ಭದ್ರಾ ಹಿನ್ನೀರಿನಲ್ಲೊಂದು ಪಕ್ಷಿಲೋಕದ ಹೆರಿಗೆ ಮನೆ ಸಂಭ್ರಮ

ಭದ್ರಾ ಹಿನ್ನೀರಿನ ನಡುಗುಡ್ಡೆಗಳಲ್ಲಿ ಪಕ್ಷಿಗಳ ಚಿಲಿಪಿಲಿ, ಸರಸ ಸಲ್ಲಾಪಗಳು, ಸಂಸಾರದ ಗುಟ್ಟುಗಳು ಬಹುಜನರ ಗಮನಕ್ಕೆ ಬಂದಿಲ್ಲ. ಅಲ್ಲೀಗ ಹೊಸ ಪಕ್ಷಿಲೋಕವೊಂದು ತನ್ನನ್ನು ತಾನು ಅನಾವರಣಗೊಳಿಸಿಗೊಳ್ಳುತ್ತಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

Birds breeding at Bhadra backwater place

ಗೋಪಾಲ್ ಯಡಗೆರೆ, ಕನ್ನಡಪ್ರಭ

ಶಿವಮೊಗ್ಗ(ಜೂ.20): ಮಳೆಗಾಲ ಬಂತೆಂದರೆ ಅನೇಕ ಕಡೆ ವಲಸೆ ಹಕ್ಕಿಗಳ ಹೆರಿಗೆ ಮನೆಯ ಸಂಭ್ರಮ ಶುರುವಾಗುತ್ತದೆ. ಈಗಾಗಲೇ ಪ್ರಸಿದ್ಧಿ ಪಡೆದಿರುವ ಮಂಡಗದ್ದೆ, ಸೊರಬ ತಾಲೂಕಿನ ಗುಡವಿ ಪಕ್ಷಿಧಾಮವನ್ನು ಜನ ಕಣ್ಣು ತುಂಬಿಸಿಕೊಂಡಿದ್ದಾರೆ. ಆದರೆ ಭದ್ರಾ ಹಿನ್ನೀರಿನ ನಡುಗುಡ್ಡೆಗಳಲ್ಲಿ ಪಕ್ಷಿಗಳ ಚಿಲಿಪಿಲಿ, ಸರಸ ಸಲ್ಲಾಪಗಳು, ಸಂಸಾರದ ಗುಟ್ಟುಗಳು ಬಹುಜನರ ಗಮನಕ್ಕೆ ಬಂದಿಲ್ಲ. ಅಲ್ಲೀಗ ಹೊಸ ಪಕ್ಷಿಲೋಕವೊಂದು ತನ್ನನ್ನು ತಾನು ಅನಾವರಣಗೊಳಿಸಿಗೊಳ್ಳುತ್ತಿದೆ.

ಕಣ್ಣು ಹಾಯಿಸಿದುದ್ದಕ್ಕೂ ಸಮೃದ್ಧ ಜಲರಾಶಿ. ನೀರಿನ ನಡುವೆ ಎದ್ದು ನಿಂತಿರುವ ನಡುಗಡ್ಡೆಗಳು, ಸುತ್ತಲೂ ದಟ್ಟ ಹಸಿರಿನ ವನರಾಶಿ. ಇಂತಹ ಮನಮೋಹಕ ಸ್ಥಳಗಳಲ್ಲೀಗ ಪ್ರಕೃತಿಯ ಸೌಂದರ್ಯಕ್ಕೆ ಜೀವ ಕಳೆ ತುಂಬಲು ಸಾವಿರಾರು ಪಕ್ಷಿಗಳು ದೂರದೂರುಗಳಿಂದ ಆಗಮಿಸಿ ಝಾಂಡಾ ಹೂಡಿವೆ.

ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಗಡಿ ಭಾಗದ ಲಕ್ಕವಳ್ಳಿಯ ಭದ್ರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಹೊಂದಿಕೊಂಡಂತೆ ಇರುವ ಭದ್ರ ಜಲಾಶಯದ ಹಿನ್ನೀರಿನ ನಡುಗಡ್ಡೆಗೆ ಇದೀಗ ಸಾವಿರಾರು ಸಂಖ್ಯೆ ಪಕ್ಷಿಗಳು ಸಂತಾನೋತ್ಪತ್ತಿಗಾಗಿ ಆಗಮಿಸಿದ್ದು, ತಮ್ಮ ಹೆರಿಗೆ ಮನೆಯಲ್ಲಿ ಸಂಭ್ರಮಿತ್ತಿವೆ. ಸಾವಿರಾರು ಕಿಲೋ ಮೀಟರ್ ದೂರದ ಹಿಮಾಚಲ ಪ್ರದೇಶದಿಂದ ಬರುವ ರಿವರ್ ಟರ್ನ್, ನೀರು ಕಾಗೆ ಮತ್ತಿತರ ಪಕ್ಷಿಗಳು ಇಲ್ಲಿನ ಸ್ವಚ್ಛಂದ ಪರಿಸರದಲ್ಲಿ ಹಾರಾಡಿಕೊಂಡು ತಮ್ಮದೇ ಆದ ಲೋಕದಲ್ಲಿ ಮುಳುಗಿ ಹೋಗಿವೆ. ಆಯ್ಕೆಯಾದ ಸಂಗಾತಿಯೊಡನೆ ಹುಟ್ಟಲಿರುವ ಕಂದಮ್ಮಗಳಿಗಾಗಿ ಬೆಚ್ಚನೆಯ ಗೂಡು ನಿರ್ಮಿಸುವಲ್ಲಿ ನಿರತವಾಗಿವೆ. ಹುಟ್ಟಿದ ಕಂದಮ್ಮಗಳ ರಕ್ಷಣೆ,ಆರೈಕೆಯಲ್ಲಿ ಸಂಭ್ರಮ ತೋರುತ್ತಿವೆ.

Birds breeding at Bhadra backwater place

ಜನವರಿ ಹಾಗೂ ಫೆಬ್ರವರಿಯಲ್ಲಿ ದೂರದ ಹಿಮಾಚಲ ಪ್ರದೇಶದಿಂದ ಹಿಂಡು ಹಿಂಡಾಗಿ ಬರುವ ರಿವರ್‌ಟರ್ನ್ ಪಕ್ಷಿಗಳು ಜುಲೈ ತನಕ ಇಲ್ಲಿದ್ದು ಸಂತಾನೋತ್ಪತ್ತಿ ಕ್ರಿಯೆ ನಡೆಸುತ್ತವೆ. ಬೇರೆ ಪಕ್ಷಿಗಳ ಹಾಗೆ ಗೂಡಿನಲ್ಲಿ ಮೊಟ್ಟೆ ಇಡದೆ ಗಟ್ಟಿ ನೆಲದ ಮೇಲೆ ಮೊಟ್ಟೆ ಇಟ್ಟು ಮರಿ ಮಾಡುವ ರಿವರ್ ಟರ್ನ್ ಪಕ್ಷಿಗಳು ಜಲಾಶಯದಲ್ಲಿ ಸಮೃದ್ಧವಾಗಿ ಸಿಗುವ ಮೀನು ಮರಿಗಳನ್ನು ಬೇಟೆಯಾಡಿ ತನ್ನ ಮರಿಗಳಿಗೆ ಆಹಾರ ಒದಗಿಸುತ್ತವೆ.

