ಕೋಲಾರ : ಟೊಮೆಟೋ ವಹಿವಾಟು ತಂದ ಡೆಲ್ಟಾ ಭೀತಿ
- ಮಹಾಮಾರಿ ಕೋವಿಡ್ 3ನೇ ಅಲೆಯ ಭೀತಿಯ ಜತೆಗೆ ದೇಶದಲ್ಲಿ ಡೆಲ್ಟಾಪ್ಲಸ್ ವೈರಸ್ ಆತಂಕ
- ಡೆಲ್ಟಾಪ್ಲಸ್ ವೈರಸ್ ಕೋಲಾರ ಜಿಲ್ಲೆಗೆ ಹರಡುವ ಭೀತಿ
- ಎರಡನೇ ಅಲೆಯಿಂದ ತತ್ತರಿಸಿರುವ ಜಿಲ್ಲೆಯಲ್ಲಿ ಈಗ ಸೋಂಕಿನ ಪ್ರಮಾಣ ಶೇ.1.3 ಕ್ಕೆ ಇಳಿಕೆ
ಕೋಲಾರ (ಜೂ.29): ಮಹಾಮಾರಿ ಕೋವಿಡ್ 3ನೇ ಅಲೆಯ ಭೀತಿಯ ಜತೆಗೆ ದೇಶದಲ್ಲಿ ಡೆಲ್ಟಾಪ್ಲಸ್ ವೈರಸ್ ಕೋಲಾರ ಜಿಲ್ಲೆಗೆ ಹರಡುವ ಭೀತಿ ಎದುರಾಗಿದೆ. ಎರಡನೇ ಅಲೆಯಿಂದ ತತ್ತರಿಸಿರುವ ಜಿಲ್ಲೆಯಲ್ಲಿ ಈಗ ಸೋಂಕಿನ ಪ್ರಮಾಣ ಶೇ.1.3 ಕ್ಕೆ ಇಳಿದಿರುವುದು ಸಮಾಧಾನದ ಸಂಗತಿಯಾದರೂ ಇದರ ಬೆನ್ನಲ್ಲೇ ಮೂರನೇ ಅಲೆ ಮತ್ತು ಡೆಲ್ಟಾವೈರಸ್ ಭೀತಿಯೂ ಅವರಿಸಿದೆ.
ದೇಶದ 11 ರಾಜ್ಯಗಳಲ್ಲಿ ಡೆಲ್ಟಾವೈರಸ್ ಈಗಾಗಲೇ ಕಾಣಿಸಿಕೊಂಡಿದೆ. ಜಿಲ್ಲೆಯು ಹೊರ ರಾಜ್ಯಗಳೊಂದಿಗೆ ಭಾರಿ ಪ್ರಮಾಣದಲ್ಲಿ ಟೊಮೆಟೋ ವ್ಯಾಪಾರ, ಸಾಗಾಣಿಕೆ ಸಂಪರ್ಕ ಹೊಂದುವ ಕಾರಣ ಹೊರರಾಜ್ಯಗಳಿಂದ ಜಿಲ್ಲೆಗೆ ಸೋಂಕು ಹರಡುವ ಭೀತಿ ಆವರಿಸಿದೆ.
ಡೆಲ್ಟಾ ಪ್ಲಸ್ ವೈರಸ್ ಭೀತಿ: ಮಹಾರಾಷ್ಟ್ರ- ಕೇರಳ ಗಡಿಭಾಗದಲ್ಲಿ ಹೈ ಅಲರ್ಟ್
ಟೊಮೆಟೋ ವಹಿವಾಟು ತಂದ ಭೀತಿ
ಏಷ್ಯಾ ಖಂಡದಲ್ಲಿಯೇ ಎರಡನೇ ಅತಿ ದೊಡ್ಡ ಟೊಮೆಟೋ ಮಾರುಕಟ್ಟೆಎನಿಸಿಕೊಂಡಿರುವ ಕೋಲಾರ ಎಪಿಯಲ್ಲಿಯಲ್ಲಿ ಜೂನ್‌ನಿಂದ ಟೊಮೆಟೋ ವ್ಯಾಪಾರ ಜೋರಾಗಿ ನಡೆಯುತ್ತದೆ. ಟೊಮೆಟೋ ಖರೀದಿದಾಗಿ ಹೊರ ರಾಜ್ಯಗಳಿಂದ ವ್ಯಾಪಾರಸ್ಥರು, ಆಗಮಿಸುತ್ತಾರೆ. ಅಲ್ಲದೆ ಅಲ್ಲಿಂದ ನೂರಾರು ಸಂಖ್ಯೆಲ್ಲಿ ಲಾರಿಗಳು ಆಗಮಿಸುತ್ತವೆ. ಇವುಗಳ ಚಾಲಕರು ಹಾಗು ಕ್ಲೀನರ್‌ಗಳಿಂದ ಸೋಂಕು ಹರಡುವ ಆತಂಕ ಎದುರಾಗಿದೆ.
