ವಿದ್ಯಾರ್ಥಿಗಳಿಂದ ಸೈಕಲ್ ಮಾದರಿ : ಒಂದು ಲಕ್ಷ ಬಹುಮಾನ
ಭಾರತ್ ಸೈಕಲ್ ಡಿಸೈನ್ ಚಾಲೆಂಜ್ ಎಂಬ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಸುಮಾರು 700 ತಂಡಗಳ ಪೈಕಿ ತಾಂಡವಪುರದ ಮಹಾರಾಜ ತಾಂತ್ರಿಕ ಮಹಾವಿದ್ಯಾಲಯದ ಎಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳ ಸೈಕಲ್ ಮಾದರಿಗೆ 1 ಲಕ್ಷ ಬಹುಮಾನ ಬಂದಿದೆ ಎಂದು ಕಾಲೇಜಿನ ಪ್ರೊ. ವೆಂಕಟೇಗೌಡ ಹೇಳಿದರು.
ನಂಜನಗೂಡು : ಭಾರತ್ ಸೈಕಲ್ ಡಿಸೈನ್ ಚಾಲೆಂಜ್ ಎಂಬ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಸುಮಾರು 700 ತಂಡಗಳ ಪೈಕಿ ತಾಂಡವಪುರದ ಮಹಾರಾಜ ತಾಂತ್ರಿಕ ಮಹಾವಿದ್ಯಾಲಯದ ಎಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳ ಸೈಕಲ್ ಮಾದರಿಗೆ 1 ಲಕ್ಷ ಬಹುಮಾನ ಬಂದಿದೆ ಎಂದು ಕಾಲೇಜಿನ ಪ್ರೊ. ವೆಂಕಟೇಗೌಡ ಹೇಳಿದರು.
ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯು ಸೈಕಲ್ ಫೌಂಡೇಶನ್ ಅವರ ಸಹಯೋಗದೊಂದಿಗೆ ಕೌಶಲ್ಯ ಭಾರತದ ಅಡಿಯಲ್ಲಿ ವಿದ್ಯಾರ್ಥಿಗಳ ನಾವಿನ್ಯತೆಯನ್ನು ಬೆಂಬಲಿಸುವ ಸಲುವಾಗಿ ಪ್ರಾರಂಭವಾಗಿದೆ. ಈ ವಿಭಾಗದಲ್ಲಿ ಇವಿ ಎಂದರೆ ಎಲೆಕ್ಟ್ರಿಕ್ ಬ್ಯಾಟರಿ ಮೂಲಕ ಚಾಲಿತ, ನಾನ್ ಇವಿ ಎಂದರೆ ಜನಸಾಮಾನ್ಯರು ಬಳಸುವ ಕಾರ್ಗೋ ಸೈಕಲ್ ಗಳ ಸುಧಾರಿತ ಮಾದರಿಯನ್ನು ತಯಾರಿಸುವ ಬಗ್ಗೆ ರಾಷ್ಟ್ರಮಟ್ಟದ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು ಎಂದು ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
ಈ ಸ್ಪರ್ಧೆಯಲ್ಲಿ ಸುಮಾರು 700 ತಂಡಗಳು ಭಾಗವಹಿಸಿದ್ದವು. ಆ ಪೈಕಿ ನೂರು ತಂಡಗಳನ್ನು ಆಯ್ಕೆ ಮಾಡಲಾಗಿತ್ತು. ಸುಮಾರು 16 ತಂಡಗಳನ್ನು ಸೈಕಲ್ ಮಾದರಿ ನಿರ್ಮಿಸುವ ಅಂತಿಮ ಸುತ್ತಿಗೆ ಆಯ್ಕೆಗೊಳಿಸಲಾಗಿತ್ತು. ಆ ಪೈಕಿ ತಾಂಡವಪುರದ ಮಹಾರಾಜ ತಾಂತ್ರಿಕ ಕಾಲೇಜಿನ ವಿದ್ಯಾರ್ಥಿಗಳಾದ ದರ್ಶನ್ ಮತ್ತು ಮದನ್ ತಂಡ ತಯಾರಿಸಿದ ಸೈಕಲ್ ಮಾದರಿಯನ್ನು ಅಂಗೀಕರಿಸಲಾಗಿದ್ದು, ಸುಮಾರು ಒಂದು ಲಕ್ಷ ಮೌಲ್ಯದ ಬಹುಮಾನವನ್ನು ಸಹ ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ ಎಂದು ಅವರು ಹೇಳಿದರು.
