ಕೋವಿಡ್‌ ಮುಕ್ತ ಬೂತ್‌ ಉದ್ದೇಶ| ರಾಜ್ಯದ ಎಲ್ಲ ಬೂತ್‌ಗಳಲ್ಲಿ ಸಮಿತಿ ಹಾಗೂ ಪೇಜ್‌ ಪ್ರಮುಖರ ಪಡೆಯಿಂದ ಆಂದೋಲನ| ಟೆಸ್ಟ್‌ಗೆ, ಆಸ್ಪತ್ರೆಗೆ ದಾಖಲಿಸಲು, ಔಷಧ ದೊರಕಿಸಲು, ಶವಸಂಸ್ಕಾರಕ್ಕೆ ನೆರವಾಗುವುದು ಈ ತಂಡಗಳ ಹೊಣೆ: ರಾಜ್ಯಾಧ್ಯಕ್ಷ ಕಟೀಲ್‌| 

ಆತ್ಮಭೂಷಣ್‌

ಮಂಗಳೂರು(ಏ.30): ಚುನಾವಣೆ ಸಂದರ್ಭದಲ್ಲಿ ನೆರವಾಗಲು ಬಿಜೆಪಿ ರಚಿಸಿದ ಬೂತ್‌ ಸಮಿತಿ ಮತ್ತು ಪೇಜ್‌ ಪ್ರಮುಖ್‌ ಕಾರ್ಯಕರ್ತರ ಪಡೆ ಈಗ ಕೊರೋನಾ ತಡೆಯುವ ಸೇನಾನಿಗಳಾಗಿ ರಣರಂಗಕ್ಕೆ ಧುಮುಕಿದೆ. ಗುರುವಾರದಿಂದಲೇ ಕಾರ್ಯಕರ್ತರ ಪಡೆ ಮತದಾರರ ಪಟ್ಟಿ ಹಿಡಿದು ಪ್ರತಿ ಬೂತ್‌ ವ್ಯಾಪ್ತಿಯ ಮನೆಗಳಿಗೆ ತೆರಳಲು ಆರಂಭಿಸಿದೆ. ಈ ಮೂಲಕ ಕರ್ನಾಟಕದಲ್ಲಿ ಬಿಜೆಪಿ ಕಾರ್ಯಕರ್ತರ ತಂಡ ಕೋವಿಡ್‌ ಮುಕ್ತ ಬೂತ್‌ ಆಂದೋಲನಕ್ಕೆ ಸಜ್ಜಾಗಿದೆ.

ಕೋವಿಡ್‌ ಅನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಪಕ್ಷದ ಕೇಂದ್ರ ವರಿಷ್ಠರ ಸೂಚನೆ ಮೇರೆಗೆ ರಾಜ್ಯದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿ ಬೂತ್‌ ಮಟ್ಟದಲ್ಲಿ ಇಳಿದು ಕೆಲಸ ಮಾಡಲಿದ್ದಾರೆ. ಕೋವಿಡ್‌ ನಿಯಂತ್ರಣಕ್ಕೆ ರಾಜಕೀಯ ಪಕ್ಷವೊಂದು ಬೂತ್‌ ಮಟ್ಟದಲ್ಲಿ ಅಖಾಡಕ್ಕೆ ಇಳಿಯುತ್ತಿರುವುದು ಇದೇ ಮೊದಲು ಎನ್ನಲಾಗಿದೆ.

ರಾಜ್ಯ ಬಿಜೆಪಿಯ ಸಂಘಟನಾತ್ಮಕ ಎಲ್ಲ 37 ಜಿಲ್ಲೆಗಳ ಜಿಲ್ಲಾ ಹಾಗೂ ಮಂಡಲ ಅಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿಗಳ ಜೊತೆಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಗುರುವಾರ ಮಂಗಳೂರಿನಿಂದ ವಿಡಿಯೋ ಕಾನ್ಫರೆನ್ಸ್‌ ಮೂಲಕ ಮಾತನಾಡಿ, ಮಾರ್ಗದರ್ಶನ ಮಾಡಿದ್ದಾರೆ.

