ಡೆಲ್ಟಾ ಪ್ಲಸ್‌ಗೆ ಮತ್ತೆ 3 ಬಲಿ, ಒಟ್ಟು ಸೋಂಕಿತರ ಸಂಖ್ಯೆ 52!
ಡೆಲ್ಟಾಪ್ಲಸ್‌ಗೆ ಮತ್ತೆ 3 ಬಲಿ, ಒಟ್ಟು ಸೋಂಕಿತರ ಸಂಖ್ಯೆ 52
ಮಧ್ಯಪ್ರದೇಶದಲ್ಲಿ 2, ಮಹಾರಾಷ್ಟ್ರದಲ್ಲಿ ಒಂದು ಸಾವು
ಆಸ್ಪ್ರೇಲಿಯಾ, ಇಸ್ರೇಲ್ನಲ್ಲಿ ಕೋವಿಡ್ ನಿರ್ಬಂಧ ಮರು ಜಾರಿ
ನವದೆಹಲಿ(ಜೂ.26): 3ನೇ ಅಲೆಗೆ ಕಾರಣವಾಗಬಲ್ಲದು ಎಂಬ ಭೀತಿ ಹುಟ್ಟಿಸಿರುವ ಡೆಲ್ಟಾಪ್ಲಸ್ ರೂಪಾಂತರಿ ಕೊರೋನಾ ತಳಿಯ ಸೋಂಕಿತರ ಸಂಖ್ಯೆ ಮತ್ತಷ್ಟುಏರಿಕೆ ಕಂಡಿದ್ದು, ಶುಕ್ರವಾರ 52ಕ್ಕೆ ತಲುಪಿದೆ. ಜೊತೆಗೆ ಶುಕ್ರವಾರ ಒಂದೇ ದಿನ ಡೆಲ್ಟಾಪ್ಲಸ್ ವೈರಸ್‌ಗೆ ತುತ್ತಾಗಿದ್ದ ಮೂವರು ಸಾವನ್ನಪ್ಪಿದ್ದಾರೆ.
ಈ ಪೈಕಿ ಎರಡು ಸಾವು ಮಧ್ಯಪ್ರದೇಶದಲ್ಲಿ ಮತ್ತು 1 ಸಾವು ಮಹಾರಾಷ್ಟ್ರದಲ್ಲಿ ಸಂಭವಿಸಿದೆ. ಮಧ್ಯಪ್ರದೇಶದಲ್ಲಿ ಸಾವನ್ನಪ್ಪಿದ ಇಬ್ಬರೂ ಲಸಿಕೆ ಪಡೆದುಕೊಂಡಿರಲಿಲ್ಲ. ಇದರೊಂದಿಗೆ ಈ ರೂಪಾಂತರಿಗೆ ಬಲಿಯಾದವರ ಸಂಖ್ಯೆ 4ಕ್ಕೆ ಏರಿದೆ. ಮೊದಲ ಸಾವು ಕೂಡಾ ಮಧ್ಯಪ್ರದೇಶದಲ್ಲೇ ಸಂಭವಿಸಿತ್ತು. ಈ ವರೆಗೆ 9 ರಾಜ್ಯಗಳಲ್ಲಿ ಡೆಲ್ಟಾಪ್ಲಸ್ ರೂಪಾಂತರಿ ಪತ್ತೆಯಾಗಿದೆ.
ಆಸ್ಪ್ರೇಲಿಯಾ, ಇಸ್ರೇಲ್ನಲ್ಲಿ ಕೋವಿಡ್ ನಿರ್ಬಂಧ ಮರು ಜಾರಿ
ಕೊರೊನಾ ವೈರಸ್ ಅನ್ನು ಯಶಸ್ವಿಯಾಗಿ ನಿಯಂತ್ರಣಕ್ಕೆ ತಂದಿದ್ದ ಆಸ್ಪ್ರೇಲಿಯಾ ಮತ್ತು ಇಸ್ರೇಲ್ನಲ್ಲಿ ಈಗ ಡೆಲ್ಟಾವೈರಸ್ನ ಭೀತಿ ಎದುರಾಗಿದೆ. ಸಿಡ್ನಿಯಲ್ಲಿ ಬೆರಳೆಣಿಕೆಯಷ್ಟುಪ್ರಕರಣಗಳು ದಾಖಲಾಗುತ್ತಿದ್ದರಿಂದ ಜನಜೀವನ ಸಹಜಸ್ಥಿತಿಗೆ ಮರಳಿತ್ತು. ಆದರೆ, ಡೆಲ್ಟಾದಿಂದಾಗಿ ಕೊರೋನಾ ವೈರಸ್ ಹರಡುವುದನ್ನು ತಪ್ಪಿಸುವ ಸಲುವಾಗಿ ಸಿಡ್ನಿಯಲ್ಲಿ ಒಂದು ವಾರಗಳ ಕಾಲ ಲಾಕ್ಡೌನ್ ಜಾರಿ ಮಾಡಲಾಗಿದೆ.
ಅದೇ ರೀತಿ ಪರಿಣಾಮಕಾರಿ ಲಸಿಕೆ ನೀಡಿಕೆಯಿಂದಾಗಿ ಇಸ್ರೇಲ್ ಕೊರೋನವನ್ನು ಗೆದ್ದಿತ್ತು. ಹೀಗಾಗಿ ಇಸ್ರೇಲ್ನಲ್ಲಿ ಕೋವಿಡ್ ನಿರ್ಬಂಧಗಳನ್ನು ಸಂಪೂರ್ಣವಾಗಿ ಹಿಂಪಡೆಯಲಾಗಿತ್ತು. ಆದರೆ, ಡೆಲ್ಟಾಭೀತಿಯಿಂದಾಗಿ ಇಸ್ರೇಲ್ನಲ್ಲಿ ಕೋವಿಡ್ ನಿರ್ಬಂಧಗಳನ್ನು ಪುನಃ ಜಾರಿ ಮಾಡಲಾಗಿದೆ. ಒಳಾಂಗಣದಲ್ಲಿ ಮಾಸ್ಕ್ ಧರಿಸುವುದನ್ನು ಮತ್ತೆ ಕಡ್ಡಾಯ ಮಾಡಲಾಗಿದೆ. ಇದೇ ವೇಳೆ ಫಿಜಿ ದೇಶದಲ್ಲಿ ಡೆಲ್ಟಾದಿಂದಾಗಿ ಮೂರನೇ ಅಲೆ ಏಳುವ ಅಪಾಯ ಎದುರಾಗಿದೆ.