ಸೈಕಲ್ ಮಾದರಿ ತಯಾರಿಸಿದ ತಂಡದ ನಾಯಕ ಪ್ರಮೋದ್ ಮಾತನಾಡಿ, ನಾವು ತಯಾರಿಸಿರುವ ಸೈಕಲ್ ಒಂದೇ ಪೆಟಲ್ಗೆ ಮೂರರಷ್ಟು ವೇಗ ಹೆಚ್ಚಾಗಲಿದೆ. ಸಾಮಾನ್ಯ ಸೈಕಲ್ ಗಿಂತ ಶೇ. 40ರಷ್ಟು ಹೆಚ್ಚಿನ ವೇಗದಲ್ಲಿ ಸೈಕಲ್ ಚಲಿಸಲಿದೆ. ನಾಲ್ಕನೇ ಗೇರ್ ನಲ್ಲಿ ಚಲಿಸುವಾಗ ಸೈಕಲ್ ಸುಮಾರು 55 ರಿಂದ 60 ಕಿ.ಮೀ. ವೇಗದಲ್ಲಿ ಚಲಿಸಬಹುದಾಗಿದೆ. ಈ ಬೈಸಿಕಲ್ ಅನ್ನು ಕಾಂಪೌಂಡ್ ಸ್ಟ್ರಾಕೆಟ್ ಮತ್ತು ಮಲ್ಟಿ ಗೇರ್ ಸಿಸ್ಟಮ್ ಬಳಸಿ ವೇಗದ ಅನುಪಾತವನ್ನು ಹೆಚ್ಚಿಸಲು ವಿನ್ಯಾಸಗೊಳಿಸಲಾಗಿದೆ. ಇದು ಯಾವುದೇ ಬ್ಯಾಟರಿ ಮತ್ತು ಎಲೆಕ್ಟ್ರಿಕಲ್ ವಸ್ತುವಿನಿಂದ ಚಲಿಸದೆ ಬರಿ ಮಾನವ ಶಕ್ತಿಯ ಮೂಲಕ ಚಲಿಸಲಿವುದು ಈ ಸೈಕಲ್ ನ ವಿಶೇಷವಾಗಿದೆ. ಈ ಮಾದರಿಯ ಸೈಕಲ್ ಇಡೀ ವಿಶ್ವದಲ್ಲೇ ಎಲ್ಲೂ ಬಿಡುಗಡೆಯಾಗಿಲ್ಲ, ಇದರ ತಯಾರಿಕೆಯದಲ್ಲಿ ಗ್ರಾಮೀಣ ಜನರಿಗೆ ಕೈಗೆಟಕುವ ದರದಲ್ಲಿ ಸೈಕಲ್ ಲಭ್ಯವಾಗಲಿದೆ ಎಂದು ಮಾಹಿತಿ ನೀಡಿದರು.
ಪ್ರೊ. ಸಲಾಮತ್ ಮಾತನಾಡಿ, ಮಹಾರಾಜ ತಾಂತ್ರಿಕ ವಿದ್ಯಾಲಯವು ಗ್ರಾಮೀಣ ಪ್ರತಿಭೆಗಳಿಗೆ ಅವಕಾಶ ಕಲ್ಪಿಸುವ ಸಲುವಾಗಿ ಮತ್ತು ಅವರ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಲು ಶ್ರಮಿಸುತ್ತಿದೆ. ಈ ನಿಟ್ಟಿನಲ್ಲಿ ನಮ್ಮ ತಾಲೂಕಿನ ಕೊಂತಯ್ಯನ ಹುಂಡಿ ಗ್ರಾಮದ ವಿದ್ಯಾರ್ಥಿ ಪ್ರಮೋದ್ ವಿಶಿಷ್ಟ ಸುಧಾರಿತ ಮಾದರಿಯ ಸೈಕಲ್ ಕಂಡು ಹಿಡಿದಿರುವುದು ಸಂತಸ ತಂದಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ದರ್ಶನ್, ಮದನ್ ಇದ್ದರು.