ಜಿಲ್ಲೆಯಿಂದ ಪ್ರತಿದಿನ ಸುಮಾರು 300 ಕ್ಕೂ ಹೆಚ್ಚು ಲಾರಿಗಳಲ್ಲಿ ಟೊಮೆಟೋವನ್ನು ದೇಶದ 10 ರಾಜ್ಯಗಳಿಗೆ ಸಾಗಣೆ ಮಾಡಲಾಗುತ್ತದೆ. ಈ ಲಾರಿಗಳ ಚಾಲಕರು ಮತ್ತು ಕ್ಲೀನರ್‌ಗಳಿಂದ ಸೋಂಕು ಹರಡುವ ಆತಂಕ ಉಂಟಾಗಿದೆ. ಈಗಾಗಲೇ ಹೊರ ರಾಜ್ಯಗಳಿಂದ ಸಾವಿರಾರು ಕಾರ್ಮಿಕರು, ಹಮಾಲಿಗಳು ಎಪಿಎಂಸಿ ಮಾರುಕಟ್ಟೆಗೆ ಆಗಮಿಸಿದ್ದಾರೆ. ಅಲ್ಲದೆ ವ್ಯಾಪಾರಸ್ಥರೂ ಹೊರ ರಾಜ್ಯಗಳಿಂದ ಬಂದಿಳಿದಿದ್ದಾರೆ.
ಮಹಾರಾಷ್ಟ್ರ ಸೇರಿದಂತೆ ತಮಿಳುನಾಡು, ಆಂಧ್ರಪ್ರದೇಶ,ಒರಿಸ್ಸಾ, ಮಧ್ಯಪ್ರದೇಶ, ಪಶ್ಚಿಮಬಂಗಾಳ, ದೆಹಲಿ,ಉತ್ತರ ಪ್ರದೇಶ,ಜಾರ್ಖಾಂಡ್, ಕೇರಳ,ಗುಜರಾತ್,ಹರಿಯಾಣ,ರಾಜಾಸ್ತಾನ್, ಅಸ್ಸಾಂ ರಾಜ್ಯಗಳಿಗೆ ಕೋಲಾರ ಜಿಲ್ಲೆಯ ಟೊಮೆಟೋ ಮಾರಾಟವಾಗುತ್ತಿದೆ.
ಡೆಲ್ಟಾ ಪ್ಲಸ್‌ಗೆ ಮತ್ತೆ 3 ಬಲಿ, ಒಟ್ಟು ಸೋಂಕಿತರ ಸಂಖ್ಯೆ 52!
5 ತಿಂಗಳು ನಡೆಯುವ ವಹಿವಾಟು
ಜಿಲ್ಲೆಯಲ್ಲಿ ಟೊಮೆಟೋ ವಹಿವಾಟು 5 ತಿಂಗಳವರೆಗೆ ನಡೆಯಲಿದೆ.ಡೆಲ್ಟಾಪ್ಲಸ್ ವೈರಸ್ ಮಹಾರಾಷ್ಟ್ರದಲ್ಲಿ ಹೆಚ್ಚಿಗೆ ಹರಡುತ್ತಿರುವುದರಿಂದ ಹೊರ ರಾಜ್ಯಗಳಿಂದ ಸೋಂಕು ಎಲ್ಲಿ ಹರಡುವುದೋ ಎಂಬ ಭಯವೂ ಹೆಚ್ಚಾಗಿದೆ.
ಮಹಾರಾಷ್ಟ್ರದಲ್ಲಿ ಈಗಾಗಲೇ ಸೋಂಕು ಹೆಚ್ಚಿಗೆ ಹರಡುತ್ತಿರುವುದರಿಂದ ಅಲ್ಲಿಂದ ಬರುವ ಲಾರಿಗಳ ಮೇಲೆ ಹೆಚ್ಚಿನ ಜಿಲ್ಲಾಡಳಿತ ನಿಗಾ ವಹಿಸಬೇಕಾಗಿದೆ. ಲಾರಿಗಳಲ್ಲಿ ಪ್ಯಾಸೆಂಜರ್‌ಗಳು ನುಸುಳಿ ಬರದಂತೆಯೂ ನೋಡಿಕೊಳ್ಳಬೇಕಾಗಿದೆ. ವ್ಯಾಪಾರಸ್ಥರು ಇಲ್ಲಿನ ರೈತರೊಂದಿಗೆ ಸಂಪರ್ಕ ಹೊಂದಿ ಪುನಃ ಹಳ್ಳಿಗಳಿಗೆ ಸೋಂಕು ಆವರಿಸಿಕೊಳ್ಳದಂತೆ ಜಿಲ್ಲಾಡಳಿತ ಎಚ್ಚರಿಕೆ ವಹಿಸಬೇಕಾಗಿದೆ.
