ಮೈಸೂರು [ಮಾ.11]:  ಒಂದು ಕಡೆ ರಾಜ್ಯಾದ್ಯಂತ ಕೊರೋನಾ ಭೀತಿ ಆವರಿಸಿದ್ದರೆ ಇನ್ನೊಂದು ಕಡೆ ಮೈಸೂರಲ್ಲಿ ಹಕ್ಕಿಜ್ವರದ ಭೀತಿ ಕಾಣಿಸಿಕೊಂಡಿದೆ. ನೆರೆಯ ಕೇರಳದಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿರುವ ಬೆನ್ನಲ್ಲೇ ಮೈಸೂರಲ್ಲೂ ಸಾಲುಸಾಲು ಕೊಕ್ಕರೆಗಳು ಸಾವಿಗೀಡಾಗುತ್ತಿರುವುದು ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ. ಕಳೆದೊಂದು ವಾರದಿಂದ 20ಕ್ಕೂ ಹೆಚ್ಚು ಕೊಕ್ಕರೆಗಳು ಮೃತಪಟ್ಟಿವೆ ಎನ್ನಲಾಗಿದೆ. ಏತನ್ಮಧ್ಯೆ, ಗ್ರಾಮದೇವತೆ ಹಬ್ಬಕ್ಕಾಗಿ ಸಾಕಿದ್ದ 12 ಕೋಳಿಗಳು ಏಕಾಏಕಿ ಮೃತಪಟ್ಟಿರುವುದು ಸ್ಥಳೀಯರ ಆತಂಕವನ್ನು ಮತ್ತಷ್ಟುಹೆಚ್ಚಿಸಿದೆ.

ಮರದಲ್ಲೇ ಕೊಕ್ಕರೆಗಳ ಸಾವು:  ಮೈಸೂರಿನ ವಿದ್ಯಾರಣ್ಯಪುರಂನಲ್ಲಿ ಕಳೆದೊಂದು ವಾರದಿಂದ 12 ಹೆಚ್ಚು ಕೊಕ್ಕರೆಗಳು ಮೃತಪಟ್ಟಿದ್ದು, ಸಾರ್ವಜನಿಕರಲ್ಲಿ ಹಕ್ಕಿಜ್ವರದ ಭೀತಿ ಸೃಷ್ಟಿಸಿದೆ. ಅದೇ ರೀತಿ ಹೆಬ್ಬಾಳಕೆರೆ ಸುತ್ತಮುತ್ತ ಪ್ರತಿ ದಿನ ಕೊಕ್ಕರೆಗಳು ಸಾವಿಗೀಡಾಗುತ್ತಿದ್ದು, ಕಳೆದ 20 ದಿನಗಳಿಂದ 50ಕ್ಕೂ ಹೆಚ್ಚು ಕೊಕ್ಕರೆಗಳು ಮೃತಪಟ್ಟಿವೆ. ಇದರಿಂದ ನೆರೆಯ ಕೇರಳದಲ್ಲಿ ಕಾಣಿಸಿಕೊಂಡಿರುವ ಹಕ್ಕಿಜ್ವರ ಮೈಸೂರಿಗೂ ಹರಡಿದೆ ಎಂಬ ಭೀತಿ ಎಲ್ಲೆಡೆ ಆವರಿಸಿದೆ. ಸುಮ್ಮನೆ ಕೂತಿದ್ದಂತೆಯೇ ಮರಗಳ ಮೇಲಿಂದ ಕೊಕ್ಕರೆಗಳು ಸತ್ತು ಬೀಳುತ್ತಿದ್ದು, ಪಕ್ಷಿಪ್ರಿಯರಲ್ಲಿ ಆತಂಕ ಸೃಷ್ಟಿಸಿದೆ.

ಕೋಳಿಗೆ 60 ರಿಂದ 65 ರೂಪಾಯಿ ಇಳಿತ.....

ಕೊಕ್ಕರೆಗಳು ಈ ರೀತಿ ಸಾಮೂಹಿಕವಾಗಿ ಸಾವಿಗೀಡಾಗುತ್ತಿರುವ ವಿಷಯ ತಿಳಿದು, ಪಾಲಿಕೆ ಆರೋಗ್ಯಾಧಿಕಾರಿ ಡಾ. ನಾಗರಾಜ್‌ ಅವರು ಮೃತ ಕೊಕ್ಕರೆ ಶವಗಳನ್ನು ಬೆಂಗಳೂರಿನ ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಗೆ ತಪಾಸಣೆಗೆ ಕಳುಹಿಸಿದ್ದಾರೆ.

