Asianet Suvarna News Asianet Suvarna News

ಬೀದರ್‌ ಏರ್‌ ಶೋ: ಐತಿಹಾಸಿಕ ಕೋಟೆ ಸುತ್ತಿದ 'ಸೂರ್ಯಕಿರಣ'..!

ಸೂರ್ಯಕಿರಣ 9 ವಿಮಾನಗಳಿಂದ ಆಗಸದಲ್ಲಿ ಚಿತ್ತಾರ, ಆಕಾಶದೆತ್ತರಕ್ಕೆ ಚಿಮ್ಮಿದ ವಿದ್ಯಾರ್ಥಿಗಳ ಕಲರವ, ಜೈಕಾರ

Bidar Air Show Held on September 2nd grg
Author
First Published Sep 3, 2022, 9:28 AM IST

ಬೀದರ್‌(ಸೆ.03):  ನಗರದ ಐತಿಹಾಸಿಕ ಕೋಟೆಯ ತುಂಬೆಲ್ಲ ಜನವೋ ಜನ. ಎಲ್ಲರ ಚಿತ್ತ ನೀಲಿ ಆಕಾಶದತ್ತ. ಮೈನವಿರೇಳಿಸುವಂಥ ವಾತಾವರಣ, ಮಕ್ಕಳ ಕಲರವ, ಹಿರಿಯ-ಕಿರಿಯರ ಜೈಕಾರ ಮಧ್ಯ ಬಾನಂಗಳದಿಂದ ಪುಟಿದೆದ್ದು ಕೋಟೆಯ ಸ್ಮಾರಕಗಳ ಸುತ್ತ ಸುತ್ತು ಹೊಡೆದು ಆಕಾಶದಲ್ಲಿ ಮಾಯವಾಗುತ್ತಿದ್ದ ಸೂರ್ಯಕಿರಣಗಳು. ನೆರೆದಿದ್ದ ಜನರ ಎದೆ ಝಲ್‌ ಎನ್ನುವಂಥ ಕಸರತ್ತುಗಳು.

ಇದೆಲ್ಲವೂ ನಡೆದಿದ್ದು ಬೀದರ್‌ನ ಐತಿಹಾಸಿಕ ಕೋಟೆ ಆವರಣದ ಆಗಸದಲ್ಲಿ. ಶುಕ್ರವಾರ ಸಂಜೆ 5ರ ಸುಮಾರಿಗೆ ಜಿಲ್ಲಾಡಳಿತದ ಮುತುವರ್ಜಿಯಲ್ಲಿ ಇಲ್ಲಿನ ವಾಯು ಸೇನಾ ತರಬೇತಿ ಕೇಂದ್ರದ ವತಿಯಿಂದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ನಿಮಿತ್ತ ವಾಯು ಸೇನೆಯ ಸೂರ್ಯಕಿರಣ ವಿಮಾನಗಳ ಕಸರತ್ತುಗಳನ್ನು ಪ್ರದರ್ಶಿಸಲಾಯಿತು.

Bidar: ರೈತರು ಆತಂಕಕ್ಕೆ ಒಳಗಾಗುವುದು ಬೇಡ: ಸಚಿವ ಪ್ರಭು ಚವ್ಹಾಣ್

ಎರಡು ದಿನ ಆಯೋಜನೆ:

ನಗರದ ಐತಿಹಾಸಿಕ ಕೋಟೆಯ ಆವರಣದಲ್ಲಿ ಸೂರ್ಯಕಿರಣ ಯುದ್ಧ ವಿಮಾನಗಳ ವೈಮಾನಿಕ ಪ್ರದರ್ಶನವನ್ನು ಜಿಲ್ಲಾಡಳಿತದ ಸಹಭಾಗಿತ್ವದಲ್ಲಿ ಎರಡು ದಿನಗಳ ಕಾಲ ಬೀದರ್‌ನ ವಾಯು ಸೇನಾ ತರಬೇತಿ ಕೇಂದ್ರವು ಶುಕ್ರವಾರ ಶಾಲಾ ಕಾಲೇಜು ವಿದ್ಯಾರ್ಥಿಗಳಿಗಾಗಿ ಹಾಗೂ ಇಂದು(ಶನಿವಾರ) ಸಂಜೆ 4.30ರಿಂದ ಜಿಲ್ಲೆಯ ನಾಗರಿಕರಿಗಾಗಿ ಆಯೋಜಿಸಲಾಗಿದೆ.

ಶುಕ್ರವಾರ ಸಂಜೆ 4ರಿಂದಲೇ ಕೋಟೆಯ ಆವರಣ ವಿದ್ಯಾರ್ಥಿಗಳಿಂದ ಭರ್ತಿಯಾಗಿತ್ತು. ಬೀದರ್‌ ಉತ್ಸವದ ನೆನಪನ್ನು ಮರುಕಣಿಸುವಂತೆ ಮಾಡಿತ್ತು. ಸಂಜೆ 5ರ ಸುಮಾರಿಗೆ ಸೂರ್ಯಕಿರಣ 9 ಯುದ್ಧ ವಿಮಾನಗಳು ಆಗಸದಲ್ಲಿ ಹಾರಿ ಬರುತ್ತಿದ್ದಂತೆ ಹೃದಯದ ಆಕಾರ, ತ್ರಿಕೋನ, ಚೌಕಾಕಾರ, ನೇರ ಹೀಗೆಯೇ ವಿವಿಧ ಆಕೃತಿಗಳಲ್ಲಿ ಸೂರ್ಯಕಿರಣ ವಿಮಾನಗಳು ಆಗಸದಲ್ಲಿ ಹಾರಾಡುತ್ತಿದ್ದಂತೆ ನೆರೆದಿದ್ದ ಸಾವಿರಾರು ಮಕ್ಕಳ ಕೇಕೆ, ಜೈಕಾರಗಳು ಆಗಸ ಮುಟ್ಟಿದ್ದವು.
ಕೋಟೆಯ ಆವರಣದ ಮೇಲೆ ಸಂಜೆ 6ರವರೆಗೆ ಸೂರ್ಯಕಿರಣ ಯುದ್ಧ ವಿಮಾನಗಳ ಕಸರತ್ತುಗಳು ಎಲ್ಲರ ಮನ ತಣಿಸಿದವು. ಇಂಥ ಅತ್ಯದ್ಭುತ ಅವಕಾಶವನ್ನು ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿತ್ತು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ, ಎಸ್‌ಪಿ ಡಿ.ಕಿಶೋರ ಬಾಬು ಹಾಗೂ ಜಿಪಂ ಸಿಇಒ ಶಿಲ್ಪಾ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
 

Follow Us:
Download App:
  • android
  • ios