ಅಧಿಕೃತ ಸೂಚನೆ ಬಂದಿಲ್ಲ: ಕೋಲಾರ ಎಪಿಎಂಸಿಯಿಂದ ದೇಶದ ವಿವಿಧ ರಾಜ್ಯಗಳಿಗೆ ಸಾಕಷ್ಟುಲಾರಿಗಳು ಟೊಮೆಟೋ ಮತ್ತಿತರ ತರಕಾರಿ ಸಾಗಿಸುತ್ತವೆ. ಪ್ರತಿದಿನ ಮಹಾರಾಷ್ಟ್ರಕ್ಕೆ 150 ರಿಂದ 200 ಲಾರಿಗಳು ಸಂಚರಿಸುತ್ತವೆ. ಲಾರಿಗಳಲ್ಲಿ ಓಡಾಡುವ ಚಾಲಕರು ಮತ್ತು ಕ್ಲೀನರ್‌ಗಳು ಮಾರುಕಟ್ಟೆಗಳಲ್ಲಿ ಲಾರಿಗಳನ್ನು ಬಿಟ್ಟು ಹೊರ ಹೋಗದಂತೆ ನೋಡಿಕೊಳ್ಳಲು ಸೂಚಿಸಿದ್ದೇವೆ. ಆದರೆ ಇದಕ್ಕಾಗಿ ನಮಗೆ ಸರ್ಕಾರದಿಂದ ಯಾವುದೇ ಅಧಿಕೃತ ಸೂಚನೆ ಬಂದಿಲ್ಲ ಎಂದು ಎಪಿಎಂಸಿ ಮಾರುಕಟ್ಟೆಕಾರ್ಯದರ್ಶಿ ರವಿಕುಮಾರ್ ತಿಳಿಸಿದರು.
ಲಾರಿ ಚಾಲಕರು ಮತ್ತು ಕ್ಲೀನರ್‌ಗಳು ಲಾರಿಗಳನ್ನು ಬಿಟ್ಟು ಹೊರಗೆ ಹೋಗಬಾರದು, ಮಾಸ್ಕ್‌ಗಳನ್ನು ಕಡ್ಡಾಯವಾಗಿ ಬಳಸಬೇಕು, ಸ್ಯಾನಿಟೈಸರ್‌ಗಳನ್ನು ಬಳಸಬೇಕು, ಲಾರಿಗಳನ್ನೂ ಸ್ಯಾನಿಟೈಸರ್‌ಗಳಿಂದ ಶುದ್ಧೀಕರಿಸಬೇಕು ಎಂದು ಹಿಂದಿನಿಂದಲೂ ಪಾಲಿಸುತ್ತಾ ಬಂದಿದ್ದೇವೆ ವ್ಯಾಪಾರಸ್ಥರಿಗೂ ಇದೇ ರೀತಿಯ ಎಚ್ಚರಿಕೆಯ ಕ್ರಮಗಳನ್ನು ಅನುಸರಿಸಲು ಸೂಚನೆ ನೀಡಲಾಗಿದೆ ಎಂದರು.
ಕೋವಿಡ್ ಮೂರನೇ ಅಲೆ ಮತ್ತು ಡೆಲ್ಟಾವೈರಸ್ ಹರಡುವ ಸಾಧ್ಯತೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಹಲವು ಎಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಕೋಲಾರ ಎಪಿಎಂಸಿಯಿಂದ ದೇಶದ ವಿವಿಧ ರಾಜ್ಯಗಳಿಗೆ ಲಾರಿಗಳಲ್ಲಿ ಟೊಮೆಟೋ ಸಾಗಣೆ ಆಗುವುದರಿಂದ ಲಾರಿಗಳಲ್ಲಿ ಓಡಾಡುವ ಚಾಲಕರು ಮತ್ತು ಕ್ಲೀನರ್‌ಗಳಿಂದ ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು.
ಡಾ.ಜಗದೀಶ್, ಡಿಹೆಚ್‌ಒ , ಕೋಲಾರ