ಬಿಪೋರ್‌ಜಾಯ್ ಸೈಕ್ಲೋನ್ ಎಫೆಕ್ಟ್ ಉಡುಪಿಯಲ್ಲಿ ಉತ್ತಮ ಮಳೆ
ರಾಜ್ಯದ ಕರಾವಳಿ ತೀರ ಉಡುಪಿ ಸೇರಿ ವಿವಿಧ ಜಿಲ್ಲೆಗಳಲ್ಲಿ ಬಿಪೋರ್‌ಜಾಯ್ ಚಂಡಮಾರುತದ ಹಿನ್ನೆಲೆಯಲ್ಲಿ ಉತ್ತಮ ಮಳೆಯಾಗುತ್ತಿದೆ.
ಉಡುಪಿ (ಜೂ.10): ಉಡುಪಿ ಜಿಲ್ಲೆಯಾದ್ಯಂತ ವ್ಯಾಪಕ ಮಳೆ ಆಗುತ್ತಿದೆ. ಶುಕ್ರವಾರ ರಾತ್ರಿಯಿಂದಲೇ ಧಾರಾಕಾರ ಮಳೆ ಸುರಿಯುತ್ತಿದೆ. ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಬಿಟ್ಟು ಬಿಟ್ಟು ಮಳೆ ಆಗುತ್ತಿದೆ. ದಿನವಿಡೀ ಮೋಡ ಕವಿದ ವಾತಾವರಣ ಇದೆ.
ಬಿಪೊರ್‌ಜಾಯ್ ಚಂಡಮಾರುತದ ಪರಿಣಾಮ ಪಶ್ಚಿಮ ಕರಾವಳಿಯಲ್ಲಿ ಅಲೆಗಳ ಅಬ್ಬರ ಜೋರಾಗಿದೆ. ಸಮುದ್ರದಲ್ಲಿ ಅಲೆಗಳು ಭೋರ್ಗರೆಯುತ್ತಿದೆ. ಅರಬ್ಬಿ ಸಮುದ್ರ ಪ್ರಕ್ಶುಬ್ಧಗೊಂಡಿದ್ದು, ಯಾವುದೇ ರೀತಿಯ ಬೋಟುಗಳು ನೀರಿಗಿಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಈಗಾಗಲೇ ಆಳ ಸಮುದ್ರ ಮೀನುಗಾರಿಕೆ ಸ್ಥಗಿತಗೊಂಡಿದ್ದು, ನಾಡ ದೋಣಿಗಳಿಗೂ ಕಡಲಿಗೆ ಇಳಿಯದಂತೆ ಸೂಚನೆ ನೀಡಲಾಗಿದೆ. ಉಡುಪಿಯ ಪ್ರಸಿದ್ಧ ಮಲ್ಪೆ ಬೀಚ್ ಗೆ ಸಾವಿರಾರು ಪ್ರವಾಸಿಗರು ಬರುತ್ತಿದ್ದಾರೆ. ಆದರೆ ಯಾವುದೇ ಪ್ರವಾಸಿಗರು ಕಡಲಿಗೆ ತಿಳಿಯದಂತೆ ಇಲಾಖೆ ಸೂಚಿಸಿದೆ. ಬೀಚ್ ನಿರ್ವಹಣಾ ಸಮಿತಿಯ ಸಿಬ್ಬಂದಿಗಳು ಪ್ರವಾಸಿಗರನ್ನು ವಾಪಾಸು ಕಳುಹಿಸುತ್ತಿದ್ದಾರೆ. ಕಡಲಿಗೆ ಪ್ರವಾಸಿಗರು ಹೋಗದಂತೆ ಉದ್ದಕ್ಕೂ ಬಲೆಗಳನ್ನು ಅಳವಡಿಸಲಾಗಿದೆ.
ಬಿಪೊರ್‌ಜಾಯ್ ಚಂಡಮಾರುತದಿಂದ ಮುಂಗಾರು ಮಳೆ ವಿಳಂಬ: ಕರಾವಳಿಯಲ್ಲಿಯೂ ಆತಂಕ
ಕೇರಳಕ್ಕೆ ಈಗಾಗಲೇ ಮುಂಗಾರು ಪ್ರವೇಶಿಸಿದೆ. ಕರ್ನಾಟಕ ಕರಾವಳಿಗೆ ಇನ್ನೂ ಮುಂಗಾರು ಬಂದಿಲ್ಲ. ಮುಂಗಾರಿಗೆ ಮೊದಲು ಬಂದಿರುವ ಚಂಡಮಾರುತ ವ್ಯಾಪಕ ಮಳೆಗೆ ಕಾರಣವಾಗಿದೆ. ಕರಾವಳಿಯಲ್ಲಿ ಈ ಬಾರಿ ಮುಂಗಾರು ಪೂರ್ವ ಮಳೆ ಕೈಕೊಟ್ಟಿತ್ತು. ಇದೀಗ ಸುರಿದಿರುವ ಮಳೆ ಉಡುಪಿಯ ಜನರಿಗೆ ಖುಷಿ ತಂದಿದೆ. ನಗರದಲ್ಲಿ ಇನ್ನಾದರೂ ಕುಡಿಯುವ ನೀರಿನ ಭವಣೆಗೆ ಪೂರ್ಣ ವಿರಾಮ ಬೀಳಲಿ ಎಂದು ಜನರು ಆಶಿಸುತ್ತಿದ್ದಾರೆ.ಇನ್ನು ಎರಡು ದಿನಗಳ ಕಾಲ ಮಳೆ ಮುಂದುವರೆಯುವುದಾಗಿ ಹವಾಮಾನ ಇಲಾಖೆ ಹೇಳಿದೆ. ಮಳೆಯನ್ನೇ ಅವಲಂಬಿಸಿ ಕೃಷಿ ನಡೆಸುವ ಉಡುಪಿ ಜಿಲ್ಲೆಯಲ್ಲಿ, ಶೀಘ್ರ ಮುಂಗಾರು ಆರಂಭವಾದರೆ ಭತ್ತ ಕೃಷಿ ಪ್ರಾರಂಭಿಸಬಹುದು ಎಂದು ರೈತರು ಕಾಯುತ್ತಿದ್ದಾರೆ.
