Asianet Suvarna News Asianet Suvarna News

ಎಚ್ಡಿಕೆ ಸುನಾಮಿಗೆ ಕಾಂಗ್ರೆಸ್‌, ಬಿಜೆಪಿಗೆ ನಡುಕ : ಮಂತ್ರಿಗಿರಿ ಭರವಸೆಯೂ ಈಗಲೇ

ರಾಜ್ಯದಲ್ಲಿ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಯವರ ಪರವಾದ ಸುನಾಮಿ ಎದ್ದಿದೆ. ಹಾಗಾಗಿ ಕಾಂಗ್ರೆಸ್‌ ಹಾಗೂ ಬಿಜೆಪಿಗೆ ನಡುಕ ಆರಂಭವಾಗಿದೆ ಎಂದು ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಹೇಳಿದರು.

Big Response For HDK Panchratna yatre snr
Author
First Published Dec 29, 2022, 4:56 AM IST

ತುರುವೇಕೆರೆ: ರಾಜ್ಯದಲ್ಲಿ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಯವರ ಪರವಾದ ಸುನಾಮಿ ಎದ್ದಿದೆ. ಹಾಗಾಗಿ ಕಾಂಗ್ರೆಸ್‌ ಹಾಗೂ ಬಿಜೆಪಿಗೆ ನಡುಕ ಆರಂಭವಾಗಿದೆ ಎಂದು ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಹೇಳಿದರು.

ಮಂಗಳವಾರ ಪಟ್ಟಣಕ್ಕೆ ಆಗಮಿಸಿದ ಪಂಚರತ್ನ ರಥಯಾತ್ರೆಯ ಕಾರ್ಯಕ್ರಮದ ನಿಮ್ಮಿತ್ತ ಪಟ್ಟಣದ ಉಡುಸಲಮ್ಮ ದೇವಾಲಯದ ಮುಂಭಾಗ ಆಯೋಜಿಸಿದ್ದ ಜೆಡಿಎಸ್‌ (JDS)  ಕಾರ್ಯಕರ್ತರ ಬೃಹತ್‌ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ರಾಜ್ಯದಲ್ಲಿ ರೈತರ (Farmers)  ಪರ ಇರುವ ಏಕೈಕ ಪಕ್ಷವೆಂದರೆ ಎಚ್‌.ಡಿ.ದೇವೇಗೌಡರ ಆಶೀರ್ವಾದವಿರುವ ಜಾತ್ಯತೀತ ಜನತಾದಳ ಮಾತ್ರ. ಕುಮಾರಸ್ವಾಮಿಯವರು ಹಮ್ಮಿಕೊಂಡಿರುವ ಪಂಚರತ್ನ ರಥಯಾತ್ರೆ ರಾಜ್ಯಾದ್ಯಂತ ಮನೆ ಮಾತಾಗಿದೆ. ರಾಜ್ಯದ ಅಧಿಕಾರದ ಚುಕ್ಕಾಣಿ ಕುಮಾರಸ್ವಾಮಿಯವರ ಕೈಗೆ ದೊರೆತರೆ ಗ್ರಾಮಾಂತರ ಪ್ರದೇಶದ ಜನರ ಬದುಕು ಉತ್ತಮಗೊಳ್ಳಲಿದೆ. ಈ ಹಿಂದೆ ಆಡಳಿತ ಮಾಡಿದ ಸಂದರ್ಭದಲ್ಲಿ ರೈತರ ಸಾಲ ಮನ್ನಾ ಮಾಡುವುದಾಗಿ ಭರವಸೆ ನೀಡಿದ್ದರು. ಅದರಂತೆ ರಾಜ್ಯದ ರೈತರ ಸಾಲವನ್ನು ಮನ್ನಾ ಮಾಡಿದರು. ತುರುವೇಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 20 ಸಾವಿರ ರೈತರಿಗೆ ಸಾಲ ಮನ್ನಾ ಯೋಜನೆಯ ಅನುಕೂಲವಾಗಿದೆ. ಈಗ ಸ್ತ್ರೀಶಕ್ತಿ ಸಂಘಗಳ ಸದಸ್ಯರ ಸಾಲ ಮನ್ನಾ ಮಾಡುವ ಭರವಸೆ ನೀಡಿದ್ದಾರೆ. ಅದನ್ನೂ ಅವರು ಈಡೇರಿಸುವರು ಎಂದು ಎಂ.ಟಿ.ಕೃಷ್ಣಪ್ಪ ಹೇಳಿದರು.

