ಹುಬ್ಬಳ್ಳಿ(ಡಿ.05):  ಈರುಳ್ಳಿ ದರ ಗಗನಕ್ಕೆ ಏರಿರುವುದರಿಂದ ಇದೀಗ ‘ಬಿರಿಯಾನಿ ಸೆಂಟರ್‌’ಗಳು ಸಂಕಷ್ಟಕ್ಕೆ ಈಡಾಗಿವೆ. ಅತ್ತ ಈರುಳ್ಳಿ ಹಾಕದೇ ಬಿರಿಯಾನಿ ಮಾಡಿದರೆ ರುಚಿ ಬರಲ್ಲ, ಈರುಳ್ಳಿ ಹಾಕಿ ಮಾಡಿದರೆ ದರ ಗಿಟ್ಟಲ್ಲ. ಇದು ಅಂಗಡಿ ಮಾಲೀಕರನ್ನು ಕಂಗೆಡಿಸಿದೆ.

ಹೌದು! ಈರುಳ್ಳಿ ದರ ಕಳೆದ ಒಂದು ತಿಂಗಳಿಂದ ಏರುಗತಿಯಲ್ಲಿ ಸಾಗಿದೆ. ಇದಕ್ಕೆ ಪ್ರಮುಖ ಕಾರಣ ಅತಿವೃಷ್ಟಿ. ಬೆಳೆ ಕೊಳೆತು ರೈತರ ಕೈಗೆ ಈರುಳ್ಳಿ ಸಿಗಲಿಲ್ಲ. ನಿರೀಕ್ಷಿತ ಮಟ್ಟದಲ್ಲಿ ಇಳುವರಿ ಬರಲಿಲ್ಲ. ಇದರ ಪರಿಣಾಮ ಮಾರುಕಟ್ಟೆಗೆ ಆವಕವಾಗುತ್ತಿರುವುದು ಕಡಿಮೆಯಾಗಿದೆ. ಹೀಗಾಗಿ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದೆ. ಇದು ಗ್ರಾಹಕರ ಕಣ್ಣಲ್ಲಿ ನೀರು ತರಿಸುತ್ತಿರುವುದು ಒಂದೆಡೆಯಾದರೆ, ಇನ್ನೊಂದೆಡೆ ಬಿರಿಯಾನಿ ಸೆಂಟರ್‌ ಸೇರಿದಂತೆ ಮಾಂಸಾಹಾರದ ಹೋಟೆಲ್‌ಗಳ ಮೇಲೆ ಹೊಡೆತ ಬೀಳುವಂತಾಗಿದೆ.

ಬಿರಿಯಾನಿ ಸೆಂಟರ್‌:

ಹುಬ್ಬಳ್ಳಿ ನಗರ ಬಿರಿಯಾನಿಗೆ ಸಾಕಷ್ಟು ಪ್ರಸಿದ್ಧಿ ಪಡೆದಿದೆ. ಸಣ್ಣ ಸಣ್ಣ ಬಿರಿಯಾನಿ ಸೆಂಟರ್‌ನಿಂದ ಹಿಡಿದು ದೊಡ್ಡ ಬಿರಿಯಾನಿ ಸ್ಪೆಷಲ್‌ ಹೋಟೆಲ್‌ಗಳು ಪ್ರತ್ಯೇಕವಾಗಿ ಇಲ್ಲಿವೆ. ಅಂಡಾ ಬಿರಿಯಾನಿ, ಮಟನ್‌ ಬಿರಿಯಾನಿ, ಚಿಕನ್‌ ಬಿರಿಯಾನಿ, ಚೈನೀಸ್‌ ಬಿರಿಯಾನಿ ಹೀಗೆ ಬಗೆ ಬಗೆಯ ಬಿರಿಯಾನಿಗಳು ಇಲ್ಲಿ ಲಭ್ಯ. ನಿಯಾಜ್‌, ಕಿಚನ್ಸ್‌, ಸೇರಿದಂತೆ ಸಣ್ಣ ಪುಟ್ಟ ಹೋಟೆಲ್‌ ಸೇರಿ 100ಕ್ಕೂ ಅಧಿಕ ಬಿರಿಯಾನಿ ಸೆಂಟರ್‌ಗಳು ಇಲ್ಲಿವೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

70 ಗೆ ಪ್ಲೇಟ್‌ನಿಂದ ಹಿಡಿದು 500,  600 ಪ್ಲೆಟ್‌ವರೆಗೂ ಬಿರಿಯಾನಿ ಇಲ್ಲಿ ಸಿಗುತ್ತದೆ. ಸಣ್ಣ ಪುಟ್ಟ ಹೋಟೆಲ್‌ಗಳಲ್ಲಿ 70 ರಿಂದ ಹಿಡಿದು 150ರ ವರೆಗೆ ದರ ನಿಗದಿ ಪಡಿಸಿದರೆ, ದೊಡ್ಡ ದೊಡ್ಡ ಹೋಟೆಲ್‌ಗಳಲ್ಲಿ 200 ಯಿಂದ 600 ವರೆಗೂ ಬಿರಿಯಾನಿಗೆ ದರ ನಿಗದಿಪಡಿಸಿದ್ದುಂಟು. ದೊಡ್ಡ ದೊಡ್ಡ ಹೋಟೆಲ್‌ಗಳಿಗೆ ಅಷ್ಟೊಂದು ಹೊಡೆತ ಬಿದ್ದಿಲ್ಲ. ಆದರೆ, ಸಣ್ಣ ಪುಟ್ಟಹೋಟೆಲ್‌, ಸೆಂಟರ್‌ಗಳನ್ನಿಟ್ಟುಕೊಂಡು ವ್ಯಾಪಾರ ಮಾಡುತ್ತಿರುವವರಿಗೆ ಈರುಳ್ಳಿ ದರ ಗಗನಕ್ಕೇರಿರುವುದು ಕಷ್ಟವಾಗುತ್ತಿದೆ.

ಬಿರಿಯಾನಿ ತಯಾರಿಸಲು ಪ್ರಮುಖವಾಗಿ ಈರುಳ್ಳಿ ಬೇಕೆ ಬೇಕು. ಒಂದು ಕೆಜಿ ಅಕ್ಕಿಯ ಬಿರಿಯಾನಿ ತಯಾರಿಸಬೇಕೆಂದರೆ ಅರ್ಧ ಕೆಜಿಯಷ್ಟು ಈರುಳ್ಳಿ ಬಳಸಲಾಗುತ್ತಿದೆಯಂತೆ. ಉಳ್ಳಾಗಡ್ಡಿಯನ್ನು ಚೆನ್ನಾಗಿ ಫ್ರೈ ಮಾಡಿ ರೈಸ್‌ನಲ್ಲಿ ಮಿಕ್ಸ್‌ ಮಾಡಿ ಬಿರಿಯಾನಿ ತಯಾರಿಸಲಾಗುತ್ತಿದೆ. ಆದರೆ, ಈರುಳ್ಳಿ ದರ ಗಗನಕ್ಕೇರಿದ ಪರಿಣಾಮದ ಹೆಚ್ಚಿಗೆ ಬಳಕೆ ಮಾಡಲು ಕಷ್ಟವಾಗುತ್ತಿದೆ.

ಬಿರಿಯಾನಿಗೆ ಈರುಳ್ಳಿ ಬದಲಿಗೆ ಬೇರೆ ವಸ್ತು ಬಳಕೆ ಮಾಡಲು ಬರಲ್ಲ. ಈರುಳ್ಳಿ ಹೆಚ್ಚಿಗೆ ಬಳಸದಿದ್ದಲ್ಲಿ ರುಚಿ ಬರಲ್ಲ. ಈರುಳ್ಳಿ ದರ ಹೆಚ್ಚಿಗೆ ಆಗಿದೆ ಎಂದು ಬಿರಿಯಾನಿ ದರವನ್ನು ಏಕಾಏಕಿ ಏರಿಸಲು ಬರಲ್ಲ. ಇದರಿಂದ ಗ್ರಾಹಕರನ್ನು ಕಳೆದುಕೊಳ್ಳಬೇಕಾಗುತ್ತದೆ ಎಂಬ ಮಾತು ಹೋಟೆಲ್‌ ಮಾಲೀಕರದ್ದು. ಇದೇ ರೀತಿ ಇನ್ನಷ್ಟುದಿನ ಮುಂದುವರಿದರೆ ನಮ್ಮಂಥ ಸಣ್ಣ ಪುಟ್ಟಸೆಂಟರ್‌ ಇಟ್ಟುಕೊಂಡವರು ಬಂದ್‌ ಮಾಡುವ ಪರಿಸ್ಥಿತಿ ಬರುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ ಎಂದು ಹೋಟೆಲ್‌ ಮಾಲೀಕರು ಹೇಳುತ್ತಾರೆ.

ಒಟ್ಟಿನಲ್ಲಿ ಈರುಳ್ಳಿ ದರ ಗಗನಕ್ಕೇರಿದ ಪರಿಣಾಮದ ಬಿರಿಯಾನಿ ಸೆಂಟರ್‌ಗಳು ಸಂಕಷ್ಟದಲ್ಲಿರುವುದಂತೂ ಸತ್ಯ. ಒಂದು ಕೆಜಿ ಅಕ್ಕಿಯ ಬಿರಿಯಾನಿ ತಯಾರಿಸಬೇಕೆಂದರೆ ಅರ್ಧಕೆಜಿ ಈರುಳ್ಳಿ ಬೇಕಾಗುತ್ತೆ. ಸದ್ಯ ಸ್ವಲ್ಪ ಪ್ರಮಾಣ ಕಡಿಮೆ ಮಾಡಿದ್ದೇವೆ. ಇನ್ನಷ್ಟು ಕಡಿಮೆ ಮಾಡಿದರೆ ಗ್ರಾಹಕರನ್ನು ಹಿಡಿದಿಟ್ಟುಕೊಳ್ಳುವುದು ಕಷ್ಟವಾಗುತ್ತೆ ಎಂದು ಬಿರಿಯಾನಿ ಸೆಂಟರ್‌ನ ಮಾಲೀಕ ಅಮೃತ ಖೋಡೆ ಅವರು ಹೇಳಿದ್ದಾರೆ. 

ಅತ್ತ ಲಾಭವೂ ಇಲ್ಲ. ಇತ್ತ ನಷ್ಟವೂ ಇಲ್ಲ ಎಂಬಂತೆ ಸಾಗಿದೆ. ಆದರೆ, ಇದೇ ಪರಿಸ್ಥಿತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಬಹಳ ಕಷ್ಟವಾಗುತ್ತೆ. ಸರ್ಕಾರ ಈರುಳ್ಳಿ ಬೆಲೆ ನಿಯಂತ್ರಣಕ್ಕೆ ಏನಾದರೂ ಕ್ರಮ ಕೈಗೊಳ್ಳಬೇಕು ಎಂದು ಬಿರಿಯಾನಿ ಸೆಂಟರ್‌ ಮಾಲೀಕ ನೌಶಾದ ಅವರು ತಿಳಿಸಿದ್ದಾರೆ.