ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡುತ್ತಿಲ್ಲ ಎಂಬ ಆರೋಪಗಳ ಬೆನ್ನಲ್ಲೇ ಬಿಐಎಎಲ್ ಸ್ಪಷ್ಟನೆ ನೀಡಿದೆ. ಕನ್ನಡಿಗರಿಗೆ ಅರ್ಥಪೂರ್ಣ ಉದ್ಯೋಗಾವಕಾಶ ಸೃಷ್ಟಿಸಲು ನಾವು ಸದಾ ಬದ್ಧ ಎಂದು ಸಂಸ್ಥೆ ತಿಳಿಸಿದೆ.
ಬೆಂಗಳೂರು (ನ.08): ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (KIA) ಕನ್ನಡಿಗರಿಗೆ ಉದ್ಯೋಗಾವಕಾಶ ಕಡೆಗಣಿಸಲಾಗುತ್ತಿದೆ ಎಂಬ ಆರೋಪಗಳು ಮತ್ತು ಕನ್ನಡಪರ ಸಂಘಟನೆಗಳ ತೀವ್ರ ಆಕ್ರೋಶದ ಬೆನ್ನಲ್ಲೇ, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತ (BIAL) ಕೊನೆಗೂ ಅಧಿಕೃತ ಸ್ಪಷ್ಟನೆ ನೀಡಿದೆ. 'ಕನ್ನಡಿಗರಿಗೆ ಅರ್ಥಪೂರ್ಣ ಉದ್ಯೋಗಾವಕಾಶ ಸೃಷ್ಟಿಸಲು ನಾವು ಸದಾ ಬದ್ಧ' ಎಂದು ಬಿಐಎಎಲ್ ಸ್ಪಷ್ಟಪಡಿಸಿದೆ.
ವಿಮಾನ ನಿಲ್ದಾಣ ಸಿಬ್ಬಂದಿಗೆ ಕರವೇ ಎಚ್ಚರಿಕೆ:
ರಾಜ್ಯದ ಖಾಸಗಿ ಕಂಪನಿಗಳು ಹಾಗೂ ಸಂಸ್ಥೆಗಳಲ್ಲಿ ಸ್ಥಳೀಯ ಕನ್ನಡಿಗರಿಗೆ ಶೇ.80ರಷ್ಟು ಉದ್ಯೋಗ ನೀಡಬೇಕೆಂಬ ನಿಯಮ ಉಲ್ಲಂಘಿಸುವವರ ವಿರುದ್ಧ ಕನ್ನಡಪರ ಸಂಘಟನೆಗಳು ಸಮರ ಸಾರಿವೆ. ನಿನ್ನೆ ನಾಡಪ್ರಭು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಾರ್ಯನಿರ್ವಹಿಸುವ ಎಲ್ಲ ಸಂಸ್ಥೆಗಳ ಮುಖ್ಯಸ್ಥರೊಂದಿಗೆ ಮೊನ್ನೆ ಸಭೆಯಲ್ಲಿ ಪಾಲ್ಗೊಂಡಿದ್ದೆ. ಕನ್ನಡಿಗರಿಗೆ ನ್ಯಾಯ ಸಿಗಬೇಕು ಎಂಬುದು ನನ್ನ ನಿಲುವು. ಅದರಲ್ಲಿ ಯಾವುದೇ ರಾಜಿ ಇಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ. ನಾರಯಣಗೌಡ ಅವರು ಎಚ್ಚರಿಕೆ ನೀಡಿದ್ದರು.
ಇದರ ಜೊತೆಗೆ ಇತ್ತೀಚೆಗಷ್ಟೇ ಚೆನ್ನೈ ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿದ್ದ ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ, 'ಚೆನ್ನೈ ಏರ್ಪೋರ್ಟ್ನಲ್ಲಿ ಶೇ.90ರಷ್ಟು ತಮಿಳರೇ ಕೆಲಸ ಮಾಡುತ್ತಿದ್ದಾರೆ. ಆದರೆ ನಮ್ಮ ಬೆಂಗಳೂರು ಏರ್ಪೋರ್ಟ್ನಲ್ಲಿ ಕೇವಲ ಶೇ.10ರಷ್ಟು ಮಾತ್ರ ಕನ್ನಡಿಗರಿದ್ದಾರೆ' ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಜನಾಕ್ರೋಶ ಭುಗಿಲೆದ್ದಿತ್ತು.