ಬಿಪೊರ್‌ಜಾಯ್ ಚಂಡಮಾರುತದಿಂದ ಮುಂಗಾರು ಮಳೆ ವಿಳಂಬ: ಬೆಂಗಳೂರು: ಅರಬ್ಬೀ ಸಮುದ್ರದಲ್ಲಿ ಕಳೆದ ಕೆಲ ದಿನಗಳಿಂದ ಕುಸಿತಗೊಂಡಿರುವ ವಾಯುಭಾರವು ಸದ್ಯ ಚಂಡಮಾರುತವಾಗಿ ರೂಪುಗೊಂಡಿದೆ. ಮುಂದಿನ 24 ಗಂಟೆಗಳ ಕಾಲ ಇದೇ ರೀತಿಯಲ್ಲಿ ಹವಾಮಾನ ಮುಂದುವರಿದರೆ ದೊಡ್ಡ ಪ್ರಮಾಣದಲ್ಲಿ ಕರಾವಳಿಗೆ ಬಿಪೊರ್‌ಜಾಯ್ ಚಂಡಮಾರುತ ಅಪ್ಪಳಿಸುವ ಸಾಧ್ಯತೆ ಹೆಚ್ಚಾಗಿದೆ. ಇನ್ನು ಈ ಚಂಡಮಾರುತದಿಂದ ಮುಂಗಾರು ಮಳೆ ರಾಜ್ಯಕ್ಕೆ ಆಗಮಿಸುವುದು ಮತ್ತಷ್ಟು ವಿಳಂಬವಾಗಲಿದೆ ಎಂದು ಹೇಳಲಾಗಿತ್ತು. ಆದರೆ, ರಾಜ್ಯದಲ್ಲಿ ಮುಂಗಾರು ಮಳೆ ಕಳೆದೆರಡು ದಿನಗಳಿಂದ ಆರಂಭವಾಗಿದ್ದು, ಬಿಪೋರ್‌ಜಾಯ್ ಚಂಡಮಾರುತದ ಪರಿಣಾಮವೇ ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ.
ಗೃಹಜ್ಯೋತಿ ಜಾರಿಗೂ ಮುನ್ನ ವಿದ್ಯುತ್ ಬೆಲೆ ಏರಿಕೆ ಶಾಕ್! ಬಿಲ್ ದುಪ್ಪಟ್ಟು ಬರಲು ಇಲ್ಲಿದೆ ಕಾರಣ
ಕರಾವಳಿಯಲಲಿ ಆಳ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ:
ಅರಬ್ಬೀ ಸಮುದ್ರದಲ್ಲಿ ಕಳೆದ ಕೆಲ ದಿನಗಳಿಂದ ಕುಸಿತಗೊಂಡಿರುವ ವಾಯುಭಾರವು ಈಗ ಚಂಡಮಾರುತ ರೂಪ ಪಡೆದುಕೊಂಡಿದೆ. ಈ ಚಂಡಮಾಡುತಕ್ಕೆ ಬಿಪರ್‌ಜಾಯ್ ಎಂದು ಹೆಸರಿಡಲಾಗಿದೆ, ಮುಂದಿನ 24 ಗಂಟೆ ಹೀಗೆ ಮುಂದುವರೆದರೆ ಕರಾವಳಿಗೆ ಚಂಡಮಾರುತ ಅಪ್ಪಳಿಸಲಿದೆ. ಇದರಿಂದ ದಕ್ಷಿಣ ಭಾರತದ ಪಶ್ಚಿಮ ತೀರಗಳು ಅಪಾಯವನ್ನು ಎದುರಿಸಲಿವೆ. ಪ್ರಸ್ತುತ ಉತ್ತರದತ್ತ ಮುಖ ಮಾಡಿರುವ ಚಂಡಮಾರುತವು ಜೂನ್ 8ರಿಂದ 10ರವರೆಗೆ ಕರ್ನಾಟಕ ಕರಾವಳಿ ಪ್ರಕ್ಷುಬ್ಧ ವಾತಾವರಣ ಇರಲಿದೆ. ಮುಂದಿನ 24 ಗಂಟೆಗಳಲ್ಲಿ ಚಂಡಮಾರುತದ ತೀವ್ರತೆ ಹೆಚ್ಚಾಗಲಿದೆ. ಆದ್ದರಿಂದ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.