Asianet Suvarna News Asianet Suvarna News

ವಿದ್ಯುತ್‌ ಬಿಲ್‌ ಉಳಿಕೆಗೆ ಸಹಕಾರಿ: ಕಬ್ಬನ್‌ ಪಾರ್ಕಲ್ಲಿ ಬಯೋಗ್ಯಾಸ್‌ ಘಟಕ

ಮರ ಗಿಡಗಳಿಂದ ಉತ್ಪತಿ ಆಗುವ ತ್ಯಾಜ್ಯವನ್ನೇ ವಿದ್ಯುತ್‌ ಆಗಿ ಪರಿವರ್ತನೆ| ಇದೇ ವಿದ್ಯುತ್‌ನಿಂದ ಉದ್ಯಾನದ ದೀಪ ಬೆಳಗಲು ಯೋಜನೆ| ಬಯೋಗ್ಯಾಸ್‌ ಘಟಕ ನಿರ್ಮಾಣಕ್ಕೆ 500 ಚದರ ಮೀಟರ್‌ ಸ್ಥಳ ಅಗತ್ಯ|
 

Biogas unit Will Be Install in Cubbon Park in Bengaluru
Author
Bengaluru, First Published Jan 29, 2020, 9:49 AM IST
  • Facebook
  • Twitter
  • Whatsapp

ರಮೇಶ್‌ ಬನ್ನಿಕುಪ್ಪೆ

ಬೆಂಗಳೂರು(ಜ.29): ಕಬ್ಬನ್‌ ಉದ್ಯಾನವನದಲ್ಲಿನ ಮರ ಗಿಡಗಳಿಂದ ಉತ್ಪಾದನೆಯಾಗುವ ತ್ಯಾಜ್ಯವನ್ನೇ ವಿದ್ಯುತ್‌ ಆಗಿ ಪರಿವರ್ತಿಸಲು ತೋಟಗಾರಿಕೆ ಇಲಾಖೆ ಯೋಜನೆ ರೂಪಿಸಿದೆ. ಆ ಮೂಲಕ ಪ್ರತಿ ತಿಂಗಳು ಸುಮಾರು 1.5 ಲಕ್ಷ ವಿದ್ಯುತ್‌ ಬಿಲ್‌ ಉಳಿಸುವ ಪ್ರಯತ್ನಕ್ಕೆ ಕೈ ಹಾಕಿದೆ.

ದೆಹಲಿಯ ರಾಷ್ಟ್ರಪತಿ ಭವನದ ಮಾದರಿಯಲ್ಲಿ ಕಬ್ಬನ್‌ ಉದ್ಯಾನದಲ್ಲಿಯೂ ಜೈವಿಕ ಅನಿಲ (ಬಯೋಗ್ಯಾಸ್‌) ಘಟಕ ಪ್ರಾರಂಭಿಸಲಾಗುತ್ತಿದೆ. ಅದರಿಂದ ಉತ್ಪಾದನೆಯಾಗುವ ವಿದ್ಯುತನ್ನು ಉದ್ಯಾನದ ರಸ್ತೆಗಳಲ್ಲಿ ದೀಪಗಳಿಗೆ ಬಳಸಿಕೊಳ್ಳಲು ಮುಂದಾಗಿದೆ.

ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಉದ್ಯಾನವನದಲ್ಲಿ ಪ್ರತಿ ತಿಂಗಳು ಬಳಕೆಯಾಗುವ ವಿದ್ಯುತ್‌ಗೆ 5 ಲಕ್ಷದವರೆಗೂ ಬಿಲ್‌ ಪಾವತಿ ಮಾಡಲಾಗುತ್ತಿದೆ. ಸ್ಮಾರ್ಟ್‌ ಸಿಟಿ ಯೋಜನೆಯ ಎರಡನೇ ಹಂತದಲ್ಲಿ ಉದ್ಯಾನದ ಅಭಿವೃದ್ಧಿಗೆ ಹಣಕಾಸಿನ ನೆರವು ಲಭ್ಯವಾಗುತ್ತಿದ್ದು, ಈ ಅನುದಾನದಲ್ಲಿ ಬಯೋಗ್ಯಾಸ್‌ ಉತ್ಪಾದಿಸಲು ಯೋಜನೆ ರೂಪಿಸಲಾಗಿದ್ದು, ಈಗಾಗಲೇ ನೀಲಿ ನಕ್ಷೆ ಸಿದ್ಧಪಡಿಸಲಾಗಿದೆ. ಈ ಕುರಿತಂತೆ ಈಗಾಗಲೇ ಸಭೆ ನಡೆದಿದ್ದು, ಮತ್ತೊಂದು ಸುತ್ತಿನ ಮಾತುಕತೆ ನಡೆದ ಬಳಿಕ ಘಟಕ ನಿರ್ಮಾಣ ಕಾಮಗಾರಿ ಪ್ರಾರಂಭವಾಗಲಿದೆ.

ಕಬ್ಬನ್‌ ಉದ್ಯಾನದಲ್ಲಿ ಪ್ರತಿದಿನ ಸುಮಾರು 5 ಟನ್‌ ಒಣತ್ಯಾಜ್ಯ(ಮರದ ಎಲೆಗಳು) ಉತ್ಪಾದನೆಯಾಗುತ್ತಿದೆ. ಈ ತ್ಯಾಜ್ಯವನ್ನು ಬಯೋಗ್ಯಾಸ್‌ ಉತ್ಪಾದಿಸಲು ಬಳಕೆ ಮಾಡಿಕೊಳ್ಳಲಾಗುವುದು. ಅಲ್ಲದೆ, ವಿಧಾನಸೌಧ, ರಾಜ ಭವನ ಮತ್ತು ಇಂದಿರಾ ಗಾಂಧಿ ಸಂಗೀತ ಕಾರಂಜಿ ಉದ್ಯಾನದ ತ್ಯಾಜ್ಯವನ್ನು ಬಳಕೆ ಮಾಡಿಕೊಳ್ಳಲಾಗುವುದು. ಅಗತ್ಯಬಿದ್ದಲ್ಲಿ ಬಿಬಿಎಂಪಿ ಉದ್ಯಾನವನಗಳಿಂದಲೂ ಒಣ ತ್ಯಾಜ್ಯವನ್ನು ಪಡೆದುಕೊಳ್ಳುವ ಚಿಂತನೆಯಿದೆ.

ಬಯೋಗ್ಯಾಸ್‌ ಅಳವಡಿಕೆ ಮಾಡಿಕೊಳ್ಳುತ್ತಿರುವುದರಿಂದ ಕಬ್ಬನ್‌ ಪಾರ್ಕ್‌ನಲ್ಲಿ ಉತ್ಪಾದನೆಯಾಗುತ್ತಿರುವ ತ್ಯಾಜ್ಯವನ್ನು ವಿಲೇವಾರಿ ಮಾಡುವ ಜವಾಬ್ದಾರಿ ತಪ್ಪಲಿದೆ. ಅಲ್ಲದೆ, ವಿಲೇವಾರಿ ಮಾಡುವುದಕ್ಕಾಗಿ ಇಲಾಖೆ ಪ್ರತಿ ತಿಂಗಳ ಲಕ್ಷಾಂತರ ರು.ಗಳ ವೆಚ್ಚ ಮಾಡುತ್ತಿದ್ದು, ಅದು ಉಳಿತಾಯವಾಗಲಿದೆ ಎಂದು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಶೇ.30 ರಷ್ಟು ವಿದ್ಯುತ್‌ ಬಳಕೆ:

ಕಬ್ಬನ್‌ ಉದ್ಯಾನವನದಲ್ಲಿ ಪ್ರತಿ ದಿನ ಐದು ಟನ್‌ ತ್ಯಾಜ್ಯ ಉತ್ಪಾದನೆಯಾಗುತ್ತಿದೆ. ತ್ಯಾಜ್ಯದಿಂದ ಪ್ರಸ್ತುತ ಬಳಕೆ ಮಾಡುತ್ತಿರುವ ವಿದ್ಯುತ್‌ ಪ್ರಮಾಣದಲ್ಲಿ ಶೇ.30 ವಿದ್ಯುತ್‌ ಉಳಿಸಬಹುದಾಗಿದೆ. ಇದರಿಂದ ಇಲಾಖೆಗೆ ಆರ್ಥಿಕವಾಗಿ ಸಹಕಾರಿಯಾಗಲಿದೆ ಎಂದು ಅಧಿಕಾರಿಗಳು ವಿವರಿಸಿದರು.

500 ಚದರ ಮೀಟರ್‌ನಲ್ಲಿ ಘಟಕ:

ಬಯೋಗ್ಯಾಸ್‌ ಘಟಕ ನಿರ್ಮಾಣಕ್ಕೆ 500 ಚದರ ಮೀಟರ್‌ ಸ್ಥಳ ಅಗತ್ಯವಿದೆ. ಈ ಘಟಕವನ್ನು ನಿರ್ಮಿಸಿದ ಬಳಿಕ ತ್ಯಾಜ್ಯ ವಿಲೇವಾರಿ ವೆಚ್ಚವೂ ಕಡಿಮೆಯಾಗಲಿದೆ. ಈ ಘಟಕದಿಂದ ಹೊರ ಬರುವ ತ್ಯಾಜ್ಯವನ್ನು ನೇರವಾಗಿ ಗಿಡಗಳಿಗೆ ಬಳಕೆ ಮಾಡಿಕೊಳ್ಳಬಹುದಾಗಿದೆ. ಅಲ್ಲದೆ, ಬಯೋಗ್ಯಾಸ್‌ ಒಂದು ಪುನರಾವರ್ತಿತ ಇಂಧನ ಶಕ್ತಿಯಾಗಿದೆ. ಘಟಕಕ್ಕಾಗಿ ಕಡಿಮೆ ಭೂಮಿ ಅಗತ್ಯವಿದೆ. ಇದರಿಂದ ಪರಿಸರ ಸ್ನೇಹಿಯಾಗಿರಲಿದೆ ಎಂದು ಅವರು ವಿವರಿಸಿದರು.

ಈ ಬಗ್ಗೆ ಮಾಹಿತಿ ನೀಡಿದ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕಿ(ಕಬ್ಬನ್‌ ಉದ್ಯಾನ) ಜಿ.ಕುಸುಮಾ ಅವರು, ಕಬ್ಬನ್‌ ಉದ್ಯಾನದಲ್ಲಿ ಬಯೋಗ್ಯಾಸ್‌ ಘಟಕ ಪ್ರಾರಂಭಿಸುವುದಕ್ಕೆ ಸ್ಮಾರ್ಟ್‌ ಸಿಟಿ ಯೋಜನೆಯಲ್ಲಿ ಒಪ್ಪಿಗೆ ಸಿಕ್ಕಿದೆ. ಇದಕ್ಕೆ ಆಗುವ ಎಲ್ಲ ವೆಚ್ಚವನ್ನು ಸ್ಮಾರ್ಟ್‌ಸಿಟಿ ಯೋಜನೆಯಿಂದ ಬಿಡುಗಡೆಯಾಗಲಿದ್ದು, ತೋಟಗಾರಿಕೆ ಇಲಾಖೆಗೆ ಯಾವುದೇ ಹೊರೆಯಾಗುವುದಿಲ್ಲ. ಘಟಕವನ್ನು ನಿರ್ಮಿಸುವ ಸಂಸ್ಥೆಯೇ ಐದು ವರ್ಷಗಳ ಕಾಲ ನಿರ್ವಹಣೆ ಮಾಡಲಿದೆ ಎಂದು ತಿಳಿಸಿದ್ದಾರೆ.
 

Follow Us:
Download App:
  • android
  • ios