ಕೊರೋನಾ ಇರುವ ವಿಷಯ ಪತ್ನಿಗೆ ತಿಳಿಸಿದ ಪತಿ| ಸಂಜೆ ವೇಳೆಗೆ ಮನೆಯಲ್ಲೇ ಸಾವು| ಶವ ಸಮೀಪಕ್ಕೂ ಬಾರದ ಬಾಮೈದ| ಸಚಿವ ಸುರೇಶ್‌ ಕುಮಾರ್‌ ಅಣತಿಯಂತೆ ಶವ ಸಂಸ್ಕಾರ| ಕೆಂಗೇರಿ ಶವಾಗಾರದಲ್ಲಿ ಅಂತ್ಯ ಸಂಸ್ಕಾರ| 

ಬೆಂಗಳೂರು(ಏ. 21): ಕೊರೋನಾದಿಂದ ಮೃತಪಟ್ಟ ವ್ಯಕ್ತಿಯ ದೇಹವನ್ನು ಮುಟ್ಟಲು ಕುಟುಂಬಸ್ಥರು ಕೂಡ ಹೆದರುತ್ತಿದ್ದ ಸಂದರ್ಭದಲ್ಲಿ ರಾಜಾಜಿನಗರದ ಬಿಜೆಪಿ ಕಾರ್ಯಕರ್ತರು ಅಂತ್ಯ ಸಂಸ್ಕಾರ ನೆರವೇರಿಸಿರುವ ಘಟನೆ ನಡೆದಿದೆ.
ಕನಕಪುರ ರಸ್ತೆಯಲ್ಲಿರುವ ತಲಘಟ್ಟಪುರದ ರಾಮಚಂದ್ರ (64) ಮೃತ ದುರ್ವೈವಿಯಾಗಿದ್ದು, ಸಚಿವ ಸುರೇಶ್‌ಕುಮಾರ್‌ ಸಲಹೆ ಮೇರೆಗೆ ಕೆಂಗೇರಿ ಶವಾಗಾರದಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲಾಗಿದೆ.

ತಲಘಟ್ಟಪುರದಲ್ಲಿ ಸಣ್ಣ ಪುಟ್ಟ ಕೆಲಸಗಳನ್ನು ಮಾಡಿಕೊಂಡಿದ್ದ ರಾಮಚಂದ್ರ, ಏ.13ರಂದು ಜ್ವರವಿದ್ದರಿಂದ ಕೊರೋನಾ ಪರೀಕ್ಷೆ ಮಾಡಿಸಿದ್ದು, ಏ.15ರಂದು ಮಧ್ಯಾಹ್ನದ ವೇಳೆಗೆ ಕೊರೋನಾ ಸೋಂಕು ದೃಧಪಟ್ಟಿತ್ತು. ಮನೆಗೆ ಬಂದು ಈ ವಿಷಯವನ್ನು ಪತ್ನಿಗೆ ತಿಳಿಸಿದ ರಾಮಚಂದ್ರ, ಸೀದಾ ಹೋಗಿ ತನ್ನ ಕೋಣೆಯಲ್ಲಿ ಮಲಗಿದ್ದಾನೆ. ಮಧ್ಯಾಹ್ನ ಮಲಗಿದವರು ಮತ್ತೆ ಶಬ್ದವೇ ಇಲ್ಲವಲ್ಲ ಎಂದು ತಿಳಿದು ಸಂಜೆ ವೇಳೆಗೆ ಪತಿಯನ್ನು ನೋಡಲು ಹೋದಾಗ ಪತಿ ಮೃತಪಟ್ಟಿರುವುದು ಖಚಿತವಾಗಿದೆ.

ಅಂತ್ಯ ಸಂಸ್ಕಾರಕ್ಕೆ ಹಿಂಜರಿದ ಕುಟುಂಬ:

ಕಣ್ಣ ಮುಂದೆಯೇ ಪತಿ ತೀರಿಕೊಂಡ ಘಟನೆ ನಿಜಕ್ಕೂ ಪತ್ನಿಗೆ ಸಿಡಿಲು ಹೊಡೆದಂತೆ ಭಾಸವಾಗಿ ಏನನ್ನೂ ತೋಚದೆ ಸುಮ್ಮನೆ ಕುಳಿತಿದ್ದರು. ಕೊನೆಗೆ ಪಕ್ಕದ ಮನೆಯವರು ಮೃತನ ಬಾಮೈದ (ಮೃತನ ಪತ್ನಿಯ ತಮ್ಮ)ನಿಗೆ ಕರೆ ಮಾಡಿ ವಿಷಯ ಮುಟ್ಟಿಸಿದ್ದಾರೆ. ಆತ ಮೈಸೂರಿನಿಂದ ಬರುವಷ್ಟರಲ್ಲಿ ಮಧ್ಯರಾತ್ರಿಯಾಗಿತ್ತು. ಏ.16ರಂದು ಬೆಳಗ್ಗೆ ಬಾಮೈದ ಮನೆಯ ಹೊರಗಡೆಯೇ ಕಾರು ನಿಲ್ಲಿಸಿಕೊಂಡು ನಿಂತಿದ್ದನೇ ಹೊರತು, ಒಳಗಡೆ ಹೋಗಿ ಶವವನ್ನು ಹೊರಗಡೆ ತರುವ ಕೆಲಸಕ್ಕೆ ಮುಂದಾಗಿಲ್ಲ.

ಬಿಬಿಎಂಪಿ ಸೂಚಿತ ರೋಗಿಗಳ ಮೇಲೆ ಖಾಸಗಿ ಆಸ್ಪತ್ರೆಗಳ ದೌರ್ಜನ್ಯ..!

ಬಿಜೆಪಿ ಕಾರ್ಯಕರ್ತರಿಂದ ಸಂಸ್ಕಾರ:

ಕೊನೆಗೆ ಅಂತ್ಯ ಸಂಸ್ಕಾರ ನೆರವೇರಿಸುವುದಕ್ಕಾಗಿ ಈ ವಿಷಯವನ್ನು ಅಕ್ಕಪಕ್ಕದ ಮನೆಯವರೇ ಸಚಿವ ಸುರೇಶ್‌ಕುಮಾರ್‌ ಅವರಿಗೆ ಫೋನಾಯಿಸಿದ್ದಾರೆ. ಸುರೇಶ್‌ಕುಮಾರ್‌ ಅವರು ತಮ್ಮ ಕಾರ್ಯಕರ್ತರಾದ ಗಿರೀಶ್‌, ಲಿಂಗರಾಜು, ಉಮೇಶ್‌ ಹಾಗೂ ಪ್ರವೀಣ್‌ ಅವರಿಗೆ ತಿಳಿಸಿದ್ದಾರೆ. ಇವರು ಸ್ಥಳೀಯ ಆರೋಗ್ಯಾಧಿಕಾರಿಗಳಿಗೆ ತಿಳಿಸಿದ್ದು, ಸಾವಿನ ಪ್ರಮಾಣಪತ್ರ ಪಡೆದು ಆರೋಗ್ಯ ಸಿಬ್ಬಂದಿ ಮತ್ತು ಬಿಜೆಪಿ ಕಾರ್ಯಕರ್ತರ ಸಹಕಾರದಿಂದ ಕೆಂಗೇರಿ ಶವಾಗಾರದಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲಾಗಿದೆ.

ಸಂಸ್ಕಾರಕ್ಕೂ ಬಾರದ ಕುಟುಂಬಸ್ಥರು

ಬಿಜೆಪಿ ಕಾರ್ಯಕರ್ತರೇ ಶವ ಸಂಸ್ಕಾರ ಮಾಡಿದ್ದರೂ ಕೊನೇ ಪಕ್ಷ ಶವಾಗಾರದ ಬಳಿಗೂ ಪತ್ನಿಯನ್ನು ಒಳಗೊಂಡಂತೆ ಯಾರೊಬ್ಬರು ಕೂಡ ಹಾಜರಾಗಿರಲಿಲ್ಲ. ಬಾಮೈದ ಕೂಡ ದೂರದಿಂದಲೇ ಶವ ಸಂಸ್ಕಾರ ಮಾಡಿಬಿಡಿ ಎಂದು ಹೇಳಿದನೇ ಹೊರತು, ಹತ್ತಿರಕ್ಕೂ ಸುಳಿಯಲು ಮನಸ್ಸು ಮಾಡಲಿಲ್ಲ. ಕೊನೆಗೆ ಹಿಂದೂ ಸಂಪ್ರದಾಯದಂತೆ ಪೂಜೆ ಪುನಸ್ಕಾರ ನೆರವೇರಿಸಿ ಸಂಸ್ಕಾರ ಮಾಡಲಾಯಿತು ಎನ್ನುತ್ತಾರೆ ಕಾರ್ಯಕರ್ತ ಲಿಂಗರಾಜು.