ಕೋಳಿಗಳು ಸಾವು:  ಇನ್ನೊಂದೆಡೆ ಮೇಟಗಳ್ಳಿಯ ಮಂಚಮ್ಮ ದೇವಸ್ಥಾನ ಬಳಿಯ ನಿವಾಸಿ ರಾಮಣ್ಣ ಎಂಬವರಿಗೆ ಸೇರಿದ 12 ಕೋಳಿಗಳು ಮೃತಪಟ್ಟಿವೆ. ಗ್ರಾಮ ದೇವತೆ ಹಬ್ಬಕ್ಕಾಗಿ ಸಾಕಿದ್ದ ಈ ಕೋಳಿಗಳು ಬೆಳಗಾಗುವುದರೊಳಗೆ ಮೃತಪಟ್ಟಿವೆ. ಇದರಿಂದ ಕೋಳಿಗಳಿಗೂ ಹಕ್ಕಿಜ್ವರ ಕಾಣಿಸಿಕೊಂಡಿದೆಯೇ ಎಂಬ ಆತಂಕ ಶುರುವಾಗಿದೆ.

ಮೃಗಾಲಯದಲ್ಲಿ ಕಟ್ಟೆಚ್ಚರ: ಹಕ್ಕಿಜ್ವರದ ಭೀತಿ ಹಿನ್ನೆಲೆಯಲ್ಲಿ ಮೈಸೂರು ಮೃಗಾಲಯದಲ್ಲೂ ಕಟ್ಟೆಚ್ಚರ ವಹಿಸಲಾಗಿದೆ. ಮೃಗಾಲಯಕ್ಕೆ ವಲಸೆ ಪಕ್ಷಿಗಳು ಬರದಂತೆ ನೋಡಿಕೊಳ್ಳಲಾಗುತ್ತಿದ್ದು, ಪ್ರತಿನಿತ್ಯ ರಾಸಾಯನಿಕ ಸಿಂಪಡಿಸಲಾಗುತ್ತಿದೆ. ಅಲ್ಲದೆ, ನಗರದ ಸುತ್ತಮುತ್ತಲಿರುವ ಕುಕ್ಕರಹಳ್ಳಿ ಕೆರೆ, ಲಿಂಗಾಬುದಿ ಕೆರೆ, ಕಾರಂಜಿ ಕೆರೆ, ಹದಿನಾರು ಕೆರೆ ಸೇರಿ ಪ್ರಮುಖ ಕೆರೆಗಳಲ್ಲಿ ಮೈಸೂರು ವನ್ಯಜೀವಿ ವಿಭಾಗದಿಂದ ನಿಗಾವಹಿಸಲಾಗಿದ್ದು, ಬೇರೆ ರಾಜ್ಯಗಳಿಂದ ವಲಸೆ ಬರುವ ಪಕ್ಷಿಗಳ ಮೇಲೆ ನಿಗಾವಹಿಸಲಾಗಿದೆ.

ಈ ಹಿಂದೆಯೂ ಮೈಸೂರಲ್ಲಿ ಹಕ್ಕಿಜ್ವರ ಆತಂಕ ಕಾಣಿಸಿಕೊಂಡಿತ್ತು. ಮೃಗಾಲಯದಲ್ಲೇ ಪಕ್ಷಿಗಳು ಸಾವಿಗೀಡಾಗಿ ಆತಂಕ ಸೃಷ್ಟಿಸಿದ್ದವು.

ಕೊರೋನಾ: ಪ್ರವಾಸಿಗರ ಸಂಖ್ಯೆ ಇಳಿಮುಖ

ಕೊರೋನಾ ಸೋಂಕಿನ ಭೀತಿ ಹಿನ್ನೆಲೆಯಲ್ಲಿ ಮೈಸೂರಿಗೆ ಆಗಮಿಸುವ ಪ್ರವಾಸಿಗರ ಸಂಖ್ಯೆಯಲ್ಲಿ ಭಾರೀ ಇಳಿಮುಖವಾಗಿದೆ. ಮೈಸೂರು ಅರಮನೆ, ಚಾಮುಂಡಿಬೆಟ್ಟಸೇರಿ ಪ್ರಮುಖ ಪ್ರವಾಸಿತಾಣಗಳಿಗೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಕ್ಷೀಣಿಸಿದೆ. ಕೇರಳ, ತಮಿಳುನಾಡು ಸೇರಿ ಚಾಮುಂಡಿಬೆಟ್ಟಕ್ಕೆ ಬರುವ ಭಕ್ತರ ಸಂಖ್ಯೆಯೂ ಕಡಿಮೆಯಾಗಿದೆ.