ಈ ಸಂದರ್ಭದಲ್ಲಿ ಮುಸ್ಲಿಂ ಬಾಂಧವರು ಎಚ್‌.ಡಿ.ಕುಮಾರಸ್ವಾಮಿಯವರಿಗೆ ಬೃಹತ್‌ ಹಾರ ಹಾಕಿ ತಮ್ಮ ಅಭಿಮಾನ ಮೆರೆದರು.

ವಿಧಾನ ಪರಿಷತ್‌ ಸದಸ್ಯ ಭೋಜೇಗೌಡ, ಮಾಜಿ ಸದಸ್ಯ ಚೌಡರೆಡ್ಡಿ, ಜಿಲ್ಲಾ ಜೆಡಿಎಸ್‌ ಅಧ್ಯಕ್ಷ ಆಂಜನಪ್ಪ, ತಾಲೂಕು ಅಧ್ಯಕ್ಷ ಸ್ವಾಮಿ, ಗುಬ್ಬಿ ಜೆಡಿಎಸ್‌ ಅಭ್ಯರ್ಥಿ ನಾಗರಾಜು, ಅಂದಾನಪ್ಪ, ಮುಖಂಡರಾದ ರಾಜ್ಯ ಯುವ ಜೆಡಿಎಸ್‌ ಪ್ರಧಾನ ಕಾರ್ಯದರ್ಶಿ ದೊಡ್ಡಾಘಟ್ಟಚಂದ್ರೇಶ್‌, ತಾಲೂಕು ಯುವ ಜನತಾದಳ ಅಧ್ಯಕ್ಷ ಬಾಣಸಂದ್ರ ರಮೇಶ್‌, ವಕ್ತಾರ ವೆಂಕಟಾಪುರ ಯೋಗೀಶ್‌, ಶಂಕರೇಗೌಡ, ಸಿ.ಎಸ್‌.ಪುರ ಮೂರ್ತಿ, ಸಿಎಸ್‌ ಪುರ ನಂಜೇಗೌಡ ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು. 

, ಸುರೇಶಬಾಬುನ ಮಂತ್ರಿ ಮಾಡ್ತೀನಿ ಎಂದ ಕುಮಾರಸ್ವಾಮಿ

 ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದ ಪಂಚಯಾತ್ರೆಗೆ ಚಿಕ್ಕನಾಯಕನಹಳ್ಳಿಯಲ್ಲೂ ಕೂಡ ಅಭೂತಪೂರ್ವ ಸ್ಪಂದನೆ ಸಿಕ್ಕಿದೆ. ತುರುವೇಕೆರೆಯಲ್ಲಿ ಯಶಸ್ವಿ ಯಾತ್ರೆ ಮುಗಿಸಿದ ಬಳಿಕ ಚಿಕ್ಕನಾಯಕನಹಳ್ಳಿಗೆ ಪ್ರವೇಶಿಸುತ್ತಿದ್ದಂತೆ ಕೊಬ್ಬರಿ ಹಾರ ಹಾಕಿ ಆತ್ಮೀಯವಾಗಿ ಬರ ಮಾಡಿಕೊಳ್ಳಲಾಯಿತು. ಬೆಳಿಗ್ಗೆಯಿಂದ ಆರಂಭವಾದ ರಾತ್ರಿ ಮಧ್ಯರಾತ್ರಿಯವರೆಗೂ ಮುಂದುವರೆದಿದ್ದು ವಿಶೇಷ.

