Asianet Suvarna News Asianet Suvarna News

Chamarajanagara ಕೆರೆ ತುಂಬಿದ್ದಕ್ಕೆ ಕ್ರೆಡಿಟ್, ಕಾಂಗ್ರೆಸ್-ಬಿಜೆಪಿ ಕೆಸರೆರಚಾಟ

  • ಕಲ್ಲುಕಟ್ಟೆ ಕೆರೆ ತುಂಬಿದ್ದಕ್ಕೆ ಕ್ರೆಡಿಟ್ ರಾಜಕೀಯಕ್ಕೆ ಕೈ ಕಮಲ ನಾಯಕರು.
  • ಕೆರೆ ತುಂಬಲೂ ಯಡಿಯೂರಪ್ಪ ಕಾರಣ ಅಂದ್ರೆ, ಮತ್ತೊಂದೆಡೆ ಮಹದೇವ ಪ್ರಸಾದ್ ಅಂತಿರೋ ಕಾರ್ಯಕರ್ತರು.
  • ಕೆರೆ ತುಂಬಿದ್ದನ್ನೇ ಬಂಡವಾಳವಾಗಿಸಿಕೊಂಡು ಮತ ಬ್ಯಾಂಕ್ ಸೆಳೆಯಲು ಪರಸ್ಪರ ಕೆಸರೆರಚಾಟ.
BJP and congress Vote bank Politics in Chamarajanagara gow
Author
Bengaluru, First Published May 25, 2022, 3:20 PM IST

ವರದಿ: ಪುಟ್ಟರಾಜು. ಆರ್.ಸಿ  ಏಷಿಯಾನೆಟ್ ಸುವರ್ಣ ನ್ಯೂಸ್ 

ಚಾಮರಾಜನಗರ (ಮೇ.25): ಇದು ಹೇಳಿ ಕೇಳಿ ಬರಪೀಡಿತ ತಾಲೂಕು. ಒಂದು ಕೊಳವೆ ಬಾವಿ ಕೊರೆಯಬೇಕಾದ್ರೂ ಅಧಿಕಾರಿಗಳ ಅನುಮತಿ ಅಗತ್ಯ. ಇದರ ನಡುವೆ ಕೆರೆ ತುಂಬಿಸುವ ಯೋಜನೆ ಹಾಗೂ ಉತ್ತಮ ಮಳೆ ನಡುವೆ 25 ವರ್ಷಗಳ ನಂತರ ಕೆರೆ ತುಂಬಿ ಕೋಡಿ ಬಿದ್ದಿದೆ. ಇದರಿಂದ ಅನ್ನದಾತರು ಸಂತಸಗೊಂಡಿದ್ರೆ ಇದನ್ನೇ ಬಂಡವಾಳ ಮಾಡಿಕೊಂಡು ಕ್ರೆಡಿಟ್‌ಗಾಗಿ ಕಾಂಗ್ರೆಸ್-ಬಿಜೆಪಿ ನಾಯಕರು ರಾಜಕೀಯಕ್ಕೆ ಮುಂದಾಗಿದ್ದು, ಸಾಮಾಜಿಕ ಜಾಲತಾಣದಲ್ಲೂ (Social Media) ಚರ್ಚೆಗೆ ನಾಂದಿ ಹಾಡಿದ್ದಾರೆ. 

ಚಾಮರಾಜನಗರ (Chamarajanagara) ಜಿಲ್ಲೆ ಗುಂಡ್ಲುಪೇಟೆ (Gundlupete) ತಾಲೂಕಿನ ಶಿವಪುರ (ಹುಂಡೀಮನೆ) ಗ್ರಾಮದಲ್ಲಿರುವ ಕಲ್ಲುಕಟ್ಟೆ ಕೆರೆ. ಅಂದಾಜು 700 ಎಕರೆ ವಿಶಾಲವಾಗಿರುವ ಈ ಕೆರೆಯಿಂದ (Lake) 30ಕ್ಕೂ ಹೆಚ್ಚು ಗ್ರಾಮಗಳ ಜನರು ನೀರಿನ ಉಪಯೋಗ ಪಡೆದುಕೊಳ್ಳುತ್ತಿದ್ದಾರೆ. ಈ ಕೆರೆ 25 ವರ್ಷಗಳ ನಂತರ ತುಂಬಿ ಕೋಡಿ ಬಿದ್ದಿದೆ. ಇದರ ಕ್ರೆಡಿಟ್ ಪಡೆಯಲು ಬಿಜೆಪಿ, ಕಾಂಗ್ರೆಸ್ ನಾಯಕರು ಮುಂದಾಗಿದ್ದಾರೆ. 