Birds breeding at Bhadra backwater place

ಜನವರಿ ನಂತರ ಜಲಾಶಯದಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಾ ಬಂದ ಹಾಗೆ ತಲೆ ಎತ್ತುವ ನಡುಗಡ್ಡೆಗಳು ಪಕ್ಷಿಗಳಿಗೆ ಸುರಕ್ಷಿತ ತಾಣವಾಗಿವೆ. ಮನುಷ್ಯರ ಸಂಪರ್ಕವಿಲ್ಲದ, ಹಾವುಗಳ ಕಾಟವಿಲ್ಲದ ಈ ಪ್ರದೇಶ ಪಕ್ಷಿಗಳ ಸಂತಾನೋತ್ಪತ್ತಿಗೆ ಹೇಳಿ ಮಾಡಿಸಿದ ಜಾಗದಂತಿದೆ. ಆರಂಭದಲ್ಲಿ ಕೆಲವೇ ಕೆಲವು ಸಂಖ್ಯೆಯಲ್ಲಿ ಬರುತ್ತಿದ್ದ ರಿವರ್ ಟರ್ನ್ ಪಕ್ಷಿಗಳು ಇತ್ತೀಚಿನ ವರ್ಷಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿವೆ. ಜಲಾಶಯದ ಹಿನ್ನೀರಿನ ಜೊತೆಗೆ ಸಮೃದ್ಧವಾದ ಮೀನುಗಳಿರುವ ಕಾರಣ ರಿವರ್ ಟರ್ನ್ ಪಕ್ಷಿಯ ಜೊತೆಗೆ ನೀರು ಕಾಗೆ ಮತ್ತಿತರ ಪಕ್ಷಿಗಳು ಇಲ್ಲಿಗೆ ಬರಲಾರಂಭಿಸಿವೆ. ಸಾರ್ವಜನಿಕರಿಗೆ ಪಕ್ಷಿಗಳ ವೀಕ್ಷಣೆ ಅನುಕೂಲವಾಗಲೆಂದು ಅರಣ್ಯ ಇಲಾಖೆ ಯಾಂತ್ರೀಕೃತ ಬೋಟ್ ಮೂಲಕ ನಡುಗಡ್ಡೆ ಪ್ರದೇಶಕ್ಕೆ ಕರೆದುಕೊಂಡು ಹೋಗುವ ವ್ಯವಸ್ಥೆ ಕಲ್ಪಿಸಿದೆಯಾದರೂ ಲಾಕ್‌ಡೌನ್ ಕಾರಣ ಈ ಬಾರಿ ಪಕ್ಷಿ ವೀಕ್ಷಣೆಗೆ ಅವಕಾಶ ಇಲ್ಲವಾಗಿದೆ.

Birds breeding at Bhadra backwater place

ಇದರಿಂದ ಪಕ್ಷಿಗಳು ಈ ಬಾರಿ ಯಾವುದೇ ತೊಂದರೆ ಸಂತಾನೋತ್ಪತ್ತಿ ಕ್ರಿಯೆ ಮುಗಿಸಿಕೊಂಡು ತಮ್ಮ ಮೂಲ ನೆಲೆಗೆ ಮರಳುವ ತವಕದಲ್ಲಿವೆ.  ಪ್ರಸ್ತುತ 10 ಸಾವಿರಕ್ಕೂ ಹೆಚ್ಚು ರಿವರ್ ಟರ್ನ್ ಪಕ್ಷಿಗಳು ಭದ್ರಾ ನಡುಗಡ್ಡೆಯಲ್ಲಿ ನೆಲೆಯೂರಿದ್ದು ಸೂರ್ಯೋದಯ ಹಾಗೂ ಸೂರ್ಯಾಸ್ತದ ಸಂದರ್ಭದಲ್ಲಿ ಇಲ್ಲಿ ಅನಾವರಣಗೊಳ್ಳುವ ಸಂಭ್ರಮ ಹೊಸದೊಂದು ಲೋಕಕ್ಕೆ ಕರೆದೊಯ್ಯುತ್ತದೆ. ಒಟ್ಟಿನಲ್ಲಿ ವಾತಾವರಣದ ಬದಲಾವಣೆ, ಮಾನವನ ದುರಾಸೆ, ಅರಣ್ಯ ಹಾಗೂ ಪರಿಸರ ನಾಶದ ಕಾರಣ ಅಪಾಯದ ಅಂಚಿನಲ್ಲಿರುವ ಪಕ್ಷಿ ಸಂಕುಲಕ್ಕೆ ಭದ್ರಾ ಜಲಾಶಯದ ಭದ್ರವಾದ ನೆಲೆಯೊದಗಿಸಿದ್ದು, ಮುಂದಿನ ದಿನಗಳಲ್ಲಿ ಇಲ್ಲಿ ಇನ್ನಷ್ಟು ಹೊಸ ಹೊಸ ಪಕ್ಷಿಗಳು ಆಗಮಿಸುವ ಸಾಧ್ಯತೆ ಹೆಚ್ಚಾಗಿದೆ ಎನ್ನಬಹುದು.

Latest Videos
Follow Us:
Download App:
  • android
  • ios