ಮಳೆಯಿಂದಾಗಿ ತುಂಬಿರುವ ಬೋರನಕಣಿವೆ ಜಲಾಶಯಕ್ಕೆ ಭಾರಿ ಜನಸ್ತೋಮದೊಂದಿಗೆ ಕುಮಾರಸ್ವಾಮಿ ಅವರು ಬಾಗಿನ ಅರ್ಪಿಸಿದರು. 22 ವರ್ಷಗಳ ಬಳಿಕ ಈ ಕೆರೆ ತುಂಬಿದ್ದು ವಿಶೇಷ. ಇದಲ್ಲದೆ ತೋರಿ ಕಣಿವೆಗೂ ಕೂಡ ಕುಮಾರಸ್ವಾಮಿ ಬಾಗಿನ ಅರ್ಪಿಸಿದರು.

ಪಂಚರತ್ನ ಯಾತ್ರೆ ಹೊಯ್ಸಳಕಟ್ಟೆಗೆ ಬರುತ್ತಿದ್ದಂತೆ ಬೃಹತ್‌ ಕೊಬ್ಬರಿ ಹಾರ ಹಾಕಿ ಸ್ವಾಗತಿಸಲಾಯಿತು. ಅಲ್ಲಿಂದ ಯಾತ್ರೆ ಸಾಗುವ ಮಾರ್ಗಮಧ್ಯೆ ಕಾಡುಗೊಲ್ಲ ಸಮುದಾಯದವರು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಗೆ ಕುರಿಯನ್ನು ನೀಡಿ ತಮ್ಮ ಪ್ರೀತಿ ಮೆರೆದರು.

ಕಾಡುಗೊಲ್ಲರು ನೀಡಿದ ಕುರಿಯನ್ನು ಸ್ವೀಕರಿಸಿ ಮಾತನಾಡಿದ ಕುಮಾರಸ್ವಾಮಿ ಅವರು ಕಾಡುಗೊಲ್ಲ ಸಮುದಾಯದ ಎಸ್ಟಿಮೀಸಲಾತಿ ಒತ್ತಾಯ ಇದ್ದು. ಇದಕ್ಕೆ ನಾನು ಕೂಡ ಬೆಂಬಲ ನೀಡಿ ನಿಮ್ಮ ಜೊತೆ ಇದ್ದು ಹೋರಾಟ ಮಾಡುವುದಾಗಿ ಅಭಯ ನೀಡಿದರು.

ನಿಮ್ಮ ಸಮುದಾಯವನ್ನು ಎಸ್ಟಿಮೀಸಲಾತಿಗೆ ಸೇರಿಸುವುದು ನಮ್ಮ ಜವಾಬ್ದಾರಿ ಎಂದ ಅವರು ಕಾಡುಗೊಲ್ಲ ಸಮಾಜ ವಾಸಿಸುವ ತಾಂಡಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಣೆ ಮಾಡುವುದಾಗಿ ತಿಳಿಸಿದರು.

ಮಂತ್ರಿ ಮಾಡುವೆ:

ಹೊಯ್ಸಳಕಟ್ಟೆಯಲ್ಲಿ ಬೃಹತ್‌ ಜನಸ್ತೋಮವನ್ನು ಉದ್ದೇಶಿಸಿ ಮಾತನಾಡಿದ ಕುಮಾರಸ್ವಾಮಿ ಅವರು ಈ ಬಾರಿ ಚುನಾವಣೆಯಲ್ಲಿ ಸುರೇಶಬಾಬು ಅವರನ್ನು ಗೆಲ್ಲಿಸಿ ಅವರನ್ನು ತಪ್ಪದೇ ಮಂತ್ರಿ ಮಾಡುತ್ತೇನೆಂದು ಭರವಸೆ ನೀಡಿದಾಗ ಸೇರಿದ್ದ ಜನಸ್ತೋಮ ಜೋರು ತಪ್ಪಾಳೆ ತಟ್ಟಿಸ್ವಾಗತಿಸಿದರು. ಈ ವೇಳೆ ಸುರೇಶಬಾಬು ಭಾವುಕರಾದರು.

