ತುಮಕೂರು [ಜು.28]:  ಕಾಂಗ್ರೆಸ್‌ ಮಾಜಿ ಶಾಸಕ ಕೆ.ಎನ್‌.ರಾಜಣ್ಣ ಅವರಿಗೆ ಬಿಗ್‌ ರಿಲೀಫ್‌ ಸಿಕ್ಕಿದ್ದು, ತುಮಕೂರು ಡಿಸಿಸಿ ಬ್ಯಾಂಕ್‌ ಅನ್ನು ಸೂಪರ್‌ ಸೀಡ್‌ ಮಾಡಿರುವ ನಿರ್ಧಾರಕ್ಕೆ ಕೋರ್ಟ್‌ ತಡೆಯಾಜ್ಞೆ ನೀಡಿದೆ. ಇದರೊಂದಿಗೆ ಪ್ರಕರಣ ಕೋರ್ಟ್‌ನಲ್ಲಿ ಇತ್ಯರ್ಥ ಆಗುವವರೆಗೂ ರಾಜಣ್ಣ ಡಿಸಿಸಿ ಬ್ಯಾಂಕ್‌ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ. ಡಿಸಿಸಿ ಬ್ಯಾಂಕ್‌ ಸೂಪರ್‌ ಸೀಡ್‌ ಮಾಡಿ ಸಹಕಾರ ಸಂಘಗಳ ಉಪ ನಿಬಂಧಕರು ಜು.19ರಂದು ಆದೇಶ ಹೊರಡಿಸಿದ್ದರು. ಕಾನೂನು ಹೋರಾಟ ಆರಂಭಿಸಿದ ಕೆ.ಎನ್‌.ರಾಜಣ್ಣ ಸಹಕಾರ ಸಂಘಗಳ ಉಪನಿಬಂಧಕರ ನ್ಯಾಯಾಲಯದ ಮೆಟ್ಟಿಲೇರಿದ್ದರು.

ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಾಲಯ, ಸೂಪರ್‌ ಸೀಡ್‌ ಆದೇಶಕ್ಕೆ ತಡೆಯಾಜ್ಞೆ ನೀಡಿದೆ. ಈ ಹಿನ್ನೆಲೆಯಲ್ಲಿ ಕೋರ್ಟ್‌ನಲ್ಲಿ ಪ್ರಕರಣ ಇತ್ಯರ್ಥ ಆಗುವವರೆಗೂ ರಾಜಣ್ಣ ಮೊದಲಿನಂತೆ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ. ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಸೋಲಿಗೆ ಪ್ರತಿಕಾರವಾಗಿ ಡಿಸಿಸಿ ಬ್ಯಾಂಕ್‌ ಸೂಪರ್‌ ಸೀಡ್‌ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಡಿಸಿಸಿ ಬ್ಯಾಂಕ್‌ ಸೂಪರ್‌ಸೀಡ್‌ಗೆ ತಡೆಯಾಜ್ಞೆ ಹೊರಬಂದ ಹಿನ್ನೆಲೆಯಲ್ಲಿ ಕೆ.ಎನ್‌.ರಾಜಣ್ಣ ಅಭಿಮಾನಿಗಳು ತುಮಕೂರಿನ ಟೌನ್‌ಹಾಲ್‌ ಮುಂಭಾಗ ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.

ಸಣ್ಣಪುಟ್ಟಲೋಪವಾಗಿದ್ದರೆ ಸರಿಪಡಿಸುವೆ:

ಸೂಪರ್‌ ಸೀಡ್‌ಗೆ ನ್ಯಾಯಾಲಯ ತಡೆಯಾಜ್ಞೆ ನೀಡಿದ ಹಿನ್ನೆಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೆ.ಎನ್‌. ರಾಜಣ್ಣ ಅವರು 2003ರಲ್ಲಿ ಇದೇ ರೀತಿ ಸೂಪರ್‌ ಸೀಡ್‌ ಆಗಿತ್ತು. ಆ ಸಂದರ್ಭದಲ್ಲೂ ಕೂಡ ನಾನು ಅಧ್ಯಕ್ಷನಾಗಿಯೇ ಇದ್ದೆ. ಇದೀಗ ಜಿಲ್ಲಾಧಿಕಾರಿಗಳು ನನಗೆ ವಾಪಸ್‌ ಚಾಜ್‌ರ್‍ ನೀಡಿದ್ದಾರೆ ಎಂದರು.

ಮೊದಲು ಹೇಗಿತ್ತೋ ಹಾಗಯೇ ಇಂದು ಮುಂದುವರಿಯುತ್ತದೆ. ಗ್ರಾಹಕರಿಗೆ ಅನುಕೂಲ ಮಾಡುವ ಸಲುವಾಗಿ ಸಣ್ಣಪುಟ್ಟಲೋಪ ಆಗಿರುತ್ತದೆ. ಲೋಪ ಇಲ್ಲದಂತೇ 21 ಜಿಲ್ಲೆಗಳ ಬ್ಯಾಂಕ್‌ ನಡೆಯುವುದಿಲ್ಲ. ಹಣಕಾಸಿನ ಲೋಪ ಆಗಿದ್ದರೆ ಅದನ್ನು ಪ್ರಶ್ನೆ ಮಾಡಿದರೇ ಒಪ್ಪಿಕೊಳ್ಳುತ್ತೇನೆ. ಆದರೆ ಹಾಗೆ ಆಗಿಲ್ಲ ಎಂದರು.

ಆಡಳಿತದಲ್ಲಿ ಹಿಂದೆ ಮುಂದೆ ವ್ಯತ್ಯಾಸ ಆಗಿರಬಹುದು. ಪಕ್ಷಾತೀತವಾಗಿ ಹಲವು ನಾಯಕರು ಬ್ಯಾಂಕ್‌ ಲೋನ್‌ ಪಡೆದು ಬಡ್ಡಿ ಕಟ್ಟಿದ್ದಾರೆ. ಮಾತನಾಡುವ ಯಾರದ್ದೂ ಇಲ್ಲಿ ಬಂಡವಾಳ ಇಲ್ಲ ಎಂದು ವಿರೋಧಿಗಳಿಗೆ ತಿರುಗೇಟು ನೀಡಿದರು. ಬಡವರು ಹಣ ಇಟ್ಟಿದ್ದಾರೆ, ಸರ್ಕಾರದ್ದೂ ಇಲ್ಲಿ ಯಾವುದೇ ಷೇರ್‌, ಡಿಪಾಸಿಟ್‌ ಇಲ್ಲ. ಜನ ನನ್ನನ್ನ ನೋಡಿ ಒಂದು ಸಾವಿರ ಕೋಟಿಯಷ್ಟುಶೇರ್‌ ಇಟ್ಟಿದ್ದಾರೆ ಎಂದು ತಿಳಿಸಿದರು.