ಕರ್ನಾಟಕದಲ್ಲಿ ಕೊರೋನಾರ್ಭಟ: ರೆಮ್ಡೆಸಿವಿರ್‌, ಆಕ್ಸಿಜನ್‌ ನೀಡಿ, ಕೇಂದ್ರಕ್ಕೆ ಹೈಕೋರ್ಟ್‌

ಬೂತ್‌ ಸಮಿತಿ, ಪೇಜ್‌ ಪ್ರಮುಖರಿಗೆ ಹೊಣೆ:

ಬಿಜೆಪಿಯ ಪ್ರತಿ ಬೂತ್‌ಗಳ ಕಾರ್ಯಕರ್ತರು ಹಾಗೂ ಪೇಜ್‌ ಪ್ರಮುಖರು ಕೋವಿಡ್‌ ಮುಕ್ತ ಬೂತ್‌ನ ಹೊಣೆ ಹೊತ್ತಿದ್ದಾರೆ. ಒಂದು ಬೂತ್‌ ಸಮಿತಿ ಅಂದರೆ 12 ಕಾರ್ಯಕರ್ತರಿರುತ್ತಾರೆ. ಪೇಜ್‌ ಪ್ರಮುಖ್‌ ಎಂದರೆ ಬೂತ್‌ ಮಟ್ಟದ ಮತದಾರರ ಪಟ್ಟಿಯಲ್ಲಿ ಪ್ರತಿ ಪುಟಕ್ಕೆ ಒಬ್ಬ ಪ್ರಮುಖ. ಒಂದು ಬೂತ್‌ನಲ್ಲಿ ಏನಿಲ್ಲವೆಂದರೂ 40 ಪುಟಗಳಿರುತ್ತವೆ. ಸುಮಾರು 1,200 ಮತದಾರರು ಇರುತ್ತಾರೆ. ಅಂದರೆ ಪೇಜ್‌ ಪ್ರಮುಖರಾಗಿರುವ 40 ಮಂದಿ ಹಾಗೂ ಬೂತ್‌ ಸಮಿತಿಯ 12 ಮಂದಿ ಸೇರಿ ಒಂದು ಬೂತ್‌ನಲ್ಲಿ ಒಟ್ಟು 52 ಮಂದಿ ಇರುತ್ತಾರೆ. ಇವರೆಲ್ಲ ಸೇರಿ ಒಂದು ಬೂತ್‌ನ್ನು ಕೋವಿಡ್‌ ಮುಕ್ತಗೊಳಿಸುವ ಜವಾಬ್ದಾರಿ ಹೊಂದಿರುತ್ತಾರೆ. ಪಕ್ಷ ಮುಖಂಡರು, ಜನಪ್ರತಿನಿಧಿಗಳೂ ಈ ತಂಡಗಳಿಗೆ ಕೈಜೋಡಿಸಲಿದ್ದಾರೆ.

ಕೋವಿಡ್‌ ಸೋಂಕಿತರು ಕ್ವಾರಂಟೈನ್‌ನಲ್ಲಿದ್ದರೆ ಅಥವಾ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರೆ, ಅವರ ಮನೆಗೆ ತೆರಳಿ ಮನೆಯ ಅವಶ್ಯಕತೆಗಳನ್ನು ಪೂರೈಸುವುದು. ಸೋಂಕಿನ ಶಂಕಿತರಿದ್ದರೆ, ಟೆಸ್ಟ್‌ಗೆ ನೆರವಾಗುವುದು, ಆಸ್ಪತ್ರೆಗೆ ದಾಖಲಿಸುವುದು, ಔಷಧ, ಕೋವಿಡ್‌ನಿಂದ ಮೃತಪಟ್ಟರೆ ಶವಸಂಸ್ಕಾರ ಸೇರಿ ಎಲ್ಲ ರೀತಿಯ ನೆರವು ನೀಡುವುದು ಈ ತಂಡದ ಹೊಣೆ. ಇದರ ಖರ್ಚುವೆಚ್ಚ ಎಲ್ಲವನ್ನೂ ಪಕ್ಷವೇ ನೋಡಿಕೊಳ್ಳುತ್ತದೆ.

ಕೋವಿಡ್‌ ಮುಕ್ತ ಬೂತ್‌ ಪರಿಕಲ್ಪನೆಯನ್ನು ಪರಿಣಾಮಕಾರಿಯಾಗಿ ಕಾರ್ಯರೂಪಕ್ಕೆ ತರಲು ಉದ್ದೇಶಿಸಲಾಗಿದೆ. ಕಾರ್ಯಕರ್ತರ ತಂಡ ಈಗಲೇ ಅಂಥಹ ಮನೆಗಳ ಪಟ್ಟಿಮಾಡಿ ಕಾರ್ಯೋನ್ಮುಖವಾಗಿದೆ. ಇದು ಪ್ರತಿಯೊಬ್ಬರ ಕರ್ತವ್ಯವಾಗಬೇಕು. ಕೋವಿಡ್‌ ಸೋಂಕಿತರ ರಕ್ಷಣೆಯಲ್ಲಿ ಪಕ್ಷದ ಕಾರ್ಯಕರ್ತ ಪಡೆ ಪ್ರಮುಖ ಪಾತ್ರ ವಹಿಸಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ತಿಳಿಸಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona