Big 3 Impact: 12 ಸಾವಿರ ನೇಕಾರರಿಗೆ 13 ಕೋಟಿ ಬಿಡುಗಡೆ!
- ಏಷ್ಯಾನೆಟ್ ಸುವರ್ಣ ನ್ಯೂಸ್ನ ಬಿಗ್3 ಕಾರ್ಯಕ್ರಮ ರಾಜ್ಯದ 12 ಸಾವಿರ ನೇಕಾರರ ಬದುಕಿಗೆ ಬೆಳಕು ನೀಡಿದೆ.
- ನಾಲ್ಕು ವರ್ಷಗಳಿಂದ ವಿತರಣೆ ಮಾಡದೇ ಉಳಿಸಿಕೊಂಡಿದ್ದ ಪಿಎಫ್ ಮಾದರಿಯ ಮಿತವ್ಯಯ ಭತ್ಯೆ ಬಿಡುಗಡೆ.
- ನೇಕಾರರು ಸಂತಸ ವ್ಯಕ್ತಪಡಿಸಿದ್ದಾರೆ. ಬಿಗ್ 3 ಕಾರ್ಯಕ್ರಮದ ರಾಜ್ಯಾದ್ಯಂತ ಮೆಚ್ಚುಗೆ.
ವರದಿ : ಪ್ರವೀಣ್ ಸಲಗನಹಳ್ಳಿ ಬೆಂಗಳೂರು (ಆ.22) : ಏಷ್ಯಾನೆಟ್ ಸುವರ್ಣ ನ್ಯೂಸ್ನ ಬಿಗ್3 ಕಾರ್ಯಕ್ರಮ ರಾಜ್ಯದ 12 ಸಾವಿರ ನೇಕಾರರ ಬದುಕಿಗೆ ಬೆಳಕು ನೀಡಿದೆ. ನಾಲ್ಕು ವರ್ಷಗಳಿಂದ ವಿತರಣೆ ಮಾಡದೇ ಉಳಿಸಿಕೊಂಡಿದ್ದ ಪಿಎಫ್ ಮಾದರಿಯ ಮಿತವ್ಯಯ ಭತ್ಯೆ (ತ್ರಿಫ್ಟ್ ಫಂಡ್)ಯನ್ನ ಬಿಡುಗಡೆ ಮಾಡಿ ಜವಳಿ ಇಲಾಖೆ ಆದೇಶ ಹೊರಡಿಸಿದೆ.
BIG 3: ನೇಕಾರರ ಸಮಸ್ಯೆಗೆ ಶೀಘ್ರದಲ್ಲೇ ಪರಿಹಾರ: ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ಭರವಸೆ
ಗದಗ(Gadag) ಜಿಲ್ಲೆಯ 262 ಕೈ ಮಗ್ಗ ನೇಕಾರರಿಗೆ ಬರಬೇಕಾಗಿದ್ದ 40 ಲಕ್ಷ ರೂಪಾಯಿ ಮಿತ ವ್ಯಯ ಭತ್ಯೆಯ ಕುರಿತು ಆಗಸ್ಟ್ 9ರಂದು ಬಿಗ್ ತ್ರೀ(Big-3) ವಿಸ್ತೃತ ವರದಿ ಪ್ರಸಾರ ಮಾಡಿತ್ತು. ವರದಿ ಪ್ರಸಾರದ ವೇಳೆ ಜವಳಿ ಸಚಿವ ಶಂಕರಪಾಟೀಲ ಬ. ಮುನೇನಕೊಪ್ಪ(Shankar Patil Munenakoppa) ಅವರನ್ನು ನೇರಪ್ರಸಾರದಲ್ಲಿ ಮಾತನಾಡಿಸಿ ಪ್ರಶ್ನೆ ಹಾಕಿತ್ತು. ಆ ಸಂದರ್ಭದಲ್ಲಿ ಮುಂದಿನ ಎರಡು ತಿಂಗಳಲ್ಲಿ ಅನುದಾನ ಬಿಡುಗಡೆಯ ಭರವಸೆ ನೀಡಿದ್ದರು. ಆದರೆ, ನೀಡಿದ ಗಡುವಿಗಿಂತ ಮೊದಲೇ ಅಂದರೆ ಕೇವಲ ಎಂಟು ದಿನದಲ್ಲೇ ಬಾಕಿ ಇದ್ದ 13 ಕೋಟಿ ರೂಪಾಯಿ ಬಿಡುಗಡೆ ಮಾಡಿಸಿದ್ದಾರೆ ಜವಳಿ ಸಚಿವ ಶಂಕರಪಾಟೀಲ್ ಮುನೇನಕೊಪ್ಪ. ಇದು ರಾಜ್ಯದ 12 ಸಾವಿರ ನೇಕಾರರು ಫಲಾನುಭವಿಗಳಾಗಿದ್ದಾರೆ.
ಬಿಗ್ 3 ಕಾರ್ಯಕ್ರಮ ಗಮನಿಸಿದ್ದ ಮಾಜಿ ಸಚಿವ ಎಚ್.ಕೆ. ಪಾಟೀಲ(H.K.Patil) ಅವರು ಫಂಡ್ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಪತ್ರ ಬರೆದು ಆಗ್ರಹಿಸಿದ್ದರು. ಗದಗ ಜಿಲ್ಲೆ ಸೇರಿದಂತೆ ರಾಜ್ಯದ 12 ಸಾವಿರ ನೇಕಾರರ ಸಮಸ್ಯಗೆ ಮುಕ್ತಿ ಸಿಕ್ಕಂತಾಗಿದೆ. ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದರು ಬಗೆಹರಿಯದ ಸಮಸ್ಯೆ ಏಷ್ಯಾನೆಟ್ ಸುವರ್ಣ ನ್ಯೂಸ್ನ ಬಿಗ್-3 ಮೂಲಕ ಬಗೆಹರಿದಿದೆ.
ಏನಿದು ನೇಕಾರರ ಮಿತವ್ಯಯ ಭತ್ಯೆ ಹಣ..?
ನೇಕಾರರಿಂದ ಪಿಎಫ್ ಮಾದರಿಯಲ್ಲಿ ಸರ್ಕಾರ ತ್ರಿಫ್ಟ್ ಫಂಡ್(thrift fund ) ಮಿತವ್ಯಯ ನಿಧಿ ಸಂಗ್ರಹಿಸಿತ್ತು. ಸಂಗ್ರಹವಾದ 8% ನಿಧಿಗೆ ರಾಜ್ಯ 4%, ಕೇಂದ್ರ ಸರ್ಕಾರದಿಂದ ಸಂಗ್ರಹವಾದ 4% ಹಣವನ್ನ ಸೇರಿಸಲಾಗುತ್ತೆ. 15 ವರ್ಷದ ನಂತರ ಸಂಗ್ರಹವಾದ ಹಣದ ಜೊತೆಗೆ ಸರ್ಕಾರದ ಹಣ ಸೇರಿಸಿ ಬಡ್ಡಿ ಸಮೇತ ನೇಕಾರರರಿಗೆ ತಲುಪಿಸಲಾಗುತ್ತೆ. ನೇಕಾರರಿಗೆ ಭವಿಷ್ಯದ ಅನುಕೂಲಕ್ಕಾಗಿ ಈ ಹಣ ಯೂಸ್ ಆಗ್ಲಿ ಅನ್ನೋ ಉದ್ದೇಶ ಇದಾಗಿತ್ತು. 1989 ರಿಂದ ತ್ರಿಫ್ಟ್ ಫಂಡ ಯೋಜನೆ ಜಾರಿಯಲ್ಲಿದೆ.
ಗದಗ(Gadag)ಜಿಲ್ಲೆ, ಬೆಟಗೇರಿ(Betageri) ಬಳಿಯ ನರಸಾಪುರ(Narsapur) ಸೇರಿದಂತೆ ಜಿಲ್ಲೆಯಲ್ಲಿರೋ 262 ನೇಕಾರರಿಂದ ಪಿಎಫ್ ಮಾದರಿಯಲ್ಲಿ ಸರ್ಕಾರ ತ್ರಿಫ್ಟ್ ಫಂಡ್ ಮಿತವ್ಯಯ ನಿಧಿ ಸಂಗ್ರಹಿಸಿತ್ತು. ಆಗಿನಿಂದ ಕೈ ಮಗ್ಗ ಅಭಿವೃದ್ಧಿ ನಿಗಮ, ನೇಕಾರರಿಂದ ಹಣ ಸಂಗ್ರಹಿಸಿ ಸರ್ಕಾರಕ್ಕೆ ಜಮೆ ಮಾಡಿದೆ. ಈವರೆಗೆ ಗದಗ ಜಿಲ್ಲೆಯಿಂದ ಸುಮಾರು 43 ಲಕ್ಷ ರೂಪಾಯಿ ಹಣ ಜಮೆಯಾಗಿತ್ತು. ನೇಕಾರರಿಗೆ ಹಣ ನೀಡಬೇಕಿತ್ತು ಆದರೆ ಅಧಿಕಾರಿ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ನೇಕಾರರಿಗೆ ಸೇರಬೇಕಿದ್ದ ಹಣ ಮಾತ್ರ ಅವರ ಕೈ ಸೇರಿರಲಿಲ್ಲ. ದುಡಿದ ಹಣವನ್ನ ಸರ್ಕಾರ ಬಿಡುಗಡೆ ಮಾಡಿರಲಿಲ್ಲ. ಇದರಿಂದಾಗಿ ಆರೋಗ್ಯ ಸಮಸ್ಯೆ, ದಿನ ನಿತ್ಯದ ಖರ್ಚು ವೆಚ್ಚ ನಿಭಾಯಿಸಲಾಗದೇ ನೇಕಾರರೆಲ್ಲ ಕಂಗಾಲಾಗಿದ್ದರು.
