕು. ಮಹಾನಗರ ಪಾಲಿಕೆಗೆ ಸರ್ಕಾರದಿಂದ ಅನುದಾನ ಬರುತ್ತಿದೆ. ನೂತನ ಮೇಯರ್‌ ಮತ್ತು ಉಪಮೇಯರ್‌ ಅವರು ಒಗ್ಗಟ್ಟಿನಿಂದ ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಗರದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಸಲಹೆ ನೀಡಿದರು.