ಬೆಂಗಳೂರು [ಮಾ.18]:  ದಾವಣಗೆರೆ ಮತ್ತು ಮೈಸೂರಿನಲ್ಲಿನ ಹಕ್ಕಿ ಜ್ವರದ ಭೀತಿ ಬೆಂಗಳೂರಿನಲ್ಲೂ ಉಂಟಾಗಿದೆ. ಆದರೆ, ಇದುವರೆಗೂ ಹಕ್ಕಿಜ್ವರದ ಸೋಂಕು ಪ್ರಕರಣ ಬೆಂಗಳೂರಿನಲ್ಲಿ ದೃಢಪಟ್ಟಿಲ್ಲ.

ಕಳೆದ 15 ದಿನಗಳಲ್ಲಿ ರಾಜರಾಜೇಶ್ವರಿ ನಗರ, ಗಿರಿನಗರ, ಉತ್ತರಹಳ್ಳಿ, ಬ್ಯಾಟರಾಯನಪುರ, ಮಾಡಿವಾಳ, ವಿದ್ಯಾರಣ್ಯಪುರ, ಸಜ್ಜಾಪುರ ಸೇರಿದಂತೆ ವಿವಿಧೆಡೆ 85ಕ್ಕೂ ಹೆಚ್ಚು ಹಕ್ಕಿ, ಪಕ್ಷಿಗಳು ಇದಕ್ಕಿದಂತೆ ಸುತ್ತ ಬೀಳುತ್ತಿರುವ ವರದಿಯಾಗಿದೆ. ಮೃತ ಪಕ್ಷಿಗಳನ್ನು ಪರೀಕ್ಷೆಗೆ ಕಳುಹಿಸಲಾಗುತ್ತಿದೆ. ಆದರೆ, ಹಕ್ಕಿ-ಪಕ್ಷಿಗಳಲ್ಲಿ ಹಕ್ಕಿ ಜ್ವರದ ಸೋಂಕು ಇಲ್ಲ ಎಂದು ಪಶು ವೈದ್ಯಕೀಯ ಸಂಶೋಧನಾ ಸಂಸ್ಥೆ ದೃಢಪಡಿಸಿದೆ. ಈ ನಡುವೆ ಸೋಮವಾರ ಮತ್ತು ಮಂಗಳವಾರ ಮಹಾಲಕ್ಷ್ಮೇಪುರದ ಉದ್ಯಾನವನದ ಬಳಿ ಐದಕ್ಕೂ ಹೆಚ್ಚು ಕಾಗೆಗಳು ಒಂದೇ ಕಡೆ ಸತ್ತ ಬಿದ್ದಿದ್ದು ಆತಂಕ ಹೆಚ್ಚಿಸಿದೆ.

ಏರ್‌ಪೋರ್ಟ್‌ಲ್ಲಿ ನಡೆಯುತ್ತಿಲ್ಲ ಸಮರ್ಪಕ ಪರೀಕ್ಷೆ : ವಿದೇಶದಿಂದ ಬಂದ ಮಹಿಳೆ ಗಂಭೀರ ಆರೋಪ...

ಈಗಾಗಲೇ ಮೈಸೂರು ಮತ್ತು ದಾವಣಗೆರೆಯಲ್ಲಿ ಹಕ್ಕಿಜ್ವರ ಸೋಂಕು ಇರುವ ಬಗ್ಗೆ ದೃಢಪಟ್ಟಿರುವ ಹಿನ್ನೆಲೆಯಲ್ಲಿ ಹಕ್ಕಿ-ಪಕ್ಷಿ ಸತ್ತ ಪ್ರದೇಶದಲ್ಲಿ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈ ಬಗ್ಗೆ ಆರೋಗ್ಯ ಇಲಾಖೆಯೊಂದಿಗೆ ಚರ್ಚೆ ನಡೆಸಲಾಗುತ್ತಿದೆ ಎಂದು ಬಿಬಿಎಂಪಿ ಅರಣ್ಯ ವಿಭಾಗದ ವನ್ಯಜೀವಿ ಸಂರಕ್ಷಕ ಪ್ರಸನ್ನ ಕುಮಾರ್‌ ‘ಕನ್ನಡಪ್ರಭ’ ಮಾಹಿತಿ ನೀಡಿದ್ದಾರೆ.

ವಿಷದ ಆಹಾರ, ನೀರು ಸೇವನೆ ಕಾರಣ:  ಮೃತಪಟ್ಟಹೆಚ್ಚಿನ ಸಂಖ್ಯೆಯ ಹಕ್ಕಿ-ಪಕ್ಷಿಗಳು ನೀರಿನಲ್ಲಿರುವ ಪಕ್ಷಿಗಳಾಗಿವೆ. ಬೇಸಿಗೆ ಇರುವುದರಿಂದ ನಗರದ ಹಕ್ಕಿ-ಪಕ್ಷಿಗಳಿಗೆ ಕುಡಿಯುವುದಕ್ಕೆ ಶುದ್ಧವಾದ ನೀರು ಸಿಗುತ್ತಿಲ್ಲ. ಇನ್ನು ನಗರದ ಎಲ್ಲ ಕೆರೆಗಳು ಕೊಳಚೆ ನೀರು ಹಾಗೂ ಕಾರ್ಖಾನೆಗಳ ವಿಷಕಾರಿ ರಾಸಾಯನಿ ತ್ಯಾಜ್ಯ ನೀರಿನಿಂದ ತುಂಬಿಕೊಂಡಿವೆ. ಈ ವಿಷಕಾರಿ ನೀರು ಸೇವೆನೆಯಿಂದ ಹಕ್ಕಿ-ಪಕ್ಷಿಗಳು ನಿರಂತರವಾಗಿ ಮೃತಪಡುತ್ತಿವೆ ಎಂಬ ಸಂಶಯವನ್ನು ತಜ್ಞರು ವ್ಯಕ್ತಪಡಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಈಗಾಗಲೇ ಆಯ್ದಾ ಸ್ಥಳದಲ್ಲಿ ಪಕ್ಷಿಗಳಿಗೆ ಕುಡಿಯುವ ನೀರಿನ ಕುಂಡಗಳ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರು ತಮ್ಮ ಮನೆಯ ಮಹಡಿಯ ಮೇಲೆ ಪಕ್ಷಿಗಳಿಗೆ ಕುಡಿಯುವುದಕ್ಕೆ ನೀರಿನ ವ್ಯವಸ್ಥೆ ಮಾಡಿದರೆ ಅನುಕೂಲವಾಗಲಿದೆ ಎಂದು ಪ್ರಸನ್ನ ಕುಮಾರ್‌ ಮನವಿ ಮಾಡಿದ್ದಾರೆ.