ನೇಕಾರಿಕೆ ವೃತ್ತಿ ಬಿಟ್ಟು ಹೋಟೆಲ್ ಸಫಾಯಿ ಕೆಲಸ, ಸೇರಿದಂತೆ ಇನ್ನಿತರ ಕೆಲಸದ ಕಡೆ ಮುಖ ಮಾಡಿದ್ದರು. ತಮಗೆ ಬರಬೇಕಿದ್ದ ಹಣಕ್ಕಾಗಿ ಸಂಬಂಧಿಸಿದ ಕಚೇರಿಗೆ ತಿರುಗಿ ತಿರುಗಿ ಹೈರಾಣಾಗಿದ್ದರು. ಈ ಬಗ್ಗೆ ಸಂಭಂದ ಪಟ್ಟ ಅಧಿಕಾರಿಗಳನ್ನ ವಿಚಾರಿಸಿದಾಗ ನೋಡೋಣ, ಮಾಡೋಣ, ಟೆಕ್ನಿಕಲ್ ಸಮಸ್ಯೆ ಇದೆ ಬಗೆಹರಿಸುತ್ತೀವಿ ಅನ್ನೋ ಉಡಾಫೆ ಉತ್ತರ ನೀಡುತ್ತ ಬಂದಿದ್ದರು. 2019 ರಿಂದಲೂ ಸಮಾಧಾನ ಉತ್ತರ ನೀಡುತ್ತಾ ನೇಕಾರರ ಸಮಸ್ಯೆ ಪರಿಹರಿಸದೇ ಜಾರಿಕೊಳ್ಳುತ್ತಿದ್ದರು.
15 ವರ್ಷದಿಂದ ಆಗದ್ದು ಒಂದೇ ವಾರದಲ್ಲಿ 13 ಕೋಟಿ ಹಣ ಬಿಡುಗಡೆ: ವರದಿ ಪ್ರಸಾರ ಆದ ಮರುದಿನವೇ ಸಚಿವರು ಅಧಿಕಾರಿಗಳಿಗೆ ಚುರುಕು ಮುಟ್ಟಿಸಿದ್ದರು. ಇದರ ಪರಿಣಾಮ ಆಗಸ್ಟ್ 10ನೇ ತಾರೀಖು ಸರ್ಕಾರದ ಖಜಾನೆ ಇಲಾಖೆಯಿಂದ ಅಧಿಕೃತ ಪತ್ರ ಬಂತು. ರಾಜ್ಯದ ಕೈ ಮಗ್ಗ ನೇಕಾರರ ತ್ರಿಫ್ಟ್ ಫಂಡ್ ಹಣ 13ಕೋಟಿ ರೂಪಾಯಿ ವರ್ಗಾವಣೆಯಾಗಿದೆ ಅಂತಾ ಉಲ್ಲೇಖಿಸಿ ಪತ್ರವನ್ನ ಹೊರಡಿಸಲಾಗಿತ್ತು.
BIG 3: ದುಡಿದ ಹಣ ಕೊಡದ ಸರ್ಕಾರ: ರೋಸಿ ಹೋದ ನೇಕಾರರು
ಸರ್ಕಾರದಿಂದ ತಮ್ಮ ಹಣ ಬಿಡುಗಡೆ ಆಗಿರೋ ಸುದ್ದಿ ತಿಳಿದು ಗದಗ ತಾಲೂಕಿನ ನರಸಾಪುರ ನೇಕಾರ ಕಾಲೋನಿ ಜನ ಸೇರಿದಂತೆ ಇಡೀ ಕರುನಾಡಿನ ನೇಕಾರರರು ಖುಷಿ ಪಟ್ಟಿದ್ದರು. ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದರು ಬಗೆಹರಿಯದ ಸಮಸ್ಯೆಯನ್ನ ಏಷ್ಯಾನೆಟ್ ಸುವರ್ಣ ನ್ಯೂಸ್ನ ಬಿಗ್ 3 ಬಗೆಹರಿಸಿದೆ. ಅಂತಾ ಸಂತಸ ಪಟ್ಟಿದ್ದಾರೆ. ಬಿಗ್ 3 ಗೆ ಅಭಿನಂದನೆ ಅಂತಾ ಬ್ಯಾನರ್ ಕಟ್ಟಿ, ಸಿಹಿ ಹಂಚಿ ಖುಷಿ ಪಟ್ಟಿದ್ದಾರೆ.