ಬೆಂಗಳೂರು(ಜು.28): ಕೊರೋನಾ ಸೋಂಕಿತರ ಆರೈಕೆಗಾಗಿ ಬೆಂಗಳೂರು ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ ನಿರ್ಮಿಸಲಾದ ಕೋವಿಡ್‌ ಆರೈಕೆ ಕೇಂದ್ರವನ್ನು ಉಪ ಮುಖ್ಯಮಂತ್ರಿ ಡಾ. ಸಿ.ಎನ್‌. ಅಶ್ವತ್ಥನಾರಾಯಣ ಹಾಗೂ ಕಂದಾಯ ಸಚಿವ ಆರ್‌. ಅಶೋಕ ಸೋಮವಾರ ಉದ್ಘಾಟಿಸಿದರು.

ಆರೈಕೆ ಕೇಂದ್ರದಲ್ಲಿ ಒಟ್ಟು 6,500 ಹಾಸಿಗೆ ವ್ಯವಸ್ಥೆ ಮಾಡಲಾಗಿದೆ. ಅದರಲ್ಲಿ 5 ಸಾವಿರ ಹಾಸಿಗೆಗಳನ್ನು ಕೊರೋನಾ ಸೋಂಕಿತರ ಆರೈಕೆಗೆ ಉಳಿದ 1,500 ಹಾಸಿಗೆಯನ್ನು ವೈದ್ಯಕೀಯ ಮತ್ತು ಇತರೆ ಸಿಬ್ಬಂದಿ ಮೀಸಲಿಡಲಾಗಿದೆ.

ಮೊದಲ ಹಂತವಾಗಿ ಆರೈಕೆ ಕೇಂದ್ರದ ಸಭಾಂಗಣ 5ರಲ್ಲಿ ವ್ಯವಸ್ಥೆ ಮಾಡಲಾಗಿರುವ 24 ವಾರ್ಡ್‌ನಲ್ಲಿ 1,536 ಹಾಸಿಗೆಗಳನ್ನು ಸೋಂಕಿತರ ಆರೈಕೆಗೆ ಮುಕ್ತಗೊಳಿಸಲಾಯಿತು.

ಏನೇನು ಸೌಲಭ್ಯ?:

ಆರೈಕೆ ಕೇಂದ್ರದಲ್ಲಿ ಊಟದ ಕೊಠಡಿಯಲ್ಲಿ ಒಂದು ಬಾರಿಗೆ 350 ಮಂದಿ ಆಹಾರ ಸೇವಿಸಲು ವ್ಯವಸ್ಥೆ ಮಾಡಲಾಗಿದೆ. ಮನರಂಜನಾ ಕೊಠಡಿಯಲ್ಲಿ ಟಿವಿ, ಕುಳಿತುಕೊಳ್ಳುವುದಕ್ಕೆ ಆಸನದ ವ್ಯವಸ್ಥೆ, ಸೋಫಾ, ಚೇರ್‌ ಹಾಗೂ ಫ್ಯಾನ್‌ ವ್ಯವಸ್ಥೆ ಕಲ್ಪಿಸಲಾಗಿದೆ. ಪುರುಷ ಹಾಗೂ ಮಹಿಳೆಯರಿಗೆ ಪ್ರತ್ಯೇಕ ಶೌಚಾಲಗಳ ವ್ಯವಸ್ಥೆ, ಸ್ನಾನ ಹಾಗೂ ಮೂತ್ರ ವಿಸರ್ಜನೆ, ಕೈತೊಳೆಯಲು ಪ್ರತ್ಯೇಕ ವ್ಯವಸ್ಥೆ, ಆರೈಕೆ ಕೇಂದ್ರದಲ್ಲಿ ರೋಗಿಗಳ ಸಮಸ್ಯೆ ಆಲಿಸಲು ನಿಯಂತ್ರಣ ಕೊಠಡಿ ಸಹ ಸ್ಥಾಪಿಸಲಾಗುತ್ತಿದೆ.

ಕೋವಿಡ್ ಸಂಕಷ್ಟಕ್ಕೆ ರೋಟರಿಯಿಂದ 36 ಕೋಟಿ ರುಪಾಯಿ ದೇಣಿಗೆ

ಸೋಂಕು ದೃಢಪಟ್ಟವರ ದಾಖಲು ಮಾಡಿಕೊಳ್ಳಲು ಪ್ರತ್ಯೇಕ ಕೊಠಡಿ ನಿರ್ಮಿಸಲಾಗಿದೆ. ಕೋವಿಡ್‌ ಆರೈಕೆ ಕೇಂದ್ರವನ್ನು ನಿರ್ವಹಣೆ ಮಾಡಲು ಪ್ರತ್ಯೇಕ ಸಿಬ್ಬಂದಿ ವ್ಯವಸ್ಥೆ ಮಾಡಲಾಗಿದೆ.

ಹೌಸ್‌ ಕೀಪಿಂಗ್‌, ಲ್ಯಾಂಡರಿ ವ್ಯವಸ್ಥೆಗೂ ಅಗತ್ಯ ಸಿಬ್ಬಂದಿ ನಿಯೋಜಿಸಲಾಗಿದೆ. ಸುರಕ್ಷತಾ ಕ್ರಮವಾಗಿ ಮಾರ್ಷಲ್‌, ಕೆಎಸ್‌ಆರ್‌ಪಿ, ಅಗ್ನಿಶಾಮಕ ವಾಹನಗಳನ್ನು ಇರಿಸಲಾಗಿದೆ. ವಿದ್ಯುತ್‌ ಸಮಸ್ಯೆ ಆಗದಂತೆ ಕೆಪಿಟಿಸಿಎಲ್‌ನಿಂದ ಪ್ರತ್ಯೇಕ ಲೈನ್‌ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

ಕಾಂಗ್ರೆಸ್‌ ಪ್ರತಿಭಟನೆಯಲ್ಲಿ ಭಾರಿ ಹೈಡ್ರಾಮಾ: ಸಾಮಾಜಿಕ ಅಂತರ ಮಾಯ!

ಆರೈಕೆ ಕೇಂದ್ರ ಉದ್ಘಾಟನೆ ವೇಳೆ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಸ್‌.ಆರ್‌. ವಿಶ್ವನಾಥ್‌, ಮೇಯರ್‌ ಗೌತಮ್‌ ಕುಮಾರ್‌, ಉಪ ಮೇಯರ್‌ ರಾಮ್‌ ಮೋಹನ್‌ರಾಜು, ಆಯುಕ್ತ ಮಂಜುನಾಥ್‌ ಪ್ರಸಾದ್‌, ರಾಜ್ಯ ಕೋವಿಡ್‌ ಆರೈಕೆ ಕೇಂದ್ರದ ಮುಖ್ಯಸ್ಥರಾದ ರಾಜೇಂದ್ರ ಕುಮಾರ್‌ ಕಟಾರಿಯಾ, ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಎಲ್‌.ಶ್ರೀನಿವಾಸ್‌ ಮೊದಲಾದವರು ಉಪಸ್ಥಿತರಿದ್ದರು.