BIAL ಮಾಧ್ಯಮ ಪ್ರಕಟಣೆ:
ಕನ್ನಡಪರ ಸಂಘಟನೆಗಳ ಆಕ್ರೋಶಕ್ಕೆ ಸ್ಪಂದಿಸಿರುವ ಬಿಐಎಎಲ್ ಆಡಳಿತ ಮಂಡಳಿ, ಸುದೀರ್ಘ ಪತ್ರಿಕಾ ಪ್ರಕಟಣೆ ಹೊರಡಿಸಿ ತನ್ನ ನಿಲುವು ಸ್ಪಷ್ಟಪಡಿಸಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಕರ್ನಾಟಕದ ಕಲೆ, ವಾಸ್ತುಶಿಲ್ಪ, ವಿನ್ಯಾಸ ಹಾಗೂ ಜನರ ಆಶೋತ್ತರಗಳನ್ನು ಉದ್ದಗಲಕ್ಕೂ ಪ್ರತಿಬಿಂಬಿಸಿದೆ. 2008ರಲ್ಲಿ ಕಾರ್ಯಾಚರಣೆ ಆರಂಭಿಸಿದಾಗಿನಿಂದಲೂ ಸ್ಥಳೀಯರಿಗೆ ಉದ್ಯೋಗ ನೀಡುವ ಮೂಲಕ ರಾಜ್ಯದ ಆರ್ಥಿಕತೆಗೆ ಕೊಡುಗೆ ನೀಡಲಾಗುತ್ತಿದೆ. ವಿಮಾನ ನಿಲ್ದಾಣದ ಬಹುಪಾಲು ಉದ್ಯೋಗಿಗಳು ಕನ್ನಡಿಗರೇ ಆಗಿದ್ದಾರೆ. ಅಲ್ಲದೆ, ಕರ್ನಾಟಕ ಸರ್ಕಾರವೇ ಇದರಲ್ಲಿ ಪ್ರಮುಖ ಪಾಲುದಾರ ಸಂಸ್ಥೆಯಾಗಿದೆ ಎಂದು ತಿಳಿಸಿದೆ.
ಕನ್ನಡಪರ ಸಂಘಟನೆಗಳ ಕಳಕಳಿಗೆ ಸ್ಪಂದಿಸಲು ಬದ್ಧ: ಕನ್ನಡಿಗರ ಉದ್ಯೋಗದ ಕುರಿತು ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿರುವ ಕಳಕಳಿ ನಮ್ಮ ಗಮನಕ್ಕೆ ಬಂದಿದೆ. ಈ ಸಂಬಂಧ ಸರ್ಕಾರಿ ಪ್ರಾಧಿಕಾರಗಳು ಮತ್ತು ಪಾಲುದಾರ ಸಂಸ್ಥೆಗಳೊಂದಿಗೆ ಚರ್ಚಿಸಿ, ಅಗತ್ಯ ಕ್ರಮ ಕೈಗೊಳ್ಳಲು ಸದಾ ಸಿದ್ಧರಿದ್ದೇವೆ. ವಿಮಾನ ನಿಲ್ದಾಣವು ಮತ್ತಷ್ಟು ಬೆಳವಣಿಗೆ ಹಾಗೂ ವಿಸ್ತರಣೆ ಕಾಣುತ್ತಿದ್ದು, ಮುಂದಿನ ದಿನಗಳಲ್ಲಿ ವಿವಿಧ ರಂಗಗಳಲ್ಲಿ ಕನ್ನಡಿಗರಿಗೆ ಇನ್ನಷ್ಟು ಹೆಚ್ಚಿನ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ಎಂದು ಬಿಐಎಎಲ್ ಭರವಸೆ ನೀಡಿದೆ.














