Asianet Suvarna News Asianet Suvarna News

Bidar: ಕಾಡು ಪ್ರಾಣಿಗಳಿಂದ ಬೆಳೆ ರಕ್ಷಿಸಲು ರೈತರ ಡಿಫರೆಂಟ್ ಐಡಿಯಾ..!

ಕಾಡು ಪ್ರಾಣಿಗಳಿಂದ ಬೆಳೆ ರಕ್ಷಿಸಲು ರೈತರು ಡಿಫರೆಂಟ್ ಐಡಿಯಾ ಕಂಡು ಹಿಡಿದಿದ್ದಾರೆ. ಚಳಿಗಾಲದಲ್ಲಿ ರಾತ್ರಿಹೊತ್ತು ಹೊಲಗಳಿಗೆ ನುಗ್ಗುವ ಜಿಂಕೆ, ಮೊಲ, ಕಾಡು ಹಂದಿಗಳ ಉಪಟಳಕ್ಕೆ ಬೇಸತ್ತು ರೈತರು ಈ ಪ್ಲಾನ್ ಮಾಡಿದ್ದಾರೆ.

Bidar Farmers Adapt Innovative Technique To Save Crops hls
Author
Bengaluru, First Published Dec 22, 2021, 6:02 PM IST

ಬೀದರ್ (ಡಿ. 22) : ಫಸಲು ಕೊಯ್ಲಾಗುವವರೆಗೆ ರೈತರಿಗೆ ಸಂಕಷ್ಟಗಳು ಒಂದೆರಡಲ್ಲ. ಅತಿವೃಷ್ಟಿ ಅನಾವೃಷ್ಟಿಯಂತಹ ದೊಡ್ಡ ಸಮಸ್ಯೆಗಳ ಜೊತೆಗೆ ಚಿಕ್ಕಪುಟ್ಟ ತೊಂದರೆಗಳು ಸಾಕಷ್ಟು. ಇವೆಲ್ಲದರ ಮಧ್ಯೆ ವನ್ಯಪ್ರಾಣಿಗಳ ಕಾಟ ಬೇರೆ. ಕೆಲವೊಮ್ಮೆ ಬೆಳೆದ ಬೆಳೆಗಳು ಕೈಗೆ ಬಂದರೂ ಬಾಯಿಗೆ ಇಲ್ಲ ಎಂಬಂತಾಗುತ್ತದೆ. ಹೀಗೆ ವನ್ಯಪ್ರಾಣಿಗಳ ಕಾಟಕ್ಕೆ ರೋಸಿ ಹೋಗಿದ್ದ ಬೀದರ್ ಜಿಲ್ಲೆಯ ರೈತರು ಆ ಸಮಸ್ಯೆ ನೀಗಲು ಹೊಸ ಪ್ಲಾನ್ ಮೊರೆ ಹೋಗಿದ್ದಾರೆ. 

ಕಾಡು ಪ್ರಾಣಿಗಳಿಂದ ಬೆಳೆ ರಕ್ಷಿಸಲು ರೈತರು ಡಿಫರೆಂಟ್ ಐಡಿಯಾ ಕಂಡು ಹಿಡಿದಿದ್ದಾರೆ. ಮಾರುಕಟ್ಟೆಯಲ್ಲಿ 25, 50 ರೂ. ಸಿಗುವ ಸೀರೆ ತಂದು ಹೊಲದ ತುಂಬೆಲ್ಲ ಕಟ್ಟಿ ಬೆಳೆ ರಕ್ಷಣೆ ಮಾಡುವ ಉಪಾಯವದು. ಚಳಿಗಾಲದಲ್ಲಿ ರಾತ್ರಿಹೊತ್ತು ಹೊಲಗಳಿಗೆ ನುಗ್ಗುವ ಜಿಂಕೆ, ಮೊಲ, ಕಾಡು ಹಂದಿಗಳ ಉಪಟಳಕ್ಕೆ ಬೇಸತ್ತು ರೈತರು ಈ ಪ್ಲಾನ್ ಮಾಡಿದ್ದಾರೆ.

"

ಹೊಲದ ತುಂಬಾ ಮೈ ದುಂಬಿ ನಿಂತ ಕಡಲೆ, ಕುಸುಬಿ, ಜೋಳದ ಪೈರು. ಪೈರಿನ ಸುತ್ತ ಕಟ್ಟಲಾದ ಬಣ್ಣ ಬಣ್ಣದ ಸೀರೆಗಳು, ಹೀಗೆ ಕಟ್ಟಲಾದ ಸೀರೆಗಳೇ ಹೊಲದ ತುಂಬಾ ಕೊಯ್ಲಿಗೆ ಬಂದ ಫಸಲಿಗೆ ಕಾವಲು. ಹೀಗೆ ಬೀದರ್ ಜಿಲ್ಲೆಯ ಔರಾದ್ ಮತ್ತು ಭಾಲ್ಕಿ ತಾಲೂಕುಗಳಲ್ಲಿ ಮೈದುಂಬಿ ನಿಂತ ಕಡಲೆ, ಕುಸುಬಿ, ಜೋಳದ ಬೆಳೆಗಳಿಗೆ ವನ್ಯಪ್ರಾಣಿಗಳ ಕಾಟ ಸಾಕಷ್ಟಿತ್ತು. ಇದರಿಂದ ರೋಸಿ ಹೋಗಿದ್ದ ಜಿಲ್ಲೆಯ ರೈತರು ಮೊರೆ ಹೋಗಿದ್ದು ಹಳೇ ಸೀರೆಗಳಿಗೆ. ಹೀಗೆ ಬದುವಿನಗುಂಟವೂ ಫಸಲಿನ ಸುತ್ತಲೂ ಉದ್ದಕ್ಕೆ ಕಟ್ಟಲಾದ ಸೀರೆಗಳು ರೈತರ ಫಸಲಿಗೆ ದಾಳಿ ಮಾಡುತ್ತಿದ್ದ ಕಾಡುಹಂದಿ ಹಾಗೂ ಜಿಂಕೆಗಳ ಕಾಟವನ್ನು ನಿಯಂತ್ರಿಸಿದೆಯಂತೆ.

ಬಣ್ಣಬಣ್ಣದ ಸೀರೆಗಳನ್ನು ಹೀಗೆ ಕಟ್ಟುವುದರಿಂದ ರಾತ್ರಿ ಸಮಯದಲ್ಲಿ ಫಸಲು ತಿನ್ನಲು ಬರುವ ಜಿಂಕೆ, ಕಾಡುಹಂದಿಗಳು ಬೆದರುತ್ತವೆ. ಹೀಗಾಗಿ ವನ್ಯಪ್ರಾಣಿಗಳ ಕಾಟ ಕಡಿಮೆಯಾಗಿದೆ ಎನ್ನೋದು ರೈತರ ಅಭಿಪ್ರಾಯ.

ರೈತರು ಹೊಲದ ಸುತ್ತಲೂ ಹಳೆಯ ಸೀರೆಗಳನ್ನು ಕಟ್ಟಿ ಕಾಡು ಪ್ರಾಣಿಗಳಿಂದ ಬೆಳೆ ರಕ್ಷಣೆ ಮಾಡಿಕೊಳ್ಳುತ್ತಿದ್ದಾರೆ. ಪ್ರಮುಖವಾಗಿ ಜೋಳ ಮತ್ತು ಕಡಲೆ ಬೆಳೆಯನ್ನು ಕಾಡು ಪ್ರಾಣಿಗಳ ಹಾವಳಿಯಿಂದ ರಕ್ಷಿಸಿಕೊಳ್ಳಲು ರೈತರು ತಮ್ಮ ಹೊಲಗಳ ಸುತ್ತಲಿನ ಬೇಲಿಗಳಿಗೆ ಹಳೆಯ ಸೀರೆಗಳನ್ನು ಕಟ್ಟುತ್ತಾರೆ. ಬೇಲಿಗೆ ಕಟ್ಟಿದ ಸೀರೆ ಗಾಳಿ ಬೀಸಿದಾಗ ಅಲುಗಾಡುತ್ತವೆ. ಅದನ್ನು ಕಂಡ ಕಾಡು ಪ್ರಾಣಿಗಳು ಭಯದಿಂದ ಓಡಿ ಹೋಗುತ್ತವೆ. ಇದಲ್ಲದೆ ಬೇಲಿಗೆ ಕಟ್ಟಿರುವ ಸೀರೆಯು ಒಂದು ರೀತಿಯಾಗಿ ಗೋಡೆಯಂತೆ ಕಾಣುವುದರಿಂದ ಕಾಡು ಪ್ರಾಣಿಗಳು ಬೇಲಿಯ ಹತ್ತಿರ ಸುಳಿಯುವುದಿಲ್ಲ. ಬೆಳೆಗಳ ಮೇಲೆ ಕಾಡು ಹಂದಿಗಳ ದಾಳಿ ತಪ್ಪಿಸಲು ರೈತರು ಈ ಉಪಾಯ ಕಂಡುಕೊಂಡು ಯಶಸ್ವಿ ಕೂಡ ಆಗಿದ್ದಾರೆ. ಆದರೂ ಕೂಡಾ ಎಲ್ಲಾ ರೈತರು ತಮ್ಮ ತಮ್ಮ ಹೊಲಗಳಿಗೆ ಸೀರೆಗಳನ್ನ ಕಟ್ಟಿ ಬೆಳೆ ರಕ್ಷಣೆ ಮಾಡುವುದು ಆಗುತ್ತಿಲ್ಲ ಹೀಗಾಗಿ ಅರಣ್ಯ ಇಲಾಖೆಯ ಅಧಿಕಾರಿಗಳು, ಕಾಡು ಪ್ರಾಣಿಗಳು ರೈತರ ಹೊಲಗಳಿಗೆ ನುಗ್ಗದಂತೆ ಏನಾದರೂ ಪ್ಲಾನ್ ಮಾಡಿ ರೈತರ ಬೆಳೆ ರಕ್ಷಿಸಿ ಎಂದು ಮನವಿ ಮಾಡುತ್ತಿದ್ದಾರೆ..

 ಫಸಲನ್ನು ಪ್ರಾಣಿಗಳಿಂದ ಉಳಿಸಿಕೊಳ್ಳಲು ರೈತರು ಬೆದರು ಬೊಂಬೆ ಹಾಗೂ ಹುಲ್ಲಿನ ಗೊಂಬೆಗಳನ್ನು ಹೊಲದಲ್ಲಿ ನಿಲ್ಲಿಸುವುದು ಸಾಮಾನ್ಯವಾಗಿತ್ತು. ಆದರೆ, ಪ್ರಾಣಿಗಳು ಇದಕ್ಕೂ ಅಂಜದೆ ಹೋದಾಗ ಬೀದರ್ ಜಿಲ್ಲೆಯ ರೈತರು ಹೊಲದ ಸುತ್ತ ಸೀರೆ ಕಟ್ಟುವ ಮೂಲಕ ಹೊಸ ಪ್ರಯೋಗಕ್ಕೆ ಮುಂದಾಗಿದ್ದಾರೆ. ಆ ಮೂಲಕ ತಾವು ಸೃಜನಶೀಲರು ಎಂಬುವುದರ ಜೊತೆಗೆ ಸೀರೆ ಬರೀ ಉಡಲಷ್ಟೇ ಅಲ್ಲ. ಅದರಿಂದ ಬೆಳೆದ ಬೆಳೆಯನ್ನು ರಕ್ಷಿಸಿಕೊಳ್ಳಬಹುದು ಎಂದು ಸಾರಿದ್ದಾರೆ.

Follow Us:
Download App:
  • android
  • ios