ರಾಮಮಂದಿರ ನಾನೇ ಕಟ್ಟುತ್ತೇನೆ:

ಪಂಚರತ್ನ ಯಾತ್ರೆ ಮಧ್ಯೆ ರಾಮನಗರ ಜಿಲ್ಲೆಯಲ್ಲಿರುವ ರಾಮದೇವರ ಬೆಟ್ಟದಲ್ಲಿ ರಾಮಮಂದಿರ ನಿರ್ಮಾಣ ಮಾಡಲು ಬಿಜೆಪಿ ಸರ್ಕಾರ ಹೊರಟಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು ಮೂರೂವರೆ ವರ್ಷದಿಂದ ಇವರದ್ದೇ ಸರ್ಕಾರ ಇದೆ. ಇಲ್ಲಿಯವರೆಗೂ ಮಾಡದವರು ಈಗ ಮಾಡುತ್ತಾರೆ ಎಂದು ಟೀಕಿಸಿದರು.

ಇನ್ನು ಮೂರು ತಿಂಗಳಿಗೆ ಚುನಾವಣೆ ಬರುತ್ತಿದೆ. ಈಗ ಇವರನ್ನೇ ಜನ ಹೊರಗೆ ಇಡುವ ಪ್ರಯತ್ನ ಮಾಡುತ್ತಾರೆ ಎಂದರು. ಉತ್ತರ ಪ್ರದೇಶದ ಮುಖ್ಯಮಂತ್ರಿಯನ್ನು ಕರೆ ತಂದು ಇಲ್ಲಿ ¶ೌಂಡೇಷನ್‌ ಹಾಕುವ ಅಗತ್ಯವಿಲ್ಲ. ನಮ್ಮ ಸುತ್ತೂರು ಹಾಗೂ ಆದಿಚುಂಚನಗಿರಿ ಶ್ರೀಗಳನ್ನು ಕರೆ ತಂದು ನಾನೇ ಮಾಡುತ್ತೇನೆ. ಇವರೇನು ನನ್ನ ಕ್ಷೇತ್ರಕ್ಕೆ ಬಂದು ಮಾಡುವುದು ಬೇಕಾಗಿಲ್ಲ. ಒಕ್ಕಲಿಗ ಸ್ವಾಮೀಜಿಗಳನ್ನು ಕರೆತಂದು ನಾನೆ ಮಂದಿರ ನಿರ್ಮಾಣ ಮಾಡಿಸುತ್ತೇನೆ ಎಂದರು.

ನನ್ನ ಕ್ಷೇತ್ರದಲ್ಲಿ ಇವರೇನು ಬಂದು ಕಟ್ಟುವುದು ಬೇಕಾಗಿಲ್ಲ ನನಗೆ ದೇವರು ಇನ್ನು ಶಕ್ತಿ ಕೊಟ್ಟಿದ್ದಾನೆ. ಬೇರೆ ರಾಜ್ಯದಿಂದ ಯಾರನ್ನೊ ಕರೆತಂದು ಚುನಾವಣೆ ಸಮಯದಲ್ಲಿ ಇದೆಲ್ಲ ಮಾಡೋದು ಬೇಡ. ಇವರ ಆಟ ಮುಗಿತಾ ಬಂತು, ಇದು ಇವರ ಕೊನೆಯ ಅಧ್ಯಾಯ. ರಾಮನಗರದಲ್ಲಿ ಬಿಜೆಪಿಯ ಆಟ ನಡೆಯುವುದಿಲ್ಲ. ಇಲ್ಲಿ ನಮ್ಮ ಜನರ ಸಂಬಂಧ ತಾಯಿ ಮಕ್ಕಳ ಸಂಬಂಧದ ರೀತಿ ಇದೆ ಎಂದರು.

Follow Us:
Download App:
  • android
  • ios