ಹಿಂದಿನ ಶಾಸಕರಾದ ದಿವಂಗತ ಮಹದೇವ ಪ್ರಸಾದ್ ಅವರು ಶಾಸಕರಾಗಿದ್ದಾಗ ಕಲ್ಲುಕಟ್ಟೆ ಕೆರೆ ತುಂಬಿಸುವ ಯೋಜನೆಗೆ ಚಾಲನೆ ನೀಡಿದ್ರು. ದುರದೃಷ್ಟವಶಾತ್ ಅವರು ನಿಧನರಾದ್ರು. ನಂತರ ಗೆದ್ದ ಗೀತಾ ಮಹದೇವ ಪ್ರಸಾದ್ ಸಹ ಯೋಜನೆ ಪೂರ್ಣಗೊಳ್ಳಲು ಶ್ರಮಿಸಿದ್ರು ಅಂತಾ ಕೈ ಮುಖಂಡರು ಕ್ರೆಡಿಟ್ ಪಡೀತಿದ್ದಾರೆ. ಕೆರೆ ತುಂಬುವುದರ ಹಿಂದೆ ಕಾಂಗ್ರೆಸ್ ಸರ್ಕಾರದ ಪಾತ್ರ ಮಹತ್ವದ್ದು. ಆದ್ರೆ ಕಾಂಗ್ರೆಸ್ ಸರ್ಕಾರ ಪ್ರಾರಂಭಿಸಿದ್ದ ಯೋಜನೆ ಪೂರ್ಣಗೊಂಡ ನಂತರ ಹಾಲಿ ಬಿಜೆಪಿ ಶಾಸಕ ನಿರಂಜನ್ ಕುಮಾರ್ ತಮ್ಮಿಂದಲೇ ಕೆರೆ ತುಂಬಿದ್ದು ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸುತ್ತಿದ್ದಾರೆ.

ಇನ್ನೂ  ಕೆರೆ ತುಂಬಿಸುವ ಯೋಜನೆಗೆ ಚಾಲನೆ ನೀಡಿದ್ದ ಮಾಜಿ ಸಿಎಂ ಯಡಿಯೂರಪ್ಪ. 2008ರಲ್ಲೇ 250 ಕೋಟಿ ರೂ ವೆಚ್ಚದಲ್ಲಿ ಅನುದಾನ ನೀಡಿ ಯೋಜನೆಗೆ ಚಾಲನೆ ನೀಡಿದ್ರು. ಆದ್ರೆ ಬಿಜೆಪಿ ನಂತರ ಬಂದ ಕಾಂಗ್ರೆಸ್ ಸರ್ಕಾರದ ನಿರ್ಲಕ್ಷ್ಯದಿಂದ ಈ ಯೋಜನೆ ನೆನೆಗುದಿಗೆ ಬಿದ್ದಿತ್ತು. ಸದ್ಯ ನಮ್ಮ ಸರ್ಕಾರ ಬಂದ ನಂತರ ಈ ಯೋಜನೆ ಪೂರ್ಣಗೊಳಿಸಿ ಕೆರೆಗೆ ನೀರು ತುಂಬಿಸಿದ್ದೇವೆ‌‌. ಇದರ ಸಂಪೂರ್ಣ ಶ್ರೇಯಸ್ಸು ಸಲ್ಲಬೇಕಾದ್ದುದ್ದು ಬಿಜೆಪಿ ಸರ್ಕಾರಕ್ಕೆ ಎನ್ನುತ್ತಾರೆ ಸ್ಥಳೀಯ ಶಾಸಕರು

ಕಮಲ-ಕೈ ನಾಯಕರು ಮತ್ತು ಬೆಂಬಲಿಗರು ಜಿದ್ದಿಗೆ ಬಿದ್ದಂತೆ ಕೆರೆ ತುಂಬಿದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಕ್ರೆಡಿಟ್‌ ಪಡೆಯಲು ಕಿತ್ತಾಡುತ್ತಿದ್ದು ಇದು ಕ್ಷೇತ್ರದ ಜನರಿಗೆ ಮಜಾ ನೀಡುತ್ತಿದೆ. ಒಟ್ಟಾರೆ ಇವರ ಕಿತ್ತಾಟ ಏನೇ ಇರಲಿ ಕೆರೆ ತುಂಬಿದ್ದು ಸುತ್ತಮುತ್ತಲಿನ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ
 

Follow Us:
Download App:
  • android
  • ios